ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಾಜ್ ಕಣ್ಣೀರು, ಕುಸಿದು ಕುಳಿತ ರಾಹುಲ್, ವಿಷಕಂಠನಾದ ರೋಹಿತ್‌: ಸೋಲು ಸುಲಭವಲ್ಲ

Published 20 ನವೆಂಬರ್ 2023, 4:38 IST
Last Updated 20 ನವೆಂಬರ್ 2023, 4:38 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವಕ‍ಪ್‌ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಎಲ್ಲಾ ಪಂದ್ಯಗಳನ್ನು ಗೆದಿದ್ದ ಭಾರತ, ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಶರಣಾಗಿ ನಿರಾಸೆ ಮೂಡಿಸಿತು. ಮೈದಾನದಲ್ಲಿ ಸೇರಿದ್ದ ಒಂದು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಹಾಗೂ ಟಿ.ವಿ ಪರದೆ ಮುಂದೆ ಕುಳಿತಿದ್ದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ಭಾರತದ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಫೈನಲ್‌ ಗೆಲ್ಲುವ ಫೇವರಿಟ್‌ ತಂಡವಾಗಿದ್ದ ಭಾರತ ತಂಡದ ಮೇಲೆ ಅತಿಯಾದ ನಿರೀಕ್ಷೆಯ ಭಾರ ಇತ್ತು. ಹತ್ತು ವರ್ಷಗಳ ಬಳಿಕ ಭಾರತದ ಮುಡಿಗೆ ಐಸಿಸಿ ಟ್ರೋಫಿಯೊಂದು ಏರಲಿದೆ ಎನ್ನುವ ಆಸೆ ಕಮರಿ ಹೋಯಿತು. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್‌ ವಿಜಯದ ರನ್‌ ಬಾರಿಸುತ್ತಿದ್ದಂತೆಯೇ ಇಡೀ ಮೈದಾನ ಮೌನಕ್ಕೆ ಶರಣಾಯಿತು. ಕೋಟ್ಯಂತರ ಭಾರತೀಯರ ಆಸೆ ನುಚ್ಚುನೂರಾಯಿತು. ಆರನೇ ಬಾರಿಗೆ ವಿಶ್ವಕಪ್ ಟ್ರೋ‍ಫಿ ಜಯಿಸಿದ ಆಸ್ಟ್ರೇಲಿಯಾ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು.

ಸೋಲಿನ ಬಳಿಕ ಭಾರತೀಯ ಆಟಗಾರರು ಭಾರವಾದ ಹೆಜ್ಜೆಗಳನ್ನು ಇಡುತ್ತಾ ಪೆವಿಲಿಯನ್‌ನತ್ತ ಸಾಗುತ್ತಿದ್ದರೆ, ಭಾರತದ ಕ್ರಿಕೆಟ್‌ ಪ್ರೇಮಿಗಳ ಕಣ್ಣ ಬಟ್ಟಲುಗಳಲ್ಲಿ ನೀರು ತುಂಬಿತ್ತು. ಮೊಹಮ್ಮದ್‌ ಸಿರಾಜ್ ಅವರಂತೂ ನೋವು ತಡೆಯಲಾಗದೆ ಅತ್ತೇ ಬಿಟ್ಟರು. ಅವರ ಗಲ್ಲದ ಮೇಲೆ ಕಣ್ಣೀರು ಜಾರುತ್ತಿದ್ದ ದೃಶ್ಯಗಳು ಭಾರತೀಯ ಅಭಿಮಾನಿಗಳ ಹೃದಯ ತಟ್ಟಿತು. ಕುಸಿದು ಮೊಣಕಾಲಿನಲ್ಲಿ ಕುಳಿತ ಕೆ.ಎಲ್‌ ರಾಹುಲ್ ಅವರ ಚಿತ್ರವಂತೂ ಮನಕಲುವಂತಿತ್ತು.

ಒತ್ತರಿಸಿದ ಬಂದ ದುಃಖವನ್ನು ತಡೆದುಕೊಂಡಿದ್ದ ನಾಯಕ ರೋಹಿತ್‌ ಶರ್ಮಾ ವಿಷಕಂಠನಂತೆ ಕಂಡರು. ಕ್ಯಾಪ್‌ ಮೂಲಕ ನೋವಿನ ಮುಖ ಮುಚ್ಚಿಕೊಂಡಿದ್ದ ವಿರಾಟ್‌ ಅವರ ದುಃಖಕ್ಕೆ ಅಭಿಮಾನಿಗಳೂ ಮರುಗಿದರು. ಆಟಗಾರರ ನಿರಾಸೆಯ ಕಣ್ಣುಗಳ ಕಂಡು ಕ್ರಿಕೆಟ್ ಲೋಕ ಕಣ್ಣೀರಿಟ್ಟಿದ್ದು ಸುಳ್ಳಲ್ಲ.

ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ‘ಹೌದು, ಡ್ರೆಸ್ಸಿಂಗ್‌ ರೂಮ್‌ನಲ್ಲಿ ಎಲ್ಲಾ ಆಟಗರರಂತೆ ರೋಹಿತ್ ಶರ್ಮಾ ಕೂಡ ನಿರಾಶರಾಗಿದ್ದರು. ಡ್ರೆಸಿಂಗ್ ರೂಮ್‌ ವಿವಿಧ ಭಾವಗಳಿಂದ ತುಂಬಿತ್ತು. ಕೋಚ್‌ ಆಗಿ ಅವೆಲ್ಲವನ್ನು ನೋಡವುದು ನನಗೆ ಭಾರಿ ಕಷ್ಟವಾಗಿತ್ತು. ಅವರ ಕಠಿಣ ಪ್ರರಿಶ್ರಮ ನನಗೆ ಗೊತ್ತಿತ್ತು. ಅವರ ಆಟವನ್ನು ನಾನು ನೋಡಿದ್ದೆ. ಇದು ಸಹಜ. ಉತ್ತಮ ತಂಡ ಗೆದ್ದಿದೆ. ನಾಳೆ ಹೊಸ ಸೂರ್ಯೋದಯವಾಗಲಿದೆ. ತಪ್ಪಿನಿಂದ ಕಲಿಯುತ್ತೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT