ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಅಫ್ರಿಕಾ ಕ್ರಿಕೆಟ್ ಲೀಗ್: ಆರು ತಂಡಗಳೂ ಭಾರತೀಯ ಫ್ರ್ಯಾಂಚೈಸಿಗಳ ಪಾಲು

ಎಲ್ಲ ತಂಡಗಳನ್ನು ಖರೀದಿಸಿದ ಐಪಿಎಲ್ ಮಾಲೀಕರು
Last Updated 20 ಜುಲೈ 2022, 13:29 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫ್ರ್ಯಾಂಚೈಸಿಗಳು ಈಗ ದಕ್ಷಿಣ ಆಫ್ರಿಕಾದಲ್ಲಿಯೂ ತಮ್ಮ ಹೆಜ್ಜೆಗುರುತು ಮೂಡಿಸಲಿವೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯಲ್ಲಿ ಆಡಲಿರುವ ಆರು ತಂಡಗಳನ್ನೂ ಐಪಿಎಲ್‌ನ ಫ್ರ್ಯಾಂಚೈಸಿಗಳೇ ತಮ್ಮ ತೆಕ್ಕೆಗೆ ಹಾಕಿಕೊಂಡಿವೆ. 2023ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಟೂರ್ನಿ ನಡೆಯಲಿದೆ. ಈಗಾಗಲೇ ವೆಸ್ಟ್‌ ಇಂಡೀಸ್‌ನ ಕೆರೆಬಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿಯೂ ಐಪಿಎಲ್‌ ಫ್ರ್ಯಾಂಚೈಸ್‌ಗಳಾದ ಕೋಲ್ಕತ್ತ ನೈಟ್‌ರೈಡರ್ಸ್, ರಾಜಸ್ಥಾನ ರಾಯಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ಸಹಮಾಲೀಕತ್ವ ಹೊಂದಿವೆ.

ಆರು ತಂಡಗಳನ್ನು ಪಡೆಯಲು 25 ಆಸಕ್ತರು ಅರ್ಜಿ ಸಲ್ಲಿಸಿದ್ದರು. ಈ ಪೈಪೋಟಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮಾಲೀಕತ್ವ ಹೊಂದಿರುವ ರಿಲಯನ್ಸ್‌ ಸಮೂಹವು ಕೇಪ್‌ ಟೌನ್ ತಂಡವನ್ನು ತನ್ನದಾಗಿಸಿಕೊಂಡಿತು. ಮುಂಬೈ ತಂಡವು ಐದು ಬಾರಿ ಐಪಿಎಲ್‌ ಪ್ರಶಸ್ತಿ ಜಯಿಸಿದೆ. ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ಕೂಡ ಜೊಹಾನ್ಸ್‌ಬರ್ಗ್ ತಂಡವನ್ನು ಸೆಳೆದುಕೊಂಡಿದೆ.

ಸನ್‌ರೈಸರ್ಸ್ ಹೈದರಾಬಾದ್ (ಸನ್‌ ಟಿ.ವಿ) ಫ್ರ್ಯಾಂಚೈಸಿಯು ಪೋರ್ಟ್ ಎಲಿಜಬೆತ್, ಲಖನೌ ಸೂಪರ್ ಜೈಂಟ್ಸ್‌ನ ಆರ್.ಪಿ. ಸಂಜೀವ್ ಗೊಯೆಂಕಾ ಅವರು ಡರ್ಬನ್, ರಾಜಸ್ಥಾನ ರಾಯಲ್ಸ್ ಫ್ರ್ಯಾಂಚೈಸಿಯು ಪಾರ್ಲ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಅವರು ಪ್ರಿಟೊರಿಯಾ ತಂಡವನ್ನು ಪಡೆದಿದ್ದಾರೆ.

ಈ ಟೂರ್ನಿಯ ಪ್ರವರ್ತಕರು ಕೂಡ ಭಾರತದವರೇ ಆದ ಸುಂದರ್ ರಾಮನ್ ಅವರು. ಈ ಹಿಂದೆ ಐಪಿಎಲ್‌ಗೆ ಮುಖ್ಯಸ್ಥರಾಗಿದ್ದರು.

ಸ್ಮಿತ್ ಕಮಿಷನರ್: ಈ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೆಮ್ ಸ್ಮಿತ್ ಅವರನ್ನು ಕಮಿಷನರ್ ಆಗಿ ನೇಮಕ ಮಾಡಲಾಗಿದೆ.

‘ನೂತನ ಟೂರ್ನಿಯ ಕಮಿಷನರ್‌ ಆಗಿ ಕಾರ್ಯನಿರ್ವಹಿಸಲು ಅವಕಾಶ ಸಿಕ್ಕಿರುವುದು ಅಪಾರ ಸಂತಸ ತಂದಿದೆ. ಅಪ್ಪಟ ಸ್ಪರ್ಧಾತ್ಮಕವಾಗಲಿರುವ ಈ ಟೂರ್ನಿಯು ದೇಶದ ಕ್ರಿಕೆಟ್‌ಗೆ ಅಗತ್ಯವಿರುವ ಹೂಡಿಕೆಯನ್ನು ಆಕರ್ಷಿಸಲಿದೆ. ಆಟಗಾರರಿಗೂ ಹೊಸ ವೇದಿಕೆ ಸಿಗಲಿದೆ’ ಎಂದು ಗ್ರೆಮ್ ಸ್ಮಿತ್ ಹೇಳಿದ್ದಾರೆ.

ಐಪಿಎಲ್ ಫ್ರ್ಯಾಂಚೈಸಿಗಳು ಖರೀದಿಸಿದ ತಂಡಗಳು

*ಮುಂಬೈ ಇಂಡಿಯನ್ಸ್ –ಕೇಪ್‌ಟೌನ್

* ಚೆನ್ನೈ ಸೂಪರ್ ಕಿಂಗ್ಸ್ –ಜೋಹಾನ್ಸ್‌ಬರ್ಗ್

* ಡೆಲ್ಲಿ ಕ್ಯಾಪಿಟಲ್ಸ್ –ಪ್ರಿಟೊರಿಯಾ

* ಲಖನೌ ಸೂಪರ್‌ಜೈಂಟ್ಸ್ –ಡರ್ಬನ್

* ರಾಜಸ್ಥಾನ ರಾಯಲ್ಸ್ –ಪಾರ್ಲ್

* ಸನ್‌ರೈಸರ್ಸ್ ಹೈದರಾಬಾದ್ –ಪೋರ್ಟ್ ಎಲಿಜಬೆತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT