ಕೇಪ್‌ಟೌನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಕಠಿಣ ಗುರಿ ನೀಡಿದೆ.
ಇಲ್ಲಿನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ಬೆತ್ ಮೂನಿ ಗಳಿಸಿದ ಅರ್ಧಶತಕ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ಬಿರುಸಿನ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 172 ರನ್ ಗಳಿಸಿದೆ.
ಇನಿಂಗ್ಸ್ ಆರಂಭಿಸಿದ ಅಲಿಸ್ಸಾ ಹೀಲಿ (25) ಮತ್ತು ಬೆತ್ ಮೂನಿ ಮೊದಲ ವಿಕೆಟ್‌ಗೆ 52 ರನ್ ಕಲೆ ಹಾಕಿದರು. ಮೂನಿ 37 ಎಸೆತಗಳಲ್ಲಿ 54 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
11.5 ಓವರ್‌ಗಳಲ್ಲಿ 2 ವಿಕೆಟ್‌ಗೆ 88 ರನ್ ಆಗಿದ್ದಾಗ ಜೊತೆಯಾದ ಲ್ಯಾನಿಂಗ್ ಹಾಗೂ ಆ್ಯಶ್ಲೇ ಗಾರ್ಡನರ್ ಜೋಡಿ ಲೀಲಾಜಾಲವಾಗಿ ಬ್ಯಾಟ್ ಬೀಸಿತು. ಈ ಜೋಡಿ ಮೂರನೇ ವಿಕೆಟ್ ಪಾಲುದಾರಿಕೆಯಲ್ಲಿ ಕೇವಲ 36 ಎಸೆತಗಳಲ್ಲಿ 53 ರನ್ ಕಲೆ ಹಾಕಿತು. ಆರಂಭದಿಂದಲೇ ಬೀಸಾಟಕ್ಕೆ ಒತ್ತು ಕೊಟ್ಟ ಆ್ಯಶ್ಲೇ ಕೇವಲ 18 ಎಸೆತಗಳಲ್ಲಿ 31 ರನ್ ಸಿಡಿಸಿದರು.
ಕೊನೆವರೆಗೂ ಆಡಿದ ಲ್ಯಾನಿಂಗ್, ರಕ್ಷಣಾತ್ಮಕವಾಗಿ ಆಡುತ್ತಲೇ ರನ್ ಗತಿ ಹೆಚ್ಚಿಸಿದರು. ಅವರು 34 ಎಸೆತಗಳಲ್ಲಿ ಅಜೇ 49 ರನ್ ಕಲೆಹಾಕಿದರು. ಹೀಗಾಗಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿದೆ.
ಭಾರತ ಪರ ಶಿಖಾ ಪಾಂಡೆ ಎರಡು ಹಾಗೂ ರಾಧಾ ಯಾದವ್, ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಕಿತ್ತರು. ಪ್ರಮುಖ ಬೌಲರ್ ರೇಣುಕಾ ಸಿಂಗ್ 4 ಓವರ್‌ಗಳಲ್ಲಿ 41ರನ್ ಬಿಟ್ಟುಕೊಟ್ಟು ದುಬಾರಿಯಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.