ಶುಕ್ರವಾರ, ಡಿಸೆಂಬರ್ 3, 2021
20 °C

T20 WC: ಸೆಮಿಫೈನಲ್ ಪ್ರವೇಶಿಸಲು ಕಿವೀಸ್ ವಿರುದ್ಧ ಭಾರತಕ್ಕೆ ಗೆಲುವು ಅನಿವಾರ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲಿನ ಆಘಾತ ಎದುರಿಸಿರುವ ಟೀಮ್ ಇಂಡಿಯಾದ ಸೆಮಿಫೈನಲ್ ಪ್ರವೇಶದ ಹಾದಿಯು ಕಠಿಣವೆನಿಸಿದೆ.

ಈಗ ಅಕ್ಟೋಬರ್ 31, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಅತ್ತ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ಪಾಕಿಸ್ತಾನದ ಸೆಮಿಫೈನಲ್ ಹಾದಿ ಸುಗಮವೆನಿಸಿದೆ.

ಇದನ್ನೂ ಓದಿ: 

ಭಾರತದ ಸೆಮಿಫೈನಲ್ ಹಾದಿ..
ಸೂಪರ್-12 ಹಂತದ ಎರಡನೇ ಗುಂಪಿನಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳಿವೆ. ತಾರತಮ್ಯ ಮಾಡಿದಾಗ ಬಲಿಷ್ಠ ಎನಿಸಿಕೊಂಡಿರುವ ಭಾರತ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ತಂಡಗಳ ವಿರುದ್ಧ ಗೆಲುವು ದಾಖಲಿಸುವುದು ಬಹುತೇಕ ಖಚಿತವೆನಿಸಿದೆ.

ಇದರಿಂದಾಗಿ ಸೆಮಿಫೈನಲ್ ರೇಸ್‌ನಲ್ಲಿ ಭಾರತ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಪೈಕಿ ಪಾಕಿಸ್ತಾನವು ಈಗಾಗಲೇ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಅಂತಿಮ ನಾಲ್ಕರ ಹಂತದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಹಾಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಗೆದ್ದ ತಂಡವು ಸೆಮಿಫೈನಲ್‌ಗೆ ಪ್ರವೇಶಿಸುವ ಸಾಧ್ಯತೆಯು ಹೆಚ್ಚಿದೆ.

ಒಟ್ಟಿನಲ್ಲಿ ಕಿವೀಸ್ ವಿರುದ್ಧದ ಪಂದ್ಯವು ಕ್ವಾರ್ಟರ್‌ಫೈನಲ್ ಮಹತ್ವವನ್ನು ಪಡೆದುಕೊಂಡಿದೆ. ಹಾಗಾಗಿ ಕೇನ್ ವಿಲಿಯಮ್ಸನ್ ಪಡೆಯನ್ನು ಮೆಟ್ಟಿ ನಿಲ್ಲಲು ವಿರಾಟ್ ಕೊಹ್ಲಿ ಬಳಗವು ತನ್ನ ಶ್ರೇಷ್ಠ ಪ್ರದರ್ಶನವನ್ನೇ ನೀಡಬೇಕಿದೆ.

ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ತಂಡಗಳು ಅಫ್ಗಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ಧ ಗೆಲುವು ದಾಖಲಿಸಿದರೆ ಸೆಮಿಫೈನಲ್ ಲೆಕ್ಕಾಚಾರವು ಇಂತಿದೆ:

ಸೆಮಿಫೈನಲ್ ಸನ್ನಿವೇಶ 1:
ಭಾರತವು ನ್ಯೂಜಿಲೆಂಡ್ ತಂಡವನ್ನು ಮಣಿಸಿದರೆ ಒಟ್ಟು ಎಂಟು ಗಳಿಸಿ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಈ ಸನ್ನಿವೇಶದಲ್ಲಿ ಪಾಕಿಸ್ತಾನ ಅಗ್ರ ತಂಡವಾಗಿ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆಯಿಡಲಿದೆ.

ಸೆಮಿಫೈನಲ್ ಸನ್ನಿವೇಶ 2:
ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಅನುಭವಿಸಿದರೆ ಒಟ್ಟು ಆರು ಅಂಕಗಳೊಂದಿಗೆ ಟೂರ್ನಿಯಿಂದಲೇ ನಿರ್ಗಮಿಸಲಿದೆ. ಈ ಸನ್ನಿವೇಶದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ಗೆ ಲಗ್ಗೆಯಿಡಲಿವೆ.

ವಿ.ಸೂ: ಸೂಪರ್-12 ಹಂತದಲ್ಲಿ 'ಎ' ಹಾಗೂ 'ಬಿ' ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು