ಸೋಮವಾರ, ಜುಲೈ 4, 2022
24 °C

49ನೇ ವಸಂತಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್: ಅಭಿಮಾನಿಗಳಿಂದ ಶುಭ ಹಾರೈಕೆ 

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು (ಭಾನುವಾರ) 49ನೇ ವಸಂತಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಸಚಿನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಮುಂಬೈ ಇಂಡಿಯನ್ಸ್‌ ಸೇರದಂತೆ ಐಪಿಎಲ್‌ ಫ್ರ್ಯಾಂಚೈಸ್‌ಗಳು, ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಸಚಿನ್ ಅವರಿಗೆ ಶುಭಾಶಯ ಕೋರಿದ್ದಾರೆ.

‘ಭಾರತದ ಶ್ರೇಷ್ಠ ಬ್ಯಾಟರ್‌, ಮನರಂಜನಾತ್ಮಕ ಸಾಂದರ್ಭಿಕ ಬೌಲರ್ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಐಸಿಸಿ ಟ್ವೀಟ್ ಮಾಡಿದೆ. 

ಓದಿ... ಡಾ.ರಾಜ್‌ಕುಮಾರ್ ಜನ್ಮದಿನ: ಬೊಮ್ಮಾಯಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

ಸ್ಪೂರ್ತಿದಾಯಕ ದಂತಕಥೆ ಸಚಿನ್‌ ತೆಂಡೂಲ್ಕರ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬಿಸಿಸಿಐ ಟ್ವೀಟ್ ಮಾಡಿದೆ. 

ಸಚಿನ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ #HappyBirthdaySachin #SachinTendulkar #GodOfCricket #Sachinbirthday ಮೊದಲಾದ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.

ಸಚಿನ್ ಅವರು 1973ರ ಏಪ್ರಿಲ್ 24ರಂದು ಮುಂಬೈನಲ್ಲಿ ಜನಿಸಿದರು. ಸಚಿನ್‌ ತಮ್ಮ 16ನೇ ವಯಸ್ಸಿನಲ್ಲಿ 1989ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ದಾಖಲೆಯ 34,357 ರನ್ ಪೇರಿಸಿದ್ದರು. 

‘ಕ್ರಿಕೆಟ್ ದೇವರು’ ಎಂದೇ ಆರಾಧನೆಗೆ ಪಾತ್ರವಾಗಿರುವ ಸಚಿನ್ ಏಕದಿನದಲ್ಲಿ 18,426 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಗಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿದ ವಿಶ್ವದ ಮೊತ್ತ ಮೊದಲ ಹಾಗೂ ಏಕಮಾತ್ರ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೂ ಸಚಿನ್ ಭಾಜನವಾಗಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಪ್ರಪ್ರಥಮ ಬ್ಯಾಟ್ಸ್‌ಮನ್ ಎಂಬ ಶ್ರೇಯ ಅವರದ್ದಾಗಿದೆ. ಹೀಗೆ 'ದಾಖಲೆಗಳ ಸರದಾರ' ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

2013ರಲ್ಲಿ ಸಚಿನ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ಮಾರ್ಗದರ್ಶಕರಾಗಿ ತೊಡಗಿಸಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು