ಗುರುವಾರ , ಸೆಪ್ಟೆಂಬರ್ 23, 2021
20 °C
ರಿಷಭ್‌ ಪಂತ್‌, ಅಮಿತ್ ಮಿಶ್ರಾ ಮಿಂಚು: ಎರಡನೇ ಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

ರಾಜಸ್ಥಾನ್‌ ‘ಪ್ಲೇ ಆಫ್‌’ ಕನಸು ಭಗ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ಬಾರಿಯ ಲೀಗ್‌ನಲ್ಲಿ ‘ಪ್ಲೇ ಆಫ್’ ಪ್ರವೇಶಿಸುವ ರಾಜಸ್ಥಾನ್ ರಾಯಲ್ಸ್‌ ತಂಡದ ಕನಸು ಶನಿವಾರ ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಕಮರಿತು.

ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 5 ವಿಕೆಟ್‌ಗಳಿಂದ ಅಜಿಂಕ್ಯ ರಹಾನೆ ಬಳಗವನ್ನು ಸೋಲಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಡೆಲ್ಲಿ ತಂಡದ ಸ್ಪಿನ್ನರ್‌ ಅಮಿತ್ ಮಿಶ್ರಾ (17ಕ್ಕೆ3) ಜಾದೂ ಮಾಡಿದರೆ, ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅಬ್ಬರದ ಬ್ಯಾಟಿಂಗ್ ಮೂಲಕ ತವರಿನ ಅಭಿಮಾನಿಗಳ ಮನ ಗೆದ್ದರು.

ನಿರ್ಣಾಯಕ ಹಣಾಹಣಿಯಲ್ಲಿ ರಹಾನೆ ಪಡೆ ಬ್ಯಾಟಿಂಗ್ ವೈಫಲ್ಯ ಕಂಡಿತು. 20 ಓವರ್‌ಗಳಲ್ಲಿ 9 ವಿಕೆಟ್‌ಗೆ  115ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ ಕೂಡಾ ಆರಂಭಿಕ ಸಂಕಷ್ಟ ಎದುರಿಸಿತ್ತು. ರಿಷಭ್ ಅಜೇಯ ಅರ್ಧಶತಕ ಸಿಡಿಸಿದ್ದರಿಂದ ತಂಡವು 16.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ಕ್ರಮಿಸಿತು.

ಬ್ಯಾಟಿಂಗ್‌ ಆರಂಭಿಸಿದ ರಾಜಸ್ಥಾನ್‌ ತಂಡಕ್ಕೆ ಎರಡನೇ ಓವರ್‌ನಲ್ಲಿ ಇಶಾಂತ್‌ ಶರ್ಮಾ ಆಘಾತ ನೀಡಿದರು. ಕೊನೆಯ ಎಸೆತದಲ್ಲಿ ಅವರು ರಹಾನೆ ವಿಕೆಟ್‌ ಉರುಳಿಸಿದರು. ನಾಲ್ಕು ಎಸೆತ ಆಡಿದ ಅಜಿಂಕ್ಯ ಎರಡು ರನ್ ಗಳಿಸಿ ಶಿಖರ್‌ ಧವನ್‌ಗೆ ಕ್ಯಾಚ್‌ ನೀಡಿದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೂ ವೈಫಲ್ಯ ಕಂಡರು. ಹೀಗಾಗಿ ತಂಡವು 65ರನ್‌ ಗಳಿಸುವಷ್ಟರಲ್ಲಿ ಏಳು ವಿಕೆಟ್‌ ಕಳೆದುಕೊಂಡಿತು.

ಯುವ ಆಟಗಾರ ರಿಯಾನ್‌ ಪರಾಗ್‌ (50; 49ಎ, 4ಬೌಂ, 2ಸಿ) ಅರ್ಧಶತಕ ಸಿಡಿಸಿದ್ದರಿಂದ ರಹಾನೆ ಬಳಗದ ಮೊತ್ತ ಶತಕದ ಗಡಿ ದಾಟಿತು.

ಗುರಿ ಬೆನ್ನಟ್ಟಿದ್ದ ಡೆಲ್ಲಿ ತಂಡ 61 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿತ್ತು. ಆದರೆ ರಿಷಭ್‌, ಸ್ಫೋಟಕ ಆಟ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 38 ಎಸೆತಗಳನ್ನು ಎದುರಿಸಿದ ಅವರು 53 ರನ್‌ ಗಳಿಸಿದರು. ಬೌಂಡರಿ (2) ಮತ್ತು ಸಿಕ್ಸರ್‌ (5) ಮೂಲಕವೇ 38ರನ್‌ ಕಲೆಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು