ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನಿಪುರಿ ಮಾರುತ್ತಿದ್ದ ಯಶಸ್ವಿಗೆ ಐಪಿಎಲ್‌ನಲ್ಲಿ ಅವಕಾಶ: ‘ಶ್ರಮದ ಫಲ’ ಎಂದ ತಂದೆ

ರಾಜಸ್ಥಾನ ರಾಯಲ್ಸ್‌ ಜೈಸ್ವಾಲ್‌ರನ್ನು ₹ 2.40 ಕೋಟಿ ನೀಡಿ ಖರೀದಿಸಿದೆ
Last Updated 20 ಡಿಸೆಂಬರ್ 2019, 10:36 IST
ಅಕ್ಷರ ಗಾತ್ರ

ಭಾರತದ 19 ವರ್ಷದೊಳಗಿನವರ ಕ್ರಿಕೆಟ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಮಹಾರಾಷ್ಟ್ರದ ಯಶಸ್ವಿ ಜೈಸ್ವಾಲ್‌ ಅವರನ್ನು ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ ರಾಯಲ್ಸ್‌ ₹ 2.40 ಕೋಟಿ ಕೊಟ್ಟು ಖರೀದಿಸಿರುವುದು ಗೊತ್ತಿರುವ ಸಂಗತಿ. ಆದರೆ ಆತ, ಕೆಲವೇ ದಿನಗಳ ಹಿಂದೆ ಮುಂಬೈನ ರಸ್ತೆಬದಿಗಳಲ್ಲಿ ಪಾನಿಪುರಿ ಮಾರುತ್ತಿದ್ದ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ.

ಹೌದು. ಮುಂಬೈ ನಗರದ ಬೀದಿ ಬದಿಗಳಲ್ಲಿ ಪಾನಿಪುರಿ ಮಾರಾಟ ಮಾಡುತ್ತಾ, ಅದರಿಂದ ಬಂದ ಹಣವನ್ನು ಕ್ರಿಕೆಟ್‌ ಕಿಟ್‌ಗೆ ಹೊಂದಿಸಿಕೊಳ್ಳುತ್ತಿದ್ದ ಈ ಹುಡುಗ ಈಗ ಸೆಲೆಬ್ರಿಟಿ ಆಗಿಬಿಟ್ಟಿದ್ದಾನೆ. ಐಪಿಎಲ್‌ ವೇಳೆ ದೊಡ್ಡದೊಡ್ಡ ಆಟಗಾರರೊಟ್ಟಿಗೆ ಡ್ರೆಸ್ಸಿಂಗ್‌ ರೂಂ ಶೇರ್‌ ಮಾಡಿಕೊಳ್ಳಲಿದ್ದಾನೆ. ಹರಟಲಿದ್ದಾನೆ. ಅನುಭವ ಹಂಚಿಕೊಳ್ಳಲಿದ್ದಾನೆ.ಅದಕ್ಕೂ ಮೊದಲು ಮುಂದಿನ ವರ್ಷದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡಲುವಿಮಾನದಲ್ಲಿ ಹಾರಲಿದ್ದಾನೆ.

ಹಾಗಾಗಿ ನಮಗೆ ಯಶಸ್ವಿಯ ಬದುಕಿನ ಉಜ್ವಲ ಭವಿಷ್ಯ ಕಂಡಷ್ಟು ಸುಲಭವಾಗಿ, ಆತನ ಕಷ್ಟದ ದಿನಗಳು ದಕ್ಕುವುದಿಲ್ಲ. ಆದರೆ, ಯಶಸ್ವಿಯನ್ನು ತುಂಬಾ ಹತ್ತಿರದಿಂದ ನೋಡಿರುವ ಪೋಷಕರು, ಆತನ ಸಾಧನೆಯನ್ನು ಕಂಡು ಹೆಮ್ಮೆಯಿಂದ ಬೀಗುತ್ತಾ, ಸಂತಸದಿಂದ ಕಣ್ಣೀರಾಗಿದ್ದಾರೆ.ಸಂಬಂಧಿಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಯಶಸ್ವಿಯ ಸಾಧನೆ ಬಗ್ಗೆ ತಂದೆ ಭೂಪೇಂದ್ರ ಜೈಸ್ವಾಲ್‌,‘ಆತ ಐಪಿಎಲ್‌ನಲ್ಲಿ ಆಡುತ್ತಿರುವುದು ಕೇವಲ ದುಡ್ಡಿನ ವಿಷಯವಲ್ಲ. ಆತ ಇದುವರೆಗೆ ಪಟ್ಟಿರುವ ಪರಿಶ್ರಮದ ವಿಚಾರ. ನಾವೆಲ್ಲ ಹೆಮ್ಮೆ ಪಡುವಂತೆ ಮಾಡಿದ್ದಾನೆ. ಆತ ವಿಶ್ವಕಪ್‌ (19 ವರ್ಷದೊಳಗಿನವರ ವಿಶ್ವಕಪ್‌) ಟೂರ್ನಿಯಲ್ಲಿಯೂ ಚೆನ್ನಾಗಿ ಆಡುವಂತಾಗಲಿ, ದೇಶಕ್ಕೆ ಪ್ರಶಸ್ತಿ ತರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’

‘ಯಶಸ್ವಿಯಪರಿಶ್ರಮಕ್ಕೆ ಫಲ ಸಿಕ್ಕಿದೆ. ಅವನುಐಪಿಎಲ್‌ನಲ್ಲಿಯೂ ಚೆನ್ನಾಗಿ ಆಡುತ್ತಾನೆ ಎಂಬ ವಿಶ್ವಾಸವಿದೆ. ಭಾರತ ತಂಡದಲ್ಲಿಯೂ ಸ್ಥಾನ ಗಿಟ್ಟಿಸುತ್ತಾನೆ. ನನಗೆ ತುಂಬಾ ಸಂತೋಷವಾಗಿದೆ’ ಎಂದಿದ್ದಾರೆ.

‘ರಾಜಸ್ಥಾನ ತಂಡಕ್ಕೆ ಮಗ ಸೇರಿಸುವುದರಿಂದ ನಾನು ತುಂಬಾ ಸಂತಸಗೊಂಡಿದ್ದೇನೆ. ಅವನು ಭಾರತ ತಂಡದ ಪರವಾಗಿಯೂ ಆಡುತ್ತಾನೆ ಎಂದು ನಂಬಿದ್ದೇನೆ’ ಎಂದು ತಾಯಿ ಕಾಂಚನ್ ಜೈಸ್ವಾಲ್ ಹೇಳಿದ್ದಾರೆ.

ಭಾರತವು 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಜನವರಿ 19 ರಂದು ತನ್ನ ಮೊದಲ ಪಂದ್ಯ ಆಡಲಿದೆ.

19 ವರ್ಷದೊಳಗಿನವರ ವಿಶ್ವಕಪ್‌ಗೆ ಭಾರತ ತಂಡ ಹೀಗಿದೆ:
ಪ್ರಿಯಂ ಗರ್ಗ್‌ (ನಾಯಕ), ಧ್ರುವ್‌ ಚಂದ್ರ ಜುರೆಲ್‌ (ಉಪನಾಯಕ–ವಿಕೆಟ್‌ ಕೀಪರ್‌), ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮಾ, ದಿವ್ಯಾಂಶ್‌ ಸಕ್ಸೇನಾ, ಶಾಶ್ವತ್‌ ರಾವತ್‌, ದಿವ್ಯಾಂಶ್‌ ಜೋಶಿ, ಶುಭಾಂಗ್ ಹೆಗ್ಡೆ, ರವಿ ಬಿಷ್ಣೋಯಿ, ಆಕಾಶ್‌ ಸಿಂಗ್‌, ಕಾರ್ತಿಕ್‌ ತ್ಯಾಗಿ, ಆಥರ್ವ ಅಂಕೋಲೇಕರ್‌, ಕುಮಾರ್‌ ಕುಶಾಗ್ರ (ವಿಕೆಟ್‌ ಕೀಪರ್‌), ಸುಶಾಂತ್‌ ಮಿಶ್ರಾ ಮತ್ತು ವಿದ್ಯಾಧರ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT