ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023 DC vs GT | ಗುಜರಾತ್‌ಗೆ ಆಘಾತ ನೀಡಿದ ಡೆಲ್ಲಿ

ಶಮಿ ದಾಳಿ ವ್ಯರ್ಥ: ಅಮನ್‌ ಅರ್ಧಶತಕ; ಇಶಾಂತ್‌, ಖಲೀಲ್‌ ಮಿಂಚು
Published 2 ಮೇ 2023, 22:41 IST
Last Updated 2 ಮೇ 2023, 22:41 IST
ಅಕ್ಷರ ಗಾತ್ರ

ಅಹಮದಾಬಾದ್ : ಇಶಾಂತ್‌ ಶರ್ಮಾ ಕೊನೆಯ ಓವರ್‌ನಲ್ಲಿ ನಡೆಸಿದ ಬಿಗುವಾದ ಬೌಲಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಐಪಿಎಲ್‌ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್‌ ಟೈಟನ್ಸ್‌ಗೆ ಆಘಾತ ನೀಡಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‍ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಬಳಗ ಐದು ರನ್‌ಗಳಿಂದ ಗೆದ್ದಿತು. ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ತಂಡ, ವೇಗಿ ಮೊಹಮ್ಮದ್ ಶಮಿ (11ಕ್ಕೆ 4) ಅವರ ಬಿಗುವಾದ ದಾಳಿಗೆ ತತ್ತರಿಸಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 130 ರನ್‌ ಗಳಿಸಿತು. ಅಮನ್ ಹಕೀಂ ಖಾನ್ (51; 44ಎ, 4X3, 6X3) ಅರ್ಧಶತಕದ ಮೂಲಕ ಆಸರೆಯಾದರು.

ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರುವ ಹಾರ್ದಿಕ್‌ ಪಾಂಡ್ಯ ನೇತೃತ್ವದ ಟೈಟನ್ಸ್‌ ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಡೆಲ್ಲಿ ತಂಡದ ಶಿಸ್ತಿನ ಬೌಲಿಂಗ್‌ ಮುಂದೆ ಪರದಾಟ ನಡೆಸಿ, 6 ವಿಕೆಟ್‌ಗಳಿಗೆ 126 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹಾರ್ದಿಕ್‌ (ಅಜೇಯ 59, 53) ನಡೆಸಿದ ಹೋರಾಟ ಸಾಕಾಗಲಿಲ್ಲ. ಇಶಾಂತ್‌ (23ಕ್ಕೆ 2), ಖಲೀಲ್‌ ಅಹ್ಮದ್ (24ಕ್ಕೆ 2) ಮತ್ತು ಕುಲದೀಪ್‌ ಯಾದವ್ (15ಕ್ಕೆ 1) ಗಮನ ಸೆಳೆದರು.

ಸಾಧಾರಣ ಗುರಿ ಬೆನ್ನಟ್ಟಿದ ಹಾಲಿ ಚಾಂಪಿಯನ್ನರು ಆರಂಭದಲ್ಲೇ ಆಘಾತ ಅನುಭವಿಸಿದರು. ಅತ್ಯುತ್ತಮ ಫಾರ್ಮ್‌ನಲ್ಲಿರುವ ಶುಭಮನ್‌ ಗಿಲ್‌, ವೃದ್ದಿಮಾನ್‌ ಸಹಾ, ವಿಜಯ್‌ ಶಂಕರ್‌ ಮತ್ತು ಡೇವಿಡ್‌ ಮಿಲ್ಲರ್‌ ಬೇಗನೇ ಔಟಾದರು. ಸ್ಕೋರ್‌ 32 ಆಗುವಷ್ಟರಲ್ಲಿ 4 ವಿಕೆಟ್‌ಗಳು ಬಿದ್ದವು.

ಈ ವೇಳೆ ಜತೆಯಾದ ಪಾಂಡ್ಯ ಮತ್ತು ಅಭಿನವ್‌ ಮನೋಹರ್‌ (26 ರನ್‌, 33 ಎ.) ಐದನೇ ವಿಕೆಟ್‌ಗೆ 62 ರನ್‌ ಸೇರಿಸಿದರು. 18ನೇ ಓವರ್‌ನಲ್ಲಿ ಮನೋಹರ್ ವಿಕೆಟ್‌ ಪಡೆದ ಖಲೀಲ್‌ ಈ ಜತೆಯಾಟ ಮುರಿದರು.

ಕೊನೆಯ ಎರಡು ಓವರ್‌ಗಳಲ್ಲಿ 33 ರನ್‌ಗಳು ಬೇಕಿದ್ದವು. ಎನ್ರಿಚ್ ನಾಕಿಯಾ ಬೌಲ್‌ ಮಾಡಿದ 19ನೇ ಓವರ್‌ ಮೊದಲ ಮೂರು ಎಸೆತಗಳಲ್ಲಿ 3 ರನ್‌ಗಳು ಮಾತ್ರ ಬಂದವು. ಆದರೆ ರಾಹುಲ್‌ ತೆವಾಟಿಯಾ (20 ರನ್‌, 7 ಎ.) ಮುಂದಿನ ಮೂರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿ ಗೆಲುವಿನ ಆಸೆ ಚಿಗುರುವಂತೆ ಮಾಡಿದರು.

ಇಶಾಂತ್‌ ಬೌಲ್‌ ಮಾಡಿದ ಅಂತಿಮ ಓವರ್‌ನಲ್ಲಿ 12 ರನ್‌ಗಳ ಅವಶ್ಯಕತೆಯಿತ್ತು. ಒತ್ತಡದ ನಡುವೆಯೂ ಉತ್ತಮ ಬೌಲ್‌ ಮಾಡಿದ ಅನುಭವಿ ವೇಗಿ, ತೆವಾಟಿಯಾ ವಿಕೆಟ್‌ ಪಡೆದರಲ್ಲದೆ ಆರು ರನ್‌ ಮಾತ್ರ ಬಿಟ್ಟುಕೊಟ್ಟರು.

ಶಮಿ ಮಿಂಚು, ಅಮನ್‌ ಆಸರೆ: ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಶಮಿ ಹಾಕಿದ ಮೊದಲ ಎಸೆತದಲ್ಲಿಯೇ ಬ್ಯಾಟರ್ ಫಿಲಿಪ್ ಸಾಲ್ಟ್ ಅವರು ಡೇವಿಡ್ ಮಿಲ್ಲರ್‌ಗೆ  ಕ್ಯಾಚಿತ್ತರು. ನಂತರದ ಓವರ್‌ನಲ್ಲಿ ವಾರ್ನರ್ ರನೌಟ್ ಆದರು.

ಇನಿಂಗ್ಸ್‌ನ ಮೂರು ಮತ್ತು ಐದನೇ ಓವರ್‌ನಲ್ಲಿ ಸ್ವಿಂಗ್ ಎಸೆತಗಳ ಅಸ್ತ್ರ ಪ್ರಯೋಗಿಸಿದ ಶಮಿ ಡೆಲ್ಲಿ ತಂಡಕ್ಕೆ ದೊಡ್ಡ ಆಘಾತ ನೀಡಿದರು.  ರಿಲೀ ರೊಸೊ, ಮನೀಷ್ ಪಾಂಡೆ ಹಾಗೂ ಪ್ರಿಯಂ ಗಾರ್ಗ್ ವಿಕೆಟ್‌ ತಮ್ಮದಾಗಿಸಿಕೊಂಡರು. ಈ ಮೂವರ ಕ್ಯಾಚ್‌ಗಳನ್ನು ವಿಕೆಟ್‌ ಕೀಪರ್ ವೃದ್ಧಿಮಾನ್ ಸಹಾ ಪಡೆದರು.  ಇದರಿಂದಾಗಿ ತಂಡವು ಕೇವಲ 23 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಶಮಿ ಈ ಟೂರ್ನಿಯಲ್ಲಿ ಒಟ್ಟು 17 ವಿಕೆಟ್‌ಗಳನ್ನು ಗಳಿಸಿ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ಧಾರೆ.

ಆದರೆ ಈ ಹೊತ್ತಿನಲ್ಲಿ ಜೊತೆಗೂಡಿದ ಅಕ್ಷರ್ ಪಟೇಲ್ (27; 30ಎ) ಹಾಗೂ ಅಮನ್ ಇನಿಂಗ್ಸ್‌ಗೆ ಬಲ ತುಂಬಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 50 ರನ್‌ ಸೇರಿಸಿದರು.  ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಬಾರಿಸಿದ ಅಕ್ಷರ್ 14ನೇ ಓವರ್‌ನಲ್ಲಿ  ಮೋಹಿತ್ ಶರ್ಮಾ ಎಸೆತಕ್ಕೆ ಔಟಾದರು. 

ಇದರ ನಂತರ ತಮ್ಮ ಆಟದ ವೇಗ ಹೆಚ್ಚಿಸಿದ ಅಮನ್ 115.91ರ ಸರಾಸರಿಯಲ್ಲಿ ರನ್‌ ಗಳಿಸಿದರು. ಏಳನೇ ವಿಕೆಟ್ ಜೊತೆಯಾಟದಲ್ಲಿ ಅವರು ರಿಪಲ್ ಪಟೇಲ್ (23; 13ಎ) ಜೊತೆಗೂಡಿ 53 ರನ್‌ ಸೇರಿಸಿದರು. ಇದರಿಂದಾಗಿ ತಂಡವು ನೂರು ರನ್‌ಗಳ ಗಡಿಯನ್ನು ದಾಟಲು ಸಾಧ್ಯವಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT