ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | ರಸೆಲ್ 20 ಬಾಲ್ ಫಿಫ್ಟಿ; ಹೈದರಾಬಾದ್‌‌ಗೆ 209 ರನ್ ಗುರಿ ನೀಡಿದ ಕೆಕೆಆರ್

Published 23 ಮಾರ್ಚ್ 2024, 13:47 IST
Last Updated 23 ಮಾರ್ಚ್ 2024, 13:47 IST
ಅಕ್ಷರ ಗಾತ್ರ

ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆ್ಯಂಡ್ರೆ ರಸೆಲ್ ಬಿರುಸಿನ ಅರ್ಧಶತಕದ (64*) ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 208 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಸೆಲ್ ಬಿರುಸಿನ ಆಟದ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರಸೆಲ್, ಅಬ್ಬರಿಸಿದರು.

ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ಸಮಯೋಚಿತ ಅರ್ಧಶತಕ (54) ಗಳಿಸುವ ಮೂಲಕ ಕೆಕೆಆರ್‌ಗೆ ಭದ್ರ ಅಡಿಪಾಯ ಹಾಕಿಕೊಟ್ಟರು.

51ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಕೋಲ್ಕತ್ತ ಸಂಕಷ್ಟಕ್ಕೆ ಸಿಲುಕಿತ್ತು. ಸುನಿಲ್ ನರೈನ್ (2), ವೆಂಕಟೇಶ್ ಅಯ್ಯರ್ (7), ನಾಯಕ ಶ್ರೇಯಸ್ ಅಯ್ಯರ್ (0) ಮತ್ತು ನಿತೀಶ್ ರಾಣಾ (9) ಪೆವಿಲಿಯನ್ ಸೇರಿಕೊಂಡರು.

ಈ ಹಂತದಲ್ಲಿ ರಮನ್‌ದೀಪ್ ಸಿಂಗ್ ಅವರೊಂದಿಗೆ ಸೇರಿಕೊಂಡ ಫಿಲಿಪ್ ಐದನೇ ವಿಕೆಟ್ 54 ರನ್‌ಗಳ ಜೊತೆಯಾದಲ್ಲಿ ಭಾಗಿಯಾದರು. ರಮನ್‌ದೀಪ್ 17 ಎಸೆತಗಳಲ್ಲಿ 35 ರನ್ (1 ಬೌಂಡರಿ, 4 ಸಿಕ್ಸರ್) ಗಳಿಸಿದರು.

ಮತ್ತೊಂದೆಡೆ ಆಕರ್ಷಕ ಇನಿಂಗ್ಸ್ ಕಟ್ಟಿದ ಸಾಲ್ಟ್ 40 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 54 ರನ್ ಗಳಿಸಿದರು.

ರಸೆಲ್ ಏಳು ಸಿಕ್ಸರ್...

ಈ ಹಂತದಲ್ಲಿ ಜೊತೆಗೂಡಿದ ರಸೆಲ್ ಹಾಗೂ ರಿಂಕು ಸಿಂಗ್, ಹೈದರಾಬಾದ್ ಬೌಲರ್‌ಗಳನ್ನು ದಂಡಿಸಿದರು. ರಿಂಕು ಹಾಗೂ ರಸೆಲ್ ಏಳನೇ ವಿಕೆಟ್‌ಗೆ 81 ರನ್ ಪೇರಿಸಿದರು. ರಿಂಕು 15 ಎಸೆತಗಳಲ್ಲಿ 23 ರನ್ (3 ಬೌಂಡರಿ) ಗಳಿಸಿದರು.

ಅಂತಿಮವಾಗಿ ಕೆಕೆಆರ್ ಏಳು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಅಜೇಯ 64 ರನ್ ಗಳಿಸಿದ ರಸೆಲ್ ಇನಿಂಗ್ಸ್‌ನಲ್ಲಿ ಮೂರು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳು ಸೇರಿದ್ದವು.

ಹೈದರಾಬಾದ್ ಪರ ಟಿ.ನಟರಾಜನ್ ಮೂರು ಮತ್ತು ಮಯಂಕ್ ಮಾರ್ಕಂಡೆ ಎರಡು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಹೈದರಾಬಾದ್ ಫೀಲ್ಡಿಂಗ್...

ಈ ಮೊದಲು ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ತಂಡಗಳ ಬಲಾಬಲ...

ಐಪಿಎಲ್‌ ಹರಾಜಿನಲ್ಲಿ ಅತಿ ದೊಡ್ಡ ಮೊತ್ತ ಪಡೆದ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಮಿಚೆಲ್‌ ಸ್ಟಾರ್ಕ್ ಮತ್ತು ಪ್ಯಾಟ್‌ ಕಮಿನ್ಸ್ ಇಂದು ನಡೆಯುವ ಪಂದ್ಯದಲ್ಲಿ ಮುಖಾಮುಖಿ ಆಗಿದ್ದಾರೆ. ಸ್ಟಾರ್ಕ್‌ ಕೋಲ್ಕತ್ತ ನೈಟ್‌ ರೈಡರ್ಸ್ ತಂಡದಲ್ಲಿದ್ದರೆ, ಕಮಿನ್ಸ್ ಸನ್‌ರೈಸರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಗಾಯಾಳಾಗಿ ಪುನರಾಗಮನ ಮಾಡುತ್ತಿರುವ ಕೆಕೆಆರ್ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಪ್ರದರ್ಶನದ ಮೇಲೂ ಕಣ್ಣಿರಲಿದೆ. ಬೆನ್ನುನೋವಿನಿಂದಾಗಿ ಅಯ್ಯರ್‌ ಕಳೆದ ಋತುವಿನಲ್ಲಿ ಆಡಲು ಆಗಿರಲಿಲ್ಲ.

ಹಿಂದೆ ಕೆಕೆಆರ್‌ ತಂಡದ ಯಶಸ್ವಿ ನಾಯಕ ಎನಿಸಿದ್ದ ಗೌತಮ್ ಗಂಭೀರ್‌ ಈಗ ಮೆಂಟರ್‌ ಆಗಿದ್ದಾರೆ.

ಸ್ಟಾರ್ಕ್‌ ಅವರನ್ನು ಕೆಕೆಆರ್‌ ತಂಡ ದಾಖಲೆಯ ಮೊತ್ತ ₹24.75 ಕೋಟಿಗೆ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈಗ ಎಡಗೈ ವೇಗದ ಬೌಲರ್ ಅದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ.

ಕಮಿನ್ಸ್‌, ಹರಾಜಿನಲ್ಲಿ ಎರಡನೇ ಅತಿ ಹೆಚ್ಚು (₹20.50 ಕೋಟಿ) ಪಡೆದಿದ್ದರು. ಕೆಲವು ಋತುಗಳಿಂದ ಪಾಯಿಂಟ್‌ ಪಟ್ಟಿಯ ಕೆಳಭಾಗದಲ್ಲಿ ಕಾಯಂ ಸ್ಥಾನ ಪಡೆಯುತ್ತಿರುವ ಹೈದರಾಬಾದ್ ತಂಡದ ಮನೋಬಲವನ್ನು ವೃದ್ಧಿಸಬೇಕಾದ ಸವಾಲು ಅವರ ಮುಂದಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT