ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ WTC Final: ನಾಯಕ ಕೊಹ್ಲಿ ಆಸರೆ; ಭಾರತ 146/3

ಅಕ್ಷರ ಗಾತ್ರ

ಸೌತಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಎರಡನೇ ದಿನದಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡವು, ನಾಯಕ ವಿರಾಟ್ ಕೊಹ್ಲಿ (44*) ದಿಟ್ಟ ಹೋರಾಟದ ನೆರವಿನೊಂದಿಗೆ ಮಂದ ಬೆಳಕಿನಿಂದಾಗಿ ಪಂದ್ಯ ನಿಲುಗಡೆಗೊಂಡಾಗ 64.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು.

ಸೌಟಾಂಪ್ಟನ್‌ನ ರೋಸ್ ಬೌಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು.

ತಂಡದ ರಣನೀತಿಯಂತೆ ಇವರಿಬ್ಬರು ಟ್ರೆಂಟ್ ಬೌಲ್ಟ್ ಸೇರಿದಂತೆ ಕಿವೀಸ್ ವೇಗಿಗಳನ್ನು ನಿರಾತಂಕವಾಗಿ ಎದುರಿಸಿದರು. ಅಲ್ಲದೆ ಮೊದಲ ವಿಕೆಟ್‌ಗೆ 20.1 ಓವರ್‌ಗಳಲ್ಲಿ 62 ರನ್ ಪೇರಿಸಿದರು.

ಈ ಹಂತದಲ್ಲಿ ದಾಳಿಗಿಳಿದ ಕೈಲ್ ಜೇಮಿಸನ್ ಅಪಾಯಕಾರಿ ರೋಹಿತ್ ವಿಕೆಟ್ ಪಡೆದು ಸಂಭ್ರಮಿಸಿದರು. 68 ಎಸೆತಗಳನ್ನು ಎದುರಿಸಿದ ರೋಹಿತ್ ಆರು ಬೌಂಡರಿಗಳ ನೆರವಿನಿಂದ 34 ರನ್ ಗಳಿಸಿದರು.

ಇದಾದ ಬೆನ್ನಲ್ಲೇ ಮಗದೊಬ್ಬ ಆರಂಭಿಕ ಶುಭಮನ್ ಗಿಲ್ (28) ಅವರಿಗೆ ನೀಲ್ ವ್ಯಾಗ್ನರ್ ಪೆವಿಲಿಯನ್ ಹಾದಿ ತೋರಿಸಿದರು.

ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಕಲಾತ್ಮಕ ಚೇತೇಶ್ವರ್ ಪೂಜಾರ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿ ಇನ್ನಿಂಗ್ಸ್ ಬೆಳೆಸುವ ಭರವಸೆ ಮೂಡಿಸಿದರು. ಈ ವೇಳೆ ದಾಳಿಗಿಳಿದ ಬೌಲ್ಟ್, ಪೂಜಾರ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು.

ಇದನ್ನೂ ಓದಿ:

ಇದರೊಂದಿಗೆ 88 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟಕ್ಕೊಳಗಾಯಿತು. 54 ಎಸೆತಗಳನ್ನು ಎದುರಿಸಿದ ಪೂಜಾರ ಎರಡು ಬೌಂಡರಿ ನೆರವಿನಿಂದ 8 ರನ್ ಗಳಿಸಿದರು.

ಕೊಹ್ಲಿ, ರಹಾನೆ ಆಸರೆ...
ಕಠಿಣ ಪರಿಸ್ಥಿತಿಯಲ್ಲೂ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಆಸರೆಯಾದರು. ಆಗಲೇ ಮಳೆಯಾಗಿದ್ದರಿಂದ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗುತ್ತಿತ್ತು. ಈ ಎಲ್ಲ ಸವಾಲುಗಳನ್ನು ಕೊಹ್ಲಿ ಹಾಗೂ ರಹಾನೆ ದಿಟ್ಟವಾಗಿ ಎದುರಿಸಿದರು.

ಇವರಿಬ್ಬರು ಮುರಿಯದ ನಾಲ್ಕನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದ್ದಾರೆ. ಮಂದ ಬೆಳಕಿನಿಂದಾಗಿ ಪಂದ್ಯ ನಿಲುಗಡೆಗೊಂಡಾಗ ಭಾರತ 64.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು.

124 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 44 ರನ್ ಗಳಿಸಿರುವ ನಾಯಕ ಕೊಹ್ಲಿ ಅರ್ಧಶತಕದತ್ತ ಮುನ್ನುಗ್ಗಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ರಹಾನೆ 79 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 29 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕಿವೀಸ್ ಪರ ಬೌಲ್ಟ್, ಜೇಮಿಸನ್ ಹಾಗೂ ವ್ಯಾಗ್ನರ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ಮಳೆಯಿಂದಾಗಿ ಮೊದಲ ದಿನದಾಟದ ಆಟವು ಸಂಪೂರ್ಣವಾಗಿ ನಷ್ಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT