ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಮಯಂಕ್ ಬಳಗಕ್ಕೆ ಜಯದ ಅವಕಾಶ

ರಣಜಿ ಕ್ರಿಕೆಟ್: ತಮಿಳುನಾಡಿಗೆ ಕಠಿಣ ಗುರಿ; ಅಜಿತ್ ರಾಮ್‌ಗೆ ಐದು ವಿಕೆಟ್
Published 11 ಫೆಬ್ರುವರಿ 2024, 16:03 IST
Last Updated 11 ಫೆಬ್ರುವರಿ 2024, 16:03 IST
ಅಕ್ಷರ ಗಾತ್ರ

ಚೆನ್ನೈ: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ರಣಜಿ ಟ್ರೋಫಿ  ಪಂದ್ಯದಲ್ಲಿ ಜಯದ ಹಾದಿಯಲ್ಲಿ ಸಾಗಿದೆ.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 215 ರನ್‌ಗಳ ದೊಡ್ಡ ಮುನ್ನಡೆ ಪಡೆದ ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ 139 ರನ್‌ಗಳಿಗೆ ಕುಸಿಯಿತು. ಆದರೆ, 355 ರನ್‌ಗಳ ಗುರಿ ನೀಡಿರುವುದರಿಂದ ಗೆಲುವಿನ ಅವಕಾಶ ಮಯಂಕ್ ಬಳಗಕ್ಕೆ ಹೆಚ್ಚಿದೆ. ಎರಡನೇ ಇನಿಂಗ್ಸ್ ಆರಂಭಿಸಿರುವ  ತಮಿಳುನಾಡು ತಂಡವು ದಿನದಾಟದ ಮುಕ್ತಾಯಕ್ಕೆ 1 ವಿಕೆಟ್‌ಗೆ 36 ರನ್ ಗಳಿಸಿದೆ. ಗೆಲ್ಲಲು  ಇನ್ನೂ 319 ರನ್‌ಗಳು ಬೇಕು. ನಾಲ್ಕನೇ ದಿನದ ಪಿಚ್‌ನಲ್ಲಿ  ಇದು ಕಠಿಣ ಸವಾಲಾಗಿದೆ.  ಆತಿಥೇಯರು ಡ್ರಾ ಮಾಡಿಕೊಳ್ಳಲೂ ಪ್ರಯತ್ನಿಸಬಹುದು.

ತಮಿಳುನಾಡಿನ ಆರಂಭಿಕ ಬ್ಯಾಟರ್ ಜಗದೀಶನ್ ಅವರ ವಿಕೆಟ್‌ ಅನ್ನು ವೈಶಾಖ ವಿಜಯಕುಮಾರ್ ಗಳಿಸಿದರು. ಕ್ರೀಸ್‌ನಲ್ಲಿ ವಿಮಲ್ ಕುಮಾರ್ (ಬ್ಯಾಟಿಂಗ್ 16) ಮತ್ತು ಪ್ರದೋಷ್ ಪಾಲ್ ಬ್ಯಾಟಿಂಗ್ 10) ಇದ್ದಾರೆ.

ವೈಶಾಖ ಅವರು ಮೊದಲ ಇನಿಂಗ್ಸ್‌ನಲ್ಲಿಯೂ ನಾಲ್ಕು ವಿಕೆಟ್ ಗಳಿಸಿದರು. ಶನಿವಾರ ದಿನದಾಟದ ಮುಕ್ತಾಯಕ್ಕೆ ತಮಿಳುನಾಡು ತಂಡವು 7 ವಿಕೆಟ್‌ಗಳಿಗೆ 129 ರನ್ ಗಳಿಸಿತ್ತು. ಮೂರನೇ ದಿನದಾಟದ ಬೆಳಿಗ್ಗೆ ಈ ಮೊತ್ತಕ್ಕೆ ಆತಿಥೇಯ ಬ್ಯಾಟರ್‌ಗಳು 26 ರನ್ ಸೇರಿಸಿದರು. ಉಳಿದ ಮೂರು ವಿಕೆಟ್‌ಗಳನ್ನೂ ವೈಶಾಖ ತಮ್ಮ ಬುಟ್ಟಿಗೆ ಹಾಕಿಕೊಂಡರು. 

ವಿದ್ವತ್ ಕಾವೇರಪ್ಪ ಅವರು ಇನಿಂಗ್ಸ್‌ನಲ್ಲಿ  16 ಓವರ್‌ ಬೌಲಿಂಗ್ ಮಾಡಿ 14 ರನ್‌ ನೀಡಿ ಒಂದು ವಿಕೆಟ್ ಗಳಿಸಿದರು.

ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕದ ಬ್ಯಾಟರ್‌ಗಳು ಪರದಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಶತಕ ಹೊಡೆದಿದ್ದ ದೇವದತ್ತ ಪಡಿಕ್ಕಲ್ 36 ರನ್‌ ಗಳಿಸಿದರು. ಅವರೇ  ಗರಿಷ್ಠ ಸ್ಕೋರರ್ ಅದರು. ಹಾರ್ದಿಕ್ ರಾಜ್ 20 ಮತ್ತು ವೈಶಾಖ (ಔಟಾಗದೆ 22) ಬ್ಯಾಟಿಂಗ್‌ನಲ್ಲಿಯೂ ಕಾಣಿಕೆ ನೀಡಿದರು. 56.4 ಓವರ್‌ಗಳಲ್ಲಿ 139 ರನ್‌ಗಳಿಗೆ  ಆಲೌಟ್ ಆಯಿತು.

ಆತಿಥೇಯ ತಂಡದ ಎಡಗೈ ಸ್ಪಿನ್ನರ್ ಅಜಿತ್ ರಾಮ್ ಅವರು ಐದು ವಿಕೆಟ್ ಗಳಿಸಿ ಕರ್ನಾಟಕಕ್ಕೆ ಆಘಾತ ನೀಡಿದರು. ನಾಯಕ ಸಾಯಿಕಿಶೋರ್ ಕೂಡ ಉತ್ತಮ ದಾಳಿ ನಡೆಸಿ ಎರಡು ವಿಕೆಟ್ ಗಳಿಸಿದರು.

ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಅವರು ಪಂದ್ಯ ವೀಕ್ಷಿಸಿದರು. ಅವರ ಗಮನ ಸೆಳೆಯಲು ಉಭಯ ತಂಡಗಳ ಆಟಗಾರರು ತಮ್ಮ ಸಾಮರ್ಥ್ಯವನ್ನು ಪಣಕ್ಕೊಡ್ಡಿದ್ದಾರೆ. ಅದರಲ್ಲೂ ಈ ಪಂದ್ಯದಲ್ಲಿ ಇದುವರೆಗೆ ಉತ್ತಮವಾಗಿ ಆಡಿರುವ ದೇವದತ್ತ ಮತ್ತು ವೈಶಾಖ ಅವರ ಮೇಲೆ ಅಜಿತ್ ಗಮನ ಹರಿದಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT