ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS | ರೋ'ಹಿಟ್'–ವಿರಾಟ್‌ ಸೂಪರ್ ಹಿಟ್!

ಕ್ರಿಕೆಟ್: ಸ್ಟೀವ್ ಸ್ಮಿತ್ ಶತಕ ವ್ಯರ್ಥ; ಕೊಹ್ಲಿ ಬಳಗದ ಮುಡಿಗೆ ಸರಣಿ ಕಿರೀಟ
Last Updated 19 ಜನವರಿ 2020, 22:26 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಒಂದಲ್ಲ, ಎರಡು ಶತಕಗಳು ದಾಖಲಾದವು. ಎರಡೂ ಒಂದಕ್ಕಿಂತ ಒಂದು ಸುಂದರವಾಗಿದ್ದವು. ಆದರೆ, ಅದರಲ್ಲಿ ಭಾರತದ ರೋಹಿತ್ ಶರ್ಮಾ ಗಳಿಸಿದ ಶತಕಕ್ಕೆ ಗೆಲುವು ಒಲಿಯಿತು. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಶತಕ ಮಂಕಾಯಿತು.

ಇಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಸರಣಿಯ ಮೂರನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಗೆದ್ದ ಭಾರತ ತಂಡವು 2–1ರಿಂದ ಸರಣಿಯನ್ನೂ ತನ್ನದಾಗಿಸಿಕೊಂಡಿತು. ಭಾರತಕ್ಕೆ ಸ್ವದೇಶದಲ್ಲಿ ಇದು 200 ಏಕದಿನ ಪಂದ್ಯದ ಗೆಲುವು.

ಈ ಸರಣಿಯ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತವು ನಂತರ ರಾಜ್‌ ಕೋಟ್ ಮತ್ತು ಇಲ್ಲಿ ಅರ್ಹ ಜಯ ಗಳಿಸಿತು. ಹೋದ ವರ್ಷ ಸರಣಿಯಲ್ಲಿ ತನ್ನನ್ನು ಸೋಲಿಸಿದ್ದ ಆಸ್ಟ್ರೇಲಿಯಾ ಬಳಗದ ವಿರುದ್ಧ ಕೊಹ್ಲಿ ಪಡೆ ಮುಯ್ಯಿ ತೀರಿಸಿಕೊಂಡಿತು.

ಮಧ್ಯಾಹ್ನದ ಚುರುಕುಬಿಸಿ ಲಿನಲ್ಲಿ ಟಾಸ್ ಗೆದ್ದ ಪ್ರವಾಸಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಬೌಲರ್‌ಗಳ ದಾಳಿಯ ಮುಂದೆ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 9ಕ್ಕೆ286 ರನ್ ಗಳಿಸಿತು. ಈ ಹಂತದಲ್ಲಿ ಐದನೇ ಓವರ್‌ನಲ್ಲಿಯೇ ಗಾಯಗೊಂಡು ವಿಶ್ರಾಂತಿಗೆ ತೆರಳಿದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇಲ್ಲದೇ ಕಣಕ್ಕಿಳಿದ ಭಾರತಕ್ಕೆ ರೋಹಿತ್ ಶರ್ಮಾ (119; 128ಎಸೆತ, 8ಬೌಂಡರಿ, 6ಸಿಕ್ಸರ್) ಮತ್ತು ನಾಯಕ ವಿರಾಟ್ ಕೊಹ್ಲಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 137 ರನ್‌ಗಳನ್ನು ಸೇರಿಸಿದರು.

ಏಳು ವರ್ಷಗಳ ಹಿಂದೆ ಇದೇ ಅಂಗಳದಲ್ಲಿ ತಾವು ಬಾರಿಸಿದ್ದ ದ್ವಿಶತ ಕವನ್ನು ನೆನಪಿಗೆ ತರುವಂತೆ ಆಡಿದ ರೋಹಿತ್ ‘ಸಿಕ್ಸರ್‌ಗಳ ಸಿಕ್ಸರ್’ ಸಾಧನೆ ಮಾಡಿದರು. 56 ಎಸೆತಗಳಲ್ಲಿ ಅರ್ಧಶತಕ ಹೊಡೆದ ಅವರು, ಒಟ್ಟು 110 ಎಸೆತಗಳಲ್ಲಿ ತಮ್ಮ 29ನೇ ಶತಕ (ಏಕದಿನ ಕ್ರಿಕೆಟ್) ದಾಖಲಿಸಿದರು. ಆಸ್ಟ್ರೇಲಿಯಾ ವಿರುದ್ಧ ಇದು ಅವರ ಎಂಟನೇಯದ್ದು.

ಇನ್ನೊಂದೆಡೆ ವಿರಾಟ್ ಕೂಡ ಅಬ್ಬ ರಿಸಿದರು. 61 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 37ನೇ ಓವರ್‌ನಲ್ಲಿ ರೋಹಿತ್ ಔಟ್ ಆದ ಮೇಲೆ ಕೊಹ್ಲಿ ಮತ್ತಷ್ಟು ಬೀಸಾಟವಾಡಿದರು. ಅವರಿಗೆ ಶ್ರೇಯಸ್ ಅಯ್ಯರ್ (ಔಟಾಗದೆ 44; 35ಎ, 6ಬೌಂ, 1ಸಿ) ತಕ್ಕ ಜೊತೆ ನೀಡಿದರು.

ಗೆಲುವಿಗೆ 13 ರನ್‌ಗಳ ಅಗತ್ಯವಿದ್ದಾಗ ಕೊಹ್ಲಿಯನ್ನು ಜೋಶ್ ಹ್ಯಾಜಲ್‌ವುಡ್ ಬೌಲ್ಡ್‌ ಮಾಡಿದರು. ಕ್ರೀಸ್‌ಗೆ ಬಂದ ಸ್ಥಳೀಯ ಹೀರೊ ಮನೀಷ್ ಪಾಂಡೆ ‘ಫಿನಿಷರ್’ ಆದರು. ಜೋಶ್ ಹಾಕಿದ 46ನೇ ಓವರ್‌ನ ಐದನೇ ಎಸೆತವನ್ನು ಅಂಪೈರ್ ತಲೆ ಮೇಲಿಂದ ಬೌಂಡರಿಗೆ ಕಳಿಸಿದ ಮನೀಷ್ ಜಯದ ಗಡಿ ಮುಟ್ಟಿಸಿದರು.

ಸ್ಮಿತ್ ಶತಕದ ಸೊಬಗು: ಸರಣಿಯ ಎರಡನೇ ಪಂದ್ಯದಲ್ಲಿ ಎರಡು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡಿದ್ದ ಸ್ಟೀವ್ ಸ್ಮಿತ್ (131; 132ಎ, 14ಬೌಂ, 1ಸಿ) ಇಲ್ಲಿ ಸಫಲರಾದರು. ತಮ್ಮ ವಿಚಿತ್ರ ಬ್ಯಾಟಿಂಗ್ ಸ್ಟಾನ್ಸ್‌ ಮೂಲಕ ಬೌಲರ್‌ಗಳಿಗೆ ಗೊಂದಲ ಮೂಡಿಸಿ ರನ್‌ ಪೇರಿಸುವಲ್ಲಿ ಸಫಲರಾದರು. ಅವರು ನಾಲ್ಕನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದಾಗ ಡೇವಿಡ್ ವಾರ್ನರ್ ಪೆವಿಲಿಯನ್ ಸೇರಿಯಾಗಿತ್ತು. ಶಮಿ ಎಸೆತ ಆಡುವ ಪ್ರಯತ್ನದಲ್ಲಿ ವಿಕೆಟ್‌ಕೀಪರ್ ಕೆ.ಎಲ್. ರಾಹುಲ್‌ಗೆ ಕ್ಯಾಚ್ ಆದರು.

ನಾಯಕ ಫಿಂಚ್ ಜೊತೆಗೆ ಸ್ಮಿತ್ ಜೊತೆಯಾಟ ಕುದುರಿಸುವ ಹಾದಿಯಲ್ಲಿದ್ದರು. ಒಂಬತ್ತನೇ ಓವರ್‌ನಲ್ಲಿ ಇಬ್ಬರ ಎಡವಟ್ಟಿನಿಂದ ಫಿಂಚ್ ರನ್‌ಔಟ್ ಆದರು. ಪೆವಿಲಿಯನ್‌ಗೆ ಮರಳುವ ಹಾದಿಯಲ್ಲಿ ಫಿಂಚ್ ಅವರು ಸ್ಮಿತ್‌ಗೆ ಬೈಗುಳಗಳ ಸುರಿಮಳೆ ಸುರಿಸುತ್ತ ನಡೆದರು. ಆ ಕೋಪವನ್ನು ಸ್ಮಿತ್ ಭಾರತದ ಬೌಲರ್‌ಗಳ ಮೇಲೆ ತೀರಿಸಿಕೊಂಡರು!

ಮಾರ್ನಸ್ ಲಾಬುಶೇನ್ (54; 64ಎ, 5ಬೌಂಡರಿ) ಅವರೊಂದಿಗೆ ಸ್ಮಿತ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 127 ರನ್‌ ಸೇರಿಸಿದರು. ಈ ಜೊತೆ ಯಾಟವನ್ನು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮುರಿದರು. ಅವರು ಲಾಬುಶೇನ್ ವಿಕೆಟ್ ಪಡೆಯಲು ಕೊಹ್ಲಿ ಪಡೆದ ಅದ್ಭುತ ಕ್ಯಾಚ್ ನೆರವಾಗಿತ್ತು. ಅದೇ ಓವರ್‌ನಲ್ಲಿ ಮಿಚೆಲ್ ಸ್ಟಾರ್ಕ್‌ಗೂ ಜಡೇಜ ಪೆವಿಲಿಯನ್ ದಾರಿ ತೋರಿಸಿದರು. ಸ್ವಲ್ಪ ಹೋರಾಟ ಮಾಡಿದ ಅಲೆಕ್ಸ್‌ ಕ್ಯಾರಿ (34) ತಂಡದ ಸ್ಕೋರ್ ಹೆಚ್ಚಲು ಕಾರಣರಾದರು. 117 ಎಸೆತಗಳಲ್ಲಿ ಶತಕ ಬಾರಿಸಿದ ಸ್ಮಿತ್ 4000 ರನ್ ಸಾಧನೆ ಮಾಡಿದರು.

* ಮೂರು ವರ್ಷಗಳ ನಂತರ ಶತಕ ಸಿಡಿಸಿದ ಸ್ಮಿತ್

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಬರೋಬ್ಬರಿ ಮೂರು ವರ್ಷಗಳ ನಂತರ ಶತಕ ಬಾರಿಸಿದರು.

* ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ ಒಂಬತ್ತನೇ ಶತಕವಾಗಿದೆ.

2017ರ ಜನವರಿ 19ರಂದು ಅವರು ಪರ್ಥ್‌ನಲ್ಲಿ ಪಾಕಿಸ್ತಾನದ ವಿರುದ್ಧ ಶತಕ ಗಳಿಸಿದ್ದರು. ಅದರ ನಂತರ ಅವರು ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದರು.

ಅವರು ಶಿಕ್ಷೆ ಮುಗಿಸಿ ಮರಳಿದ ನಂತರ ಹೊಡೆದ ಮೊದಲ ಶತಕ ಇದಾಗಿದೆ. ಮೂರು ದಿನಗಳ ಹಿಂದೆ ರಾಜ್‌ಕೋಟ್‌ನಲ್ಲಿ ಅವರು 98 ರನ್‌ ಗಳಿಸಿ ಔಟಾಗಿದ್ದರು.

*ಪಂದ್ಯ ವೀಕ್ಷಿಸಿದ ಗಂಗೂಲಿ ಪಡೆ!

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದರು.

ಇದೇ 24ರಿಂದ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಆಯ್ಕೆಯು ನಡೆಯಲಿದೆ ಎಂಬ ಮಾತುಗಳು ಇಡೀ ದಿನ ಓಡಾಡಿದವು. ಆದರೆ, ಈ ಕುರಿತು ಯಾವುದೇ ಸಭೆಯೂ ನಡೆಯಲಿಲ್ಲವೆಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

* ಶಿಖರ್ ಧವನ್ ಗೆ ಗಾಯ

ಆಸ್ಟ್ರೇಲಿಯಾ ಇನಿಂಗ್ಸ್‌ನ ಐದನೇ ಓವರ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶಿಖರ್ ಧವನ್ ಗಾಯಗೊಂಡರು. ಇದರಿಂದಾಗಿ ಅವರು ಫೀಲ್ಡಿಂಗ್ ಮಾಡಲು ಬರಲಿಲ್ಲ. ಭಾರತಕ್ಕೆ ಇನಿಂಗ್ಸ್ ಆರಂಭಿಸಲಿಲ್ಲ.

ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಹೊಡೆದ ಚೆಂಡನ್ನು ಕವರ್ಸ್‌ನಲ್ಲಿದ್ದ ಶಿಖರ್ ಡೈವ್ ಮಾಡಿ ತಡೆದರು. ಆಗ ಅವರ ಎಡಭುಜಕ್ಕೆ ಪೆಟ್ಟಾಯಿತು. ಮೈದಾನಕ್ಕೆ ಧಾವಿಸಿದ ಫಿಸಿಯೊ ಪ್ರಥಮ ಚಿಕಿತ್ಸೆ ನೀಡಿದರು. ಆದರೂ ಶಿಖರ್ ಅವರು ನೋವು ಅನುಭವಿಸಿದ್ದರಿಂದ ಅವರನ್ನು ಪೆವಿಲಿಯನ್‌ಗೆ ಕರೆದೊಯ್ಯಲಾಯಿತು. ಅವರ ಬದಲಿಗೆ ಯಜುವೇಂದ್ರ ಫೀಲ್ಡಿಂಗ್ ಮಾಡಿದರು.

‘ಶಿಖರ್ ಅವರನ್ನು ಎಕ್ಸ್‌ ರೇ ತಪಾಸಣೆಗೆ ಕಳಿಸಲಾಗಿದೆ. ವರದಿ ಬಂದ ನಂತರ ಅವರ ಗಾಯದ ಗಂಭೀರತೆ ಕುರಿತು ತಿಳಿಯಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

* ರಾಜ್‌ಕೋಟ್ ಪಂದ್ಯದಲ್ಲಿ ಅವರು ಪ್ಯಾಟ್ ಕಮಿನ್ಸ್‌ ಎಸೆತದಲ್ಲಿ ಪಕ್ಕೆಲುಬಿಗೆ ಪೆಟ್ಟು ತಿಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT