ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವೇಗದ ಬೌಲಿಂಗ್ ಇಷ್ಟು ಸುಧಾರಿಸುತ್ತದೆ ಎಂದು ಊಹಿಸಿರಲಿಲ್ಲ: ಇಯಾನ್ ಬಿಷಪ್

Last Updated 4 ಡಿಸೆಂಬರ್ 2019, 13:19 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ವೇಗದ ಬೌಲಿಂಗ್‌ನಲ್ಲಿ ಇಷ್ಟು ಸುಧಾರಣೆ ಆಗುತ್ತದೆ ಎಂಬ ಯಾವ ಮುನ್ಸೂಚನಯೂ ಸಿಕ್ಕಿರಿಲಿಲ್ಲ. ಈ ಬದಲಾವಣೆಯು ರಾತ್ರಿ–ಬೆಳಗಾಗುವುದರೊಳಗೆ ಆದುದ್ದಲ್ಲ. ಕಪಿಲ್‌ ದೇವ್‌, ಜಾವಗಲ್‌ ಶ್ರೀನಾಥ್‌, ಜಹೀರ್‌ ಖಾನ್‌ ಅಂತಹವರು ಇದಕ್ಕೆ ತಳಹದಿ ಹಾಕಿಕೊಟ್ಟಿದ್ದಾರೆ ಎಂದು ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ತಂಡದ ಮಾಜಿ ವೇಗಿ ಇಯಾನ್ ಬಿಶೋಪ್ ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡಾ ವೆಬ್‌ಸೈಟ್‌ ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಮಾತನಾಡಿರುವ ಬಿಶೋಪ್,ಕಳೆದ ಕೆಲವು ವರ್ಷಗಳಿಂದ ಭಾರತ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.ನಾಯಕ ವಿರಾಟ್‌ ಕೊಹ್ಲಿ ವೇಗಿಗಳ ಮೇಲೆ ವಿಶ್ವಾಸ ಇರಿಸಿದ್ದಾರೆ ಎಂದು ಹೇಳಿದ್ದಾರೆ.

ಇದೇವರ್ಷ ವಿಂಡೀಸ್‌ನಲ್ಲಿ ನಡೆದಿದ್ದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ಕ್ಲೀನ್‌ ಸ್ವೀಪ್‌ ಮಾಡಿತ್ತು. ಸರಣಿಯ ನಾಲ್ಕೂ ಇನಿಂಗ್ಸ್‌ಗಳಲ್ಲಿ ಆತಿಥೇಯ ತಂಡ ಆಲೌಟ್‌ ಆಗಿತ್ತು. 40 ವಿಕೆಟ್‌ಗಳಲ್ಲಿ 33 ವೇಗಿಗಳ ಪಾಲಾಗಿದ್ದವು. ಭಾರತದಲ್ಲಿಯೇ ನಡೆದ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಸರಣಿಗಳಲ್ಲಿಯೂ ವೇಗಿಗಳು ಪ್ರಾಬಲ್ಯ ಮೆರೆದಿದ್ದರು.

‘ಭಾರತದ ವೇಗಿಗಳು ಕೆರಿಬಿಯನ್‌ಗೆ ಬಂದು ಇಂತಹ ಪ್ರದರ್ಶನ ನೀಡಲಿದ್ದಾರೆ ಎಂದು ಎಣಿಸಿರಲಿಲ್ಲ. ನಾವು ಹಲವು ದಶಕಗಳ ಹಿಂದೆ ಭಾರತ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ್ದ ಹಾಗೆಯೇ, ಅವರು ನಮ್ಮನ್ನೂ ಕಾಡಿದರು. ಈ ಎಲ್ಲ ಶ್ರೇಯ ಭಾರತ ತಂಡದ ಬೌಲಿಂಗ್‌ ಕೋಚ್‌ಭರತ್‌ ಅರುಣ್‌, ಅಧಿಕಾರಿಗಳು ಹಾಗೂ ನಾಯಕನಿಗೆ ಸಲ್ಲುತ್ತದೆ. ಈ ಪರಿಯ ಸುಧಾರಣೆಯನ್ನು ಈ ಹಿಂದೆ ಕಂಡಿರಲಿಲ್ಲ. 145 ಕಿ.ಮೀ ವೇಗದಲ್ಲಿ ಬೌಲಿಂಗ್‌ ಮಾಡುವ ವೇಗಿಗಳನ್ನು ಹೊಂದುವುದು ಅತ್ಯುತ್ತಮ ಸಾಧನೆಯೇ ಸರಿ’ ಎಂದು ಶ್ಲಾಘಿಸಿದ್ದಾರೆ.

‘ಈ ತಂಡದಲ್ಲಿರುವ ವೇಗಿಗಳು ಏಕಾಏಕಿ ಹೊರಹೊಮ್ಮಿದವರಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಹಿಂತಿರುಗಿ ನೋಡಿದರೆ ವೇಗದ ವಿಭಾಗಕ್ಕೆ ಕಪಿಲ್‌ ದೇವ್‌, ಜಾವಗಲ್‌ ಶ್ರೀನಾಥ್‌, ಜಹೀರ್‌ ಖಾನ್‌, ಮುನಾಫ್‌ ಪಟೇಲ್‌, ಶ್ರೀಶಾಂತ್‌ ಅವರಂತಹವರು ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ. ಅದು ಈಗ ವೇಗಿಗಳನ್ನು ಇಷ್ಟಪಡುವ ಹಾಗೂ ಅವರಲ್ಲಿ ವಿಶ್ವಾಸವಿರಿಸಿರುವ ನಾಯಕನ ಜೊತೆಯಲ್ಲಿ ಎತ್ತರಕ್ಕೆ ಬೆಳೆದಿದೆ. ಅದರೊಟ್ಟಿಗೆ ಜಸ್‌ಪ್ರೀತ್‌ ಬೂಮ್ರಾ ಅವರಂತಹ ಪ್ರತಿಭಾವಂತ ಕ್ರಿಕೆಟಿಗರು ಉದಯಿಸಿದ್ದಾರೆ ಎಂಬುದೂ ಸತ್ಯ. ಏಕೆಂದರೆ ಬೂಮ್ರಾ ಎಲ್ಲ ಮಾದರಿಯಲ್ಲಿಯೂ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಮೊಹಮದ್‌ ಶಮಿ ಹಾಗೂ ಇಶಾಂತ್‌ ಶರ್ಮಾ ತಮ್ಮ ಆಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಇದನ್ನು ನಾನು ಊಹಿಸಿರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಸದ್ಯದ ಕ್ರಿಕೆಟ್‌ ಲೋಕದಲ್ಲಿ ಮಿಂಚುತ್ತಿರುವ ಪ್ರಮುಖ ವೇಗಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಶೋಪ್, ‘ಸಾಕಷ್ಟು ಜನರಿದ್ದಾರೆ. ಜೋಫ್ರಾ ಆರ್ಚರ್‌ ಬೌಲಿಂಗ್‌ನಲ್ಲಿ ಉತ್ತಮ ತಂತ್ರಗಾರಿಕೆಯನ್ನು ಕಾಣಬಹುದು. ನಸೀಮ್‌ ಶಾ, ಜಸ್‌ಪ್ರೀತ್‌ ಬೂಮ್ರಾ, ಮೊಹಮದ್‌ ಶಮಿ ಹೀಗೆ ಇನ್ನೂ ಇದ್ದಾರೆ. ಒಬ್ಬರಿಗಿಂತ ಒಬ್ಬರು ಶ್ರೇಷ್ಠ. ಕೆಮರ್‌ ರೋಚ್‌ ಬೌಲಿಂಗ್‌ನಲ್ಲಿ ವೇಗ ಕಳೆದುಕೊಂಡಿದ್ದಾರೆ. ಆದರೂ.. ರೋಚ್‌ ಹಾಗೂ ಜೇಸನ್‌ ಹೋಲ್ಡರ್‌ ಅತ್ಯುತ್ತಮ ಮಧ್ಯಮ ವೇಗಿಗಳು’ ಎಂದಿದ್ದಾರೆ.

ಬಿಷಪ್ ಪಟ್ಟಿಯಲ್ಲಿರುವ11 ಶ್ರೇಷ್ಠ ವೇಗಿಗಳು
01. ಜೋಫ್ರಾ ಆರ್ಚರ್‌ – ಇಂಗ್ಲೆಂಡ್‌
02. ಜಸ್‌ಪ್ರೀತ್‌ ಬೂಮ್ರಾ – ಭಾರತ
03. ನಸೀಮ್‌ ಶಾ – ಪಾಕಿಸ್ತಾನ
04. ಮೊಹಮದ್ ಶಮಿ – ಭಾರತ
05. ಕಗಿಸೊ ರಬಾಡ – ದಕ್ಷಿಣ ಆಫ್ರಿಕಾ
06. ಕೆಮಾರ್‌ ರೋಚ್‌ – ವೆಸ್ಟ್‌ ಇಂಡೀಸ್‌
07. ಜೇಸನ್‌ ಹೋಲ್ಡರ್‌– ವೆಸ್ಟ್‌ ಇಂಡೀಸ್‌
08. ಲಾಕಿ ಫರ್ಗ್ಯೂಸನ್‌ – ನ್ಯೂಜಿಲೆಂಡ್‌
09. ನೀಲ್‌ ವ್ಯಾಗ್ನರ್‌– ನ್ಯೂಜಿಲೆಂಡ್‌
10. ಮಿಚೆಲ್ ಸ್ಟಾರ್ಕ್‌ – ಆಸ್ಟ್ರೇಲಿಯಾ
11. ಜೋಷ್‌ ಹ್ಯಾಷಲ್‌ವುಡ್‌ – ಆಸ್ಟ್ರೇಲಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT