ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Womens World Cup: ಭಾರತ ವಿಶ್ವಕಪ್‌ನಿಂದ ನಿರ್ಗಮನ; ಮತ್ತೆ ಕಾಡಿದ ನೋ ಬಾಲ್

Last Updated 27 ಮಾರ್ಚ್ 2022, 18:32 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್ : ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್‌ ಸೆಮಿಫೈನಲ್ ಪ್ರವೇಶಿಸುವ ಭಾರತ ತಂಡದ ಕನಸಿಗೆ ಒಂದು ನೋಬಾಲ್ ಕಂಟಕವಾಯಿತು.

ವಿಶ್ವಕಪ್ ಗೆದ್ದು ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ಟೂರ್ನಿಗೂ ಮುನ್ನ ಹೇಳಿದ್ದ ನಾಯಕಿ ಮಿಥಾಲಿ ರಾಜ್ ಅವರಿಗೆ ಮತ್ತೊಮ್ಮೆ ನಿರಾಸೆ ಕಾಡಿತು.

ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಭಾರತ ಸೋತಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಸ್ಮೃತಿ ಮಂದಾನ (71), ಶಫಾಲಿ ವರ್ಮಾ (53) ಮತ್ತು ಮಿಥಾಲಿ (68) ಅವರ ಅರ್ಧಶತಕಗಳ ಬಲದಿಂದ 274 ರನ್‌ಗಳನ್ನು ಗಳಿಸಿತು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವಿಗಾಗಿ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಏಳು ರನ್‌ಗಳ ಅಗತ್ಯವಿತ್ತು. ಆಫ್‌ಸ್ಪಿನ್ನರ್ ದೀಪ್ತಿ ವರ್ಮಾ ಹಾಕಿದ ಈ ಓವರ್‌ನ ಎರಡನೇ ಎಸೆತದಲ್ಲಿ ತ್ರಿಷಾ ಚೆಟ್ಟಿ ರನ್‌ಔಟ್ ಆದರು. ಇನ್ನೊಂದು ಬದಿಯಲ್ಲಿದ್ದ ಮಿಗ್ನಾನ್ ಡುಪ್ರೀಜ್ ದೃತಿಗೆಡದೇ ತಂಡವನ್ನು ಜಯದ ಸಮೀಪ ತಂದರು. ಆದರೂ ಭಾರತದ ಗೆಲುವಿನ ಆಸೆ ಜೀವಂತವಿತ್ತು.

ಆದರೆ, ಐದನೇ ಎಸೆತದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಎಲ್ಲವೂ ತಿರುವುಮುರುವಾಯಿತು. ಈ ಎಸೆತದಲ್ಲಿ ಮಿಗ್ನಾನ್ ಸಿಕ್ಸರ್ ಎತ್ತುವ ಪ್ರಯತ್ನದಲ್ಲಿ ಮಿಡ್‌ವಿಕೆಟ್ ಫೀಲ್ಡರ್‌ಗೆ ಕ್ಯಾಚಿತ್ತರು. ಮಿಥಾಲಿ ಬಳಗದಲ್ಲಿ ಸಂಭ್ರಮ ಕುಡಿಯೊಡಿತು. ಆದರೆ ಕೆಲವೇ ಕ್ಷಣಗಳಲ್ಲಿ ಅಂಪೈರ್ ನೋಬಾಲ್ (ಬೌಲರ್ ಓವರ್‌ ಸ್ಟೆಪ್) ತೀರ್ಪು ನೀಡಿದಾಗ ನಿರಾಶೆ ಕವಿದಿತ್ತು. ದಕ್ಷಿಣ ಆಫ್ರಿಕಾಗೆ ಫ್ರೀ ಹಿಟ್ ಲಭಿಸಿತು.

ಗೆಲುವಿಗೆ ಎರಡು ಎಸೆತಗಳಲ್ಲಿ ಎರಡು ರನ್‌ಗಳ ಅಗತ್ಯವಿತ್ತು.ಬ್ಯಾಟರ್ ಶಬ್ನಿಮ್ ಇಸ್ಮಾಯಿಲ್ ಒಂದು ರನ್ ಹೊಡೆದು ವಿಜಯದ ರನ್ ಗಳಿಸುವ ಅವಕಾಶವನ್ನು ಮಿಗ್ನಾನ್ ಬಿಡಲಿಲ್ಲ.

ಆರಂಭಿಕ ಬ್ಯಾಟರ್ಲಾರಾ ವಾಲ್ವವರ್ಡಿತ್ (80) ಮತ್ತು ಲಾರಾ ಗುಡಾಲ್ (49 ರನ್) ಅವರ ಆಟವನ್ನು ವ್ಯರ್ಥವಾಗಲೂ ಮಿಗ್ನಾನ್ (ಔಟಾಗದೆ 52) ಬಿಡಲಿಲ್ಲ. ತಂಡವು ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 275 ರನ್ ಗಳಿಸಿತು. ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿತು.

ಲೀಗ್ ಹಂತದಲ್ಲಿ ಅಸ್ಥಿರ ಪ್ರದರ್ಶನಕ್ಕೆ ಭಾರತ ಬೆಲೆ ತೆತ್ತಿತು. ಏಳು ಪಂದ್ಯಗಳಲ್ಲಿ ಮೂರರಲ್ಲಿ ಮಾತ್ರ ಜಯಿಸಿತ್ತು. ನಾಲ್ಕರಲ್ಲಿ ಸೋತು ಐದನೇ ಸ್ಥಾನ ಪಡೆಯಿತು.

ಚರ್ಚೆ ಹುಟ್ಟುಹಾಕಿದ ನೋಬಾಲ್

ಈ ಹಿಂದೆಯೂ ಬೌಲರ್‌ಗಳು ನೋಬಾಲ್ ಹಾಕಿದ್ದರಿಂದ ಭಾರತ ತಂಡಕ್ಕೆ ಐಸಿಸಿ ಟ್ರೋಫಿಯ ಟೂರ್ನಿಗಳಲ್ಲಿ ಪ್ರಶಸ್ತಿ ಕನಸು ಭಗ್ನವಾಗಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

‘ಒಂದು ನೋಬಾಲ್‌ನಿಂದ ಟ್ರೋಫಿ ಗೆಲುವಿನತ್ತ ಮತ್ತೊಂದು ಹೆಜ್ಜೆ ಇಡುವ ಅವಕಾಶ ತಪ್ಪಿತು. ತಪ್ಪು ಸಣ್ಣದೇ ಆಗಿರಬಹುದು. ಆದರೆ ತೆರಬೇಕಾದ ಬೆಲೆ ದೊಡ್ಡದು. ಇಂತಹ ಅವಕಾಶಕ್ಕಾಗಿ ತಂಡವು ಮತ್ತೆಷ್ಟು ವರ್ಷಗಳನ್ನು ಕಾಯಬೇಕೋ ಗೊತ್ತಿಲ್ಲ. ಇನ್ನು ಕೆಲವು ಆಟಗಾರ್ತಿಯರಿಗೆ ಇದು ಜೀವಮಾನದ ಕೊನೆಯ ಅವಕಾಶವೂ ಆಗಿರಬಹುದು. ದುರದೃಷ್ಟದ ಕ್ಷಣ’ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ 2016ರಲ್ಲಿ ಟಿ20 ವಿಶ್ವಕಪ್ ಮತ್ತು 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ನೋಬಾಲ್‌ನಿಂದಾಗಿಯೇ ಭಾರತದ ಕನಸು ಕಮರಿದ್ದನ್ನೂ ಕೆಲವರು ಟ್ವೀಟ್ ಮಾಡಿದ್ದಾರೆ.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 274 (ಸ್ಮೃತಿ ಮಂದಾನ 71, ಶಫಾಲಿ ವರ್ಮಾ 53, ಮಿಥಾಲಿ ರಾಜ್ 68, ಹರ್ಮನ್‌ಪ್ರೀತ್ ಕೌರ್‌ 48; ಶಬ್ನಿಮ್ ಇಸ್ಮಾಯಿಲ್‌ 42ಕ್ಕೆ 2, ಆಯಬೊಂಗ ಖಾಕ 58ಕ್ಕೆ 1, ಕ್ಲೊ ಟ್ರಯೊನ್‌ 51ಕ್ಕೆ 1, ಮಸಬಾಟ ಕ್ಲಾಸ್‌ 38ಕ್ಕೆ 2). ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 7ಕ್ಕೆ 275 (ಲೌರಾ ವೊಲ್ವಾರ್ಟ್‌ 80, ಲಾರಾ ಗೂಡಾಲ್‌ 49, ಮಿಗ್ನಾನ್ ಡುಪ್ರೀಜ್‌ 52, ಮರಿಜಾನ್ ಕಾಪ್‌ 32; ರಾಜೇಶ್ವರಿ ಗಾಯಕವಾಡ್‌ 61ಕ್ಕೆ 2, ಹರ್ಮನ್‌ಪ್ರೀತ್ ಕೌರ್‌ 42ಕ್ಕೆ 2). ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ ಮೂರು ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT