ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ಗೆ 'ಸೂಪರ್' ಸೋಲು; ಡೆಲ್ಲಿಗೆ 'ಹ್ಯಾಟ್ರಿಕ್' ಗೆಲುವು

Last Updated 25 ಏಪ್ರಿಲ್ 2021, 18:41 IST
ಅಕ್ಷರ ಗಾತ್ರ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ 'ಟೈ' ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಕೇನ್ ವಿಲಿಯಮ್ಸನ್ (66*) ಹಾಗೂ ಕೊನೆಯ ಹಂತದಲ್ಲಿ ಕನ್ನಡಿಗ ಜಗದೀಶ ಸುಚಿತ್ (14*) ಹೋರಾಟವು ವ್ಯರ್ಥವೆನಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಪೃಥ್ವಿ ಶಾ ಅರ್ಧಶತಕದ (53) ನೆರವಿನೊಂದಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 159 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಕೇನ್ ಹಾಗೂ ಸುಚಿತ್ ಹೋರಾಟದಿಂದ ಏಳು ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಗಳಿಸಿತ್ತು.

ಇದರಿಂದಾಗಿ ಪಂದ್ಯ ರೋಚಕ 'ಟೈ' ಆಗಿದ್ದರಿಂದ ವಿಜೇತರನ್ನು ಸೂಪರ್ ಓವರ್‌ನಲ್ಲಿ ನಿರ್ಣಯಿಸಲಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಏಳು ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ತಂಡವನ್ನು ಸೇರಿದ್ದ ಅಕ್ಷರ್ ಪಟೇಲ್ ನಿಖರ ದಾಳಿ ಸಂಘಟಿಸಿ ಗಮನ ಸೆಳೆದರು. ಬಳಿಕ ಅತಿ ಒತ್ತಡದ ಪರಿಸ್ಥಿತಿಯಲ್ಲೂ ರಶೀದ್ ಖಾನ್ ದಾಳಿಯಲ್ಲಿ ರಿವರ್ಸ್ ಸ್ವೀಪ್ ಮೂಲಕ ಬೌಂಡರಿ ಬಾರಿಸಿದ ನಾಯಕ ರಿಷಭ್ ಪಂತ್, ಡೆಲ್ಲಿಗೆ 'ಸೂಪರ್' ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

ಇದರೊಂದಿಗೆ ಹ್ಯಾಟ್ರಿಕ್ ಗೆಲುವು ಬಾರಿಸಿರುವ ಡೆಲ್ಲಿ, ಆರ್‌ಸಿಬಿ ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆತ ಕಂಡಿದೆ. ಅತ್ತ ಹೈದರಾಬಾದ್ ಮಗದೊಮ್ಮೆ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.

ವಿಕೆಟ್‌ನ ಒಂದು ತುದಿಯಿಂದ ದಿಟ್ಟ ಹೋರಾಟ ಪ್ರದರ್ಶಿಸಿದ ಕೇನ್ ವಿಲಿಯಮ್ಸನ್ ಹೈದರಾಬಾದ್ ತಂಡವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದರು. ಕೊನೆಯ ಹಂತದಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದ ಸುಚಿತ್, ಕೇನ್ ಹೋರಾಟಕ್ಕೆ ಬಲ ತುಂಬಿದರು. ಪರಿಣಾಮ ಪಂದ್ಯ ರೋಚಕ 'ಟೈ' ಆಗಿತ್ತು. ಕಗಿಸೋ ರಬಡ ಎಸೆದ ಅಂತಿಮ ಓವರ್‌ನಲ್ಲಿ ಗೆಲುವಿಗೆ 16 ರನ್‌ಗಳು ಬೇಕಾಗಿದ್ದವು.

51 ಎಸೆತಗಳನ್ನು ಎದುರಿಸಿದ ಕೇನ್ ಎಂಟು ಬೌಂಡರಿಗಳ ನೆರವಿನಿಂದ 66 ರನ್ ಗಳಿಸಿ ಅಜೇಯರಾಗುಳಿದರು. ಡೆಲ್ಲಿ ಪರ ಬೌಲಿಂಗ್‌ನಲ್ಲಿ ಆವೇಶ್ ಖಾನ್ ಮೂರು ಹಾಗೂ ಅಕ್ಷರ್ ಪಟೇಲ್ ಎರಡು ವಿಕೆಟ್‌ಗಳನ್ನು ಕಬಳಿಸಿ ಹೈದರಾಬಾದ್ ಓಟಕ್ಕೆ ಕಡಿವಾಣ ಹಾಕಿದರು. ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವ ಅಕ್ಷರ್ ಈಗಷ್ಟೇ ತಂಡವನ್ನು ಸೇರಿದ್ದರು.

ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್ (6) ರನೌಟ್ ಆಗಿರುವುದು ಹೈದರಾಬಾದ್‌ಗೆ ಹಿನ್ನೆಡೆಯಾಗಿ ಪರಿಣಮಿಸಿತ್ತು. ಜಾನಿ ಬೆಸ್ಟ್ 18 ಎಸೆತಗಳಲ್ಲಿ ಬಿರುಸಿನ 38 ರನ್ (3 ಬೌಂಡರಿ, 4 ಸಿಕ್ಸರ್) ಗಳಿಸಿದರೂ ಹೆಚ್ಚು ಹೊತ್ತು ಕ್ರೀಸಿನಲ್ಲಿ ನೆಲೆಯೂರಿ ನಿಲ್ಲಲಿಲ್ಲ. ಇನ್ನುಳಿದಂತೆ ವಿರಾಟ್ ಸಿಂಗ್ (4), ಕೇದಾರ್ ಜಾಧವ್ (9), ಅಭಿಷೇಕ್ ಶರ್ಮಾ (5), ರಶೀದ್ ಖಾನ್ (0) ಹಾಗೂ ವಿಜಯ್ ಶಂಕರ್ (8) ನಿರಾಸೆ ಮೂಡಿಸಿದರು.

ಡೆಲ್ಲಿಗೆ ಪೃಥ್ವಿಆಸರೆ...
ಈ ಮೊದಲು ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಸುಂದರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟದ ಮೊತ್ತ ಗಳಿಸಿತು. ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ತಂಡವು ಸನ್‌ರೈಸರ್ಸ್‌ ಹೈದರಾಬಾದ್ ಎದುರು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 159 ರನ್ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡಕ್ಕೆ ಪೃಥ್ವಿ (53; 39ಎ) ಮತ್ತು ಶಿಖರ್ ಧವನ್ (28, 26ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 81 ರನ್‌ಗಳನ್ನು ಸೇರಿಸಿ ಉತ್ತಮ ಆರಂಭ ನೀಡಿದರು.

11ನೇ ಓವರ್‌ನಲ್ಲಿ ಶಿಖರ್ ಧವನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಸ್ಪಿನ್ನರ್ ರಶೀದ್ ಖಾನ್ ಜೊತೆಯಾಟವನ್ನು ಮುರಿದರು. ನಂತರದ ಓವರ್‌ನಲ್ಲಿ ಖಲೀಲ್ ಅಹಮದ್ ಮತ್ತು ಜೆ. ಸುಚಿತ್ ಅವರ ಚುರುಕಿನ ಫೀಲ್ಡಿಂಗ್‌ನಿಂದಾಗಿ ಪೃಥ್ವಿ ರನ್‌ಔಟಾದರು. 135.90ರ ಸ್ಟ್ರೈಕ್‌ರೇಟ್‌ನಲ್ಲಿ ಪೃಥ್ವಿ ಅರ್ಧಶತಕ ಗಳಿಸಿದರು.

ತಂಡದ ನಾಯಕ ರಿಷಭ್ ಪಂತ್ (37; 27ಎ) ಮತ್ತು ಸ್ಟೀವ್ ಸ್ಮಿತ್ (ಔಟಾಗದೆ 34) ಮೂರನೇ ವಿಕೆಟ್ ಜೊತೆಯಾಟದಲ್ಲಿ 58 ರನ್‌ಗಳನ್ನು ಸೇರಿಸಿದರು. ಸನ್‌ರೈಸರ್ಸ್ ತಂಡದ ಮಧ್ಯಮವೇಗಿ ಸಿದ್ಧಾರ್ಥ್ ಕೌಲ್ 19ನೇ ಓವರ್‌ನಲ್ಲಿ ರಿಷಭ್ ಮತ್ತು ಶಿಮ್ರೊನ್ ಹೆಟ್ಮೆಯರ್ ಅವರ ವಿಕೆಟ್‌ಗಳನ್ನು ಗಳಿಸಿದರು. ಇದರಿಂದಾಗಿ ಡೆಲ್ಲಿ ಖಾತೆಗೆ ಮತ್ತಷ್ಟು ರನ್‌ಗಳು ಹರಿದುಬರುವ ಅವಕಾಶ ತಪ್ಪಿತು.

ಹೈದರಾಬಾದ್‌ ತಂಡದಲ್ಲಿರುವ ಕನ್ನಡಿಗ ಜೆ. ಸುಚಿತ್ ನಾಲ್ಕು ಓವರ್ ಬೌಲಿಂಗ್ ಮಾಡಿ 21 ರನ್‌ ನೀಡಿದರು. ವಿಕೆಟ್ ಪಡೆಯದಿದ್ದರೂ ಉಳಿದೆಲ್ಲ ಬೌಲರ್‌ಗಳಿಗಿಂತ ಕಡಿಮೆ ರನ್‌ಗಳನ್ನು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT