ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG Test: ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಹಲವು ದಾಖಲೆ ಬರೆದ ರೋಹಿತ್

Published 8 ಮಾರ್ಚ್ 2024, 9:58 IST
Last Updated 8 ಮಾರ್ಚ್ 2024, 9:58 IST
ಅಕ್ಷರ ಗಾತ್ರ

ಧರ್ಮಶಾಲಾ: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು, ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದರು. ಆ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಾವು ಗಳಿಸಿದ ಶತಕಗಳ ಸಂಖ್ಯೆಯನ್ನು 48ಕ್ಕೆ ಏರಿಸಿಕೊಂಡರು.

ಆಂಗ್ಲರ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೂರನೇ ಪಂದ್ಯದಲ್ಲೂ ಮೂರಂಕಿ ದಾಟಿದ್ದ ರೋಹಿತ್‌, ಟೆಸ್ಟ್ ಮಾದರಿಯಲ್ಲಿ ಒಟ್ಟು 12, ಏಕದಿನ ಮಾದರಿಯಲ್ಲಿ 31 ಹಾಗೂ ಟಿ20ಯಲ್ಲಿ 5 ಬಾರಿ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ, ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಭಾರತದವರೇ ಆದ ರಾಹುಲ್‌ ದ್ರಾವಿಡ್‌ ಅವರೊಂದಿಗೆ ಜಂಟಿ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆನ್‌ ಸ್ಟೋಕ್ಸ್‌ ಬಳಗದ ಬೌಲರ್‌ಗಳೆದುರು ನಿರಾಯಾಸವಾಗಿ ಬ್ಯಾಟ್‌ ಬೀಸಿದ 'ಹಿಟ್‌ಮ್ಯಾನ್‌' ಖ್ಯಾತಿಯ ರೋಹಿತ್‌, 162 ಎಸೆತಗಳಲ್ಲಿ 103 ರನ್‌ ಗಳಿಸಿದ್ದ ವೇಳೆ ಔಟಾದರು. ಅವರ ಚೆಂದದ ಇನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು.

ವಾರ್ನರ್, ಸಚಿನ್‌ ದಾಖಲೆ ಸನಿಹ ರೋಹಿತ್‌
ರೋಹಿತ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 48 ಶತಕ ಸಿಡಿಸಿದ್ದಾರಾದರೂ, ಆರಂಭಿಕರಾಗಿ ಇದು ಅವರಿಗೆ 43ನೇ ಶತಕ. ಇದರೊಂದಿಗೆ ಅವರು ಅಗ್ರ ಕ್ರಮಾಂಕದ ಬ್ಯಾಟರ್‌ ಆಗಿ 42 ಸಲ ಈ ಸಾಧನೆ ಮಾಡಿದ್ದ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ದಾಖಲೆಯನ್ನು ಮುರಿದರು.

ಆರಂಭಿಕ ಬ್ಯಾಟರ್‌ ಆಗಿ 49 ಶತಕ ಗಳಿಸಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್‌ ಹಾಗೂ 45 ಶತಕ ಗಳಿಸಿರುವ ಭಾರತದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಮಾತ್ರವೇ, 'ಹಿಟ್‌ಮ್ಯಾನ್‌'ಗಿಂತ ಮುಂದಿದ್ದಾರೆ.

2021ರಿಂದ ಈಚೆಗೆ ಹೆಚ್ಚು ಶತಕ
ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ 2021ರಿಂದ ಈಚೆಗೆ ಹೆಚ್ಚು ಸಲ ಇನಿಂಗ್ಸ್‌ವೊಂದರಲ್ಲಿ ನೂರು ರನ್ ಗಳಿಸಿದ ಬ್ಯಾಟರ್‌ ಎಂಬ ಖ್ಯಾತಿಯೂ ರೋಹಿತ್‌ ಅವರದ್ದಾಗಿದೆ. ಅವರು ಕಳೆದ ಮೂರು ವರ್ಷಗಳಲ್ಲಿ 6 ಶತಕ ಸಿಡಿಸಿದ್ದಾರೆ. 4 ಶತಕ ಗಳಿಸಿರುವ ಶುಭಮನ್‌ ಗಿಲ್‌, ನಂತರದ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್‌ ಮತ್ತು ಕೆ.ಎಲ್.ರಾಹುಲ್‌ ತಲಾ ಮೂರು ಶತಕ ಗಳಿಸಿದ್ದಾರೆ.

ಗವಾಸ್ಕರ್‌ ದಾಖಲೆ ಸರಿಗಟ್ಟಿದ ಹಿಟ್‌ಮ್ಯಾನ್‌
ಭಾರತ ತಂಡದ ಆರಂಭಿಕನಾಗಿ ಇಂಗ್ಲೆಂಡ್‌ ವಿರುದ್ಧ ಹೆಚ್ಚು ಶತಕ ಸಿಡಿಸಿದ ದಾಖಲೆ ಇದುವರೆಗೆ ಬ್ಯಾಟಿಂಗ್‌ ಮಾಂತ್ರಿಕ ಸುನೀಲ್‌ ಗವಾಸ್ಕರ್‌ ಅವರ ಹೆಸರಲ್ಲಿತ್ತು. ಅವರು ನಾಲ್ಕು ಸಲ ಮೂರಂಕಿ ದಾಟಿದ್ದರು. ಇದೀಗ ರೋಹಿತ್‌ ಸಹ, ಅಷ್ಟೇ ಸಲ ಈ ಸಾಧನೆ ಮಾಡಿದ್ದು, ದಿಗ್ಗಜನ ದಾಖಲೆಯನ್ನು ಸರಿಗಟ್ಟಿದ್ದಾರೆ.

ಆಂಗ್ಲರ ವಿರುದ್ಧ ತಲಾ ಮೂರು ಶತಕ ಗಳಿಸಿರುವ ವಿಜಯ್‌ ಮರ್ಚೆಂಟ್‌, ಮುರಳಿ ವಿಜಯ್‌ ಹಾಗೂ ಕೆ.ಎಲ್‌. ರಾಹುಲ್‌ ನಂತರದ ಸ್ಥಾನದಲ್ಲಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರು
01. ಸಚಿನ್ ತೆಂಡೂಲ್ಕರ್ – ಭಾರತ: 100 ಶತಕ
02. ವಿರಾಟ್ ಕೊಹ್ಲಿ – ಭಾರತ: 80 ಶತಕ
03. ರಿಕಿ ಪಾಂಟಿಂಗ್‌ – ಆಸ್ಟ್ರೇಲಿಯಾ: 71 ಶತಕ
04. ಕುಮಾರ ಸಂಗಕ್ಕಾರ – ಶ್ರೀಲಂಕಾ: 63 ಶತಕ
05. ಜಾಕ್‌ ಕಾಲಿಸ್‌ – ದಕ್ಷಿಣ ಆಫ್ರಿಕಾ: 62 ಶತಕ
06. ಹಾಶೀಮ್‌ ಆಮ್ಲಾ – ದಕ್ಷಿಣ ಆಫ್ರಿಕಾ: 55 ಶತಕ
07. ಮಹೇಲ ಜಯವರ್ಧನೆ – ಶ್ರೀಲಂಕಾ: 54 ಶತಕ
08. ಬ್ರಯಾನ್‌ ಲಾರಾ – ವೆಸ್ಟ್‌ ಇಂಡೀಸ್‌: 53 ಶತಕ
09. ಡೇವಿಡ್ ವಾರ್ನರ್‌ – ಆಸ್ಟ್ರೇಲಿಯಾ: 49 ಶತಕ
10. ರಾಹುಲ್‌ ದ್ರಾವಿಡ್‌ – ಭಾರತ: 48 ಶತಕ
10. ರೋಹಿತ್ ಶರ್ಮಾ – ಭಾರತ: 48 ಶತಕ

ಭಾರತದ ಹಿಡಿತದಲ್ಲಿ ಪಂದ್ಯ
ಇಂಗ್ಲೆಂಡ್‌ ವಿರುದ್ಧದ ಸರಣಿಯ 5ನೇ ಪಂದ್ಯವು ಧರ್ಮಶಾಲಾದಲ್ಲಿ ನಡೆಯುತ್ತಿದೆ. ಗುರುವಾರ ಆರಂಭವಾಗಿರುವ ಪಂದ್ಯದಲ್ಲಿ ಪ್ರವಾಸಿ ಪಡೆ, 218 ರನ್‌ ಗಳಿಸಿ ಆಲೌಟ್‌ ಆಗಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ಸದ್ಯ 5 ವಿಕೆಟ್ ಕಳೆದುಕೊಂಡು 420 ರನ್ ಗಳಿಸಿದೆ.

ಟೂರ್ನಿಯುದ್ದಕ್ಕೂ ಅಮೋಘ ಲಯದಲ್ಲಿ ರನ್ ಗಳಿಸಿರುವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅರ್ಧಶತಕ (57 ರನ್‌) ಬಾರಿಸಿ ಮೊದಲ ದಿನವೇ ಔಟಾದರು. ನಾಯಕ ರೋಹಿತ್‌ ಶರ್ಮಾ (103 ರನ್‌) ಮತ್ತು ಶುಭಮನ್‌ ಗಿಲ್‌ (110 ರನ್‌) ಇಂದು ಶತಕ ಬಾರಿಸಿದ ಕೂಡಲೇ ಬೆನ್ನುಬೆನ್ನಿಗೆ ವಿಕೆಟ್‌ ಒಪ್ಪಿಸಿದ್ದಾರೆ. ಬಳಿಕ ಬಂದ ಯುವ ಬ್ಯಾಟರ್‌ ಸರ್ಫರಾಜ್‌ ಖಾನ್‌ (56 ರನ್‌) ಮತ್ತು ಪದಾರ್ಪಣೆ ಪಂದ್ಯವಾಡುತ್ತಿರುವ ದೇವದತ್ತ ಪಡಿಕ್ಕಲ್‌ (65 ರನ್‌) ಅರ್ಧಶತಕ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಸದ್ಯ ಆಲ್ರೌಂಡರ್‌ ರವೀಂದ್ರ ಜಡೇಜ (9 ರನ್‌) ಮತ್ತು ವಿಕೆಟ್‌ ಕೀ‍‍ಪರ್ ಧ್ರುವ್‌ ಜುರೇಲ್‌ (14 ರನ್‌) ಕ್ರೀಸ್‌ನಲ್ಲಿದ್ದಾರೆ. ರೋಹಿತ್‌ ಪಡೆ 202 ರನ್‌ಗಳ ಮುನ್ನಡೆ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT