ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆಯ ಒಡಲೊಳಗೊಂದು ಜೀವವೈವಿಧ್ಯದ ಕಾಡು

Last Updated 2 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

ಅಪ್ಪಟ ಬಯಲುಸೀಮೆ ಹಾಸನ ಜಿಲ್ಲೆಯ ಅರಸೀಕೆರೆಗೆ ಉತ್ತರದಿಕ್ಕಿನಲ್ಲಿ ಸುಮಾರು 600 ಚದರ ಕಿ.ಮೀ. ಉದ್ದಕ್ಕೂ ತನ್ನ ಜೀವಜಾಲವನ್ನು ಹರಡಿಕೊಂಡಿರುವ ಹಿರೇಕಲ್ಲುಗುಡ್ಡದ ಅಪರೂಪದ ಕಾಡಿಗೆ ಈ ಸಲದ ನಮ್ಮ ಚಾರಣ ಎಂದು ಎಚ್ ಆರ್ ಸ್ವಾಮಿ ತಿಳಿಸಿದಾಗ ನಾನು ನಿಜಕ್ಕೂ ಅಚ್ಚರಿಗೊಂಡೆ. ಎಲ್ಲಿಯ ಬಯಲುಸೀಮೆ ಅರಸೀಕೆರೆ, ಎಲ್ಲಿಯ ಕಾಡು!, ನಾನು ಚಾರಣಕ್ಕೆ ಬರಲಿ ಎಂದು ಸ್ವಾಮಿ ಹೀಗೆ ಉತ್ಪ್ರೇಕ್ಷಿಸಿ ಹೇಳುತ್ತಿರಬಹುದೆ? ತರ್ಕದ ಮನಸ್ಸು ಬೇಡ ಎಂದು ತಡೆದರೂ, ಕಾಲುಗಳು ಮಾತ್ರ ಚಾರಣಕ್ಕೆ ಹೋಗಲು ಅಣಿಯಾಗತೊಡಗಿದವು. ಕೊನೆಗೆ ಅಳೆದು- ತೂಗಿ ಮನಸ್ಸಿನ ಮಾತನ್ನು ಪಕ್ಕಕ್ಕೆ ಸರಿಸಿ, ಕಾಲಿನ ಮಾತಿಗೆ ಕಿವಿಗೊಟ್ಟು, ಅರಸೀಕೆರೆಗೆ ಹೋಗಿ ಗೆಳೆಯರೊಂದಿಗೆ ಕಾಡಿನ ಕಡೆಗೆ ಹೆಜ್ಜೆಹಾಕಿದೆ. ನಮ್ಮ ಚಾರಣಕ್ಕೆ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಯವರು ನಮಗೆ ಮಾರ್ಗದರ್ಶಕರಾಗಿದ್ದರು.

ವಾಸ್ತವವಾಗಿ ಇದು ಉದುರೆಲೆ ಕಾಡಿನ ಪ್ರದೇಶ. ಮಳೆಗಾಲದಲ್ಲಷ್ಟೇ ಹಸಿರಾಗಿದ್ದು, ಬೇಸಿಗೆಯಲ್ಲಿ ಗಿಡ-ಮರಗಳೆಲ್ಲಾ ಬೋಳಾಗುತ್ತವೆ. ನಾವು ಚಾರಣಕ್ಕೆ ಹೊರಟಿದ್ದ ಹಿಂದೆ-ಮುಂದಿನ ದಿನಗಳಲ್ಲಿ ಅರಸೀಕೆರೆಯಲ್ಲಿ ಭೂಮಿ ಹದಗೊಳ್ಳುವಷ್ಟು ಮಳೆಯಾಗಿತ್ತು. ಇದರಿಂದಾಗಿ ಇಡೀ ಹಿರೇಕಲ್ಲು ಗುಡ್ಡದ ಬೆಟ್ಟಗಳ ಸರಣಿ ಹಸಿರುಮಯವಾಗಿತ್ತು. ಪುರ್ಲಹಳ್ಳಿ ಮಾರ್ಗವಾಗಿ ನಾವು ಕಾಡಿನತ್ತ ಹೆಜ್ಜೆಹಾಕಿದೆವು.

ಎತ್ತ ನೋಡಿದರೂ ಹಸಿರು ಹೊದ್ದ ಮರಗಳು, ಕಾಲಿಟ್ಟ ಕಡೆ ತೊಡರುತ್ತಿದ್ದ ನೀರಿನ ಒರತೆಗಳು, ಸಣ್ಣ ಸಣ್ಣ ಝರಿಗಳು, ಗವ್ವೆನ್ನುವ ಮರಗಳ ನಡುವೆ ತಣ್ಣಗೆ ಮಲಗಿದ್ದ ನೀರಿನ ಹೊಂಡಗಳು, ವಿಶಾಲ ಬಂಡೆಗಳ ಮೇಲಿನಿಂದ ಸಣ್ಣಗೆ ದಾರದಂತೆ ಇಳಿಯುತ್ತಿದ್ದ ಸಿಹಿನೀರಿನ ಮೋಹಕ ಕಿರು ಜಲಪಾತಗಳು ನಿಧಾನವಾಗಿ ನಮ್ಮ ಕಣ್ಣಿಗೆ ತಾಗಿದವು. ಹೀಗೆ ಇವೆಲ್ಲವನ್ನೂ ಮೋಹದಿಂದ ನೋಡುತ್ತಾ ನಿಂತುಬಿಟ್ಟೆವು. ಬದಿಯಲ್ಲಿಯೇ ಕೆಂಡದುಂಡೆಯಂತೆ ಅರಳಿ ನಿಂತಿದ್ದ ಗೌರಿ ಹೂಗಳ ಗುಚ್ಚ ನಮ್ಮನ್ನು ತಡೆದುನಿಲ್ಲಿಸಿತು. ಮಳೆ ಕಡಿಮೆ ಬೀಳುವ ಬಯಲುಸೀಮೆ ಅರಸೀಕೆರೆಯ ಸೆರಗಿನಂಚಲ್ಲೂ ಇಂಥ ಕಾನು ಇದೆ ಎಂದು ನಾನು ಊಹಿಸಿಯೂ ಇರಲಿಲ್ಲ! ಕಾಡಿನೊಳಗೆ ನಡೆಯುತ್ತಾ ನಡೆಯುತ್ತಾ ಅಚ್ಚರಿಗಳು ಅನಾವರಣಗೊಂಡವು.

ಕಂಪು ಬೀರುವ ‘ವರ್ಷದ ಮಲ್ಲಿಗೆ’

ಅಳಲೆ, ತಾರೆ, ಮತ್ತಿ ಅರ್ಜುನ, ದಿಂಡಗ ಕೊಂಡಬೇವು, ಮೂಕಾರ್ತಿ, ಜಾಲಾರ, ಅರಶಿನ ಬೂರುಗ, ಕೆಂಪು ಬೂರುಗ, ಉದಯ ಕುಂಕುಮದ ಮರ, ಸಾಂಬ್ರಾಣಿ ಮರ, ರಕ್ತ ಭೂತಾಳೆ, ವಿಭೂತಿ ಭೂತಾಳೆ, ಹೊಳೆಮತ್ತಿ, ಮರಡಿ, ಈಶ್ವರಿ ಬಳ್ಳಿ, ಶತಾವರಿ ಬಳ್ಳಿ, ಸೀಗೆ ಬಳ್ಳಿ.. ಹೀಗೆ ನೂರಾರು ಜಾತಿ ವೃಕ್ಷಗಳ ಕುಟುಂಬವೇ ಅಲ್ಲಿ ತಮ್ಮ ಸಹಜ ಇರು ನೆಲೆಗಳಲ್ಲಿ ಕಂಡವು. ಇದರ ನಡುವೆ ನಮ್ಮನ್ನು ಸೆಳೆದದ್ದು ‘ವರ್ಷದ ಮಲ್ಲಿಗೆ’ ಎನ್ನುವ ವಿಶೇಷ ಜಾತಿಯ ಅಗಾಧ ಪರಿಮಳ ಸೂಸುವ ಹೂವಿನ ಗಿಡ. ಆಗಷ್ಟೆ ಮೊಗ್ಗು ತಳೆದು ನಿಂತಿತ್ತು. ದೀಪಾವಳಿ ಹಬ್ಬದ ಸಮಯಕ್ಕೆ ಪಲ್ಲವಿಸುವ ಈ ಹೂವಿಗೆ ಪಟ್ಟಣಗಳಲ್ಲಿ ಹಬ್ಬದ ದಿನದಲ್ಲಿ ಬಹುಬೇಡಿಕೆಯಂತೆ! ಹಾಗೆಯೇ ಕಾರೆಹಣ್ಣು, ಬೆಟ್ಟದ ನೆಲ್ಲಿ, ಕಾಡು ಬಿಕ್ಕೆ ಮರಗಳು, ಬಗೆ ಬಗೆಯ ಔಷಧಿ ಸಸ್ಯಗಳು ತಮ್ಮ ಇರುವಿಕೆಯ ಸುಳಿವು ನೀಡಿದವು. ನಡು ನಡುವೆ ಗೋಚರವಾಗುತ್ತಿದ್ದ ನೀರ ದೊಣೆಗಳು, ವಿಶಾಲ ಬಂಡೆಯ ಮೇಲೆ ತೆಳುವಾಗಿ ಹರಿಯುತ್ತಿದ್ದ ನೀರು. ಎಲ್ಲವೂ ನಮ್ಮನ್ನು ಸಮ್ಮೋಹನಗೊಳಿಸಿದವು. ಬಯಲು ಸೀಮೆಯ ಒಡಲೊಳಗೆ ಎಂತಹ ಜೀವವೈವಿಧ್ಯದ ಕಾಡು ಅಡಗಿದೆ ಎಂದು ಸೋಜಿಗಪಟ್ಟೆವು.

ಸೂಕ್ಷ್ಮ ಪರಿಸರದ ಈ ಕಾಡಿನಲ್ಲಿ ವಿಶೇಷವಾಗಿ ಕಡವೆ, ನವಿಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕರಡಿಗಳೂ ಇವೆ (ನಾವು ಚಾರಣ ಮಾಡುವ ವೇಳೆಯಲ್ಲಿ ಇವಾವೂ ನಮ್ಮ ಕಣ್ಣಿಗೆ ಬೀಳಲಿಲ್ಲ!). ಕರ್ನಾಟಕ ಸರ್ಕಾರ ಸದ್ಯದಲ್ಲೇ ಈ ಪ್ರದೇಶವನ್ನು ‘ಕರಡಿ ಧಾಮ’ವನ್ನಾಗಿ ಘೋಷಿಸಲಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು. ಇದಲ್ಲದೆ ಹಸಿರು ಬಣ್ಣದ ಜೇನುಬಾಕ, ಕಂಚುಕುಟಿಗ, ಕುಟ್ರನ ಹಕ್ಕಿ, ಕೋತಿಪುಕ್ಕಲ, ಕಾಗೆಸೆಳ್ಳು, ಗಿಳಿ, ಚುಕ್ಕೆ ಮುನಿಯ, ಗಿಡುಗ, ಹದ್ದು, ಬೂದು ಬೆಳವ, ಚುಕ್ಕೆ ಬೆಳವ, ದಾಸಮಗರೆ (ನೀಲಕಂಠ) ಹಕ್ಕಿಗಳು ಅಲ್ಲಲ್ಲಿ ನಮ್ಮ ಕಣ್ಣಿಗೆ ಕಂಡು ಮರೆಯಾದವು. ಮಾರ್ಗಮಧ್ಯದಲ್ಲಿ ಎರಡು ಹಸಿರು ಬಣ್ಣದ ಜೇನುಬಾಕ ಹಕ್ಕಿಗಳು ‘ಧೂಳುಸ್ನಾನ’ ಮಾಡುತ್ತಿದ್ದ ನೋಟವಂತೂ ಮೋಹಕವಾಗಿತ್ತು!

ಬೆಟ್ಟದ ತುದಿಯನ್ನು ತಲುಪುತ್ತಲೇ ನಮಗೆ ಇನ್ನೊಂದು ಅಚ್ಚರಿ ಕಾದಿತ್ತು. ಬೆಟ್ಟದ ತುದಿ ಟೆನ್ನಿಸ್ ಕೋರ್ಟ್‌ನಂತೆ ಹಸಿರಿ ನಿಂದ ಸಮತಟ್ಟಾಗಿದ್ದು, ಒಂದೆರೆಡು ಪುಟ್‍ಬಾಲ್ ಮೈದಾ ನದಷ್ಟು ದೊಡ್ಡದಾಗಿ, ಗಾಲ್ಫ್ ಮೈದಾನದಷ್ಟು ವಿಶಾಲವಾಗಿತ್ತು. ಇಂತಹ ಅಚ್ಚರಿಯ ನಡುವೆಯೇ ತಗ್ಗಿನಲ್ಲಿ ಹೂತ ಕೊಳವೊಂದು ಗೋಚರಿಸಿತು. ಕೆಲವು ಕಡೆ ಕೋಟೆಯ ಅವಶೇಷಗಳು, ಪಾಳುಬಿದ್ದ ದ್ರಾವಿಡ ಶೈಲಿಯ ದೇವಾಲಯದ ಅವಶೇಷಗಳು ಗಮನ ಸೆಳೆದವು. ಅಲ್ಲಲ್ಲಿ ಎದುರಾಗುತ್ತಿದ್ದ ಮುಕ್ಕಾದ, ಪಾಳುಬಿದ್ದ ಕೋಟೆಯ ಕಲ್ಲಿನ ಗೋಡೆಯನ್ನು ಇತಿಹಾಸದ ಕೊಂಡಿಗಳಿಗೆ ಜೋಡಿಸಿ ಸ್ಥಳೀಯರು ಇದನ್ನು ಚಿತ್ರದುರ್ಗದ ಮದಕರಿನಾಯಕರ ಆಳ್ವಿಕೆಯ ಕಾಲದ್ದೆಂದು ಹೇಳಿದರು.

ಹೀಗೆ ಹಿರೇಕಲ್ಲು ಗುಡ್ಡದ ಚಾರಣವನ್ನು ಪುರ್ಲಹಳ್ಳಿ ಮಾರ್ಗವಾಗಿ ಬೆಳಗ್ಗೆ 9 ಗಂಟೆಗೆ ಆರಂಭಿಸಿ ಸಂಜೆ ಹೊತ್ತಿಗೆ ನಾಗಪುರಿ ಮಾರ್ಗದಲ್ಲಿ ಇಳಿದೆವು. ಅಷ್ಟುಹೊತ್ತಿಗಾಗಲೇ ಹಿರೇಕಲ್ಲು ಗುಡ್ಡದ ಬೆಟ್ಟ ಶ್ರೇಣಿ, ಆಸುಪಾಸಿನಲ್ಲಿ ಚದುರಿ ಹೋಗುತ್ತಿದ್ದ ಮಳೆಯ ಮೋಡಗಳನ್ನು ತನ್ನೆಡೆಗೆ ಕರೆಯತೊ ಡಗಿತು. ಬರಲಿರುವ ಮಳೆಗೆ ಮೈಯೊಡ್ಡುವ ಮನಸ್ಸಿದ್ದರೂ ಅರಣ್ಯ ಇಲಾಖೆಯ ಸಿಬ್ಬಂದಿಯವರ ಒತ್ತಾಯದ ಮೇರೆಗೆ ಒಲ್ಲದ ಮನಸ್ಸಿನಿಂದ ಅರಸೀಕೆರೆ ದಿಕ್ಕಿನತ್ತ ಹೆಜ್ಜೆ ಹಾಕಿದೆವು.

ವಾಸ್ತವವಾಗಿ ಒಂದು ದಿನಕ್ಕೆ ಮುಗಿಯುವ ಚಾರಣವಲ್ಲ ಇದು! ಮತ್ತೂ ಒಂದು ದಿನ ನಮಗೆ ಅವಕಾಶವಿದ್ದಿದ್ದರೆ, ಆ ಕಾಡಿನ ಇನ್ನಷ್ಟು ಸೋಜಿಗಗಳನ್ನು ನೋಡಬಹುದಾಗಿತ್ತು! ಆದರೂ ಪ್ರಕೃತಿ ತನ್ನೊಳಗೆ ಜತನವಾಗಿ ಕಾಪಾಡಿಕೊಂಡಿದ್ದ ತಪೋಭೂಮಿಯನ್ನು ನೋಡಿದ ಸಂತೋಷ ನಮಗಾಗಿತ್ತು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT