IPL 2022: ಬೆಂಗಳೂರಿಗೆ ಪ್ಲೇ ಆಫ್ ಪ್ರವೇಶಕ್ಕೆ ಕಠಿಣ ಚಾಲೆಂಜ್!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದೆ. ನಾಯಕತ್ವ ಬದಲಾಗಿದೆ. ಹೊಸ ಪ್ರತಿಭೆಗಳು ಮಿಂಚುತ್ತಿದ್ದಾರೆ. ಆದರೆ, ಈ ಸಲವೂ ಬದಲಾಗದೇ ಉಳಿದಿರುವುದು ಪ್ಲೇ ಆಫ್ ಪ್ರವೇಶದ ಅಸ್ಥಿರತೆ!
ಹೌದು; ಪ್ರತಿವರ್ಷದಂತೆ ಈ ಸಲವೂ ಆರ್ಸಿಬಿ ತಂಡದ ಪ್ಲೇ ಆಫ್ ಪ್ರವೇಶವು ಮತ್ತೊಂದು ತಂಡದ ಸೋಲಿನ ಮೇಲೆ ಅವಲಂಬಿತವಾಗುತ್ತಿದೆ. ಗುರುವಾರ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ಜಯಿಸಲೇಬೇಕಾದ ಒತ್ತಡದಲ್ಲಿದೆ. ಅಷ್ಟೇ ಅಲ್ಲ ನಾಲ್ಕನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಪರಾಭವಗೊಳ್ಳುವುದನ್ನು ಎದುರು ನೋಡಬೇಕು. ಅಥವಾ ಡೆಲ್ಲಿಯೂ ಗೆದ್ದುಬಿಟ್ಟರೆ ಉಭಯ ತಂಡಗಳು ತಲಾ 16 ಅಂಕಗಳಿಸುತ್ತವೆ. ಆದರೆ ನೆಗೆಟಿವ್ ನೆಟ್ ರನ್ರೇಟ್ (–0.323) ಹೊಂದಿರುವ ಆರ್ಸಿಬಿಯು ಹೊರಬೀಳುವುದು ಖಚಿತ. ಎರಡೂ ತಂಡಗಳು ಸೋತರೂ ಇದೇ ಸೂತ್ರ ಅನ್ವಯವಾಗಲಿದ್ದು, ಆರ್ಸಿಬಿ ಹೊರಬೀಳುವುದು. ಒಂದೊಮ್ಮೆ ಡೆಲ್ಲಿ ತಂಡವು ತನ್ನ ಪಂದ್ಯದಲ್ಲಿ ಜಯಿಸಿ, ಆರ್ಸಿಬಿ ಸೋತರೆ ಡೆಲ್ಲಿ (+0.255) ಪ್ಲೇ ಆಫ್ ಪ್ರವೇಶಿಸುವುದು.
ಓದಿ... 90ನೇ ವಸಂತಕ್ಕೆ ಕಾಲಿಟ್ಟ ಎಚ್.ಡಿ.ದೇವೇಗೌಡ: ಮೋದಿ ಸೇರಿ ಗಣ್ಯರಿಂದ ಶುಭಾಶಯ
ಬೆಂಗಳೂರು ಮತ್ತು ಡೆಲ್ಲಿ ತಂಡಳು ಸೋತು, ಇತ್ತ ತಲಾ 12 ಅಂಕ ಗಳಿಸಿರುವ ಕೋಲ್ಕತ್ತ ಮತ್ತು ಪಂಜಾಬ್ ತಂಡಗಳು ಕೂಡ ಉಳಿದಿರುವ ತಮ್ಮ ಒಂದೊಂದು ಪಂದ್ಯದಲ್ಲಿ ಗೆದ್ದರೆ 14 ಅಂಕ ಗಳಿಸಿದ ನಾಲ್ಕು ತಂಡಗಳ ನಡುವೆ ಪೈಪೋಟಿ ಬೀಳಲಿದೆ. ಆರ್ಸಿಬಿ ಬಿಟ್ಟರೆ ಉಳಿದ ಮೂರು ತಂಡಗಳು ಪಾಸಿಟಿವ್ ರನ್ರೇಟ್ ಹೊಂದಿವೆ.
ಕೋಲ್ಕತ್ತವು ಲಖನೌ ವಿರುದ್ಧ ಮತ್ತು ಪಂಜಾಬ್ ಸನ್ರೈಸರ್ಸ್ ವಿರುದ್ಧ ಆಡಲಿವೆ.
ಟೂರ್ನಿಯಲ್ಲಿ ಈಗ 65 ಪಂದ್ಯಗಳು ಮುಗಿದುಹೋಗಿವೆ. ಇದೇ ಮೊದಲ ಬಾರಿ ಆಡುತ್ತಿರುವ ಗುಜರಾತ್ ಟೈಟನ್ಸ್ ತಂಡವು ಈಗಾಗಲೇ 20 ಅಂಕ ಗಳಿಸಿ ಪ್ಲೇ ಆಫ್ ಪ್ರವೇಶಿಸಿದೆ. ತಲಾ 16 ಅಂಕ ಗಳಿಸಿರುವ ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಸೇರಿದಂತೆ ಆರು ತಂಡಗಳು ಅಗ್ರ ನಾಲ್ಕರಲ್ಲಿ ಮೂರು ಸ್ಥಾನಗಳನ್ನು ಗಳಿಸುವ ಪೈಪೋಟಿಯಲ್ಲಿವೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಿವೆ.
ಟೂರ್ನಿಯ ಮೊದಲ ಏಳು ಪಂದ್ಯಗಳಲ್ಲಿ ಐದರಲ್ಲಿ ಜಯಿಸಿದ್ದ ಆರ್ಸಿಬಿಯು ಸುಸ್ಥಿತಿಯಲ್ಲಿತ್ತು. ಆದರೆ ನಂತರದ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ್ದು ಒತ್ತಡಕ್ಕೆ ಕಾರಣವಾಯಿತು. ಆದರೂ ಚೆನ್ನೈ ಮತ್ತು ಹೈದರಾಬಾದ್ ಎದುರು ಜಯಿಸಿದ್ದ ತಂಡವು ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮುಗ್ಗರಿಸಿದ್ದು ಈಗ ಮುಂದಿನ ಹಾದಿ ಕಠಿಣವಾಗುವಂತೆ ಮಾಡಿದೆ.
ಓದಿ... ಕಾನ್ ಚಿತ್ರೋತ್ಸವ: ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಜಾನಪದ ಕಲಾವಿದ ಮಾಮೆ ಖಾನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.