ಭಾನುವಾರ, ನವೆಂಬರ್ 29, 2020
25 °C

IPL-2020 | DC vs KXIP: ಪೂರನ್ ಆಟದ ಸೊಬಗು; ಹ್ಯಾಟ್ರಿಕ್ ಜಯ ಸಾಧಿಸಿದ ಪಂಜಾಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ, ಇದೇ ಮೊದಲ ಸಲ ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸಿದ ದಾಖಲೆಯನ್ನು ಶಿಖರ್ ಧವನ್ ಮಾಡಿದರು. ಆದರೆ ಅವರ ಸಾಧನೆಗೆ ಗೆಲುವಿನ ಗೌರವ ಮಾತ್ರ ಸಿಗಲಿಲ್ಲ.

ಮಂಗಳವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶಿಖರ್ ಶತಕದ (ಔಟಾಗದೆ 106; 61 ಎಸೆತ,12 ಬೌಂಡರಿ, 3ಸಿಕ್ಸರ್, 173.77 ಸ್ಟ್ರೈಕ್‌ರೇಟ್) ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 164 ರನ್ ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್‌ ಇಲೆವನ್ ಪಂಜಾಬ್ 5 ವಿಕೆಟ್‌ಗಳಿಂದ ಜಯಿಸಿತು.

ನಿಕೊಲಸ್ ಪೂರನ್ (53; 28ಎ, 6ಬೌಂ, 3ಸಿ) ಅರ್ಧಶತಕದ ಬಲದಿಂದ ಕಿಂಗ್ಸ್ ತಂಡವು 19 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 167 ರನ್‌ ಗಳಿಸಿತು. ಇದರೊಂದಿಗೆ ಎರಡನೇ ಸುತ್ತಿನಲ್ಲಿ ಗೆಲುವಿನ ‘ಹ್ಯಾಟ್ರಿಕ್’ ಮಾಡಿತು. ಒಟ್ಟು ಎಂಟು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನಕ್ಕೇರಿತು. ಅದರೊಂದಿಗೆ  ತಂಡವು ಪ್ಲೇ ಆಫ್‌ ಪ್ರವೇಶಿಸುವ ಆಸೆ ಚಿಗುರಿದೆ.

ಶಿಖರ್ ದಾಖಲೆಯ ಬೆಡಗು: ಟಾಸ್ ಗೆದ್ದ ಡೆಲ್ಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಯಥಾಪ್ರಕಾರ ಪೃಥ್ವಿ ಶಾ ಬೇಗನೆ ನಿರ್ಗಮಿಸಿದರು. ಆದರೆ ‘ಗಬ್ಬರ್’ ಧವನ್ ಹೋದ ಪಂದ್ಯದ ಆಟವನ್ನೇ ಇಲ್ಲಿಯೂ ಪುನರಾವರ್ತಿಸಿದರು. ಈಚೆಗೆ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಅಜೇಯ ಶತಕ ಗಳಿಸಿದ್ದರು.

ಕಿಂಗ್ಸ್‌ ತಂಡದ ಮೊಹಮ್ಮದ್ ಶಮಿ, ಗ್ಲೆನ್ ಮ್ಯಾಕ್ಸ್‌ ವೆಲ್, ರವಿ ಬಿಷ್ಣೋಯಿ ಸೇರಿದಂತೆ ಆರು ಬೌಲರ್‌ಗಳನ್ನು ಶಿಖರ್ ದಂಡಿಸಿದರು.  28 ಎಸೆತಗಳಲ್ಲಿ ಅರ್ಧಶತಕ ಹೊಡೆದ ಶಿಖರ್, ಒಟ್ಟು 57 ಎಸೆತಗಳಲ್ಲಿ ಶತಕ ಪೂರೈಸಿದರು.

ಇದರೊಂದಿಗೆ ಒಂದೇ ಟೂರ್ನಿಯಲ್ಲಿ ಎರಡಕ್ಕಿಂತ ಹೆಚ್ಚು ಶತಕ ಹೊಡೆದವರ ಕ್ಲಬ್‌ ಸೇರಿದರು. ವಿರಾಟ್ ಕೊಹ್ಲಿ (4), ಕ್ರಿಸ್ ಗೇಲ್ (2), ಹಾಶೀಂ ಆಮ್ಲಾ (2) ಮತ್ತು ಶೇನ್ ವಾಟ್ಸನ್ (2) ಅವರ ಸಾಲಿಗೆ ಶಿಖರ್ ಸೇರಿದರು. 

ಆದರೆ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್‌ ಗಳಿಸದೇ ಔಟಾಗಿದ್ದು ತಂಡದ ಮೊತ್ತವು ಹೆಚ್ಚಾಗಲಿಲ್ಲ. ಆದರೂ ಡೆಲ್ಲಿ ಗೆಲುವಿಗಾಗಿ ಬೌಲರ್‌ಗಳು ಪ್ರಯತ್ನಿಸಿದರು. ಕಿಂಗ್ಸ್ ಆರಂಭಿಕ ಆಟಗಾರ ರಾಹುಲ್ ಬೇಗನೆ ಔಟಾಗಲು ಅಕ್ಷರ್ ಪಟೇಲ್ ಕಾರಣರಾದರು. ಮಯಂಕ್ ರನ್‌ಔಟ್ ಆದರು. ಕ್ರಿಸ್‌ಗೇಲ್‌ಗೆ ಆರ್. ಅಶ್ವಿನ್ ಪೆವಿಲಿಯನ್ ದಾರಿ ತೋರಿಸಿದರು. ಕಗಿಸೊ ರಬಾಡ ಅವರು ಪೂರನ್ ಮತ್ತುಮ್ಯಾಕ್ಸ್‌ವೆಲ್ (32 ರನ್) ವಿಕೆಟ್ ಪಡೆದರು. ಆದರೆ ಕೊನೆಯಲ್ಲಿ ದೀಪಕ್ ಹೂಡಾ ಮತ್ತು ಜೇಮ್ಸ್‌ ನಿಶಾಮ್ ಅವರನ್ನು ನಿಯಂತ್ರಿಸಲು ಡೆಲ್ಲಿಗೆ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು