ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲ್‌ ರತ್ನ ಪ್ರಶಸ್ತಿಗೆ ರೋಹಿತ್‌ ಶರ್ಮಾ ನಾಮನಿರ್ದೇಶನ

Last Updated 30 ಮೇ 2020, 21:41 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ರೋಹಿತ್‌ ಶರ್ಮಾ ಅವರನ್ನು ನಾಮನಿರ್ದೇಶನ ಮಾಡಿದೆ. ಈ ವಿಷಯವನ್ನು ಶನಿವಾರ ಬಹಿರಂಗಪಡಿಸಿದೆ.

ಭಾರತದ ಏಕದಿನ ಮತ್ತು ಟ್ವೆಂಟಿ–20 ತಂಡಗಳ ಉಪನಾಯಕರಾಗಿರುವ ರೋಹಿತ್‌, 2019ರ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಆಟ ಆಡಿದ್ದರು.

ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್, ಅನುಭವಿ ವೇಗದ ಬೌಲರ್‌ ಇಶಾಂತ್‌ ಶರ್ಮಾ ಹಾಗೂ ಮಹಿಳಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ದೀಪ್ತಿ ಶರ್ಮಾ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

2018ರಲ್ಲೂ ಧವನ್‌ ಅವರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು. ಆಗ ಅವರಿಗೆ ಪ್ರಶಸ್ತಿ ಕೈತಪ್ಪಿತ್ತು.

224 ಏಕದಿನ ಪಂದ್ಯಗಳನ್ನು ಆಡಿರುವ ರೋಹಿತ್‌, 29 ಶತಕ ಹಾಗೂ 43 ಅರ್ಧಶತಕಗಳೂ ಸೇರಿದಂತೆ ಒಟ್ಟು 9115 ರನ್‌ಗಳನ್ನು ದಾಖಲಿಸಿದ್ದಾರೆ.

32 ಟೆಸ್ಟ್‌ ಪಂದ್ಯಗಳಿಂದ 2141ರನ್‌ಗಳನ್ನು‌ ಬಾರಿಸಿದ್ದಾರೆ. 108 ಟ್ವೆಂಟಿ–20 ಪಂದ್ಯಗಳನ್ನು ಆಡಿರುವ 33 ವರ್ಷ ವಯಸ್ಸಿನ ಆಟಗಾರ ಒಟ್ಟು 2773 ರನ್‌ಗಳನ್ನು ಗಳಿಸಿದ್ದಾರೆ. ಏಕದಿನ ಮಾದರಿಯಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿರುವ ದಾಖಲೆಯೂ ಅವರ ಹೆಸರಿನಲ್ಲಿದೆ.

‘ಹಲವು ಮಾನದಂಡಗಳ ಆಧಾರದಲ್ಲಿ ರೋಹಿತ್‌, ಧವನ್‌, ಇಶಾಂತ್‌ ಹಾಗೂ ದೀಪ್ತಿ ಅವರ ಹೆಸರುಗಳನ್ನುಪ್ರಶಸ್ತಿಗೆ ಶಿಫಾರಸು ಮಾಡಿದ್ದೇವೆ. ಕ್ರಿಕೆಟ್‌ ಬಗ್ಗೆ ಅಪಾರ ಬದ್ಧತೆ ಹೊಂದಿರುವ ರೋಹಿತ್‌ ಅವರಲ್ಲಿ ನಾಯಕತ್ವದ ಗುಣಗಳೂ ಇವೆ. ಖೇಲ್‌ ರತ್ನ ಗೌರವಕ್ಕೆ ಅವರು‌ ಅರ್ಹರಾಗಿದ್ದಾರೆ’ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT