ಮಂಗಳವಾರ, ಫೆಬ್ರವರಿ 25, 2020
19 °C
ಭಾರತ–ವೆಸ್ಟ್‌ಇಂಡೀಸ್‌ ಏಕದಿನ ಸರಣಿ: ಆಟಗಾರರಿಗೆ ಕಿವಿಮಾತು ಹೇಳಿದ ರಾಡಿ ಎತ್ವಿಕ್‌

ಪರಿಶ್ರಮಕ್ಕೆ ಕೊಹ್ಲಿಯೇ ಮಾನದಂಡ; ಅವರಿಂದ ಕಲಿಯುವುದು ಸಾಕಷ್ಟಿದೆ: ವಿಂಡೀಸ್ ಕೋಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಭಾರತ ಕ್ರಿಕೆಟ್‌ ತಂಡದ ನಾಯಕ  ವಿರಾಟ್‌ ಕೊಹ್ಲಿ ಅವರನ್ನು ಮಾನದಂಡವಾಗಿಟ್ಟುಕೊಂಡು, ಸಾಧನೆ ಮಾಡಲು ಸತತ ಪ್ರಯತ್ನ ಮಾಡಬೇಕು ಎಂದು ವೆಸ್ಟ್ ಇಂಡೀಸ್‌ ತಂಡದ ಸಹಾಯಕ ಕೋಚ್‌ ರಾಡಿ ಎತ್ವಿಕ್‌ ವಿಂಡೀಸ್‌ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ. ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯು ಭಾನುವಾರದಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿದರು.

ಇದನ್ನೂ ಓದಿ: 

‘ನಮ್ಮ ತಂಡದಲ್ಲಿರುವ ಶಾಯ್‌ ಹೋಪ್‌, ನಿಕೋಲಸ್‌ ಪೂರನ್‌, ಶಿಮೋನ್‌ ಹೆಟ್ಮೆಯರ್‌ ಅವರಂತಹ ಯುವ ಆಟಗಾರರನ್ನು ನೋಡಿದಾಗ ರೋಮಾಂಚನವಾಗುತ್ತದೆ. ಈಗಷ್ಟೇ ಛಾಪು ಮೂಡಿಸುತ್ತಿರುವ ಆಟಗಾರರನ್ನು ನಾವು ಹೊಂದಿದ್ದೇವೆ. ಆದರೆ, ಗುರಿ ತಲುಪಲು ನೀವು ಹೇಗೆ ಸತತ ಪ್ರಯತ್ನ ನಡೆಸುತ್ತೀರಿ ಎಂಬುದು ಮುಖ್ಯವಾದ ವಿಚಾರ. ನೀವು ವಿರಾಟ್ ಕೊಹ್ಲಿಯವರಲ್ಲಿ ಅಂತಹದೊಂದು ಮಾನದಂಡವನ್ನು ಕಾಣಬಹುದು. ಅವರು ಜಿಮ್‌ನಲ್ಲಿ ಹಾಗೂ ಮೈದಾನದಲ್ಲಿ ಸಾಕಷ್ಟು ಬೆವರು ಹರಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ಸಾಕಷ್ಟು ಜನರು ಅವರಿಂದ (ಕೊಹ್ಲಿಯಿಂದ) ಕಲಿಯುವುದಿದೆ. ನಮಗೆ ಅಂತಹ ಅವಕಾಶ ಸಿಕ್ಕಿದೆ. ಸತತ ಪ್ರಯತ್ನವಿಲ್ಲದೆ ಯಶಸ್ಸು ಸಾಧ್ಯವಿಲ್ಲ. ನಿರಂತರ ಶ್ರಮಿಸುವುದು ಬೇಸರದ ಸಂಗತಿಯಾದರೂ, ಅದು ದೊಡ್ಡ ಯಶಸ್ಸನ್ನು ತಂದುಕೊಡಲಿದೆ. ಪ್ರಯತ್ನಿಸುವ ಪ್ರಕ್ರಿಯೆಯನ್ನು ವಿಂಡೀಸ್‌ ಆಟಗಾರರು ಒಂದುಬಾರಿ ಅಭ್ಯಾಸ ಮಾಡಿಕೊಂಡರೆ, ಸಾಧಿಸುವ ಅವಕಾಶವನ್ನೂ ಪಡೆದುಕೊಳ್ಳಲಿದ್ದಾರೆ’ ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: 

‘ಅವರು (ವಿಂಡೀಸ್‌ ಆಟಗಾರರು) ಉತ್ತಮ ಸರಣಿಯನ್ನು ಹೊಂದಿದ್ದಾರೆ. ಅವರು ಕಲಿಯುವುದನ್ನು ನಾವು ತಪ್ಪಿಸುವುದಿಲ್ಲ. ನಿಜವಾಗಿಯೂ ಆಟಗಾರರೆಲ್ಲ ಕಠಿಣ ತಾಲೀಮು ನಡೆಸಿದ್ದಾರೆ. ಅದರ ಪ್ರಾರಂಭಿಕ ಫಲಿತಾಂಶವನ್ನೂ ಪಡೆದುಕೊಳ್ಳುತ್ತಿದ್ದಾರೆ. ಟಿ20 ಸರಣಿಯಲ್ಲಿ ನೀವು ಹೆಟ್ಮೆಯರ್‌ ಪ್ರದರ್ಶನವನ್ನು ನೋಡಿರಬಹುದು. ಅದು ಉತ್ತೇಜನ ನೀಡುವಂತದ್ದು. ಇದೀಗ ನಾವು ದೀರ್ಘ (ಏಕದಿನ) ಮಾದರಿಯತ್ತ ಸಾಗಿದ್ದೇವೆ. ಹೆಟ್ಮೆಯರ್‌ ಚಿಕ್ಕವಯಸ್ಸಿಗೇ ನಾಲ್ಕು ಶತಕಗಳನ್ನು ಬಾರಿಸಿದ್ದಾನೆ ಎಂಬುದನ್ನು ಜನರು ಮರೆತಿರಬಹುದು. ಅಂತಹ ಇನ್ನಷ್ಟು ಪ್ರತಿಭೆಗಳು ಖಂಡಿತ ನಮ್ಮಲ್ಲಿದ್ದಾರೆ. ಕ್ರಿಕೆಟ್‌ನಲ್ಲಿ ನೀವು ವಿಶ್ರಾಂತಿ ಪಡೆಯುವುದಾಗಲೀ ಅಥವಾ ಬಿಡುವು ಪಡೆಯುವುದಾಗಲೀ ಸಾಧ್ಯವಿಲ್ಲ’ ಎಂದು ಮಾತನಾಡಿದರು.

‘ನಾವು ಟಿ20 ಕ್ರಿಕೆಟ್‌ ಸರಣಿಯಲ್ಲಿ ನೀಡಿದ ಪ್ರದರ್ಶನದ ಬಗ್ಗೆ ಸಂತಸವಿದೆ. ಭಾರತದ ಎದುರು ಸರಣಿ ಸೋಲಿನ ಅಂತರವನ್ನು 2–1ಕ್ಕೆ ಇಳಿಸಿಕೊಂಡಿದ್ದೇವೆ. ಅಂತಹದೇ ಪ್ರದರ್ಶನವನ್ನು ಏಕದಿನ ಸರಣಿಯಲ್ಲಿಯೂ ನೀಡಲಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 

ಭಾರತ ವಿರುದ್ಧದ ಸರಣಿಗೆ ಹೆಚ್ಚು ಯುವ ಸ್ಪಿನ್ನರ್‌ಗಳನ್ನು ತಂಡದಲ್ಲಿ ಸೇರಿಸಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎತ್ವಿಕ್‌, ‘ಯುವ ಸ್ಪಿನ್ನರ್‌ಗಳಾದ ಹೈಡನ್‌ ವಾಲ್ಶ್‌, ಖಾರಿ ಪಿಯರೆ, ರೋಸ್ಟನ್‌ ಚೀಸ್‌ಗೆ ಇದು ಕಲಿಕೆಯ ಹಂತ. ಇದು 2023ರ ವಿಶ್ವಕಪ್‌ ಹೊತ್ತಿಗೆ ಕಲಿಕೆ ಮತ್ತು ತಂಡದಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳುವ ಪ್ರಕ್ರಿಯೆ ಅಷ್ಟೇ. ಒಮ್ಮೆ ನೀವು ಅತ್ಯುತ್ತಮ ಎದುರಾಳಿ ವಿರುದ್ಧ ಕಣಕ್ಕಿಳಿದರೆ, ಅದು ನಿಮ್ಮ ಆಟದ ಮಟ್ಟವನ್ನು ಮೇಲ್ದರ್ಜೆಗೇರಿಸಲು ನೆರವಾಗುತ್ತದೆ. ಹಾಗಾಗಿ ನಾವು ಭಾರತದ ವಿರುದ್ಧ ಹೆಚ್ಚು ಯುವಕರೊಂದಿಗೆ ಕಣಕ್ಕಿಳಿಯುತ್ತಿರುವುದು ಸರಿಯಾಗಿಯೇ ಇದೆ’ ಎಂದು ಉತ್ತರಿಸಿದರು.

ಭಾರತ–ವಿಂಡೀಸ್‌ ಏಕದಿನ ಸರಣಿಯು ಡಿ.15ರಿಂದ ಆರಂಭವಾಗಲಿದೆ. ಮೊದಲ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ 18 ಮತ್ತು 22ರಂದು ವಿಶಾಖಪಟ್ಟಣ ಮತ್ತು ಕಟಕ್‌ ನಗರಗಳಲ್ಲಿ ಆಯೋಜನೆಗೊಂಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು