ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020: ಐಪಿಎಲ್‌ನಲ್ಲಿ ಆರ್‌ಸಿಬಿ ಹಿನ್ನಡೆಗೆ ನೆಹ್ರಾ ಕೊಟ್ಟ ಕಾರಣವೇನು?

Last Updated 8 ನವೆಂಬರ್ 2020, 12:26 IST
ಅಕ್ಷರ ಗಾತ್ರ

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಸೋಲು ಕಂಡು ಐಪಿಎಲ್‌–2020 ಟೂರ್ನಿಯಿಂದ ಹೊರಬಿದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸತತ 13ನೇ ವರ್ಷವೂ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಇದರೊಂದಿಗೆ ಕಳೆದ 8 ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಪ್ರತಿ ಬಾರಿಯು ಆರ್‌ಸಿಬಿ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಕಾರಣವೇನು ಎಂಬುದಕ್ಕೆ ಸಂಬಂಧಿಸಿದಂತೆ ಈ ತಂಡದ ಮಾಜಿ ಬೌಲಿಂಗ್ ಕೋಚ್‌ ಆಶಿಶ್‌ ನೆಹ್ರಾ ಕ್ರೀಡಾವಾಹಿನಿಯೊಂದರ ಸಂವಾದದಲ್ಲಿ ಮಾತನಾಡಿದ್ದಾರೆ. ಈ ತಂಡವು ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ ಅವರನ್ನು ಹೆಚ್ಚಾಗಿ ಅವಲಂಭಿಸಿದೆ. ಮಾತ್ರವಲ್ಲದೆ ಪ್ರತಿ ವರ್ಷ ನಡೆಯುವ ಹರಾಜು ಪ್ರಕ್ರಿಯೆ ವೇಳೆ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತದೆ. ಇದು ಹಿನ್ನಡೆಗೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಆರ್‌ಸಿಬಿ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ ಅವರನ್ನು ಅಪಾರವಾಗಿ ಅವಲಂಬಿಸಿದೆ. ಇಡೀ ತಂಡವು ಅವರ ಸುತ್ತ ಸುತ್ತುತ್ತಿರುತ್ತದೆ. 11 ಆಟಗಾರರ ಕ್ರೀಡೆಯಲ್ಲಿ ಇದು ಸರಿಯಾದ ಕ್ರಮವಲ್ಲ. ನೀವು ಕನಿಷ್ಠ ಐವರು ಆಟಗಾರರನ್ನು ನಿಮ್ಮಲ್ಲೇ ಇರಿಸಿಕೊಳ್ಳಬೇಕು. ಕಿಂಗ್ಸ್‌ ಇಲವೆನ್‌ ಪಂಜಾಬ್‌ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಈ ತಂಡವೂ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿರುತ್ತದೆ. ನೀವು ಕನಿಷ್ಠ ನಾಲ್ಕೈದು ಆಟಗಾರರನ್ನಾದರೂ ಉಳಿಸಿಕೊಳ್ಳಬೇಕು. ಆ್ಯರನ್‌ ಫಿಂಚ್‌ ಅವರು ಮುಂದಿನ ವರ್ಷ ಆರ್‌ಸಿಬಿಯಲ್ಲೇ ಇರುತ್ತಾರೆಯೇ ಎಂಬುದು ಕುತೂಹಲಕಾರಿ. ಕಳೆದ ವರ್ಷ ಶಿಮ್ರೋನ್‌ ಹೆಟ್ಮೆಯರ್, ಮಾರ್ಕಸ್‌ ಸ್ಟೋಯಿನಸ್‌ ತಂಡದಲ್ಲಿದ್ದರು’ ಎಂದು ನೆಹ್ರಾ ಹೇಳಿದ್ದಾರೆ.

‘ಈ ಇಬ್ಬರು (ಕೊಹ್ಲಿ, ವಿಲಿಯರ್ಸ್‌) ಮತ್ತು ಯುಜುವೇಂದ್ರ ಚಾಹಲ್‌ ಹಲವು ವರ್ಷಗಳಿಂದ ಆರ್‌ಸಿಬಿಯಲ್ಲಿದ್ದಾರೆ. ಇವರನ್ನು ಬಿಟ್ಟು ನಾಲ್ಕನೇ ಹೆಸರು ನಿಮಗೆ ಕಾಣಸಿಗುವುದಿಲ್ಲ.ವಾಷಿಂಗ್ಟನ್‌ ಸುಂದರ್‌ ಕಳೆದ ವರ್ಷ ಆಡಿರಲಿಲ್ಲ. ಏಕೆಂದರೆ ಮೋಯಿನ್‌ ಅಲಿ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು ಮತ್ತು ಆರ್‌ಸಿಬಿ ಹೆಚ್ಚು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಿತ್ತು. ಆದರೆ, ಈ ವರ್ಷ ಸುಂದರ್‌ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಮೊಹಮದ್‌ ಸಿರಾಜ್‌ ಕಳೆದ ಬಾರಿ ಬೆಂಗಳೂರಿನಲ್ಲಿ ದುಬಾರಿಯಾಗಿದ್ದರು. ಈ ಸಲ ಅವರೂ ಚೆನ್ನಾಗಿ ಆಡಿದ್ದಾರೆ. ಇಲ್ಲದಿದ್ದರೆ ನೀವು ಯುವ ಆಟಗಾರರನ್ನು ಎಲ್ಲಿಂದ ಪಡೆಯಲು ಸಾಧ್ಯ’ಎಂದೂ ಪ್ರಶ್ನಿಸಿದ್ದಾರೆ.

‘ಪ್ರತಿ ಹರಾಜಿನಲ್ಲೂ ಇಬ್ಬರು ಅಥವಾ ಮೂವರು ಆಟಗಾರರನ್ನು ಹೊರತುಪಡಿಸಿ ಉಳಿದ 16 ರಿಂದ 18 ಆಟಗಾರರನ್ನು ಬದಲಿಸುತ್ತೀರಿ. ನೀವು (ಆರ್‌ಸಿಬಿ) ಕನಿಷ್ಠ ಮೂರು ವರ್ಷಗಳವರೆಗೆ ಅದೇ ಆಟಗಾರರಿಗೆ ಅಂಟಿಕೊಂಡಿರಬೇಕು’ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT