ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್‌ ನಿಧನಕ್ಕೆ ಕಂಬನಿ ಮಿಡಿದ ಕ್ರೀಡಾ ತಾರೆಯರು

Last Updated 14 ಜೂನ್ 2020, 16:22 IST
ಅಕ್ಷರ ಗಾತ್ರ

ನವದೆಹಲಿ : ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ ನಿಧನಕ್ಕೆ ಭಾರತದ ಕ್ರೀಡಾ ತಾರೆಯರು ಕಂಬನಿ ಮಿಡಿದಿದ್ದಾರೆ.

ಸುಶಾಂತ್‌ ಅವರು ಮಹೇಂದ್ರ ಸಿಂಗ್‌ ಧೋನಿ ಜೀವನಾಧಾರಿತ ‘ಎಂ.ಎಸ್‌.ಧೋನಿ; ದಿ ಅನ್‌ಟೋಲ್ಡ್‌ ಸ್ಟೋರಿ’ ಚಿತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.

‘ಸುಶಾಂತ್‌ ಇನ್ನೂ ನಮ್ಮ ಜೊತೆಗಿರುವುದಿಲ್ಲ ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಭಗವಂತ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ’ ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಭಾನುವಾರ ಟ್ವೀಟ್‌ ಮಾಡಿದ್ದಾರೆ.

‘ಸುಶಾಂತ್‌ ನಿಧನದ ಸುದ್ದಿಯನ್ನು ನಂಬಲಾಗುತ್ತಿಲ್ಲ. ಈ ಸುದ್ದಿ ಮನಸ್ಸನ್ನು ಘಾಸಿಗೊಳಿಸಿದೆ. ಅವರು ಅತ್ಯುತ್ತಮ ನಟರಾಗಿದ್ದರು’ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಹೇಳಿದ್ದಾರೆ.

‘ಸುಶಾಂತ್‌ ಸಾವಿನ ಸುದ್ದಿ ತಿಳಿದು ಆಘಾತ ಮತ್ತು ಅತೀವ ನೋವಾಗಿದೆ. ಅವರು ಭರವಸೆಯ ನಟರಾಗಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ತಿಳಿಸಿದ್ದಾರೆ.

‘ಪ್ರತಿಭಾನ್ವಿತ ಹಾಗೂ ಯಶಸ್ವಿ ನಟರಾಗಿದ್ದ ಸುಶಾಂತ್‌ ಇಷ್ಟು ಬೇಗ ನಿಧನರಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಈ ಸುದ್ದಿಯನ್ನು ನಂಬಲು ಆಗುತ್ತಿಲ್ಲ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹೇಳಿದ್ದಾರೆ.

‘ಸುಶಾಂತ್‌ ಸಾವಿನ ಸಮಾಚಾರ ಸುಳ್ಳು ಎಂದು ಯಾರಾದರೂ ಒಮ್ಮೆ ಹೇಳಿ. ನನಗಂತೂ ನಂಬಲಾಗುತ್ತಿಲ್ಲ’ ಎಂದು ಹಿರಿಯ ಕ್ರಿಕೆಟಿಗ ಹರಭಜನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

‘ಸ್ಫುರದ್ರೂಪಿ ಹಾಗೂ ಹಸನ್ಮುಖಿ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ಧೋನಿ ಅವರ ಜೀವನಾಧಾರಿತ ಸಿನಿಮಾದ ವೇಳೆ ನಾನು ಅನೇಕ ಬಾರಿ ಸುಶಾಂತ್‌ ಜೊತೆ ಮಾತನಾಡಿದ್ದೆ’ ಎಂದು ಸುರೇಶ್‌ ರೈನಾ ತಿಳಿಸಿದ್ದಾರೆ.

‘ಜೀವನವೆಂಬುದು ನೀರಿನ ಮೇಲಿನ ಗುಳ್ಳೆ ಇದ್ದಂತೆ. ಯಾವ ಕ್ಷಣದಲ್ಲಿ ಏನಾದರೂ ಸಂಭವಿಸಬಹುದು’ ಎಂದು ವೀರೇಂದ್ರ ಸೆಹ್ವಾಗ್‌ ಅವರು ಟ್ವೀಟ್‌ ಮಾಡಿದ್ದಾರೆ.

ಹಿರಿಯ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ಮೊಹಮ್ಮದ್‌ ಕೈಫ್‌, ಇರ್ಫಾನ್‌ ಪಠಾಣ್‌, ಯುವ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌, ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಸ್ಪಿನ್ನರ್‌ ಅಮಿತ್‌ ಮಿಶ್ರಾ, ಮಧ್ಯಮ ವೇಗದ ಬೌಲರ್‌ ಸಿದ್ದಾರ್ಥ್‌ ಕೌಲ್‌ ಹಾಗೂ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ ಅವರೂ ಸುಶಾಂತ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT