ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಆಟದ ಮನೆ: ಧೋನಿ ಬೆನ್ನಮೇಲಿನ ಮಣಭಾರ

Last Updated 2 ಸೆಪ್ಟೆಂಬರ್ 2020, 8:45 IST
ಅಕ್ಷರ ಗಾತ್ರ

ಮಹೇಂದ್ರ ಸಿಂಗ್‌ ಧೋನಿ ವಿಶ್ವದರ್ಜೆ ಕ್ರಿಕೆಟ್‌ನಲ್ಲಿ ವಿಕೆಟ್‌ಗಳ ಹಿಂದೆ ನಿಂತೇ ಬೆನ್ನಭಾರವನ್ನು ಹೆಚ್ಚುಮಾಡಿಕೊಂಡವರು. ಆಟದ ಗತಿ, ಸಮಯೋಚಿತ ನಿರ್ಣಯಗಳು ಎಲ್ಲಕ್ಕೂ ವಿಕೆಟ್‌ಕೀಪರ್‌ಆಗುವುದೇ ಸೂಕ್ತ ಎಂದುಕೊಂಡಿದ್ದ ಅವರು ವಿಶ್ವದ ಯಾರೂ ಸಾಧಿಸದ ಒಂದಷ್ಟನ್ನು ಸಾಧಿಸಿ ತೋರಿಸಿದ್ದಾರೆ. ಅವುಗಳನ್ನೆಲ್ಲ ಬಗೆದುನೋಡುವುದೇ ಖುಷಿಯ ವಿಷಯ.

***

ಮಹೇಂದ್ರ ಸಿಂಗ್ ಧೋನಿ ಇನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದಿಲ್ಲ ಎಂಬ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಆಗುವುದೂ ಇಲ್ಲ. ಯಾಕೆಂದರೆ, ಇಂಡಿಯನ್ ಪ್ರೀಮಿಯರ್‌ಲೀಗ್ (ಐಪಿಎಲ್) ಶುರುವಾಗುತ್ತಿದೆ. ಹೀಗಾಗಿ ಅವರು ಗ್ಲೌಸ್ ನೇತುಹಾಕಿದ್ದಾರೆ ಎನ್ನುವುದೇ ತಪ್ಪು. ಧೋನಿ ಚತುರಮತಿ. ಕ್ರಿಕೆಟ್‌ನಿಂದ ಕಂತು ಕಂತಾಗಿ ನಿವೃತ್ತಿಯಾಗಬಹುದಾದ ಅಪರೂಪದ ಅವಕಾಶವನ್ನು ತಂತಾವೇ ಸೃಷ್ಟಿಸಿಕೊಂಡರು. 2014ರಲ್ಲಿ ಟೆಸ್ಟ್‌ಗೆ ನಮಸ್ಕಾರ. ಇದೀಗ ಏಕದಿನ ಹಾಗೂ ಟ್ವೆಂಟಿ–20 ಅಂತರರಾಷ್ಟ್ರೀಯ ಪಂದ್ಯಗಳಿಗೆ ಗುಡ್‌ಬೈ. ಹಾಗಂತ ಐಪಿಎಲ್‌ನಲ್ಲಿ ಒಂದು ಕೈ ನೋಡುವುದನ್ನು ಅವರು ನಿಲ್ಲಿಸಿಲ್ಲ. 2008ರಿಂದ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಹಳದಿ ಟಿ–ಶರ್ಟು ಅವರಿಗೆ ಚೆನ್ನಾಗಿ ಒಲಿದುಬಂದಿದೆ (ಈಗ ಹಳದಿಯ ಜತೆಗೆ ನೀಲಿ ಬಣ್ಣ ಬೆರೆತ ವಸ್ತ್ರವನ್ನೂ ತಂಡದ ಫ್ರಾಂಚೈಸಿಗಳು ಜನಪ್ರಿಯಗೊಳಿಸುತ್ತಿರುವುದು ಬೇರೆ ಮಾತು).

ಧೋನಿಯ ಹೆಲಿಕಾಪ್ಟರ್‌ಶಾಟ್, ನಾಯಕನಾಗಿ ಭರ್ತಿ 332 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ವಿಶ್ವದ ಏಕೈಕ ಆಟಗಾರ (ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 324 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದರು) ಎಂಬ ಹೆಮ್ಮೆ, ಚುರುಕಾದ ರನ್ನಿಂಗ್ ಬಿಟ್ವೀನ್ ವಿಕೆಟ್ಸ್‌ಇವೆಲ್ಲವುಗಳ ಸುತ್ತ ಹಲವು ಗುಣವಿಶೇಷಣಗಳು ಮೂಡಿವೆ. ಆದರೆ, ಹದಿನಾರು ವರ್ಷಗಳಷ್ಟು ಸುದೀರ್ಘಾವಧಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಅವರ ದೇಹದಲ್ಲಿ ಕಾಡುವುದು ಬೆನ್ನು.

ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಲಾರಂಭಿಸಿ ಎರಡು ವರ್ಷಗಳಾಗಿದ್ದವಷ್ಟೆ. ಬೆನ್ನಿಗೆ ಐಸ್‌ಪ್ಯಾಕ್‌ ಕಟ್ಟಿಕೊಂಡು ಕಣಕ್ಕಿಳಿದಿದ್ದರು. ಟಿ–ಶರ್ಟ್‌ನಲ್ಲಿ ನಡುಬೆನ್ನ ಮೇಲೆ ಉಬ್ಬಿದಹಾಗೆ ಆ ಐಸ್‌ಪ್ಯಾಕ್‌ ಎದ್ದುಕಾಣುತ್ತಿತ್ತು. ಇಂಗ್ಲೆಂಡ್‌ ಎದುರಿನ ಪಂದ್ಯ ಅದು. ಧೋನಿ 106 ಎಸೆತಗಳಲ್ಲಿ 96 ರನ್‌ ಗಳಿಸಿ ಔಟಾದಾಗ ಎದುರಾಳಿಗಳಿಗೆ ಸಂಭ್ರಮಪಡುವಂಥದ್ದು ಏನೂ ಇರಲಿಲ್ಲ. ಬೆನ್ನುನೋವು ಇದ್ದೂ ಅಷ್ಟೊಂದು ರನ್ ಹೊಡೆದು ಬರುವುದೆಂದರೆ ತಮಾಷೆಯಾ? ಕಳೆದ ವರ್ಷ ಐಪಿಎಲ್‌ನಲ್ಲಿ ಪದೇ ಪದೇ ಬೆನ್ನುನೋವಿನಿಂದ ಧೋನಿ ಮುಖ ಕಿವುಚಿದ್ದರು. ಅದನ್ನು ಕಂಡಾಗ ನೆನಪಾದದ್ದು ಆ ಹಳೆಯ ಇನಿಂಗ್ಸ್‌.

ಧೋನಿ ಅಪ್ಪ ರಾಂಚಿಯಲ್ಲಿ ಮೆಕಾನ್ ಲಿಮಿಟೆಡ್ ಕಂಪೆನಿಯ ಪಂಪ್ ಆಪರೇಟರ್ ಆಗಿದ್ದವರು. ಅವರ ಮನೆಯ ಪಕ್ಕದಲ್ಲೇ ಕ್ರೀಡಾಂಗಣ. 1981ರಲ್ಲಿ ಧೋನಿ ಹುಟ್ಟಿದ್ದು. ಬಾಲ್ಯದಲ್ಲಿ ಫುಟ್‌ಬಾಲ್‌ ಆಡುತ್ತಿದ್ದ ಧೋನಿ, ಗೋಲ್‌ಕೀಪರ್‌ ಆದರು. ಆಗ ತಡೆದ ಗೋಲ್‌ಗಳಿಗೂ ಕ್ರಿಕೆಟ್‌ನಲ್ಲಿ ಅವರು ವಿಕೆಟ್‌ಕೀಪರ್‌ ಆದದ್ದಕ್ಕೂ ಏನೋ ಸಂಬಂಧವಿದೆ.

ಸೆಂಟ್ರಲ್ ಕೋಲ್ ಲಿಮಿಟೆಡ್ (ಸಿಸಿಎಲ್) ಎಂಬ ಕಂಪನಿಗೆ 1998ರ ಜನವರಿಯಲ್ಲಿ ದೇವಲ್ ಸಹಾಯ್ ಎಂಬ ನಿರ್ದೇಶಕರು ಬಂದರು. ಪಾಳುಬಿದ್ದಂತೆ ಇದ್ದ ಆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿಸಿದರೆ ಹೇಗೆ ಎಂಬ ಯೋಚನೆ ಹುಟ್ಟಿತು . ಶಾಲಾ ಕ್ರಿಕೆಟ್‌ನಲ್ಲಿ ಡಬಲ್ ಸೆಂಚುರಿ ಹೊಡೆದಿದ್ದ ಮಹೇಂದ್ರ ಸಿಂಗ್ ಧೋನಿ ತರಹದ ಹುಡುಗರನ್ನು ಅವರು ಹುಡುಕಿಸಿ ಹುಡುಕಿಸಿ ಕರೆತಂದರು. ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಸಂಬಳವನ್ನು ಕ್ರಿಕೆಟ್‌ ಆಡಲು ಅವರು ಧೋನಿಗೆ ನಿಕ್ಕಿ ಮಾಡಿದರು. ಧೋನಿ ಬ್ಯಾಟಿಂಗ್‌ಗಿಂತ ಹೆಚ್ಚಾಗಿ ವಿಕೆಟ್‌ಕೀಪಿಂಗ್‌ನ ಚುರುಕುತನಕ್ಕೆ ಮೊದಲಿನಿಂದಲೂ ಹೆಸರುವಾಸಿ.

ಕ್ರಿಕೆಟ್‌‘ಸೌಂದರ್ಯ ಮೀಮಾಂಸೆ’ಯಲ್ಲಿ ಇಂಗ್ಲಿಷ್‌ನಲ್ಲಿ ‘ಅಗ್ಲಿ ಸ್ಟೈಲ್’ ಎಂಬೊಂದು ಪದದ ಬಳಕೆ ಇದೆ. ಧೋನಿಯ ಆಟದ ಶೈಲಿ ಕಂಡವರು ಬರವಣಿಗೆಯಲ್ಲಿ ಅದನ್ನು ಢಾಳಾಗಿ ಬಳಸಿದರು. ನಿಜ, ಧೋನಿ ಬ್ಯಾಟ್ ಹಿಡಿದು ಗಾರ್ಡ್ ತೆಗೆದುಕೊಳ್ಳುವ ರೀತಿಯಿಂದ ಹಿಡಿದು ಅವರ ಕಟ್‌ಗಳು, ಕವರ್‌ಡ್ರೈವ್‌ಗಳು, ಲಾಫ್ಟೆಡ್‌ಹೊಡೆತಗಳು ಯಾವುದರಲ್ಲೂ ಕಣ್ಣುಕೋರೈಸುವಂಥ ಹಿತಾನುಭವ ಕಾಣುವುದಿಲ್ಲ. ಅದನ್ನೇ ಅವರು ವರವಾಗಿಸಿಕೊಂಡರು. ಎದುರಾಳಿ ಬೌಲರ್‌ಗಳು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಕಾಡಬಲ್ಲ ಬ್ಯಾಟ್ಸ್‌ಮನ್‌ಆಗಲು ಬಹುಶಃ ಅದೇ ಕಾರಣವಾಯಿತು.

2007ರಲ್ಲಿ ಭಾರತದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಬಂದಾಗ ದಿಲೀಪ್ ವೆಂಗ್‌ಸರ್ಕರ್ ನೇತೃತ್ವದ ಆಯ್ಕೆ ಸಮಿತಿ ಹಲವು ಹೆಸರುಗಳನ್ನು ಮುಂದಿಟ್ಟುಕೊಂಡಿತ್ತು. ರಾಹುಲ್ ದ್ರಾವಿಡ್ ತಮ್ಮ ಹೆಗಲಿನಿಂದ ನಾಯಕತ್ವದ ಭಾರ ಕೆಳಗಿಳಿಸಲು ಬಯಸಿದ್ದರು. ಅವರು ತಕ್ಷಣಕ್ಕೆ ಸೂಚಿಸಿದ ಹೆಸರು ಧೋನಿಯದ್ದು. ಸಚಿನ್ ತೆಂಡೂಲ್ಕರ್ ಅನುಮೋದಿಸಿದ್ದೂ ಅದೇ ಹೆಸರನ್ನು. ಮೊನ್ನೆ ಮೊನ್ನೆ ಇದನ್ನೇ ಸಚಿನ್ ನೆನಪಿಸಿದರು.

ಧೋನಿ ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕರಾದರು. ನೀಳ ಕೂದಲು, ಒರಟು ಮುಖ, ಬ್ಯಾಕ್‌ಫುಟ್‌ನಲ್ಲಿ ಹೊಡೆಯುತ್ತಿದ್ದ ಅಸಾಂಪ್ರದಾಯಿಕ ಹೊಡೆತಗಳು ಅವರ ಕಡೆ ಕಣ್ಣರಳಿಸಿ ನೋಡುವಂತೆ ಮಾಡಿದ್ದವು. ಮೊದಮೊದಲು ಹಿಂದಿಯನ್ನೇ ಅಳುಕಿನಿಂದ ಮಾತನಾಡುತ್ತಿದ್ದ ಅವರು ನೋಡನೋಡುತ್ತಲೇ ಸುಲಿದ ಬಾಳೆಯ ಹಣ್ಣಿನಂದದಿ ಇಂಗ್ಲಿಷ್ ಮಾತನಾಡಲಾರಂಭಿಸಿದರು. ‘ನಿವೃತ್ತಿಯಾಗುವ ಯೋಚನೆ ಇದೆಯಾ’ ಎಂದು ಕೇಳಿದ ವಿದೇಶಿ ಪತ್ರಕರ್ತನನ್ನೇ ಕರೆದು, ಪಕ್ಕದ ಕುರ್ಚಿಯಲ್ಲಿ ಕುಳ್ಳಿರಿಸಿ, ‘ನಾನು ಸರಿಯಾಗಿ ಓಡುತ್ತಿಲ್ಲವೇ? ಫಾರ್ಮ್ ಹಾಳಾಗಿದೆಯೇ? ಆಡುವುದನ್ನು ನಿಲ್ಲಿಸಬೇಕು ಎನಿಸುತ್ತಿದೆಯೇ?’ ಎಂದೆಲ್ಲ ನೇರವಾಗಿ ಮಾತಿನಿಂದಲೇ ಹೊಡೆದು ಸುಮ್ಮನಾಗಿಸಿದ್ದರು.

ಶ್ರಮ, ಆತ್ಮವಿಶ್ವಾಸ, ಜನಪ್ರಿಯತೆ ಎಲ್ಲವನ್ನೂ ಧೋನಿ ಜಾಣ್ಮೆಯಿಂದ ನಿಭಾಯಿಸಿದರು. ಕೋಟಿಗಟ್ಟಲೆ ವಹಿವಾಟಿನ ಬ್ರಾಂಡಿಂಗ್ ಅನ್ನು ಹದವಾಗಿ ತೂಗಿಸಿಕೊಂಡೇ ಬಂದರು. ಭಾರತ 2011ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆಲ್ಲುವ ಹೊತ್ತಿಗೆ ಬಾಲಿವುಡ್ ನಟ ಶಾರುಖ್ ಖಾನ್ ಕೈಯಲ್ಲಿ ಇದ್ದಷ್ಟೇ ಮೊತ್ತದ ಬ್ರಾಂಡ್‌ಗಳಿಗೆ ಧೋನಿ ರಾಯಭಾರಿ.

ಭಾರತ ವಿಶ್ವಕಪ್ ಗೆಲ್ಲುವ ಮೊದಲು ಹಾಗೂ ನಂತರದ ಎರಡು ಮೂರು ವರ್ಷಗಳಲ್ಲಿ ಧೋನಿ ವರ್ಷಕ್ಕೆ ಸರಾಸರಿ ₹ 70 ಕೋಟಿಯಷ್ಟನ್ನು ಬ್ರಾಂಡ್ ಪ್ರಚಾರದ ಮೂಲಕವೇ ಬಾಚಿಹಾಕಿದ್ದರು.

ವಿರಾಟ್ ಕೊಹ್ಲಿ ಕೈಗೆ ನಾಯಕತ್ವ ವಹಿಸಿದ ಮೇಲೂ ಧೋನಿ ತಮ್ಮ ಆಟದ ವರ್ಚಸ್ಸು ಮುಕ್ಕಾಗಲು ಬಿಡಲಿಲ್ಲ. ಎಲ್ಲ ಸ್ವರೂಪದ ಕ್ರಿಕೆಟ್‌ಗೂ ಒಗ್ಗಿಕೊಂಡರು. ಚುಟುಕು ಕ್ರಿಕೆಟ್‌ಅನ್ನು ಅಷ್ಟು ದೀರ್ಘಾವಧಿ ಆಡಿದ ಅಂತರರಾಷ್ಟ್ರೀಯ ಮಟ್ಟದ ಯಶಸ್ವಿ ನಾಯಕ ಬೇರೆ ಯಾರೂ ಸಿಗಲಿಕ್ಕಿಲ್ಲ. ಟ್ವೆಂಟಿ-20 ವಿಶ್ವಕಪ್ ಕೂಡ ಗೆದ್ದರು. ಎರಡು ವಿಶ್ವಕಪ್ ಗೆಲ್ಲುವ, ಟೆಸ್ಟ್ ಕ್ರಿಕೆಟ್‌ನಲ್ಲೂ ನಾಯಕತ್ವದ ರೆಕಾರ್ಡನ್ನು ಉತ್ತಮವಾಗಿಯೂ ಸ್ಥಿರವಾಗಿಯೂ ಕಾಪಾಡಿಕೊಳ್ಳುವ ವ್ಯಕ್ತಿಯಾಗಿ ಅವರು ಸಚಿನ್‌ಗಿಂತ ಮೇಲೇರಿದರು. ಗಂಗೂಲಿ ಹೆಸರಲ್ಲಿದ್ದ ಅತಿ ಹೆಚ್ಚು ಟೆಸ್ಟ್‌ಗೆದ್ದುಕೊಟ್ಟ ನಾಯಕನೆಂಬ ದಾಖಲೆಯನ್ನು ದಾಟಿದರು.

ಧೋನಿ ತಮ್ಮ ಬ್ಯಾಟ್‌ಗೆ ಅಂಟಿಸಿಕೊಳ್ಳುವ ಎಂಆರ್‌ಎಫ್ ಸ್ಟಿಕ್ಕರ್ ಒಂದೇ ವರ್ಷಕ್ಕೆ ₹ 8 ಕೋಟಿ ರೂಪಾಯಿ ಸಂಪಾದಿಸಿ ಕೊಡುತ್ತಿತ್ತು. ಮೊದಲು ಸಚಿನ್ ಬ್ಯಾಟ್ ಮೇಲೂ ಇಂಥದ್ದೇ ಸ್ಟಿಕ್ಕರ್ ಇದ್ದುದು.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ಪರವಾಗಿ ಧೋನಿ ಆಡತೊಡಗಿದ ಮೇಲೆ ಅವರ ಬ್ರಾಂಡ್ ಮೌಲ್ಯ ಇನ್ನಷ್ಟು ಹೆಚ್ಚಾಯಿತು. ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಒಡೆತನ ವಿವಾದ, ಬೆಟ್ಟಿಂಗ್ ವಿವಾದ ಭುಗಿಲೆದ್ದಾಗಲೂ ಧೋನಿ ಹೆಸರು ಕೇಳಿಬಂದಿತ್ತು. ಆದರೆ, ಅವರು ಅದರಿಂದ ಕಿಂಚಿತ್ತೂ ವಿಚಲಿತರಾಗದೆ ಅಗ್ನಿದಿವ್ಯದಿಂದ ಹೊರಬಂದಂತೆ ನಕ್ಕರು. ಮತ್ತೆ ನಾಯಕನ ಟೋಪಿ ತೊಟ್ಟು ಕ್ರಿಕೆಟ್ ಅಂಗಳದಲ್ಲಿ ನಿಂತರು.ಈಗ ಸುರೇಶ್ ರೈನಾ ಮುನಿಸಿಕೊಂಡು ಹೊರನಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುವಾಗಲೂ ಧೋನಿ ಅದೇ ಹಳೆಯ ಸ್ಥಿತಪ್ರಜ್ಞ.

ಮತ್ತೆ ಧೋನಿಯ ಬೆನ್ನೇ ಕಾಡುತ್ತದೆ. ಮನಸ್ಸು ಮಾಡಿದ್ದರೆ ಎಂದೋ ಅವರು ವಿಕೆಟ್‌ಹಿಂದೆ ನಿಲ್ಲುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ತಮ್ಮ ತಂಡ ಬೌಲಿಂಗ್‌ಮಾಡುವಾಗ ಇಡೀ ಇನಿಂಗ್ಸ್‌ನೋಟ ಸರಿಸದೆ, ಕ್ಯಾಚುಗಳು, ಸ್ಟಂಪಿಂಗ್, ರನ್‌ಔಟ್ ಅವಕಾಶ ಕೈಚೆಲ್ಲದೆ ವಹಿಸಬೇಕಾದ ಎಚ್ಚರಿಕೆಯೇ ದೊಡ್ಡದು. ಅವುಗಳ ಜತೆಗೆ ಧೋನಿ ನಾಯಕತ್ವದ ನೊಗವನ್ನೂ ಹೊತ್ತುನಿಂತರು. ಬೆನ್ನಮೂಳೆಗಳು ಏನಾಗಿರಬೇಡ?

ಅಂತಹ ಬೆನ್ನಮೂಳೆಗಳನ್ನು ಬಳಸಿಯೇ ಅವರು ಟೆಸ್ಟ್‌ಗಳಲ್ಲಿ 256 ಕ್ಯಾಚ್ ಹಿಡಿದು, 38 ಸಲ ಸ್ಟಂಪ್ ಔಟ್ ಮಾಡಿದ್ದಾರೆ. ಏಕದಿನದ ಪಂದ್ಯಗಳಲ್ಲಿ 321 ಕ್ಯಾಚ್, 123 ಸ್ಟಂಪ್‌! ಟಿ–20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 57 ಕ್ಯಾಚ್, 34 ಸ್ಟಂಪ್. ಇಷ್ಟೆಲ್ಲ ಮಾಡಿದ ಮೇಲೆ 202 ಸಲ ನಾಟ್‌ಔಟ್‌ಆದ ಬ್ಯಾಟ್ಸ್‌ಮನ್ ಎಂಬ ಇನ್ನೊಂದು ವಿಶ್ವದಾಖಲೆ.

ಧೋನಿ ಬಾಲ್ಯದಲ್ಲಿ ಇಷ್ಟಪಡುತ್ತಿದ್ದುದು ಆ್ಯಡಂ ಗಿಲ್‌ಕ್ರಿಸ್ಟ್‌ಆಟವನ್ನು. ‘ಗಿಲ್ಲಿ’ ಆರಂಭಿಕ ಆಟಗಾರನಾಗಿ ಮೆರೆದವರು. ಧೋನಿ ಕೂಡ ಮೇಲಿನ ಕ್ರಮಾಂಕದಲ್ಲಿ ಆಡುವ ಅವಕಾಶವನ್ನು ವೃತ್ತಿಬದುಕಿನ ಮೊದಲ ಅವಧಿಯಲ್ಲೇ ಪಡೆದವರು. 2005ರಲ್ಲಿ ಫಾರ್ಮ್‌ಗಾಗಿ ತಡಬಡಾಯಿಸುತ್ತಿದ್ದಾಗ ನಾಯಕ ಸೌರವ್ ಗಂಗೂಲಿ ಅವರನ್ನು ವಿಶಾಖಪಟ್ಟಣದಲ್ಲಿ ಪಾಕಿಸ್ತಾನದ ಎದುರು ಮೂರನೇ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಸಿದ್ದರು. ಯುವಕನ ಬಿಸಿರಕ್ತವನ್ನು ಹೀಗೆ ಆಟದಲ್ಲಿ ಬಂಡವಾಳವಾಗಿಸುವ ಜಾಣತನ ಗಂಗೂಲಿ ಅವರಿಗೂ ಇತ್ತೆನ್ನಿ. ಯುವರಾಜ್‌ಸಿಂಗ್‌ಹದಿನೇಳರ ಹರೆಯದಲ್ಲೇ ಆಡಲು ಬಂದಾಗ ಅವರನ್ನು ತಾವು ನಿಭಾಯಿಸಿದ್ದು ಹೇಗೆ ಎಂದು ಸೌರವ್ ಇತ್ತೀಚೆಗೆ ಭಾಷಣವೊಂದರಲ್ಲಿ ಆಸಕ್ತಿಕರವಾಗಿ ಬಣ್ಣಿಸಿದ್ದರು.

ಮಹೇಂದ್ರ ಸಿಂಗ್ ಧೋನಿ ತಮ್ಮ ಬೆನ್ನಹುರಿಗಳನ್ನು ಶೋಷಿಸಲೇ ಟೊಂಕಕಟ್ಟಿಬಿಟ್ಟರು. ಬ್ಯಾಟಿಂಗ್ ಕ್ರಮಾಂಕದ ಬಡ್ತಿಯನ್ನು ಕೂಡ ಒಂದು ಸರ್‌ಪ್ರೈಸ್ ಎಲಿಮೆಂಟ್ ಆಗಿಯೇ ಉಳಿಸಿಕೊಂಡರು. ‘ಫಿನಿಷರ್’ ತಾವಾಗಬೇಕು ಎಂಬ ಹುಕಿಯಲ್ಲೇ ಟೀಕೆಗಳಿಗೂ ಎದೆಗೊಟ್ಟರು. ಇತ್ತೀಚೆಗೆ ಆರಂಭದಲ್ಲಿ ತಡಕಾಡುವಂತೆ ಆಡುತ್ತಿದ್ದ ಧೋನಿಯನ್ನು ಕುರಿತು ‘ಬಾಲ್‌ಗಳನ್ನು ನುಂಗಿಹಾಕುತ್ತಾರೆ’ ಎಂದು ಟೀಕಿಸಿದವರು ಅಸಂಖ್ಯ.

ಅಂಕಿಅಂಶಗಳೆಲ್ಲ ಧೋನಿ ಬೆನ್ನಿಗಿವೆ. ಅವೇ ಬೆನ್ನಮೇಲೆ ಹೊರಿಸಿದ ಹೊರೆಯ ಫಲ. ಏಕದಿನದ ಕ್ರಿಕೆಟ್‌ಪಂದ್ಯಗಳಲ್ಲಿ ಆರನೇ ಕ್ರಮಾಂಕದಲ್ಲಿ ಆಡಿ 4031 ರನ್‌ಗಳನ್ನು ಅವರು ಕಲೆಹಾಕಿದರು. ಇಷ್ಟು ರನ್‌ಗಳನ್ನು ಆ ಕ್ರಮಾಂಕದಲ್ಲಿ ಯಾರಿಗೂ ಗಳಿಸಲು ಆಗಿಲ್ಲ. ಭಾರತದ ಯಾವ ವಿಕೆಟ್‌ಕೀಪರ್‌ಕೂಡ ಏಕದಿನ ಪಂದ್ಯದ ಇನಿಂಗ್ಸ್‌ಒಂದರಲ್ಲಿ 183 ರನ್‌ಗಳನ್ನು ಗಳಿಸಿಲ್ಲ. 300 ಕ್ಯಾಚ್‌ಗಳನ್ನು ಭಾರತದ ಯಾರೂ ವಿಕೆಟ್ ಹಿಂದೆ ಏಕದಿನದ ಪಂದ್ಯಗಳಲ್ಲಿ ಹಿಡಿದಿರಲಿಲ್ಲ. 123 ಸ್ಟಂಪಿಂಗ್ ಅಂತೂ ವಿಶ್ವದಾಖಲೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹಾಗೂ ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್‌ಮಾತ್ರ ಧೋನಿ ಅವರಿಗಿಂತ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನು ಔಟ್‌ಮಾಡಿದ ಕೀಪರ್‌ಗಳೆನಿಸಿದ್ದಾರೆ.

17,266 ಅಂತರರಾಷ್ಟ್ರೀಯ ಕ್ರಿಕೆಟ್‌ರನ್‌ಗಳನ್ನು ಗಳಿಸಿರುವ ಧೋನಿ, ಟ್ವೆಂಟಿ–20ಯಲ್ಲಿ 37.6ರ ಸರಾಸರಿ ಕಾಯ್ದುಕೊಂಡದ್ದು ರೋಚಕ. ಏಕದಿನದ ಪಂದ್ಯಗಳಲ್ಲಂತು 50ಕ್ಕಿಂತ ಅವರ ಸರಾಸರಿ ಮೇಲೆಯೇ. ಈ ಪರಿಯ ಕ್ರಿಕೆಟ್‌ಬದುಕು ಮುಗಿಯಿತಲ್ಲ ಎಂದುಕೊಂಡು ಐಪಿಎಲ್ ಕಡೆ ನೋಡಿದರೆ ಅಲ್ಲೂ ಧೋನಿಯ ವರ್ಚಸ್ಸು ಜೋರೋ ಜೋರು. 42.2ರ ಸರಾಸರಿಯಲ್ಲಿ ರನ್‌ಗಳಿಸುತ್ತಾ ಅದಾಗಲೇ 190 ಐಪಿಎಲ್‌ಪಂದ್ಯಗಳನ್ನು ಅವರು ಆಡಿದ್ದಾಗಿದೆ. ಒಂದೂ ಶತಕವಿಲ್ಲದೆಯೂ ಇಷ್ಟು ರನ್‌ಗಳನ್ನು ಗಳಿಸಿರುವ ಅವರು ಈ ಪ್ರಕಾರದಲ್ಲೂ 38 ಸ್ಟಂಪಿಂಗ್ ಮಾಡಿದ್ದಾರೆ. 2004ರಲ್ಲಿ ಏಕದಿನ, 2005ರಲ್ಲಿ ಟೆಸ್ಟ್‌, 2006ರಲ್ಲಿ ಚುಟುಕು ಕ್ರಿಕೆಟ್‌, 2008ರಲ್ಲಿ ಐಪಿಎಲ್‌–ಇವೆಲ್ಲಕ್ಕೂ ಒಗ್ಗಿಕೊಳ್ಳುತ್ತಲೇ ವಿಕೆಟ್‌ಕೀಪರ್‌ಆಗಿಯೇ ಬೆನ್ನು ಬಾಗಿಸಿ ನಿಂತ ಧೋನಿ 2008, 2009ರಲ್ಲಿ ಏಕದಿನ ಪಂದ್ಯಗಳಲ್ಲಿ ವರ್ಷದ ಆಟಗಾರ ಎಂಬ ಗೌರವಕ್ಕೆ ಪಕ್ಕಾಗಿದ್ದರು. 2007ರಲ್ಲಿ ಚುಟುಕು ಕ್ರಿಕೆಟ್‌ನಲ್ಲಿ ವಿಶ್ವಕಪ್‌ಎತ್ತಿಹಿಡಿದು, 2011ರಲ್ಲಿ ಏಕದಿನ ಪಂದ್ಯಗಳ ವಿಶ್ವಕಪ್‌ಗೆ ಮುತ್ತಿಕ್ಕಿ ನಾಯಕನಾಗಿ ಯಶೋಪಯಣ ಮುಂದುವರಿಸಿದವರು.

ಧೋನಿ ಟೆಸ್ಟ್‌ಆಡುವುದನ್ನು ನಿಲ್ಲಿಸಿ ಆರು ವರ್ಷಗಳಾದವು. ಇನ್ನು ಏಕದಿನದ ಪಂದ್ಯಗಳು, ಚುಟುಕು ಕ್ರಿಕೆಟ್‌ಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುಡ್‌ಬೈ. ಕೊನೆಯ ಆಟದ ಕಂತಾಗಿ ಐಪಿಎಲ್‌ಅನ್ನು ಅವರು ಉಳಿಸಿಕೊಂಡಿದ್ದಾರೆ. 39 ವಯಸ್ಸು ದಾಟಿದ ಅವರು ಮತ್ತೆ ವಿಕೆಟ್‌ಗಳ ಹಿಂದೆ ನಿಲ್ಲುವುದನ್ನು ನೋಡಿದರೆ, ಅವರ ಬೆನ್ನಿನ ಕುರಿತು ‘ಪಾಪ’ ಅಂದುಕೊಳ್ಳಲೇಬೇಕು. ಅವರ ಹೆಲಿಕಾಪ್ಟರ್‌ಶಾಟ್‌ಗಳನ್ನೇನೋ ಅನುಕರಿಸಬಹುದು; ಬೆನ್ನಹುರಿಗಳ ಮೇಲೆ ಹಾಕಿದ ಭಾರದ ಪ್ರಮಾಣವನ್ನು ಸರಿಗಟ್ಟಲಾದೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT