ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 ಕ್ರಿಕೆಟ್ ತಂಡದಿಂದ ಕೊಹ್ಲಿ, ರೋಹಿತ್ ಹೊರಕ್ಕೆ: ಕೋಚ್ ದ್ರಾವಿಡ್ ಹೇಳಿದ್ದೇನು?

Last Updated 24 ಜನವರಿ 2023, 7:51 IST
ಅಕ್ಷರ ಗಾತ್ರ

ಇಂದೋರ್: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರನ್ನು ನ್ಯೂಜಿಲೆಂಡ್‌ ವಿರುದ್ಧದ ಮುಂಬರುವ ಟಿ20 ಕ್ರಿಕೆಟ್‌ ಸರಣಿಯಿಂದ ಹೊರಗಿಡಲಾಗಿದೆ. ಈ ಬಗ್ಗೆ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಸೋಮವಾರ ಮಾತನಾಡಿದ್ದಾರೆ.

ರೋಹಿತ್‌ ಹಾಗೂ ವಿರಾಟ್ ಅವರನ್ನು ಶ್ರೀಲಂಕಾ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಮೂರು ಪಂದ್ಯಗಳ ಟಿ20 ಸರಣಿಯಿಂದಲೂ ಹೊರಗಿಡಲಾಗಿತ್ತು. ಹೀಗಾಗಿ, ಹಲವು ವದಂತಿಗಳು ಹರಿದಾಡಿದ್ದವು. ಮುಂಬರುವ ಟಿ20 ವಿಶ್ವಕಪ್‌ ಮೇಲೆ ಗಮನ ಕೇಂದ್ರೀಕರಿಸಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಹಾರ್ದಿಕ್‌ ಪಾಂಡ್ಯ ನೇತೃತ್ವದಲ್ಲಿ ಯುವ ಪಡೆ ಕಟ್ಟಲು ಸಜ್ಜಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇವುಗಳಿಗೆಲ್ಲ ತೆರೆ ಎಳೆಯುವಂತೆ ರಾಹುಲ್‌ ಮಾತನಾಡಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಿಂದ ಈ ಇಬ್ಬರನ್ನು ಹೊರಗಿಟ್ಟಿರುವುದರ ಉದ್ದೇಶ ವಿಶ್ರಾಂತಿ ನೀಡುವುದಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವರ್ಷದ (2023ರ ಜನವರಿಯಲ್ಲಿ) ಆರಂಭದಲ್ಲಿ ಶ್ರೀಲಂಕಾ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ರೋಹಿತ್‌ ಅನುಪಸ್ಥಿತಿಯಲ್ಲಿ ಪಾಂಡ್ಯ ತಂಡ ಮುನ್ನಡೆಸಿದ್ದರು. ಭಾರತ ಸರಣಿಯನ್ನು 2–1ರಿಂದ ಗೆದ್ದಿತ್ತು. ಶುಕ್ರವಾರದಿಂದ (ಜನವರಿ 27) ಆರಂಭವಾಗುವ ನ್ಯೂಜಿಲೆಂಡ್‌ ಸರಣಿಗೂ ಪಾಂಡ್ಯ ನಾಯಕರಾಗಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್‌ ಸದ್ಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟ ನಡೆಸುತ್ತಿವೆ. ಜನವರಿ 21 ಹಾಗೂ 22 ರಂದು ನಡೆದ ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಭಾರತ ಇಂದು (ಜನವರಿ 24 ರಂದು) ನಡೆಯುವ ಮೂರನೇ ಪಂದ್ಯವನ್ನೂ ಜಯಿಸಿ ಸರಣಿ ಕ್ಲೀನ್‌ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ.

ಅಂತಿಮ ಪಂದ್ಯಕ್ಕೂ ಮುನ್ನ ಮಾತನಾಡಿರುವ ದ್ರಾವಿಡ್, ಈ ವರ್ಷಾಂತ್ಯದಲ್ಲಿ ನಡೆಯುವ ವಿಶ್ವಕಪ್‌ ಗಮನದಲ್ಲಿರಿಸಿ ಏಕದಿನ ಕ್ರಿಕೆಟ್‌ಗೆ ಆದ್ಯತೆ ನೀಡಿದ್ದೇವೆ ಎಂದಿದ್ದಾರೆ.

ಈಚೆಗೆ ಶ್ರೀಲಂಕಾ ವಿರುದ್ಧ ಮುಕ್ತಾಯವಾದ ಹಾಗೂ ಸದ್ಯ ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ತಲಾ ಮೂರು ಪಂದ್ಯಗಳ ಏಕದಿನ ಸರಣಿಯನ್ನುದ್ದೇಶಿಸಿ ಹೇಳಿಕೆ ನೀಡಿರುವ ರಾಹುಲ್, 'ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾವು ಕೆಲವು ಪ್ರಾತಿನಿಧ್ಯಗಳನ್ನು ನೀಡಬೇಕಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಆಡುತ್ತಿರುವ ಆರು ಏಕದಿನ ಪಂದ್ಯಗಳು ನಮ್ಮ ಆದ್ಯತೆಯಾಗಿವೆ. ಇಂದು ನಡೆಯುವ ಪಂದ್ಯವೂ ಸೇರಿ ಎಲ್ಲ ಪಂದ್ಯಗಳಲ್ಲಿ ಆಡಿರುವ ವಿರಾಟ್‌ಗೆ ರೋಹಿತ್‌ ಜೊತೆಗೆ ವಿಶ್ರಾಂತಿ ನೀಡಲು ಪ್ರಾತಿನಿಧ್ಯ ನೀಡಿದ್ದೇವೆ' ಎಂದು ತಿಳಿಸಿದ್ದಾರೆ.

ತಂಡದ ನಾಯಕತ್ವವನ್ನು ವಿಭಜಿಸಲಾಗುತ್ತದೆಯೇ ಎಂದು ಕೇಳಿದ್ದಕ್ಕೆ, 'ಈ ಪ್ರಶ್ನೆಯನ್ನು ನೀವು ಆಯ್ಕೆದಾರರನ್ನೇ ಕೇಳಬೇಕು. ಆ ಬಗ್ಗೆ ನಾನು ಯೋಚಿಸಿಲ್ಲ' ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯು ಫೆಬ್ರವರಿ 1ರಂದು ಮುಕ್ತಾಯವಾಗಲಿದೆ. ಇದಾದ ನಂತರ ರೋಹಿತ್‌ ಶರ್ಮಾ ಬಳಗ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಟೆಸ್ಟ್ ಸರಣಿ ಫೆಬ್ರವರಿ 9ರಿಂದ ಹಾಗೂ ಏಕದಿನ ಸರಣಿ ಮಾರ್ಚ್‌ 17ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT