ಕೊಲಂಬೊ: ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಜೀವನಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದ್ದಾರೆ.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಸಿರಾಜ್, ಕೇವಲ 21 ರನ್ ನೀಡಿ ಆರು ವಿಕೆಟ್ ಕಿತ್ತು ಮಿಂಚಿದರು. ಅಷ್ಟೇ ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ನಾಲ್ಕನೇ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದರು.
ಭಾರತದ ಪರ ಏಕದಿನದಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆ:
ಸ್ಟುವರ್ಟ್ ಬಿನ್ನಿ: 4 ರನ್ನಿಗೆ 6 ವಿಕೆಟ್ (2014, ಬಾಂಗ್ಲಾದೇಶ ವಿರುದ್ಧ, ಮೀರ್‌ಪುರದಲ್ಲಿ)
ಅನಿಲ್ ಕುಂಬ್ಳೆ: 12 ರನ್ನಿಗೆ 6 ವಿಕೆಟ್ (1993, ವೆಸ್ಟ್‌ಇಂಡೀಸ್ ವಿರುದ್ಧ, ಕೋಲ್ಕತ್ತದಲ್ಲಿ)
ಜಸ್‌ಪ್ರೀತ್ ಬೂಮ್ರಾ: 19ಕ್ಕೆ 6 ವಿಕೆಟ್ (2022, ಇಂಗ್ಲೆಂಡ್ ವಿರುದ್ಧ, ಓವಲ್)
ಮೊಹಮ್ಮದ್ ಸಿರಾಜ್: 21ಕ್ಕೆ 6 ವಿಕೆಟ್ (2023, ಶ್ರೀಲಂಕಾ ವಿರುದ್ಧ, ಕೊಲಂಬೊ)
ಸಿರಾಜ್ ಮಾರಕ ದಾಳಿಯ ನೆರವಿನಿಂದ ಶ್ರೀಲಂಕಾ 15.2 ಓವರ್‌ಗಳಲ್ಲಿ 50 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಏಕದಿನ ಟೂರ್ನಿಯೊಂದರ ಫೈನಲ್‌ನಲ್ಲಿ ದಾಖಲಾದ ಕನಿಷ್ಠ ಮೊತ್ತವಾಗಿದೆ. ಈ ಹಿಂದೆ 2000ನೇ ಇಸವಿಯಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ದವೇ ಭಾರತ 54 ರನ್ನಿಗೆ ಆಲೌಟ್ ಆಗಿತ್ತು.
ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದರಿಂದ ದಾಖಲಾದ ಕನಿಷ್ಠ ಮೊತ್ತ ಕೂಡ ಇದಾಗಿದೆ. ಈ ಹಿಂದೆ 2014ರಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ 58 ರನ್ನಿಗೆ ಆಲೌಟ್ ಮಾಡಿತ್ತು.
ಏಕದಿನ ಕ್ರಿಕೆಟ್‌ನಲ್ಲಿ ಶ್ರೀಲಂಕಾದಿಂದ ದಾಖಲಾದ 2ನೇ ಅತಿ ಕಡಿಮೆ ಮೊತ್ತ ಇದಾಗಿದೆ. 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 43ರನ್ನಿಗೆ ಆಲೌಟ್ ಆಗಿತ್ತು.
ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ಜಿಂಬಾಬ್ವೆ ಬಳಿಕ ಅತಿ ಕಡಿಮೆ ಓವರ್‌ಗಳಲ್ಲಿ ಆಲೌಟ್ ಆದ ತಂಡ ಎಂಬ ಅಪಖ್ಯಾತಿಗೂ ಲಂಕಾ ಒಳಗಾಗಿದೆ. ಶ್ರೀಲಂಕಾ ಕೇವಲ 15.2 ಓವರ್‌ಗಳಲ್ಲಿ ಆಲೌಟಾಯಿತು. ಈ ಹಿಂದೆ 2017ರಲ್ಲಿ ಅಫ್ಗಾನಿಸ್ತಾನ ವಿರುದ್ಧ ಜಿಂಬಾಬ್ವೆ 13.5 ಓವರ್‌ಗಳಲ್ಲಿ ಸರ್ವಪತನ ಕಂಡಿತ್ತು.
ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತಿ ವೇಗದಲ್ಲಿ (ಎಸೆತಗಳ ಆಧಾರದಲ್ಲಿ) 50 ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಸಿರಾಜ್ ಭಾಜನರಾಗಿದ್ದಾರೆ. ಶ್ರೀಲಂಕಾದ ಅಜಂತ ಮೆಂಡಿಸ್ ಏಕದಿನದಲ್ಲಿ ಅತಿ ವೇಗದಲ್ಲಿ (847 ಎಸೆತಗಳಲ್ಲಿ) 50 ವಿಕೆಟ್ ಕಬಳಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಓವರ್‌ವೊಂದರಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎಂಬ ಖ್ಯಾತಿಗೂ ಸಿರಾಜ್ ಪಾತ್ರರಾಗಿದ್ದಾರೆ.
ಸಿರಾಜ್ ತಮ್ಮ ಎರಡನೇ ಓವರ್‌ನಲ್ಲಿ ಮೇಡನ್ ಸಹಿತ ನಾಲ್ಕು ವಿಕೆಟ್ ಕಬಳಿಸಿದರು. ಅಲ್ಲದೆ 16 ಎಸೆತಗಳಲ್ಲೇ ಐದು ವಿಕೆಟ್ ಸಾಧನೆ ಮಾಡಿದರು.
ಪರಿಣಾಮ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಇದೇ ಮೊದಲ ಬಾರಿಗೆ ಮೊದಲ 10 ಓವರ್‌ನಲ್ಲಿ ಎದುರಾಳಿ ತಂಡದ ಆರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದೆ. 10 ಓವರ್ ಅಂತ್ಯಕ್ಕೆ ಲಂಕಾ ಆರು ವಿಕೆಟ್ ನಷ್ಟಕ್ಕೆ 31 ರನ್ ಗಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.