ಗುರುವಾರ , ಫೆಬ್ರವರಿ 27, 2020
19 °C
ಏಕದಿನ ಸರಣಿ

IND vs AUS | ಚೇಸಿಂಗ್ ಮೇಲೆ ಆಸಿಸ್ ಒಲವು: ಕೊಹ್ಲಿ ಪಡೆಗೆ ಬ್ಯಾಟಿಂಗ್‌ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್‌: ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡದ ವಿರುದ್ಧ, ಟಾಸ್‌ ಗೆದ್ದಿರುವ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1–0 ಮುನ್ನಡೆಯಲ್ಲಿರುವ ಆ್ಯರನ್‌ ಫಿಂಚ್‌ ನೇತೃತ್ವದ ಪ್ರವಾಸಿ ಪಡೆ ಈ ಪಂದ್ಯವನ್ನು ಸರಣಿ ಗೆಲ್ಲುವ ಯೋಜನೆಯಲ್ಲಿದೆ. ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 255 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತ ಬೆನ್ನಟ್ಟಿದ್ದ ಆಸ್ಟ್ರೇಲಿಯಾ, ಅನುಭವಿ ಆರಂಭಿಕರಾದ ಡೇವಿಡ್‌ ವಾರ್ನರ್‌ (128) ಹಾಗೂ ನಾಯಕ ಫಿಂಚ್‌ (110) ಭರ್ಜರಿ ಬ್ಯಾಟಿಂಗ್ ಬಲದಿಂದ ಹತ್ತು ವಿಕೆಟ್‌ ಗೆಲುವು ಸಾಧಿಸಿತ್ತು.

ಇದೇ ಲೆಕ್ಕಾಚಾರದೊಂದಿಗೆ ಆಡುವ ವಿಶ್ವಾಸದಲ್ಲಿರುವ ಆಸಿಸ್‌, ಕೊಹ್ಲಿ ಪಡೆಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಹೀಗಾಗಿ ಆತಿಥೇಯ ಬಳಗ ಈ ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ಒತ್ತಡದಲ್ಲಿದೆ.

ಮೊದಲ ಪಂದ್ಯದಲ್ಲಿ ಮೂವರು ಆರಂಭಿಕರಿಗೆ (ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌ಗೆ) ಅವಕಾಶ ನೀಡಿದ್ದ ನಾಯಕ ಕೊಹ್ಲಿ, ಬ್ಯಾಟಿಂಗ್‌ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದು ನಾಲ್ಕರಲ್ಲಿ ಆಡಿದ್ದರು. ಮೂರನೇ ಕ್ರಮಾಂಕದಲ್ಲಿ ಆಡಿದ್ದ ರಾಹುಲ್‌ ಯಶಸ್ವಿಯಾಗಿದ್ದರಾದರೂ ಕೊಹ್ಲಿ (16) ವಿಫಲವಾಗಿದ್ದರು. ಹೀಗಾಗಿ ಅವರ ಕ್ರಮಾಂಕದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಮಾತ್ರವಲ್ಲದೆ ವೇಗಿ ಪ್ಯಾಟ್‌ ಕಮಿನ್ಸ್‌ ಎಸೆತವೊಂದು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಬ್ಯಾಟಿಂಗ್‌ ಮಾಡುವಾಗ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಹೀಗಾಗಿ ಅವರ ಆರೋಗ್ಯ ತಪಾಸಣೆ ಮುಂದುವರಿದಿದ್ದು, ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರ ಬದಲು ಮನಿಷ್‌ ಪಾಂಡೆಗೆ ಸ್ಥಾನ ನೀಡಲಾಗಿದೆ.

ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಶಾರ್ದೂಲ್‌ ಠಾಕೂರ್ ಬದಲು ನವದೀಪ್‌ ಸೈನಿ ಅವಕಾಶ ಗಿಟ್ಟಿಸಿದ್ದಾರೆ.

ಭಾರತ ತಂಡ ಈ ಪಿಚ್‌ನಲ್ಲಿ ಇದುವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲುಕಂಡಿದೆ. ಆದರೆ ಆ ಎರಡೂ ಪಂದ್ಯಗಳಿಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಿದ್ದರು.

2013ರಲ್ಲಿ ಇಂಗ್ಲೆಂಡ್ ಎದುರು ನಡೆದಿದ್ದ ಪಂದ್ಯದಲ್ಲಿ ಭಾರತವು 9 ರನ್‌ಗಳಿಂದ ಸೋತಿತ್ತು. 2015ರಲ್ಲಿ ದಕ್ಷಿಣ ಆಫ್ರಿಕಾ ಎದುರು 18 ರನ್‌ಗಳಿಂದ ಪರಾಭವಗೊಂಡಿತ್ತು. ಇದೀಗ ವಿರಾಟ್‌ ನಾಯಕರಾಗಿ ಇಲ್ಲಿ ಮೊದಲ ಸಲ ಕಣಕ್ಕಿಳಿಯಲಿದ್ದಾರೆ.

ಉಭಯ ತಂಡಗಳ ‘ಆಡುವ ಹನ್ನೊಂದರ ಬಳಗ’:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್‌, ಕೆ.ಎಲ್‌.ರಾಹುಲ್‌ (ವಿಕೆಟ್ ಕೀಪರ್‌), ಮನಿಷ್‌ ಪಾಂಡೆ, ರವೀಂದ್ರ ಜಡೇಜ, ಕುಲದೀಪ್ ಯಾದವ್‌, ಜಸ್‌ಪ್ರೀತ್ ಬೂಮ್ರಾ, ನವದೀಪ್‌ ಶೈನಿ, ಮೊಹಮ್ಮದ್‌ ಶಮಿ.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್‌ (ನಾಯಕ), ಡೇವಿಡ್ ವಾರ್ನರ್‌, ಮಾರ್ನಸ್‌ ಲಾಬುಶೇನ್‌, ಸ್ಟೀವ್ ಸ್ಮಿತ್‌, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌, ಆ್ಯಷ್ಟನ್ ಅಗರ್‌, ಕೇನ್‌ ರಿಚರ್ಡ್ಸನ್‌, ಮಿಷೆಲ್ ಸ್ಟಾರ್ಕ್‌, ಆ್ಯಷ್ಟನ್ ಟರ್ನರ್‌, ಆ್ಯಡಂ ಜಂಪಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು