ಓಮೈಕ್ರಾನ್ ಭೀತಿ: ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಬಿಸಿಸಿಐ ನಿರ್ಧಾರ –ಕೊಹ್ಲಿ

ವಾಂಖೆಡೆ: ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತಂಡ ಕೈಗೊಳ್ಳಲಿರುವ ಪ್ರವಾಸದ ಕುರಿತು ಹೊಸ ಮಾಹಿತಿ ಏನಾದರೂ ಲಭ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
'ಸಾಕಷ್ಟು ಯೋಜನೆಗಳು ನಡೆಯುತ್ತಿವೆ. ರಾಹುಲ್ ದ್ರಾವಿಡ್, ಮಾತುಕತೆ ನಡೆಸುತ್ತಿದ್ದಾರೆ. ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಗೊಂದಲಮಯ ಸನ್ನಿವೇಶದಲ್ಲಿರಲು ನಾವು ಬಯಸುವುದಿಲ್ಲ. ಮುಂದಿನ ದಿನಗಳಲ್ಲಿ ಮಂಡಳಿಯು ತನ್ನ ನಿರ್ಧಾರವನ್ನು ನಮಗೆ ತಿಳಿಸುವ ಭರವಸೆ ಇದೆ' ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದಲ್ಲಿ ಕಾಣಿಸಿಕೊಳ್ಳದ ಇತರ ಆಟಗಾರರಿಗೆ ಕ್ವಾರಂಟೈನ್ನಲ್ಲಿರಲು ಮತ್ತು ಬಯೋ ಬಬಲ್ಗೆ ಸೇರಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತನಾಡಿರುವ ಕೊಹ್ಲಿ, 'ಇದು ಸ್ವಾಭಾವಿಕ. ನಾವು ಸಾಧಾರಣ ಸನ್ನಿವೇಶದಲ್ಲಿ ಆಡುತ್ತಿಲ್ಲ. ಹಾಗಾಗಿ ಸಾಕಷ್ಟು ಯೋಜನೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಖಚಿತವಾಗಿ ಏನು ನಡೆಯಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಸಾಕಷ್ಟು ಸಿದ್ಧತೆ ನಡೆಸಲಾಗುತ್ತಿದೆ' ಎಂದಿದ್ದಾರೆ.
ಸದ್ಯ ತಂಡದಲ್ಲಿಲ್ಲದ (ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಶ್ರಾಂತಿ ಪಡೆದಿರುವ) ಕೆಲವು ಆಟಗಾರರು ಇದ್ದಾರೆ. ಅವರು ಕ್ವಾರಂಟೈನ್ ಮುಗಿಸಿ ಬಯೋಬಬಲ್ಗೆ ಸೇರಿಕೊಳ್ಳಲಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಸಾದ್ಯವಾದಷ್ಟು ಬೇಗ ಸ್ಪಷ್ಟತೆ ಸಿಗಬೇಕಿದೆ. ಹೀಗಾಗಿ ತಂಡದ ಎಲ್ಲ ಹಿರಿಯ ಆಟಗಾರರು ಮಾತುಕತೆ ನಡೆಸಿದ್ದೇವೆ ಎಂದಿದ್ದಾರೆ.
ಈ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕುರಿತ ನಿಖರ ಮಾಹಿತಿ ಶೀಘ್ರದಲ್ಲೇ ನಿರೀಕ್ಷಿಸಲಾಗುತ್ತಿದೆ. ಸದ್ಯ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ನತ್ತ ತಂಡವು ಗಮನ ಹರಿಸಿದೆ ಎಂದು ಹೇಳಿದ್ದಾರೆ.
ನಾವು ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ಇನ್ನು ಒಂದು ಅಥವಾ ಎರಡು ದಿನದಲ್ಲಿ ಮುಂಬರುವ ಪ್ರವಾಸದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ವಿರಾಟ್ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಕಣಕ್ಕಿಳಿದಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡ ಮುನ್ನಡೆಸಿದ್ದರು. ಇದೀಗ ಕೊಹ್ಲಿ ವಾಪಸ್ ಆಗಿದ್ದು, ಆರಂಭಿಕ ಆಟಗಾರ ಮಯಂಕ್ ಅಗರವಾಲ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: IND vs NZ: 5 ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ವೇದಿಕೆಯಾಗಲಿದೆ ವಾಂಖೆಡೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.