ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs PAK: ಅಂಕಿ-ಅಂಶ; ಪಾಕ್ ವಿರುದ್ಧದ ಪಂದ್ಯದಲ್ಲಿ ಸೃಷ್ಟಿಯಾದ ದಾಖಲೆಗಳ ಪಟ್ಟಿ

Published 12 ಸೆಪ್ಟೆಂಬರ್ 2023, 2:48 IST
Last Updated 12 ಸೆಪ್ಟೆಂಬರ್ 2023, 2:48 IST
ಅಕ್ಷರ ಗಾತ್ರ

ಕೊಲಂಬೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್‌ ಫೋರ್‌ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 228 ರನ್‌ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಮಳೆಯಿಂದಾಗಿ ಮೀಸಲು ದಿನವಾದ ಸೋಮವಾರ ಮುಂದುವರಿದ ಪಂದ್ಯದಲ್ಲಿ ಭಾರತ 50 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 356 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 32 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲೌಟಾಯಿತು. ಗಾಯಗೊಂಡ ಕಾರಣ ನಸೀಮ್‌ ಶಾ ಮತ್ತು ಹ್ಯಾರಿಸ್‌ ರವೂಫ್‌ ಅವರು ಬ್ಯಾಟಿಂಗ್‌ ಮಾಡಲಿಲ್ಲ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅನೇಕ ದಾಖಲೆ ಬರೆದಿದೆ. ಈ ಕುರಿತು ಅಂಕಿ-ಅಂಶ ಇಲ್ಲಿ ನೀಡಲಾಗಿದೆ.

228 - ಪಾಕ್ ವಿರುದ್ಧ ದಾಖಲೆ ಅಂತರದ ಗೆಲುವು (ರನ್ ಅಂತರದಲ್ಲಿ)

ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ರನ್ ಅಂತರದಲ್ಲಿ ಭಾರತ ಗಳಿಸಿದ ಅತಿ ದೊಡ್ಡ ಗೆಲುವು ಇದಾಗಿದೆ. ಈ ಹಿಂದೆ 2008ರಲ್ಲಿ 140 ರನ್‌ಗಳಿಂದ ಭಾರತ ಜಯ ಸಾಧಿಸಿತ್ತು.

47ನೇ ಶತಕ - ಸಚಿನ್ ಸನಿಹ ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ 47ನೇ ಶತಕ ಸಾಧನೆ ಮಾಡಿದ ಕೊಹ್ಲಿ, ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ (49 ಶತಕ) ಅವರನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. 94 ಎಸೆತ ಎದುರಿಸಿದ ಕೊಹ್ಲಿ ಒಂಬತ್ತು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 122 ರನ್‌ ಗಳಿಸಿ ಔಟಾಗದೆ ಉಳಿದರು.

ರಾಹುಲ್ 6ನೇ ಶತಕ...

ಸುಮಾರು ನಾಲ್ಕು ತಿಂಗಳ ಬಳಿಕ ಕಣಕ್ಕಿಳಿದ ಕರ್ನಾಟಕದ ವಿಕೆಟ್‌ ಕೀಪರ್ ಬ್ಯಾಟರ್‌ ರಾಹುಲ್, ಏಕದಿನ ಕ್ರಿಕೆಟ್‌ನಲ್ಲಿ ಆರನೇ ಶತಕ ಪೂರೈಸಿದರು. ತಮ್ಮ ಫಿಟ್‌ನೆಸ್‌ ಬಗ್ಗೆ ಎದ್ದಿದ್ದ ಅನುಮಾನಗಳನ್ನು ಸೊಗಸಾದ ಬ್ಯಾಟಿಂಗ್‌ ಮೂಲಕ ದೂರ ಮಾಡಿದರು. ರಾಹುಲ್ 106 ಎಸೆತಗಳಲ್ಲಿ 12 ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 111 ರನ್ ಗಳಿಸಿ ಅಜೇಯರಾಗುಳಿದರು.

ವಿರಾಟ್‌ ಅತಿ ವೇಗದ 13 ಸಾವಿರ ರನ್‌...

ವಿರಾಟ್‌ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 13 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರು. ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಕೊಹ್ಲಿ, 267ನೇ ಇನಿಂಗ್ಸ್‌ನಲ್ಲಿ (278ನೇ ಪಂದ್ಯ) ಈ ಮೈಲಿಗಲ್ಲು ದಾಟಿದರು. ಸಚಿನ್‌ ಅವರು 13 ಸಾವಿರ ರನ್‌ ಪೂರೈಸಲು 321 ಇನಿಂಗ್ಸ್‌ಗಳನ್ನು (330ನೇ ಪಂದ್ಯ) ತೆಗೆದುಕೊಂಡಿದ್ದರು.

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 13 ಸಾವಿರ ರನ್‌ಗಳ ಗಡಿ ದಾಟಿದ ಐದನೇ ಬ್ಯಾಟರ್‌ ಎನಿಸಿಕೊಂಡರು. ಸಚಿನ್‌ ಅಲ್ಲದೆ ರಿಕಿ ಪಾಂಟಿಂಗ್, ಕುಮಾರ ಸಂಗಕ್ಕಾರ ಹಾಗೂ ಸನತ್‌ ಜಯಸೂರ್ಯ ಈ ಸಾಧನೆ ಮಾಡಿದ್ದಾರೆ.

ಕೊಲಂಬೊದಲ್ಲಿ ಸತತ ನಾಲ್ಕನೇ ಶತಕ

ಕೊಲಂಬೊದ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕ ಗಳಿಸಿದ ಸಾಧನೆಯನ್ನು ಕೊಹ್ಲಿ ಮಾಡಿದರು. ಅವರು ಇಲ್ಲಿ ಆಡಿದ್ದ ಈ ಹಿಂದಿನ ಮೂರು ಪಂದ್ಯಗಳಲ್ಲಿ ಕ್ರಮವಾಗಿ 128 (119 ಎ.), 131 (96 ಎ.) ಮತ್ತು 110 ರನ್‌ (116 ಎ.) ಕಲೆಹಾಕಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಒಂದೇ ತಾಣದಲ್ಲಿ ಸತತ ನಾಲ್ಕು ಶತಕ ಗಳಿಸಿದ್ದ ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ ಅವರ ದಾಖಲೆಯನ್ನು ಸರಿಗಟ್ಟಿದರು. ಆಮ್ಲಾ, ಸೆಂಚೂರಿಯನ್‌ ಕ್ರೀಡಾಂಗಣದಲ್ಲಿ ಇಂತಹ ಸಾಧನೆ ಮಾಡಿದ್ದರು.

ಇದರೊಂದಿಗೆ ಏಷ್ಯಾ ಕಪ್ ಏಕದಿನ ಟೂರ್ನಿಯಲ್ಲಿ ಕೊಹ್ಲಿ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಜಯಸೂರ್ಯ (6) ನಂತರದ ಸ್ಥಾನದಲ್ಲಿದ್ದಾರೆ.

ದಾಖಲೆ ಜತೆಯಾಟ:

ವಿರಾಟ್‌ ಮತ್ತು ರಾಹುಲ್‌ ಅವರು ಮೂರನೇ ವಿಕೆಟ್‌ಗೆ ಸೇರಿಸಿದ 233 ರನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಯಾವುದೇ ವಿಕೆಟ್‌ಗೆ ದಾಖಲಾದ ಅತಿದೊಡ್ಡ ಜತೆಯಾಟ ಎನಿಸಿದೆ. ನವಜೋತ್‌ ಸಿಧು ಮತ್ತು ಸಚಿನ್‌ ತೆಂಡೂಲ್ಕರ್‌ 1996 ರಲ್ಲಿ ಶಾರ್ಜಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಎರಡನೇ ವಿಕೆಟ್‌ಗೆ ಕಲೆಹಾಕಿದ್ದ 231 ರನ್‌ಗಳು ಇದುವರೆಗಿನ ದಾಖಲೆಯಾಗಿತ್ತು.

ಏಷ್ಯಾ ಕಪ್‌ ಏಕದಿನ ಟೂರ್ನಿಯಲ್ಲಿ ಮೂರನೇ ವಿಕೆಟ್‌ಗೆ ದಾಖಲಾದ ಅತಿ ದೊಡ್ಡ ಜೊತೆಯಾಟ ಇದಾಗಿದೆ.

356 - ಪಾಕ್ ವಿರುದ್ಧ ಗರಿಷ್ಠ ಮೊತ್ತ

ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧವಿರುದ್ಧ ಭಾರತ ಗಳಿಸಿದ ಜಂಟಿ ಗರಿಷ್ಠ ಮೊತ್ತ ಇದಾಗಿದೆ. 2005ರಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತ್ತು.

5 ವಿಕೆಟ್ - ಸಚಿನ್, ದಾದಾ ಸಾಲಿಗೆ ಕುಲದೀಪ್

ಪಾಕಿಸ್ತಾನ ವಿರುದ್ಧ ಏಕದಿನದಲ್ಲಿ ಐದು ವಿಕೆಟ್ ಗಳಿಸಿದ ಭಾರತೀಯ ಬೌಲರ್‌ಗಳ ಪೈಕಿ ಸಚಿನ್ ತೆಂಡೂಲ್ಕರ್, ಗೌರವ್ ಗಂಗೂಲಿ, ವೆಂಕಟೇಶ್ ಪ್ರಸಾದ್ ಮತ್ತು ಅರ್ಷದ್ ಅಯುಬ್ ಸಾಲಿಗೆ ಕುಲದೀಪ್ ಯಾದವ್ ಸೇರಿದ್ದಾರೆ. ಕುಲದೀಪ್ 25 ರನ್ ತೆತ್ತು ಐದು ವಿಕೆಟ್ ಕಿತ್ತು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT