ಮಂಗಳವಾರ, ಮೇ 11, 2021
27 °C
ಕ್ರಿಕೆಟ್

ಕಾಂಗರೂ ನಾಡಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕ ವಿರಾಟ್: ಭಾರತದ ಸಾಧನೆಗೆ 1ವರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಂದು ಜನವರಿ 07, 2019. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಕ್ರಿಕೆಟ್‌ ತಂಡವು ಮೊಟ್ಟ ಮೊದಲ ಬಾರಿಗೆ ಟೆಸ್ಟ್‌ ಸರಣಿಯನ್ನು ಜಯಿಸಿ ದಾಖಲೆ ನಿರ್ಮಿಸಿತ್ತು. ಆ ಮೂಲಕ ಆಸಿಸ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದ ಮೊದಲ ನಾಯಕ ಎಂಬ ಶ್ರೇಯ ವಿರಾಟ್‌ ಕೊಹ್ಲಿ ಅವದ್ದಾಯಿತು. ಆ ಸಾಧನೆಗೆ ಇದೀಗ ಒಂದು ವರ್ಷ ತುಂಬಿದೆ.

ಟೀಂ ಇಂಡಿಯಾ ಸಾಧನೆಯನ್ನು ನೆನಪಿಸಿಕೊಂಡಿರುವ ಐಸಿಸಿ, ‘ಕಳೆದ ವರ್ಷದ ಈ ದಿನ ಭಾರತ ಇತಿಹಾಸ ನಿರ್ಮಿಸಿತ್ತು. ವಿರಾಟ್ ಕೊಹ್ಲಿ ಪಡೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಸರಣಿ ಗೆದ್ದ ಮೊದಲ ಭಾರತ ತಂಡವೆನಿಸಿತು. ಸರಣಿಯನ್ನು 2–1ರಿಂದ ಗೆದ್ದುಕೊಂಡಿತ್ತು’ ಎಂದು ಟ್ವೀಟ್‌ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಯ ಕೊನೆಯ ಪಂದ್ಯವು ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆದಿತ್ತು. ಮೊದಲ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿ ಒಂದು ಪಂದ್ಯ ಸೋತಿದ್ದ ಭಾರತ, ನಾಲ್ಕನೇ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಆ ಮೂಲಕ ಸರಣಿಯನ್ನು 2–1ರ ಗೆದ್ದು ಬೀಗಿತ್ತು.

ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ 31 ರನ್‌ಗಳಿಂದ ಜಯಿಸಿತ್ತು. ಆದರೆ, ಪರ್ತ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು 146 ರನ್‌ ಅಂತರದಿಂದ ಗೆದ್ದುಕೊಂಡ ಆಸ್ಟ್ರೇಲಿಯಾ ಕೊಹ್ಲಿ ಪಡೆಗೆ ತಿರುಗೇಟು ನೀಡಿತ್ತು. ಆ ಮೂಲಕ ಸರಣಿಯನ್ನು 1–1ರಿಂದ ಸಮಬಲ ಮಾಡಿಕೊಂಡಿತ್ತು. ಮೆಲ್ಬೋರ್ನ್‌ನಲ್ಲಿ ನಡೆದ ಮೂರನೇ ಪಂದ್ಯವು ಭಾರತದ ವಶವಾಗಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಬಳಗ 137ರನ್‌ ಅಂತರದ ಜಯ ಸಾಧಿಸಿತ್ತು.

ಹೀಗಾಗಿ ಕೊನೆಯ ಪಂದ್ಯವು ಮಹತ್ವ ಪಡೆದುಕೊಂಡಿತ್ತು. ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಪಡೆ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ನಷ್ಟಕ್ಕೆ 622 ರನ್ ಗಳಿಸಿತ್ತು. ಟೆಸ್ಟ್ ಪರಿಣತ ಚೇತೇಶ್ವರ ಪೂಜಾರ 193 ರನ್ ಗಳಿಸಿ ಮಿಂಚಿದ್ದರು.

ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಆಸಿಸ್‌ ತಂಡ 300 ರನ್‌ ಗಳಿಗೆ ಸರ್ವ ಪತನ ಕಂಡಿತ್ತು. ಬರೋಬ್ಬರಿ 322 ನರ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಶುರು ಮಾಡಿದ ಪೇನ್‌ ಬಳಗ ವಿಕೆಟ್‌ ನಷ್ಟವಿಲ್ಲದೆ, 6 ರನ್‌ ಗಳಿಸಿತ್ತು. ಈ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಡ್ರಾ ಮಾಡಿಕೊಳ್ಳಲಾಯಿತು. ಸರಣಿಯಲ್ಲಿ 521‬ ರನ್ ಗಳಿಸಿದ್ದ ಚೇತೇಶ್ವರ ಪೂಜಾರ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಡೇವಿಡ್‌ ವಾರ್ನರ್‌ ಹಾಗೂ ಸ್ಟೀವ್‌ ಸ್ಮಿತ್‌ ಅನುಪಸ್ಥಿತಿ ಟಿಮ್‌ ಪೈನೆ ನೇತೃತ್ವದ ಆಸ್ಟ್ರೇಲಿಯಾಗೆ ದುಬಾರಿಯಾಗಿತ್ತು.

ಇದೇ ತಿಂಗಳು 14 ರಿಂದ 19ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಮಾತ್ರವಲ್ಲದೆ ಈ ವರ್ಷಾಂತ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಉಭಯ ತಂಡಗಳು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು