ಭಾನುವಾರ, ಮೇ 29, 2022
21 °C

ಐಪಿಎಲ್ 2022: ಮುಂದಿನ ವರ್ಷವೂ ಸಿಎಸ್‌ಕೆ ಪರ ಆಡಲಿದ್ದಾರೆಯೇ ಎಂ.ಎಸ್.ಧೋನಿ?

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಆಡಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂ.ಎಸ್.ಧೋನಿ ಹೇಳಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಿರ್ಧಾರ ಕೈಗೊಳ್ಳಲು ಆತುರಪಡಬೇಕಾದ ಅಗತ್ಯವಿಲ್ಲ. ಮುಂದಿನ ಸೀಸನ್‌ಗೆ ಸಾಕಷ್ಟು ಸಮಯ ಇದೆ ಎಂದು ‘ಕ್ಯಾಪ್ಟನ್ ಕೂಲ್’ ಹೇಳಿದ್ದಾರೆ.

ಚೆನ್ನೈಯಲ್ಲಿ ನಡೆದ ‘ಚಾಂಪಿಯನ್ಸ್‌ ಕಾಲ್’ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ‘ಐಪಿಎಲ್‌ನಲ್ಲಿ ಆಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಾನು ಯೋಚಿಸಲಿದ್ದೇನೆ. ಅದಕ್ಕೆ ಸಾಕಷ್ಟು ಸಮಯವಿದೆ. ಇದೀಗ ಇನ್ನೂ ನವೆಂಬರ್ ತಿಂಗಳು. ‘ಐಪಿಎಲ್‌ 2022’ ಸೀಸನ್ ಏಪ್ರಿಲ್‌ನಲ್ಲಿ ಆರಂಭವಾಗಲಿದೆ’ ಎಂದು ಹೇಳಿದ್ದಾರೆ.

ಓದಿ: 

‘ನನ್ನ ಕ್ರಿಕೆಟ್ ಜೀವನವನ್ನು ಶಿಸ್ತಿನಿಂದ ಯೋಜಿಸಿದ್ದೇನೆ. ಕೊನೆಯ ಅಂತರರಾಷ್ಟ್ರೀಯ ಏಕದಿನ ಪಂದ್ಯವನ್ನು ತವರೂರು ರಾಂಚಿಯಲ್ಲಿ ಆಡಿದ್ದೆ. ಟಿ20 ಮಾದರಿಯ ಪಂದ್ಯವನ್ನು ಚೆನ್ನೈನಲ್ಲಿ ಆಡುವ ಆಸೆ ಇದೆ. ಅದು ಮುಂದಿನ ವರ್ಷವೂ ಆಗಬಹುದು ಅಥವಾ ಐದು ವರ್ಷಗಳ ನಂತರವೂ ಆಗಬಹುದು‘ ಎಂದು ಧೋನಿ ಹೇಳಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಧೋನಿ, ‘ಚೆನ್ನೈ ತಂಡದ ಅಭಿಮಾನಿ ಬಳಗವು ತಮಿಳುನಾಡಿನಿಂದ ಹೊರಗೂ ಇದೆ. ಬೆಂಗಳೂರು, ಜೋಹಾನ್ಸ್‌ಬರ್ಗ್ ಮತ್ತು ದುಬೈನಲ್ಲಿಯೂ ಈ ತಂಡಕ್ಕೆ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಎರಡು ವರ್ಷ ನಮ್ಮ ತಂಡದ ಪ್ರದರ್ಶನ ಅಷ್ಟು ಚೆನ್ನಾಗಿರಲಿಲ್ಲ. ಆ ಸಂದರ್ಭದಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ತಂಡದ ಕುರಿತು ಬಹಳಷ್ಟು ಚರ್ಚೆಗಳು ನಡೆದವು. ಆಗಲೂ ಅಭಿಮಾನಿಗಳು ನಮ್ಮೊಂದಿಗೆ ಇದ್ದರು’ ಎಂದರು.

ಮುಂದಿನ ವರ್ಷದ ಐಪಿಎಲ್‌ಗೆ ಚೆನ್ನೈ ತಂಡವು ಧೋನಿ, ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಬ್ಯಾಟ್ಸ್‌ಮನ್ ಋತುರಾಜ್ ಗಾಯಕವಾಡ್ ಅವರನ್ನು ಉಳಿಸಿಕೊಂಡಿದೆ.

ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಇಂಡಿಯಾ ಸಿಮೆಂಟ್ಸ್‌ ಉಪಾಧ್ಯಕ್ಷ ಎನ್. ಶ್ರೀನಿವಾಸನ್, ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹಾಜರಿದ್ದರು.

ಸಿಎಸ್‌ಕೆ ತಂಡವು 2021ರ ಅವಧಿಯ ಐಪಿಎಲ್‌ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ, ಈ ಬಾರಿಯ ಸೀಸನ್ ನಂತರ ಧೋನಿ ಐಪಿಎಲ್‌ ಕ್ರಿಕೆಟ್‌ನಿಂದಲೂ ನಿವೃತ್ತರಾಗಲಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು. ಆದರೆ ಈ ವಿಚಾರವಾಗಿ ಧೋನಿ ತುಟಿಬಿಚ್ಚಿರಲಿಲ್ಲ.

ಧೋನಿ ಅವರು ಕಳೆದ ವರ್ಷ ಆಗಸ್ಟ್ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಮುಂದಿನ ವರ್ಷ ಐಪಿಎಲ್‌ನಲ್ಲಿ ಆಡುತ್ತೀರಾ ಎಂಬ ಪ್ರಶ್ನೆಗೆ ಕಳೆದ ಅಕ್ಟೋಬರ್‌ನಲ್ಲಿ ಉತ್ತರಿಸಿದ್ದ ಅವರು, ‘ವಿದಾಯದ ವಿಷಯಕ್ಕೆ ಬಂದಾಗ, ಇನ್ನೂ ನಾನು ಸಿಎಸ್‌ಕೆಗಾಗಿ ಆಡುವುದನ್ನು ನೀವು ನೋಡಬಹುದು. ಅದು ನನ್ನ ವಿದಾಯದ ಪಂದ್ಯವಾಗಿರಬಹುದು. ಆದ್ದರಿಂದ ನನಗೆ ವಿದಾಯ ಹೇಳಲು ನಿಮಗೆ ಅವಕಾಶ ದೊರಕಲಿದೆ. ನಾವು ಚೆನ್ನೈಗೆ ಬರುತ್ತೇವೆ ಮತ್ತು ಅಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡುತ್ತೇನೆ. ಅಭಿಮಾನಿಗಳನ್ನು ಕೂಡ ಭೇಟಿ ಮಾಡಲಿದ್ದೇನೆ’ ಎಂದು ಹೇಳಿದ್ದರು.

ಓದಿ: 

ಮುಂದೆ ಕ್ರಿಕೆಟ್‌ನಲ್ಲಿ ತಮ್ಮ ಭಾಗವಹಿಸುವಿಕೆಯು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ಅವಲಂಬಿತವಾಗಿದೆ ಎಂದೂ ಸಿಎಸ್‌ಕೆ ಐಪಿಎಲ್ ಪ್ರಶಸ್ತಿ ಜಯಿಸಿದ ಬಳಿಕ ಅವರು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು