ಶನಿವಾರ, ಜನವರಿ 22, 2022
16 °C

ಕೋಚ್ ರಾಹುಲ್ ದ್ರಾವಿಡ್, ರವಿಶಾಸ್ತ್ರಿ ನಡುವಿನ ವ್ಯತ್ಯಾಸ ವಿವರಿಸಿದ ಗಂಭೀರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಮತ್ತು ಈಗಿನ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯವೈಖರಿಯಲ್ಲಿರುವ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ದುಬೈನಲ್ಲಿ ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೇ ಕೋಚ್ ಸ್ಥಾನದಿಂದ ರವಿ ಕೆಳಗಿಳಿದಿದ್ದು, ರಾಹುಲ್ ನೇಮಕವಾಗಿದ್ದಾರೆ. ವಿರಾಟ್ ಕೊಹ್ಲಿ ಅವರೂ ಚುಟುಕು ಕ್ರಿಕೆಟ್‌ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ. ಹೀಗಾಗಿ ಅದರ ಹೊಣೆ ರೋಹಿತ್ ಶರ್ಮಾ ಹೆಗಲೇರಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಗಂಭೀರ್, ರಾಹುಲ್ ನೇಮಕವನ್ನು ಸ್ವಾಗತಿಸಿದ್ದಾರೆ. ಹಾಗೆಯೇ, ರವಿಶಾಸ್ತ್ರಿ ತಮ್ಮ ಅವಧಿಯಲ್ಲಿ ತಂಡದ ಯಶಸ್ಸಿನ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ.

ಶಾಸ್ತ್ರಿ ಕೋಚ್ ಆಗಿದ್ದ ವೇಳೆ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಇದರೊಂದಿಗೆ ಕಾಂಗರೂ ನಾಡಿನಲ್ಲಿ ಟೆಸ್ಟ್ ಸರಣಿ ಜಯಿಸಿದ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಭಾಜನವಾಗಿತ್ತು. ಈ ವಿಜಯವನ್ನು ಭಾರತ ತಂಡ 1983ರಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದ ಸಾಧನೆಯೊಂದಿಗೆ ರವಿಶಾಸ್ತ್ರಿ ಹೋಲಿಸಿದ್ದರು.

ಇದನ್ನೂ ಓದಿ: ಟೆಸ್ಟ್‌ ಸರಣಿ: ಏಳು ದಶಕಗಳ ಕನಸು ಕೈಗೂಡಿದಾಗ.. 

ಶಾಸ್ತ್ರಿಯವರು ತಂಡದ ಗೆಲುವಿನ ಬಗ್ಗೆ ಮಾತನಾಡುತ್ತಿದ್ದುದು ನನ್ನಲ್ಲಿ ಅಚ್ಚರಿ ಮೂಡಿಸಿದೆ ಎಂದು ಹೇಳಿರುವ ಗಂಭೀರ್, ‘ನೀವು ತುಂಬಾ ಚೆನ್ನಾಗಿ ಆಡಿದಾಗ, ಸಾಮಾನ್ಯವಾಗಿ ನೀವೇ ಪ್ರಚಾರ ಮಾಡಿಕೊಳ್ಳುವುದಿಲ್ಲ. ಬೇರೆಯವರು ಅದರ ಬಗ್ಗೆ ಮಾತನಾಡಿದರೆ ಉತ್ತಮ. ನಾವು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ, ನಮ್ಮ ತಂಡ ವಿಶ್ವದಲ್ಲೇ ಶ್ರೇಷ್ಠ ಎಂದು ಯಾರೊಬ್ಬರೂ ಹೇಳಿಕೆ ನೀಡಿರಲಿಲ್ಲ‘ ಎಂದಿದ್ದಾರೆ.

ಮುಂದುವರಿದು, ‘ನೀವು ಆಸ್ಟ್ರೇಲಿಯಾದಲ್ಲಿ ಜಯ ಸಾಧಿಸಿದ್ದು ಶ್ರೇಷ್ಠ ಸಾಧನೆ ಎಂಬುದರಲ್ಲಿ ಅನುಮಾನವೇ ಇಲ್ಲ. ಇಂಗ್ಲೆಂಡ್‌ನಲ್ಲಿ ಗೆದ್ದಾಗಲೂ ಚೆನ್ನಾಗಿ ಆಡಿದ್ದೀರಿ. ಅದರಲ್ಲೂ ಯಾವುದೇ ಸಂಶಯವಿಲ್ಲ. ಆದರೆ, ಬೇರೆಯವರು ನಿಮ್ಮನ್ನು ಪ್ರಶಂಸಿಸಲು ಬಿಡಿ. ನೀವು ಅಂತಹ (ಸ್ವಯಂ ಹೊಗಳಿಕೆಯ) ಮಾತುಗಳನ್ನು ದ್ರಾವಿಡ್ ಅವರಿಂದ ಕೇಳಲು ಸಾಧ್ಯವಿಲ್ಲ. ಭಾರತ ಚೆನ್ನಾಗಿ ಆಡಲಿ ಅಥವಾ ಆಡದಿರಲಿ, ಅವರ (ದ್ರಾವಿಡ್) ಹೇಳಿಕೆಗಳು ಯಾವಾಗಲೂ ಸಮತೋಲನದಿಂದ ಕೂಡಿರುತ್ತವೆ. ಎಲ್ಲಕ್ಕೂ ಮಿಗಿಲಾಗಿ, ಅದು ಬೇರೆ ಆಟಗಾರರ ಮೇಲೆ ಪರಿಣಾಮ ಬೀರುತ್ತದೆ‘ ಎಂದು ಹೇಳಿದ್ದಾರೆ.

'ನೀವು ಚೆನ್ನಾಗಿ ಆಡಿ ಅಥವಾ ಆಡದಿರಿ. ಆದರೆ, ವಿನಯದಿಂದಿರುವುದು ತುಂಬಾ ಮುಖ್ಯ. ಆಟಗಾರರು ಉತ್ತಮ ನಡತೆ ರೂಪಿಸಿಕೊಳ್ಳುವತ್ತ ದ್ರಾವಿಡ್ ಮೊದಲ ಆದ್ಯತೆ ನೀಡಲಿದ್ದಾರೆ ಎಂದು ನನಗನಿಸುತ್ತದೆ' ಎಂದೂ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಗಂಭೀರ್ ಪ್ರಮುಖ ಪಾತ್ರ ವಹಿಸಿದ್ದರು. ಆಗ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಮತ್ತು ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಕೋಚ್ ಆಗಿ ತಂಡ ಮುನ್ನಡೆಸಿದ್ದರು.

ರಾಹುಲ್ ಕೋಚ್ ಆಗಿ ಮತ್ತು ರೋಹಿತ್ ಶರ್ಮಾ ನಾಯಕರಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಚುಟುಕು ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು