ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Queen Elizabeth II: ಬದಲಾಗುತ್ತಿದ್ದ ಕಾಲದೊಂದಿಗೆ ಹೆಜ್ಜೆ ಹಾಕಿದ ನಿಗೂಢ ರಾಣಿ

Last Updated 9 ಸೆಪ್ಟೆಂಬರ್ 2022, 12:36 IST
ಅಕ್ಷರ ಗಾತ್ರ

ಬ್ರಿಟನ್‌ ಚರಿತ್ರೆಯ ಸುದೀರ್ಘ ಅಧ್ಯಾಯವೊಂದು ಕೊನೆಯಾಗಿದೆ. ಸರಿಸುಮಾರು ಏಳು ದಶಕಗಳ ಕಾಲ ಬಕಿಂಗ್‌ಹ್ಯಾಮ್ ಅರಮನೆಯ ಸಿಂಹಾಸನಕ್ಕೆ ಒಡತಿಯಾಗಿದ್ದ ರಾಣಿ 2ನೇ ಎಲಿಜಬೆತ್‌ ಅವರು ಗುರುವಾರ ನಿಧನರಾಗಿದ್ದಾರೆ. 25 ನೇ ವರ್ಷಕ್ಕೆ ರಾಣಿಯಾಗಿ ಸಿಂಹಾಸನದಲ್ಲಿ ಕುಳಿತ ಎಲಿಜಬೆತ್‌ 96ನೇ ವಯಸ್ಸಿನಲ್ಲಿ ಅಸುನೀಗಿದ್ದಾರೆ. ಬ್ರಿಟನ್‌ ಇತಿಹಾಸದಲ್ಲಿಯೇ ದೀರ್ಘ ಕಾಲ ರಾಣಿ ಕಿರೀಟ ತೊಟ್ಟ ಹೆಮ್ಮೆ ಇವರದ್ದು.

ಶ್ರೀಮಂತ ಸಾಮ್ರಾಜ್ಯವೊಂದರ ರಾಣಿಯಾಗಿದ್ದ ಎಲಿಜಬೆತ್‌, ಬದಲಾಗುತ್ತಿದ್ದ ಕಾಲ ಮತ್ತು ಜಗತ್ತಿನೊಂದಿಗೆ ಹೆಜ್ಜೆಹಾಕಿದವರು. ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳ ನಡುವೆಯೂ ರಾಜಪ್ರಭುತ್ವದ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದವರು. ಪ್ರಜಾತಾಂತ್ರಿಕ ಬ್ರಿಟನ್‌ ದೇಶದಲ್ಲಿ ಗೌರವಾನ್ವಿತ, ವಿಶ್ವಾಸಾರ್ಹ ವ್ಯಕ್ತಿಯಾಗಿದ್ದವರು. ಅರಮನೆಯ ಕಟ್ಟುಪಾಡುಗಳನ್ನು ಸಡಿಲಗೊಳಿಸಿ ಆಧುನಿಕ ಜಗತ್ತಿಗೆ ತೆರೆದುಕೊಂಡವರು. ಅರಮನೆಯನ್ನು ಹೆಚ್ಚು ಮುಕ್ತವಾಗಿಸಿದವರು.

ಬದಲಾಗುತ್ತಿದ್ದ ಜಗತ್ತಿನಲ್ಲಿ ಬಕಿಂಗ್‌ಹ್ಯಾಮ್ ಅರಮನೆ ತನ್ನ ಚಾರಿತ್ರಿಕ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗುತ್ತಿತ್ತು. ಆ ಸಮಯದಲ್ಲಿಯೂ ರಾಣಿ ಎಲಿಜಬೆತ್‌ ಸ್ಥಿರವಾಗಿ ನಿಂತರು. ಎಲ್ಲ ಸಂಕಷ್ಟಗಳನ್ನೂ ಮೀರಿ ಅರಮನೆಯ ಗೌರವವನ್ನು ಉಳಿಸಿದವರು.

ವಿಪರ್ಯಾಸವೆಂದರೆ, ಇಡೀ ಪ್ರಪಂಚಕ್ಕೆ ಪರಿಚಿತ ವ್ಯಕ್ತಿಯಾಗಿದ್ದರೂ, ಎಲಿಜಬೆತ್‌ ನಿಗೂಢವಾಗಿಯೇ ಉಳಿದುಬಿಟ್ಟರು. ಸಾರ್ವಜನಿಕವಾಗಿ ಭಾವನೆಗಳನ್ನು ವ್ಯಕ್ತಪಡಿಸದೇ, ವೈಯಕ್ತಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳದೇ ಮೌನಕ್ಕೆ ಶರಣಾಗಿದ್ದರು.

‘ಆಕೆ ನಮ್ಮ ಜೀವನದಲ್ಲಿ ಶಕ್ತಿ ಮತ್ತು ಉತ್ಸಾಹವನ್ನು ತಂದಿದ್ದಾರೆ. ರಾಜಪ್ರಭುತ್ವವನ್ನು ಆಧುನೀಕರಿಸಲು ಮತ್ತು ವಿಕಸನಗೊಳಿಸಲು ಯಶಸ್ವಿಯಾಗಿದ್ದಾರೆ’ ಎಂದು ಈಗ ಸಿಂಹಾಸನದ ಉತ್ತರಾಧಿಕಾರಿಯಾಗಿರುವ ಮೊಮ್ಮಗ ಪ್ರಿನ್ಸ್ ವಿಲಿಯಂ ಹೇಳಿದ್ದಾರೆ.

25 ವರ್ಷಕ್ಕೆ ರಾಣಿ ಕಿರೀಟ

ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ ಏಪ್ರಿಲ್ 21, 1926 ರಂದು ಮಧ್ಯ ಲಂಡನ್‌ನ 17 ಬ್ರೂಟನ್ ಸ್ಟ್ರೀಟ್‌ನಲ್ಲಿ ಜನಿಸಿದರು. ಆಕೆಯ ತಂದೆ ‘ಜಾರ್ಜ್ VI’ ತೀರಿಕೊಂಡಾಗ ಎಲಿಜಬೆತ್‌ಗೆ 25 ವರ್ಷ. ಫೆಬ್ರುವರಿ 6, 1952 ರಂದು ‘ರಾಣಿ 2ನೇ ಎಲಿಜಬೆತ್’ ಆಗಿ ಅಧಿಕಾರ ವಹಿಸಿಕೊಂಡರು. ಇವರ ಅಧಿಕಾರದ ಅವಧಿಯಲ್ಲಿ ಬ್ರಿಟನ್‌ನ 15 ಪ್ರಧಾನಿಗಳು ಸೇವೆ ಸಲ್ಲಿಸಿದ್ದಾರೆ. ವಿನ್‌ಸ್ಟನ್ ಚರ್ಚಿಲ್ ಮೊದಲ ಪ್ರಧಾನಿಯಾಗಿದ್ದರು.

‘ನನ್ನ ತಂದೆ ತೀರಾ ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ಆದ್ದರಿಂದ, ರಾಣಿ ಪಟ್ಟ ಸಣ್ಣವಯಸ್ಸಿನಲ್ಲೇ ದೊರೆಯಿತು. ನನಗೆ ಯಾವುದೇ ಅನುಭವವಿರಲಿಲ್ಲ. ಆದಷ್ಟು, ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇನೆ’ ಎಂದು 1992ರಲ್ಲಿ ಬಿಡುಗಡೆಯಾದ ಸಾಕ್ಷ್ಯಚಿತ್ರವೊಂದರಲ್ಲಿ ಎಲಿಜಬೆತ್‌ ಹೇಳಿದ್ದರು.

70 ವರ್ಷಗಳ ಅಧಿಕಾರದ ಅವಧಿಯಲ್ಲಿ ಬ್ರಿಟನ್‌ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಏರುಪೇರುಗಳನ್ನು ಕಂಡವರು ಎಲಿಜಬೆತ್‌. ಮಾರ್ಗರೆಟ್ ಥ್ಯಾಚರ್ ಅವಧಿಯಲ್ಲಿ ಸೃಷ್ಟಿಯಾದ ರಾಜಕೀಯ ಅತಂತ್ರತೆ, ಟೋನಿ ಬ್ಲೇರ್ ಅವಧಿಯ ಹೊಸ ಕಾರ್ಮಿಕ ಯುಗ, ಕೋವಿಡ್‌ ಸಾಂಕ್ರಾಮಿಕದಂತಹ ದುರಂತಗಳನ್ನು ಸನಿಹದಿಂದಲೇ ನೋಡಿದವರು.

ಬ್ರಿಟನ್‌ನಲ್ಲಿ ಲೇಬರ್ ಮತ್ತು ಕನ್ಸರ್ವೇಟಿವ್ ಸರ್ಕಾರಗಳು ಬಂದುಹೋದವು, ಸ್ತ್ರೀವಾದವು ಮುನ್ನೆಲೆಗೆ ಬಂದಿತು. ಮಹಿಳೆಯರು ಆಧುನಿಕ ಜಗತ್ತಿಗೆ ತೆರೆದುಕೊಂಡರು. ಬ್ರಿಟನ್ ಹೆಚ್ಚು ಕಾಸ್ಮೋಪಾಲಿಟನ್, ಬಹು-ಜನಾಂಗೀಯ ಸಮಾಜವಾಗಿ ಬದಲಾಯಿತು. ಇದರೊಂದಿಗೆ ರಾಣಿ ಎಲಿಜಬೆತ್‌ ಹೆಜ್ಜೆ ಹಾಕಿದ್ದು ಮಾತ್ರ ವಿಶಿಷ್ಟವೆಂದೇ ಹೇಳಬಹುದು.

ಸಮತಾವಾದಿ

ಹೊಸ ಜಗತ್ತಿಗೆ ಹೊಂದಿಕೊಳ್ಳಬೇಕಿರುವ ಅನಿವಾರ್ಯತೆ ಬ್ರಿಟನ್‌ಗೆ ಬಂದೊದಗಿತು. ಬ್ರಿಟನ್ ಹೆಚ್ಚು ಸಮಾನತೆಯ ಸಮಾಜವಾಗಿ ವಿಕಸನಗೊಂಡಿತು. ಅಲ್ಲಿನ ಆಡಳಿತ ವರ್ಗವು ಮಧ್ಯಮ ವರ್ಗಕ್ಕೆ ದಾರಿ ಮಾಡಿಕೊಡಬೇಕಾಗಿತ್ತು.

ಈ ಎಲ್ಲ ಬೆಳವಣಿಗೆಗಳಿಗೆ ಎಲಿಜಬೆತ್‌ ಸ್ಪಂದಿಸಲೇಬೇಕಿತ್ತು. ಮೊದಮೊದಲು ತಮ್ಮ ತಂದೆಯ ಹಳೆಯ ಸಲಹೆಗಾರರನ್ನು ಹೆಚ್ಚು ಅವಲಂಬಿಸಿದ್ದರು. ಆದರೆ ಕಾಲಕ್ರಮೇಣ, ಆಕೆ ಮತ್ತು ಆಕೆಯ ಪತಿ ಫಿಲಿಪ್ ರಾಜಪ್ರಭುತ್ವವನ್ನು ಆಧುನೀಕರಿಸಲು ಯತ್ನಿಸಿದರು. ಹೆಚ್ಚು ವೃತ್ತಿಪರ ರಾಜತಾಂತ್ರಿಕರು ಮತ್ತು ವ್ಯವಹಾರ ಕಾರ್ಯನಿರ್ವಾಹಕರನ್ನು ಅರಮನೆಗೆ ಕರೆತಂದರು.

‘ಆಕೆ ಚುರುಕಿನ ವ್ಯಕ್ತಿದವರು. ಕರುಣಾಮಯಿ. ಉತ್ತಮ ಒಳನೋಟವನ್ನು ಹೊಂದಿದ್ದಾರೆ. ವಿಶಿಷ್ಟ ಮತ್ತು ಸಾಂಪ್ರದಾಯಿಕ ಸದ್ಗುಣಗಳನ್ನು ಅಳವಡಿಸಿಕೊಂಡಿದ್ದಾರೆ’ ಎಂದು ಮಾಜಿ ಪ್ರಧಾನಿ ಜಾನ್ ಮೇಜರ್ 1990ರಲ್ಲಿ ಹೇಳಿಕೆ ನೀಡಿದ್ದರು.

ಗ್ರೀಕ್ ರಾಜಕುಮಾರ ಫಿಲಿಪ್ ಅವರೊಂದಿಗಿನ ವಿವಾಹ ಸಂಬಂಧವು ಕೊನೆಯವರೆಗೂ ಗಟ್ಟಿಯಾಗಿ ಉಳಿಯಿತು. ಈ ತರಹದ ಸುದೀರ್ಘ ವೈವಾಹಿಕ ಜೀವನವನ್ನು ರಾಜಮನೆತನದ ಬಹುತೇಕರು ಅನುಭವಿಸಿಲ್ಲ ಎಂಬುದನ್ನು ನಾವಿಲ್ಲಿ ಅರಿಯಬೇಕಿದೆ.

ರಾಜಕುಮಾರಿ ಡಯಾನಾ ಸಾವು

ಎಲಿಜಬೆತ್‌ರ ಹಿರಿಯ ಮಗ ಚಾರ್ಲ್ಸ್‌ನ ವಿಚ್ಛೇದಿತ ಪತ್ನಿ ಡಯಾನಾ 1997ರಲ್ಲಿ ಮರಣ ಹೊಂದಿದರು. ಈ ಘಟನೆ ಕುಟುಂಬದ ಪ್ರತಿಷ್ಠೆಯ ಮೇಲೆ ಬಹುದೊಡ್ಡ ಪೆಟ್ಟು ನೀಡಿತು.

ಡಯಾನ ಸಾವಿನ ನಂತರದ ದಿನಗಳು ಎಲಿಜಬೆತ್‌ರ ಆಳ್ವಿಕೆಯ ಅತ್ಯಂತ ಸಂಕಷ್ಟದ ದಿನಗಳೆಂದೇ ಹೇಳಬಹುದು. ಆ ಸಮಯದಲ್ಲಿ ಜಗತ್ತಿನಾದ್ಯಂತ ಎಲಿಜಬೆತ್‌ ನಡವಳಿಕೆಯ ವಿರುದ್ಧ ಟೀಕೆಗಳು ಕೇಳಿಬಂದವು. ರಾಜಮನೆತನದೊಳಗಿನ ವೈವಾಹಿಕ ಬಿರುಕುಗಳ ಬಗ್ಗೆ ಪುಂಕಾನುಪುಂಕವಾಗಿ ಮಾಧ್ಯಮಗಳು ಬರೆದವು.

ಈ ಸಮಯದಲ್ಲಿದ್ದ ಎಲಿಜಬೆತ್‌ರ ಮನಸ್ಥಿತಿಯ ಬಗ್ಗೆ ಮಾತನಾಡಿರುವ ಇತಿಹಾಸಕಾರರೊಬ್ಬರು, ‘ಆಕೆ ಯಾವತ್ತೂ ವಿಚಲಿತಗೊಳ್ಳುವುದಿಲ್ಲ. ತಪ್ಪಾಗಿ ಯೋಚಿಸುವುದಿಲ್ಲ. ಹಿಂದಿಗಿಂತ ಹೆಚ್ಚು ಧನಾತ್ಮಕವಾಗಿ ಅವರಿದ್ದರು. ಬ್ರಿಟಿಷರನ್ನು ಹೆಚ್ಚು ಅರ್ಥಮಾಡಿಕೊಂಡಿರುವ ರಾಣಿ’ ಎಂದು ಹೇಳಿದ್ದಾರೆ.

‘ಅವರ ಖಾಸಗಿ ಹಾಗೂ ಸಾರ್ವಜನಿಕ ಬದುಕು ಒಂದೇ ತೆರನಾಗಿದೆ. ಆದರೆ, ಅವರು ರಾಷ್ಟ್ರದ ಮನಸ್ಥಿತಿಯ ಬಗ್ಗೆ ತೀವ್ರವಾಗಿ ತಿಳಿದುಕೊಂಡಿದ್ದಾರೆ’ ಎಂದು ರಾಣಿಯೊಂದಿಗೆ ನಿಕಟವಾಗಿ ಕೆಲಸ ಮಾಡಿದವರು ತಿಳಿಸಿದ್ದಾರೆ

ಕೌಟುಂಬಿಕ ಜೀವನ

ಪ್ರಿನ್ಸ್ ಫಿಲಿಪ್‌ ಹಾಗೂ ಎಲಿಜಬೆತ್‌ ದಂಪತಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದರು. 1948 ರಲ್ಲಿ ಚಾರ್ಲ್ಸ್, 1950 ರಲ್ಲಿ ಅನ್ನಿ, 1960ರಲ್ಲಿ ಆಂಡ್ರ್ಯೂ ಹಾಗೂ 1964 ರಲ್ಲಿ ಎಡ್ವರ್ಡ್ ಜನಿಸಿದರು.

ರಾಣಿ ಎಲಿಜಬೆತ್‌ ಎಂಟು ಮೊಮ್ಮಕ್ಕಳು ಮತ್ತು 12 ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ.

ತಾಯಿ ಎಲಿಜಬೆತ್ ಕ್ವೀನ್ ಮದರ್, ಆಕೆಯ ಕಿರಿಯ ಸಹೋದರಿ ಮಾರ್ಗರೇಟ್ ಮತ್ತು ಡಯಾನಾ, ರಾಣಿ ಎಲಿಜಬೆತ್‌ಗೆ ಹತ್ತಿರವಾಗಿದ್ದ ಮೂವರು ಮಹಿಳೆಯರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT