ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ರಕ್ಷಣೆ ಬಗ್ಗೆ ಮಾತನಾಡಿದ ಪಿಸಿಬಿ ಮುಖ್ಯಸ್ಥನಿಗೆ ಬಿಸಿಸಿಐ ತಿರುಗೇಟು

‘ಭಾರತದ ವಿಷಯ ಇರಲಿ ಪಾಕ್ ಬಗ್ಗೆ ಮಾತನಾಡಲೂ ಪಿಸಿಬಿ ಮುಖ್ಯಸ್ಥನಿಗೆ ಅರ್ಹತೆ ಇಲ್ಲ’
Last Updated 24 ಡಿಸೆಂಬರ್ 2019, 12:21 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ರಕ್ಷಣೆಯ ಕುರಿತು ಹೇಳಿಕೆ ನೀಡಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ಎಹ್ಸಾನ್‌ ಮಾನಿ ಅವರಿಗೆ ಅರ್ಹತೆ ಇಲ್ಲ ಎಂದು ಬಿಸಿಸಿಐ ತಿರುಗೇಟು ನೀಡಿದೆ. ಶ್ರೀಲಂಕಾ ಎದುರಿನ ಸರಣಿ ಮುಕ್ತಾಯದ ಬಳಿಕ ಮಾತನಾಡಿದ್ದ ಎಹ್ಸಾನ್‌, ಭಾರತವು ಪಾಕಿಸ್ತಾನಕ್ಕಿಂತ ಹೆಚ್ಚು ರಕ್ಷಣಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು.

ಪಾಕಿಸ್ತಾನದಲ್ಲಿ 2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್‌ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಬೇರೆ ದೇಶದ ತಂಡಗಳು ಹಿಂದೇಟು ಹಾಕಿದ್ದವು. ಪಾಕ್‌ ತಂಡ ತಟಸ್ಥ ಸ್ಥಳಗಳಲ್ಲಿ ಆಡಬೇಕಿತ್ತು. ಈ ನಡುವೆ ಏಕದಿನ ಮತ್ತು ಟಿ20 ಸರಣಿಗಳನ್ನು ಆಯೋಜಿಸಲಾಗಿತ್ತಾದರೂ ಟೆಸ್ಟ್‌ ಸರಣಿ ಆಯೋಜಿಸಲು ಸಾಧ್ಯವಾಗಿರಲಿಲ್ಲ.ಆದರೆ ಇದೀಗ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಯಶಸ್ವಿಯಾಗಿ ಆಯೋಜಿಸಿದೆ.

ಸರಣಿ ಬಳಿಕ ಕರಾಚಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಎಹ್ಸಾನ್‌, ‘ನಾವೀಗ ಪಾಕಿಸ್ತಾನ ಸುರಕ್ಷಿತ ಎಂಬುದನ್ನು ಸಾಬೀತು ಮಾಡಿದ್ದೇವೆ. ಒಂದು ವೇಳೆ ಇಲ್ಲಿಗೆ ಬರಲು ಹಿಂದೇಟು ಹಾಕುವವರು ಇದು (ಪಾಕಿಸ್ತಾನ) ಸುರಕ್ಷಿತವಲ್ಲ ಎಂಬುದನ್ನು ಸಾಬೀತು ಮಾಡಲಿ. ಸದ್ಯದ ಪರಿಸ್ಥಿತಿಯಲ್ಲಿ ಭಾರತವು ಪಾಕಿಸ್ತಾನಕ್ಕಿಂತಲೂ ಹೆಚ್ಚು ಸುರಕ್ಷತೆಯೆ ಸಮಸ್ಯೆಯನ್ನು ಎದುರಿಸುತ್ತಿದೆ’ ಎಂದು ಹೇಳಿಕೆ ನೀಡಿದ್ದರು.

ಇದನ್ನು ಆಧಾರ ರಹಿತ ಎಂದಿರುವ ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲಾ, ಭಾರತದ ಭದ್ರತೆಯ ವಿಷಯ ಹಾಗಿರಲಿ ತನ್ನ ಸ್ವಂತ ದೇಶದ ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆಯೂ ಎಹ್ಸಾನ್‌ಗೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

‘ಬಹುಶಃ ಲಂಡನ್‌ನಲ್ಲಿ ಉಳಿದುಕೊಂಡಿರುವ ವ್ಯಕ್ತಿಯೊಬ್ಬರು, ಭಾರತದ ರಕ್ಷಣೆಯ ಕುರಿತು ಮಾತನಾಡುವುದು ಸರಿಯಲ್ಲ. ಆತ ತನ್ನ ಸ್ವಂತ ದೇಶ ಪಾಕಿಸ್ತಾನದ ಭದ್ರತೆಯ ಬಗ್ಗೆ ಮಾತನಾಡುವುದಕ್ಕೂ ಅರ್ಹನಲ್ಲ. ಒಂದುವೇಳೆ ಆತ ಪಾಕಿಸ್ತಾನದಲ್ಲಿ ಹೆಚ್ಚು ಸಮಯ ಉಳಿದಿದ್ದರೆ, ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿರುತ್ತಿದ್ದ’ ಎಂದು ಪ್ರತಿಕ್ರಿಯಿಸಿದ್ದಾರೆ.

ಡಿಸೆಂಬರ್‌ 11ರಿಂದ 15ರವರೆಗೆ ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವುಡ್ರಾನಲ್ಲಿ ಅಂತ್ಯವಾಗಿತ್ತು. ಈ ಪಂದ್ಯದ ಎರಡು, ಮೂರು ಮತ್ತು ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿ ಪಡಿಸಿತ್ತು. ಆದರೆ, ಡಿ.19 ರಿಂದ 23ರ ವರೆಗೆ ಕರಾಚಿಯಲ್ಲಿ ನಡೆದ ಎರಡನೇ ಪಂದ್ಯವನ್ನು ಪಾಕಿಸ್ತಾನ 263 ರನ್‌ ಅಂತರದಿಂದ ಗೆದ್ದುಕೊಂಡಿತ್ತು. ಹೀಗಾಗಿ ಸರಣಿಯು 1–0 ಅಂತರದಲ್ಲಿ ಆತಿಥೇಯರ ಪಾಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT