ಶುಕ್ರವಾರ, ಏಪ್ರಿಲ್ 10, 2020
19 °C
ಕಾಮೆಂಟ್ರಿ ಬಾಕ್ಸ್

ಮಾತು ಮನೆ ಕೆಡಿಸಿತು..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು..

ಜಗಜ್ಯೋತಿ ಬಸವಣ್ಣನವರ ವಚನವೊಂದರಲ್ಲಿ ಬರುವ ಸಾಲು ಇದು. ನಾವು ಆಡುವ ಮಾತುಗಳು ನೇರ ಮತ್ತು ವಸ್ತುನಿಷ್ಠವಾಗಿರಬೇಕು ಎನ್ನುವ ಅರ್ಥ ಈ ಸಾಲಿನಲ್ಲಿದೆ. ಇದು ಕ್ರಿಕೆಟ್‌ನ ವೀಕ್ಷಕ ವಿವರಣೆಗೂ ಅನ್ವಯಿಸುತ್ತದೆ.

ಆದರೆ, ಮಾತಿನ ಧಾಟಿ ಮತ್ತು ವ್ಯಾಪ್ತಿಯು ವಿಷಯವನ್ನು ಮೀರಿ ವೈಯಕ್ತಿಕ, ರಾಜಕೀಯ ಮತ್ತು ಧಾರ್ಮಿಕ ತೇಜೋವಧೆಗಳನ್ನು ಮಾಡಲು ಕೈಯಲ್ಲಿನ ಮೈಕ್ ಬಳಕೆಯಾದರೆ ಅದಕ್ಕೆ ತಕ್ಕ ಪ್ರತಿಫಲ ಅನುಭವಿಸಲೇಬೇಕಾಗುತ್ತದೆ. ಇದೀಗ ಅಂತಹದೊಂದು ‘ಶಿಕ್ಷೆ’ಗೆ ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಗುರಿಯಾಗಿದ್ದಾರೆ. ಹೋದ ವರ್ಷ ಅವರು ಕಾಮೆಂಟ್ರಿಯಲ್ಲಿ ಮಾಡಿದ್ದ ಒಂದೆರಡು ಎಡವಟ್ಟುಗಳು ಅವರಿಗೆ ಮುಳುವಾಗಿವೆ. ಕ್ರಿಕೆಟ್ ಇವತ್ತು ಚಿನ್ನದ ಮೊಟ್ಟೆ ಇಡುವ ಕೋಳಿಯಿದ್ದಂತೆ. ಆಟದಿಂದ ನಿವೃತ್ತಿಯಾದ ಮೇಲೂ ಕೈತುಂಬಾ ಆದಾಯ ಪಡೆಯಲು ಹಲವು ಉದ್ಯೋಗಾವಕಾಶಗಳು ಕ್ರಿಕೆಟಿಗರಿಗೆ ಇವೆ. ಅದರಲ್ಲಿ ಪ್ರಮುಖವಾಗಿ ವೀಕ್ಷಕ ವಿವರಣೆಕಾರನ ಕೆಲಸ.

ಮುಖ್ಯವಾಹಿನಿಯಲ್ಲಿ ಹೆಚ್ಚು ಆಡಿದವರು ಮತ್ತು ಆಡದವರು ಇಬ್ಬರೂ ಇವತ್ತು ಕಾಮೆಂಟ್ರಿ ಬಾಕ್ಸ್‌ನಲ್ಲಿದ್ದಾರೆ. ದೇಶಿ ಕ್ರಿಕೆಟ್‌ ಟೂರ್ನಿಗಳ ನೇರಪ್ರಸಾರಗಳು ನಡೆಯುತ್ತಿರುವುದರಿಂದ ಮತ್ತು ಬಿಸಿಸಿಐ ಡಾಟ್ ಟಿವಿಯು ಸತತ ಕಾರ್ಯಕ್ರಮಗಳನ್ನು ಯೋಜಿಸುತ್ತಿರುವುದರಿಂದ ಕ್ರಿಕೆಟ್ ಆ್ಯಂಕರ್, ಕಾಮೆಂಟೇಟರ್‌ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಎಲ್ಲರೂ ರಿಚಿ ಬೆನೊ, ಟೋನಿ ಗ್ರೇಗ್, ಬಿಲ್ ಲಾರಿ, ಜೆಫ್ರಿ ಬಾಯ್ಕಾಟ್ ಅವರಂತೆ ಯಶಸ್ವಿಯಾಗುವುದಿಲ್ಲ. ಆ ಮಾತು ಬೇರೆ.

ಇಲ್ಲಿಯೂ ಪೈಪೋಟಿ ಹೆಚ್ಚಿರುವುದರಿಂದ ವೀಕ್ಷಕ ವಿವರಣೆಕಾರರು ತಮ್ಮ ಕೆಲಸವನ್ನು ಟಿವಿ ಪರದೆ ಅಥವಾ ಮೈಕ್‌ಗೆ ಮಾತ್ರ ಸೀಮಿತಗೊಳಿಸಿಲ್ಲ. ಅದರಾಚೆ ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತಿತರ ಡಿಜಿಟಲ್ ವೇದಿಕೆಗಳ ಮೂಲಕ ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಪೈಪೋಟಿಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ತಿಳಿದೋ ತಿಳಿಯದೆಯೋ ಕೊಟ್ಟು ಸುದ್ದಿಯಾಗುತ್ತದೆ. ಅದು ಅವರ ವೃತ್ತಿಜೀವನಕ್ಕೆ ಕಳಂಕ ಮೆತ್ತುತ್ತದೆ. ಈಗ ಸಂಜಯ್ ಕೆಲಸ ಕಳೆದುಕೊಂಡಿರುವುದು ಕೂಡ ಇದೇ ಕಾರಣಕ್ಕೆ. ಅವರು ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅವರನ್ನು ‘ಚೂರು–ಪಾರು ಕ್ರಿಕೆಟಿಗ’ ಎಂದು ವ್ಯಂಗ್ಯದ ಟ್ವೀಟ್ ಮಾಡಿದ್ದರು. ‘ಮನುಷ್ಯರಿಗೆ ಗೌರವ ಕೊಡುವುದನ್ನು ಕಲಿಯಿರಿ. ನಾನು ನಿಮಗಿಂತ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಇನ್ನೂ ಭಾರತ ತಂಡದಲ್ಲಿ ಆಡುತ್ತಿದ್ದೇನೆ’ ಎಂದು ಜಡೇಜ ತಿರುಗೇಟು ನೀಡಿದ್ದರು. ಇದಲ್ಲದೇ ಹರ್ಷ ಭೋಗ್ಲೆ ಜೊತೆಗಿನ ಜಟಾಪಟಿಯೂ ಸಂಜಯ್‌ಗೆ ಹಿನ್ನಡೆ ತಂದಿತ್ತು. ಕ್ರಿಕೆಟ್‌ನಲ್ಲಿ ಇದೇನೂ ಮೊದಲ ಪ್ರಕರಣವಲ್ಲ.

ಕಾಮೆಂಟ್ರಿ ಬಾಕ್ಸ್‌ ಮತ್ತು ಹಿತಾಸಕ್ತಿ ಸಂಘರ್ಷ!

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಹಿತಾಸಕ್ತಿ ಸಂಘರ್ಷ ನಿಯಮ ಜಾರಿ ಮಾಡಿದೆ. ಕಾಮೆಂಟ್ರಿ ಬಾಕ್ಸ್ ಕೂಡ ಇದಕ್ಕೆ ಹೊರತಾಗಿಲ್ಲ. 2017ರಲ್ಲಿ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ)ಗೆ ರಾಜೀನಾಮೆ ನೀಡಿ ಹೊರಬಂದಿದ್ದ ಲೇಖಕ ರಾಮಚಂದ್ರ ಗುಹಾ ಈ ಕುರಿತು ಸಿಒಎ ಮುಖ್ಯಸ್ಥ ವಿನೋದ್ ಮೆಹ್ತಾ ಅವರಿಗೆ ಪತ್ರ ಬರೆದಿದ್ದರು.

‘ಸುನಿಲ್ ಗಾವಸ್ಕರ್ ಅವರ ಒಡೆತನದ ಪ್ರೊಫೆಷನಲ್ ಮ್ಯಾನೇಜ್‌ಮೆಂಟ್ ಗ್ರೂಪ್‌ ಸಂಸ್ಥೆಯಿಂದ ಸದ್ಯ ಭಾರತ ತಂಡದಲ್ಲಿರುವ ಕೆಲವು ಕ್ರಿಕೆಟಿಗರು ಸೇವೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸುನಿಲ್ ಅವರು ಬಿಸಿಸಿಐ ಕಾಮೆಂಟ್ರಿ ಪ್ಯಾನಲ್‌ನಲ್ಲಿದ್ದಾರೆ. ಇದು ನಿಯಮಬಾಹಿರ. ಅವರು ತಮಗೆ ಬೇಕಾದ ಆಟಗಾರರನ್ನು ಕಾಮೆಂಟ್ರಿಯಲ್ಲಿ ಪ್ರಮೋಟ್ ಮಾಡಬಹುದಲ್ಲ’ ಎಂದು ಆಕ್ಷೇಪಿಸಿದ್ದರು. ಆದರೆ ಇದು ಯಾವುದೇ ಪರಿಣಾಮ ಬೀರಲಿಲ್ಲ.

ಅಲ್ಲದೇ ಕಾಮೆಂಟೇಟರ್‌ ಆಗಲು ಕೇವಲ ತಾರಾವರ್ಚಸ್ಸನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಇದಕ್ಕೆ ಯಾವುದೇ ಮಾನದಂಡಗಳೂ ಇಲ್ಲ ಎಂದು ಬಹಳ ವರ್ಷಗಳಿಂದ ಟೀಕೆಗಳು ಕೇಳಿಬರುತ್ತಿವೆ. ಕೋಚ್, ಅಂಪೈರ್, ಸ್ಕೋರರ್ ಆಗಲು ಕೆಲವು ಪರೀಕ್ಷೆಗಳನ್ನು ಪಾಸಾಗುವುದು ಅನಿವಾರ್ಯ. ಆದರೆ ಕಾಮೆಂಟ್ರಿಯಲ್ಲಿ ಈ ಯಾವ ನಿಯಮಗಳೂ ಇಲ್ಲವೆನ್ನಲಾಗಿದೆ. ಇದು ವೃತ್ತಿಪರತೆಯ ಕೊರತೆಗೆ ಕಾರಣವೆಂದೂ ಹೇಳಲಾಗುತ್ತಿದೆ.

2006ರಲ್ಲಿ ಕೊಲಂಬೊದಲ್ಲಿ ನಡೆದಿದ್ದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕಾಮೆಂಟೇಟರ್ ಡೀನ್ ಜೋನ್ಸ್‌ ಬಳಸಿದ ಪದವು ವಿವಾದದ ಕಿಡಿ ಹೊತ್ತಿಸಿತ್ತು. ಪಂದ್ಯದಲ್ಲಿ ಕುಮಾರ ಸಂಗಕ್ಕಾರ  ಅವರ ಕ್ಯಾಚ್‌ ಅನ್ನು ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ ಪಡೆದಿದ್ದರು. ಆಗ ಕಾಮೆಂಟ್ರಿಯಲ್ಲಿ ಜೋನ್ಸ್‌ ‘ಮತ್ತೊಂದು ವಿಕೆಟ್ ಕಬಳಿಸಿದ ಭಯೋತ್ಪಾದಕ’ ಎಂದಿದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಲು ಕಾರಣವಾಗಿತ್ತು. ಜೋನ್ಸ್ ಅವರನ್ನು ಟೆನ್ ಸ್ಪೋರ್ಟ್ಸ್‌ ತನ್ನ ಪ್ಯಾನಲ್‌ನಿಂದ ವಜಾಗೊಳಿಸಿತ್ತು.

ಸೀನ್ ‘ಪರಿಚಯಿಸಿದ’ ಸೈಮನ್ ತಲೆದಂಡ

ಎರಡು ವರ್ಷಗಳ ಹಿಂದೆ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ನಡೆದಿತ್ತು. ಬೌಲಿಂಗ್ ಆರಂಭಿಸಿದ ಆಸ್ಟ್ರೇಲಿಯಾದ ಬೌಲರ್ ಸೀನ್ ಅಬಾಟ್ ಅವರನ್ನು ಕಾಮೆಂಟ್ರಿ ಮಾಡುತ್ತಿದ್ದ ಸೈಮನ್ ಹ್ಯೂಸ್‌ ಅವರು, ‘ನೋಡಿ, ಸೀನ್ ಅಬಾಟ್ ಬೌಲಿಂಗ್‌ಗೆ ಬಂದಿದ್ದಾರೆ. ಇವರ ಎಸೆತವು ಫಿಲಿಪ್ ಹ್ಯೂಸ್‌ ಅವರ ಜೀವ ತೆಗೆದಿದ್ದು ನಿಮಗೆ ನೆನಪಿದೆಯೇ?’ ಎಂದಿದ್ದರು. ಕಾಂಗರೂ ನಾಡಿನ ದೇಶಿ ಪಂದ್ಯದಲ್ಲಿ ತಲೆಗೆ ಚೆಂಡಿನ ಪೆಟ್ಟು ತಿಂದು ಮೃತರಾಗಿದ್ದ ಫಿಲಿಪ್ ಹ್ಯೂಸ್‌ ಅವರಿಗೆ ಸೀನ್ ಬೌಲಿಂಗ್ ಮಾಡಿದ್ದನ್ನು ಸೈಮನ್ ನೆನಪಿಸಿದ್ದರು. ಇದು ವಿವಾದವಾಗಿತ್ತು.

ಡಾಂಕಿಗೇಟ್..!

2011ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಪಂದ್ಯದಲ್ಲಿ ವಿಕೆಟ್‌ಕೀಪರ್ ಪಾರ್ಥಿವ್ ಪಟೇಲ್ ಅವರು ಕ್ಯಾಚ್ ಕೈಚೆಲ್ಲಿದರು. ಆಗ ಇಂಗ್ಲೆಂಡ್‌ನ ಕಾಮೆಂಟೇಟರ್ ನಾಸೀರ್ ಹುಸೇನ್, ‘ಭಾರತ ತಂಡದಲ್ಲಿ ಮೂರ್ನಾಲ್ಕು ಜನ ಒಳ್ಳೆಯ ಫೀಲ್ಡರ್‌ಗಳಿದ್ದಾರೆ. ಇನ್ನೊಂದೆರಡು ಕತ್ತೆಗಳು ಇವೆ ಎಂದಿದ್ದರು. ಜನರಿಂದ ಅಪಾರ ಟೀಕೆಗಳು ವ್ಯಕ್ತವಾದರೂ, ನಾಸೀರ್ ತಮ್ಮ ಮಾತು ಬದಲಿಸಲಿಲ್ಲ!

ವ್ಯಾಸಲೀನ್ ಮತ್ತು ವಾನ್

2011ರಲ್ಲಿ ಭಾರತ–ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ವಿ.ವಿ.ಎಸ್. ಲಕ್ಷ್ಮಣ್ ಅವರು ಬ್ಯಾಟ್‌ಗೆ ವ್ಯಾಸಲೀನ್ ಹಚ್ಚುತ್ತಾರೆ. ಅದ್ದರಿಂದ ಅವರ ಬ್ಯಾಟ್‌ ಅಂಚಿಗೆ ಸವರಿದ ಚೆಂಡು ಜಾರಿ ಸದ್ದಿಲ್ಲದೇ ಹೋಗುತ್ತದೆ ಎಂಬರ್ಥದಲ್ಲಿ ಕಾಮೆಂಟ್ರಿ ಹೇಳಿದ್ದ ಮೈಕೆಲ್ ವಾನ್ ತೀವ್ರ ಟೀಕೆ ಎದುರಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು