ಶುಕ್ರವಾರ, ಡಿಸೆಂಬರ್ 2, 2022
22 °C

ಹಿಂದಿ ಪ್ರಚಾರ ಮಾಡುತ್ತಿದ್ದೀರೋ? ಕ್ರಿಕೆಟ್ ಕಾಮೆಂಟರಿ ನೀಡುತ್ತಿದ್ದೀರೋ?: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಹಾಗೂ ಬರೋಡಾ ರಣಜಿ ಕ್ರಿಕೆಟ್ ಪಂದ್ಯದ ವೇಳೆ ವೀಕ್ಷಕ ವಿವರಣೆಗಾರರು, ‘ಹಿಂದಿ ನಮ್ಮ ಮಾತೃಭಾಷೆ. ಪ್ರತಿಯೊಬ್ಬರೂ ಅದನ್ನು ಕಲಿಯಬೇಕು’ ಎಂದಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಣಜಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ 9ನೇ ಪಂದ್ಯವು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ವೀಕ್ಷಕ ವಿವರಣೆಗಾರರೊಬ್ಬರು ಪಂದ್ಯದ ವೇಳೆ ಕಾಮೆಂಟರಿ ನೀಡುತ್ತಾ, ‘ಪ್ರತಿಯೊಬ್ಬ ಭಾರತೀಯನೂ ಹಿಂದಿಯನ್ನು ಕಲಿಯಬೇಕು. ಹಿಂದಿ ನಮ್ಮ ಮಾತೃಭಾಷೆ. ಇದಕ್ಕಿಂತ ದೊಡ್ಡ ಭಾಷೆ ಮತ್ತೊಂದಿಲ್ಲ’ ಎಂದಿದ್ದಾರೆ.

ಆ ಮಾತಿಗೆ ಒಪ್ಪಿಗೆ ಸೂಚಿಸುವ ಮತ್ತೊಬ್ಬರು, ‘ವಾಸ್ತವವಾಗಿ, ಕೆಲವರು ‘ನಾವು ಕ್ರಿಕೆಟಿಗರು. ಇನ್ನೂ ಹಿಂದಿಯಲ್ಲಿ ಮಾತನಾಬೇಕಾ?’ ಎಂದು ಕೋಪದಿಂದ ಹೇಳುವುದನ್ನು ನೋಡಿದ್ದೇನೆ. ನೀವು ಭಾರತದಲ್ಲಿ ವಾಸವಿದ್ದೀರಿ ಎಂದಾದಮೇಲೆ ಮಾತೃಭಾಷೆಯಾಗಿರುವ ಹಿಂದಿಯನ್ನು ಖಂಡಿತಾ ಮಾತನಾಡಲೇಬೇಕು’ ಎಂದು ಸಮರ್ಥಿಸಿಕೊಂಡಿದ್ದಾರೆ.

ಈ ವಿಡಿಯೊ ಇದೀಗ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ನೆಟ್ಟಿಗರು, ‘ನೀವೇನು ಕ್ರಿಕೆಟ್‌ ವೀಕ್ಷಕ ವಿವರಣೆ ನೀಡುತ್ತಿದ್ದೀರೋ? ಅಥವಾ ಹಿಂದಿ ಪ್ರಚಾರ ನಡೆಸುತ್ತಿದ್ದೀರೋ?’ ಎಂದು ಪ್ರಶ್ನಿಸಿದ್ದಾರೆ.

‘ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ವೀಕ್ಷಕ ವಿವರಣೆಗಾರರೊಬ್ಬರು, ‘ಪ್ರತಿಯೊಬ್ಬ ಭಾರತೀಯನೂ ಹಿಂದಿಯನ್ನು ಕಲಿಯಬೇಕು’ ಎಂದು ಹೇಳುತ್ತಾರೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ. ತಪ್ಪು ಸಂದೇಶವನ್ನು ಹರಡಬೇಡಿ. ಪ್ರತಿಯೊಬ್ಬ ಭಾರತೀಯನೂ ಹಿಂದಿ ಕಲಿಯಬೇಕಾದ ಅಗತ್ಯವೇನೂ ಇಲ್ಲ’ ಎಂದು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಹಿಂದಿ ರಾಷ್ಟ್ರಭಾಷೆ ಅಲ್ಲ ಎಂಬುದನ್ನು ಇವರು ಅರ್ಥಮಾಡಿಕೊಳ್ಳುವುದೇ ಇಲ್ಲ’ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು #StopHindiImposition ಹ್ಯಾಷ್‌ ಟ್ಯಾಗ್‌ ಬಳಸಿ ಪ್ರತಿಕ್ರಿಯಿಸಿದ್ದಾರೆ.

ಜಯದತ್ತ ಕರ್ನಾಟಕ
ಕರ್ನಾಟಕ ತಂಡವು ನಾಕೌಟ್‌ ಹಂತ ಪ್ರವೇಶಿಸಲು ಈ ಪಂದ್ಯವು ಮಹತ್ವದ್ದಾಗಿತ್ತು. ಹೀಗಾಗಿ ಕಡೇಪಕ್ಷ ಇನಿಂಗ್ಸ್‌ ಮುನ್ನಡೆಯನ್ನಾದರೂ ಸಾಧಿಸಲೇಬೇಕಾದ ಒತ್ತಡ ಕರುಣ್‌ ನಾಯರ್‌ ಬಳಗಕ್ಕೆ ಇತ್ತು. ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬರೋಡ 85 ರನ್‌ಗಳಿಗೆ ಸರ್ವಪತನ ಕಂಡಿತ್ತು.

ಬಳಿಕ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ 223 ರನ್‌ ಗಳಿಸಿ ಆಲೌಟ್ ಆಯಿತು. ಹೀಗಾಗಿ 148 ರನ್‌ ಮುನ್ನಡೆ ಸಾಧಿಸಿತ್ತು.

ಸದ್ಯ ಎರಡನೇ ಇನಿಂಗ್ಸ್‌ ಆರಂಭಿಸಿರುವ ಬರೋಡ ತಂಡ 5 ವಿಕೆಟ್‌ ನಷ್ಟಕ್ಕೆ 208 ರನ್‌ ಕಲೆಹಾಕಿದೆ. 60 ರನ್ ಲೀಡ್‌ ಪಡೆದಿರುವ ಪ್ರವಾಸಿ ಪಡೆಯನ್ನು ಬೇಗನೆ ನಿಯಂತ್ರಿಸಿ ಜಯ ಸಾಧಿಸುವುದು ಕರ್ನಾಟಕದ ಯೋಜನೆಯಾಗಿದೆ.

ಆದರೆ, ಉಳಿದಿರುವ ಐದು ವಿಕೆಟ್‌ಗಳಿಂದ ಮತ್ತಷ್ಟು ರನ್‌ ಕಲೆಹಾಕುವ ಲೆಕ್ಕಾಚಾರ ಬರೋಡಾ ತಂಡದ್ದು. ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಸ್ಪಷ್ಟ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು