ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಉತ್ಸಾಹಿ ವಿಂಡೀಸ್‌ಗೆ ಇಂದು ಇಂಗ್ಲೆಂಡ್‌ ಸವಾಲು

ಸೂಪರ್ ಎಂಟರ ಪಂದ್ಯದಲ್ಲಿ ಉತ್ತಮ ಹೋರಾಟ ನಿರೀಕ್ಷೆ
Published 20 ಜೂನ್ 2024, 0:12 IST
Last Updated 20 ಜೂನ್ 2024, 0:12 IST
ಅಕ್ಷರ ಗಾತ್ರ

ಗ್ರಾಸ್‌ ಐಲ್‌ (ಸೇಂಟ್‌ ಲೂಸಿಯಾ): ಉತ್ತಮ ಲಯದಲ್ಲಿರುವ ಆತಿಥೇಯ ವೆಸ್ಟ್‌ ಇಂಡೀಸ್ ತಂಡದವರು ಟಿ20 ವಿಶ್ವಕಪ್‌ನ ಸೂಪರ್‌ ಎಂಟರ ಹಂತದಲ್ಲೂ ಅದೇ ಉತ್ಸಾಹದಲ್ಲಿ ಆಡುವ ತವಕದಲ್ಲಿದ್ದಾರೆ. ಆದರೆ ಗುರುವಾರ ನಡೆಯುವ ಈ ಹಂತದ ಮೊದಲ ಪಂದ್ಯದಲ್ಲಿ ‘ಚಿರಪರಿಚಿತ’ ಎದುರಾಳಿ ಇಂಗ್ಲೆಂಡ್‌ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಪಂದ್ಯದಲ್ಲಿ ರನ್ನುಗಳು ಹರಿಯುವ ನಿರೀಕ್ಷೆಯಿಡಬಹುದು.

ಇತ್ತಂಡಗಳೂ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ಪ್ರಯತ್ನದಲ್ಲಿವೆ. ಆತಿಥೇಯರು ಈ ಬಾರಿ ಒಂದೂ ಪಂದ್ಯ ಸೋತಿಲ್ಲ. ಇಂಗ್ಲೆಂಡ್‌ ಒಂದಿಷ್ಟು ಆತಂಕದ ನಂತರ ಸೂಪರ್ ಎಂಟರಲ್ಲಿ ಸ್ಥಾನ ಪಡೆದಿತ್ತು. ಅದಕ್ಕೆ ಆಸ್ಟ್ರೇಲಿಯಾದ ‘ಕೃಪೆ’ಯೂ ಬೇಕಾಯಿತು. ಈಗ ಜೋಸ್‌ ಬಟ್ಲರ್ ಬಳಗ ಹೊಸ ಉತ್ಸಾಹದೊಂದಿಗೆ ಸೂಪರ್ ಎಂಟರಲ್ಲಿ ಕಣಕ್ಕಿಳಿಯಲಿದೆ.

ವೆಸ್ಟ್‌ ಇಂಡೀಸ್‌ ಯಶಸ್ಸಿನ ಓಟದಲ್ಲಿದೆ. ಡಾರೆನ್‌ ಸಾಮಿ ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಅಫ್ಗಾನಿಸ್ತಾನ ವಿರುದ್ಧ ಕೊನೆಯ ಲೀಗ್ ಪಂದ್ಯವನ್ನು 104 ರನ್‌ಗಳ ಭರ್ಜರಿ ಅಂತರದಿಂದ ಜಯಿಸಿತ್ತು. ತಮ್ಮ ಹೆಡ್‌ ಕೋಚ್‌ ಮತ್ತು ಎರಡು ಸಲದ ಟಿ20 ವಿಶ್ವಕಪ್‌ ವಿಜೇತ ನಾಯಕನ ಹೆಸರಿನ ಕ್ರೀಡಾಂಗಣದಲ್ಲಿ ಮತ್ತೆ ಆಡಲಿರುವ ರೋವ್ಮನ್ ಪೊವೆಲ್‌ ಬಳಗ  ಅಂಥದ್ದೇ ಫಲಿತಾಂಶ ನಿರೀಕ್ಷೆಯಲ್ಲಿದೆ.

ವೆಸ್ಟ್ ಇಂಡೀಸ್ ಸಂಘಟಿತ ತಂಡವಾಗಿ ಆಡುತ್ತಿದೆ. ತಂಡ ಸಂಕಷ್ಟದಲ್ಲಿರುವಾಗ ಒಬ್ಬರಾದರೂ ದೊಡ್ಡ ಮೊತ್ತದ ಇನಿಂಗ್ಸ್‌ನೊಡನೆ ನೆರವಿಗೆ ಬರುತ್ತಿದ್ದಾರೆ. ಶರ್ಫೇನ್ ರುದರ್‌ಫೋರ್ಡ್‌, ನಿಕೋಲಸ್‌ ಪೂರನ್ ಇದಕ್ಕೆ ನಿದರ್ಶನ. ಬೌಲರ್‌ಗಳೂ ನಿರಾಶೆ ಮೂಡಿಸಿಲ್ಲ. ಇಲ್ಲಿನ ಸಪಾಟಾದ ಪಿಚ್‌, ಶಾರ್ಟ್ ಬೌಂಡರಿಗಳು ಬ್ಯಾಟರ್‌ ಸ್ನೇಹಿಯಾಗಿದೆ.

ಇಂಗ್ಲೆಂಡ್‌ನ ಬಲಗೈ ಆಟಗಾರರ ಪಡೆಯನ್ನು ಕಟ್ಟಿಹಾಕಲು ವೆಸ್ಟ್‌ ಇಂಡೀಸ್‌, ಎಡಗೈ ಸ್ಪಿನ್‌ ಜೋಡಿಯಾದ ಅಖೀಲ್ ಹುಸೇನ್ ಮತ್ತು ಗುಡಕೇಶ್ ಮೋತಿ ಅವರನ್ನು ನೆಚ್ಚಿಕೊಂಡಿದೆ.‌ ಪಿಚ್‌ನಲ್ಲಿ ಬೌನ್ಸ್ ಕೂಡ ಇರುವುದರಿಂದ ಎಡಗೈ ವೇಗಿ ಒಬೇದ್ ಮೆಕಾಯ್ ಅವರೂ ಪ್ರಮುಖ ಪಾತ್ರ ವಹಿಸಬಲ್ಲರು.

ಇಂಗ್ಲೆಂಡ್‌ನ ಪ್ರಮುಖ ವೇಗದ ಬೌಲರ್‌ಗಳಾದ ಜೋಫ್ರಾ ಅರ್ಚರ್ ಮತ್ತು ಮಾರ್ಕ್ ವುಡ್‌ ಅವರೂ ಇಲ್ಲಿನ ಪರಿಸ್ಥಿತಿಯ ಲಾಭ ಪಡೆಯುವ ಯತ್ನದಲ್ಲಿದ್ದಾರೆ. ಎರಡೂ ತಂಡಗಳು ಸಾಕಷ್ಟು ಸಲ ಮುಖಾಮುಖಿ ಆಗಿರುವ ಕಾರಣ ಪರಸ್ಪರರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಅರಿವಿದ್ದೇ ಇದೆ.

ಜಾಸ್ ಬಟ್ಲರ್‌
ಎಎಫ್‌ಪಿ ಚಿತ್ರ
ಜಾಸ್ ಬಟ್ಲರ್‌ ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT