ಕ್ರೈಸ್ಟ್‌ಚರ್ಚ್: ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅಜೇಯ ಶತಕದ (121*) ನೆರವಿನಿಂದ ನ್ಯೂಜಿಲೆಂಡ್ ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುವ ಶ್ರೀಲಂಕಾದ ಕನಸು ಭಗ್ನಗೊಂಡಿದೆ. ಮತ್ತೊಂದೆಡೆ ಇದರ ಲಾಭ ಪಡೆದ ಭಾರತ, ಸತತ ಎರಡನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.
285 ರನ್ ಗೆಲುವಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸುವುದರೊಂದಿಗೆ ಭಾರತದ ಫೈನಲ್ ಹಾದಿ ಸುಗಮವಾಯಿತು.
ಜೂನ್ 7ರಂದು ಇಂಗ್ಲೆಂಡಿನ ಓವಲ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ.
2021ರಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿದ್ದ ಭಾರತ ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಗಿತ್ತು.
ಟೆಸ್ಟ್ ಪಂದ್ಯದ ಕೊನೆಯ ಎಸೆತದಲ್ಲಿ ಗೆದ್ದ ನ್ಯೂಜಿಲೆಂಡ್...
ಕೊನೆಯ ಕ್ಷಣದ ವರೆಗೂ ಕ್ರಿಕೆಟ್ ಪ್ರಿಯರನ್ನು ತೂದಿಗಾಲಲ್ಲಿ ನಿಲ್ಲಿಸಿದ ಪಂದ್ಯದಲ್ಲಿ ವಿಲಿಯಮ್ಸನ್ ಹಾಗೂ ಡೆರಿಲ್ ಮಿಚೆಲ್ (81) ಅಮೋಘ ಆಟದ ನೆರವಿನಿಂದ ನ್ಯೂಜಿಲೆಂಡ್ ಎರಡು ವಿಕೆಟ್ ಅಂತರದ ಗೆಲುವು ದಾಖಲಿಸಿತು.
ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಲೂ ರೋಚಕತೆ ಮನೆ ಮಾಡಿದೆ ಎಂಬುದಕ್ಕೆ ಈ ಪಂದ್ಯ ಸಾಕ್ಷಿಯಾಯಿತು. ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ ಏಳು ರನ್ನಿನ ಅವಶ್ಯಕತೆಯಿತ್ತು.
ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ಅಂತಿಮ ಓವರ್‌ನಲ್ಲಿ ವಿಲಿಯಮ್ಸನ್ ಬೌಂಡರಿ ಬಾರಿಸಿದರು. ಬಳಿಕ ಕೊನೆಯ ಎಸೆತದಲ್ಲಿ ಬೈ ಮೂಲಕ ಒಂಟಿ ರನ್ ಕದಿಯುವಲ್ಲಿ ಯಶಸ್ವಿಯಾದರು. ಕ್ರೀಸಿನ ಇನ್ನೊಂದು ತುದಿಗೆ ಡೈವ್ ಹೊಡೆಯುವ ಮೂಲಕ ಕಿವೀಸ್‌ಗೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.
194 ಎಸೆತಗಳನ್ನು ಎದುರಿಸಿದ ಮಾಜಿ ನಾಯಕ ವಿಲಿಯಮ್ಸನ್ 121 ರನ್ (11 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಕೇನ್‌ಗೆ ತಕ್ಕ ಸಾಥ್ ನೀಡಿದ ಮಿಚೆಲ್ 81 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಮೊದಲ ಇನಿಂಗ್ಸ್‌ನಲ್ಲೂ ಶತಕ ಗಳಿಸಿದ ಮಿಚೆಲ್ (102) ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್ ಪಟ್ಟಿ:
ಶ್ರೀಲಂಕಾ ಮೊದಲ ಇನಿಂಗ್ಸ್ 355ಕ್ಕೆ ಆಲೌಟ್
(ಕುಸಾಲ್ ಮೆಂಡಿಸ್ 87, ಕರುಣಾರತ್ನೆ 50, ಟಿಮ್ ಸೌಥಿ 64ಕ್ಕೆ 5 ವಿಕೆಟ್)
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 373ಕ್ಕೆ ಆಲೌಟ್
(ಡೆರಿಲ್ ಮಿಚೆಲ್ 102, ಲೇಥಮ್ 67, ಅಸಿತ ಫೆರ್ನಾಂಡೊ 85ಕ್ಕೆ 4 ವಿಕೆಟ್)
ಶ್ರೀಲಂಕಾ ದ್ವಿತೀಯ ಇನಿಂಗ್ಸ್ 302ಕ್ಕೆ ಆಲೌಟ್
(ಏಂಜೆಲೊ ಮ್ಯಾಥ್ಯೂಸ್ 115, ಟಿಕ್ನೆರ್ 100ಕ್ಕೆ 4 ವಿಕೆಟ್)
ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ 286/8
(ಕೇನ್ ವಿಲಿಯಮ್ಸನ್ 121*, ಡೆರಿಲ್ ಮಿಚೆಲ್ 81, ಅಸಿತ ಫೆರ್ನಾಂಡೊ 63ಕ್ಕೆ 3 ವಿಕೆಟ್)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.