ಭಾನುವಾರ, ಸೆಪ್ಟೆಂಬರ್ 20, 2020
22 °C

ಮೋಹಕ, ರೋಮಾಂಚಕ ಸಚಿನ್ ಬೇಬಿ ಯೂ ಟ್ಯೂಬ್‌ ಇನಿಂಗ್ಸ್‌

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

ಕೇರಳದ ಸಣ್ಣ ಪೇಟೆ. ಒಂದು ಮುಂಜಾವ; ರೇಡಿಯೊದಲ್ಲಿ ಹಳೆಯ ಸಿನಿಮಾ ಹಾಡು ಕೇಳಿಬರುತ್ತಿದೆ. ಚಹಾ ಅಂಗಡಿಯಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದ ಗಡ್ಡಧಾರಿ ವ್ಯಕ್ತಿ ಏಕಾಏಕಿ ‘ನಮ್ಮ ಕ್ಲಬ್ ಉದ್ಘಾಟನೆಗೆ ಸಚಿನ್ ಬರುತ್ತಿದ್ದಾರೆ’ ಎಂದು ಹೇಳುತ್ತಾರೆ. ಪಕ್ಕದಲ್ಲೇ ಕುಳಿತಿದ್ದ ಅನುಭವಿ ಬೌಲರ್ ಬೇಸಿಲ್ ತಂಬಿ ಅದನ್ನು ಕೇಳಿ ಕಿರು ನಗೆ ನಗುತ್ತಾರೆ. ಅಷ್ಟರಲ್ಲಿ ದೂರದಿಂದ ಎರಡು ಕಾರುಗಳು ಬರುತ್ತವೆ. ಅವುಗಳು ಚಹಾ ಅಂಗಡಿ ಬಳಿ ತಲುಪುತ್ತಿದ್ದಂತೆ ಯುವಕನೊಬ್ಬ ‘ಅಲ್ನೋಡು, ಸಚಿನ್’ ಎನ್ನುತ್ತಾನೆ. ಎಲ್ಲರೂ ಕಾರಿನ ಬಳಿಗೆ ಓಡುತ್ತಾರೆ. ಕಾರಿನಿಂದ ಆ ವ್ಯಕ್ತಿ ಇಳಿಯುತ್ತಾರೆ. ಬಾಸಿಲ್ ತಂಬಿ ‘ಓಹೋ ನಮ್ಮ ಸಚಿನ್’ ಎನ್ನುತ್ತಾರೆ. ಹೌದು, ಕಾರಿನಿಂದ ಇಳಿದದ್ದು ಬೇರಾರೂ ಅಲ್ಲ, ಸಚಿನ್. ಅಂದರೆ ತೆಂಡೂಲ್ಕರ್ ಅಲ್ಲ; ಸಚಿನ್ ಬೇಬಿ.

ಕೇರಳ ರಾಜ್ಯ ಕ್ರಿಕೆಟ್ ತಂಡದ ನಾಯಕ, ಐಪಿಎಲ್ ಆಟಗಾರ ಸಚಿನ್ ಬೇಬಿ ಅರಂಭಿಸಿರುವ ಯೂಟ್ಯೂಬ್ ಚಾನಲ್‌ ‘ಸಚಿನ್ ಬೇಬಿ ಅಫೀಸಿಯಲ್’ನ ಮೊದಲ ಕಂತು ಆರಂಭವಾಗುವುದು ಹೀಗೆ. ಕೊರೊನಾ ಕಾಲದಲ್ಲಿ ಕ್ರಿಕೆಟ್ ಚಟುವಟಿಕೆ ನಿಂತಿರುವುದರಿಂದ ಸಮಯ ಸದುಪಯೋಗ ಮಾಡಿಕೊಳ್ಳಲು ಸಚಿನ್ ಬೇಬಿ ಕಂಡುಕೊಂಡ ದಾರಿ ಯೂ ಟ್ಯೂಬ್ ಚಾನಲ್. ಈಗಾಗಲೇ ನಾಲ್ಕು ಕಂತಿನ ದೃಶ್ಯಾವಳಿಯನ್ನು ಅವರು ಚಾನಲ್‌ಗೆ ಅಪ್‌ಲೋಡ್ ಮಾಡಿದ್ದಾರೆ. ವಿಶೇಷವೆಂದರೆ, ಪ್ರತಿ ಕಂತು ಕೂಡ ಸಿನಿಮಾ ಮಾದರಿಯ ದೃಶ್ಯ ತುಣುಕುಗಳನ್ನು ಒಳಗೊಂಡಿದ್ದು ಕುತೂಹಲಕಾರಿಯಾಗಿವೆ. ಅದ್ಭುತ ಕ್ಯಾಮೆರಾ, ಸುಂದರ ಲೊಕೇಷನ್ ಇತ್ಯಾದಿಗಳು ಚಾನಲ್‌ಗೆ ಜೀವ ತುಂಬಿವೆ.

ಮೊದಲ ಕಂತು ‘ಕಮಿಂಗ್ ಸೂನ್’ ಎಂಬ ಹೆಸರಿನಲ್ಲಿದ್ದು ಕರ್ಟನ್ ರೈಸರ್ ಎಂಬ ಎರಡನೇ ಕಂತನ್ನು ಮನೆಯಲ್ಲೇ ಚಿತ್ರೀಕರಿಸಲಾಗಿದೆ. ಅದರಲ್ಲಿ, ಯೂಟ್ಯೂಬ್ ಚಾನಲ್ ಆರಂಭಿಸಲು ಕಾರಣವೇನು ಎಂಬುದನ್ನು ವಿವರಿಸಿದ್ದಾರೆ. ಮೂರನೇ ಕಂತು ‘ಸ್ಟೇ ಟ್ಯೂನ್ಡ್’ ಎಂಬುದು. ಕಠಿಣ ವ್ಯಾಯಾಮ ಮತ್ತು ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ದೃಶ್ಯಗಳೊಂದಿಗೆ ಮುಗಿಯುವ ಈ ಕಂತಿನ ಕೊನೆಯಲ್ಲಿ ಮುಂದಿನ ಕಂತು ‘ಎ ಡೇ ಇನ್ ಮೈ ಲೈಫ್’ ಎಂದು ಹೇಳಲಾಗಿದೆ. ಆ ಕಂತಿನಲ್ಲಿ ಮುಂಜಾನೆ ಐದು ಗಂಟೆಗೆ ಏಳುವುದರಿಂದ ಹಿಡಿದು ರಾತ್ರಿ 9.45ಕ್ಕೆ ಮಲಗುವ ವರೆಗಿನ ದಿನಚರಿ ದಾಖಲಿಸಲಾಗಿದೆ. ಆಹಾರ, ಹವ್ಯಾಸ, ವ್ಯಾಯಾಮ, ಅಭ್ಯಾಸ, ಮಗುವಿನೊಂದಿಗಿನ ಆಟ ಮುಂತಾದ ಎಲ್ಲ ವಿವರಗಳನ್ನೂ ಮೋಹಕವಾಗಿ ಚಿತ್ರೀಕರಿಸಿ ಇಲ್ಲಿ ದಾಖಲಿಸಲಾಗಿದೆ. ತೌಫಿಕ್ ಅಸ್ಲಾಂ ಅವ ಕ್ಯಾಮರಾ ಕೌಶಲ ಈ ಕಂತಿನ ವೈಶಿಷ್ಟ್ಯ. ಆಹಾರ ಸೇವನೆ, ವ್ಯಾಯಾಮ, ಅಭ್ಯಾಸ ಮುಂತಾದ ಸಂದರ್ಭದಲ್ಲಿ ಅವುಗಳ ಕುರಿತು ಮಾಹಿತಿಯನ್ನೂ ನೀಡಿದ್ದಾರೆ. ಯುವ ತಲೆಮಾರಿಗೆ ಉಪಯುಕ್ತ ಕಿವಿಮಾತನ್ನೂ ಹೇಳಿದ್ದಾರೆ.

ಯಾರು ಸಚಿನ್ ಬೇಬಿ?

ಕೇರಳದ ತೊಡುಪುಳದಲ್ಲಿ ಜನಿಸಿದ ಸಚಿನ್‌ ಬೇಬಿಗೆ ಈಗ 31 ವರ್ಷ. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಅವರು ಪ್ರಥಮ ದರ್ಜೆ, ಲಿಸ್ಟ್ ‘ಎ’ ಮತ್ತು ದೇಶಿ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಪರಿಚಿತ ಹೆಸರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ 2013ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್‌ ಪರ, 2016–17ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ ಸಚಿನ್ ಬೇಬಿ 2018ರಿಂದ ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿದ್ದಾರೆ. 69 ಪ್ರಥಮ ದರ್ಜೆ ಪಂದ್ಯಗಳಲ್ಲಿ 2899 ರನ್ ಗಳಿಸಿರುವ ಅವರ ಖಾತೆಯಲ್ಲಿ ಐದು ಶತಕ ಮತ್ತು 14 ಅರ್ಧಶತಕಗಳು ಇವೆ. ಅಜೇಯ 250 ರನ್‌ಗಳು ಅವರ ಗರಿಷ್ಠ ಸ್ಕೊರ್. ಲಿಸ್ಟ್ ‘ಎ’ಯಲ್ಲಿ 64 ಪಂದ್ಯಗಳನ್ನು ಆಡಿದ್ದು 2088 ರನ್ ಕಲೆ ಹಾಕಿದ್ದಾರೆ. ಎರಡು ಶತಕ ಮತ್ತು 14 ಅರ್ಧಶತಕ ದಾಖಲಿಸಿದ್ದು ಅಜೇಯ 104 ಗರಿಷ್ಠ ರನ್‌. ಟ್ವೆಂಟಿ–20 ಕ್ರಿಕೆಟ್‌ನಲ್ಲಿ 63 ಪಂದ್ಯಗಳನ್ನು ಆಡಿದ್ದಾರೆ. 913 ರನ್ ಗಳಿಸಿದ್ದಾರೆ. ಮೂರು ಅರ್ಧಶತಕ ಸಿಡಿಸಿದ್ದಾರೆ. ಮೂರು ಮಾದರಿಗಳಲ್ಲಿ ಕ್ರಮವಾಗಿ ಒಂಬತ್ತು, ಏಳು ಮತ್ತು ಮೂರು ವಿಕೆಟ್ ಕೂಡ ಉರುಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು