ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji | ಸೆಮಿಫೈನಲ್‌ನಲ್ಲಿ ಸೋತ ತಮಿಳುನಾಡು; 42ನೇ ಪ್ರಶಸ್ತಿ ಜಯದತ್ತ ಮುಂಬೈ

Published 4 ಮಾರ್ಚ್ 2024, 11:42 IST
Last Updated 4 ಮಾರ್ಚ್ 2024, 11:42 IST
ಅಕ್ಷರ ಗಾತ್ರ

ಮುಂಬೈ: ಈ ಬಾರಿಯ ರಣಜಿ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಇನಿಂಗ್ಸ್‌ ಹಾಗೂ 70 ರನ್‌ ಅಂತರದ ಗೆಲುವು ಸಾಧಿಸಿದ ಮುಂಬೈ, ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಒಟ್ಟಾರೆ 48ನೇ ಬಾರಿ ಅಂತಿಮ ಹಂತಕ್ಕೆ ತಲುಪಿರುವ ಈ ತಂಡ, 42ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಇಲ್ಲಿ ಶನಿವಾರ ಆರಂಭವಾದ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ ಕಳೆದುಕೊಂಡು 353 ರನ್‌ ಗಳಿಸಿತ್ತು. ಆ ಮೊತ್ತಕ್ಕೆ ಇಂದು 25 ರನ್ ಸೇರಿಸಿ ಆಲೌಟ್‌ ಆಗುವುದರೊಂದಿಗೆ 232 ರನ್‌ಗಳ ಭಾರಿ ಮುನ್ನಡೆ ಸಾಧಿಸಿತು.

ಇದಕ್ಕುತ್ತರವಾಗಿ ಎರಡನೇ ಇನಿಂಗ್ಸ್ ಆರಂಭಿಸಿದ ತಮಿಳುನಾಡು, ಮತ್ತೆ ವೈಫಲ್ಯ ಅನುಭವಿಸಿತು. ಮುಂಬೈ ಪಡೆಯ ಶಿಸ್ತಿನ ದಾಳಿ ಎದುರು ಕಂಗೆಟ್ಟ ಆರ್‌. ಸಾಯಿಕಿಶೋರ್‌ ಪಡೆ, 162 ರನ್‌ ಗಳಿಸುವುಷ್ಟರಲ್ಲೇ ಸರ್ವಪತನ ಕಂಡಿತು. ಬಾಬಾ ಇಂದ್ರಜಿತ್ 70 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾವ ಬ್ಯಾಟರ್‌ ಅರ್ಧಶತಕವನ್ನೂ ಗಳಿಸಲಿಲ್ಲ. ಈ ತಂಡದ ಆರು ಮಂದಿಗೆ ಎರಡಂಕಿ ಗಳಿಸಲೂ ಸಾಧ್ಯವಾಗಲಿಲ್ಲ.

ಹೀಗಾಗಿ ಪಂದ್ಯ, ಮೂರೇ ದಿನಗಳಲ್ಲಿ ಮುಕ್ತಾಯವಾಯಿತು.

ಮುಂಬೈ ಪರ ಶಮ್ಸ್ ಮುಲಾನಿ ನಾಲ್ಕು ವಿಕೆಟ್‌ ಪಡೆದರೆ, ಶಾರ್ದೂಲ್‌ ಠಾಕೂರ್‌, ಮೋಹಿತ್‌ ಅವಸ್ಥಿ, ತನುಷ್ ಕೋಟ್ಯಾನ್ ತಲಾ ಎರಡು ವಿಕೆಟ್‌ ಹಂಚಿಕೊಂಡರು.

ಮೊದಲ ಇನಿಂಗ್ಸ್‌ನಲ್ಲೂ ವೈಫಲ್ಯ
ತಮಿಳುನಾಡು ಪಡೆಯ ಬ್ಯಾಟರ್‌ಗಳು ಮೊದಲ ಇನಿಂಗ್ಸ್‌ನಲ್ಲೂ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ವಿಜಯ್‌ ಶಂಕರ್‌ (44) ಮತ್ತು ವಾಷಿಂಗ್ಟನ್‌ ಸುಂದರ್‌ (43) ಹೊರತುಪಡಿಸಿ ಮತ್ಯಾರೂ ಸೆಮಿಫೈನಲ್‌ ಪಂದ್ಯಕ್ಕೆ ತಕ್ಕಂತೆ ಬ್ಯಾಟ್‌ ಬೀಸಲಿಲ್ಲ.

ಇದರಿಂದಾಗಿ ಸಾಯಿಕಿಶೋರ್‌ ಬಳಗ 146 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

ಅಲ್ಪ ಮೊತ್ತದೆದುರು ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ 378 ರನ್‌ ಗಳಿಸಿ ಆಲೌಟ್‌ ಆಗಿತ್ತು. ಮುಷೀರ್‌ ಖಾನ್‌ (55 ರನ್‌) ಹೊರತುಪಡಿಸಿ ಅಗ್ರ ಕ್ರಮಾಂಕದ ಉಳಿದ ಬ್ಯಾಟರ್‌ಗಳು ಕೈಕೊಟ್ಟರೂ, ಕೆಳಕ್ರಮಾಂಕದ ಆಟಗಾರರು ಮಿಂಚಿದರು.

7ನೇ ಕ್ರಮಾಂಕದಲ್ಲಿ ಬಂದ ಹಾರ್ದಿಕ್‌ ತಾಮೋರ್‌ (35 ರನ್‌), 9 ಹಾಗೂ 10ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮಧ್ಯಮ ವೇಗಿಗಳಾದ ಶಾರ್ದೂಲ್‌ ಠಾಕೂರ್‌ (109 ರನ್‌) ಮತ್ತು ತನುಷ್ ಕೋಟ್ಯಾನ್ (ಅಜೇಯ 89 ರನ್‌) ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು.

ಹಾರ್ದಿಕ್‌ ಹಾಗೂ ಠಾಕೂರ್‌ 8ನೇ ವಿಕೆಟ್‌ ಜೊತೆಯಾಟದಲ್ಲಿ 105 ರನ್ ಗಳಿಸಿದರು. ಬಳಿಕ ತನುಷ್‌ ಜೊತೆಯಾದ ಠಾಕೂರ್‌ 9ನೇ ವಿಕೆಟ್‌ ಪಾಲುದಾರಿಕೆಯಲ್ಲಿ 79 ರನ್‌ ಸೇರಿಸಿದರು.

ಟೂರ್ನಿಯ ಕಳೆದ ಪಂದ್ಯದಲ್ಲಿ 9 ಮತ್ತು 10ನೇ ಕ್ರಮಾಂಕದಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದ ತನುಷ್ ಮತ್ತು ತುಷಾರ್ ದೇಶಪಾಂಡೆ (26) ಜೋಡಿ, ಅಂತಿಮ ವಿಕೆಟ್‌ಗೆ 88 ರನ್‌ ಕಲೆಹಾಕಿತು.

ಫೈನಲ್‌ನಲ್ಲಿ ಎದುರಾಳಿ ಯಾರು?
ಟೂರ್ನಿಯ ಮತ್ತೊಂದು ಸೆಮಿಫೈನಲ್‌ನಲ್ಲಿ ವಿದರ್ಭ ಹಾಗೂ ಮಧ್ಯಪ್ರದೇಶ ಸೆಣಸಾಟ ನಡೆಸುತ್ತಿವೆ.

ಮೊದಲು ಬ್ಯಾಟಿಂಗ್‌ ಮಾಡಿದ ವಿದರ್ಭ, ಮೊದಲ ಇನಿಂಗ್ಸ್‌ನಲ್ಲಿ ಕೇವಲ 170ರನ್‌ ಗಳಿಗೆ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಮಧ್ಯಪ್ರದೇಶ ತಂಡ 252 ರನ್‌ ಕಲೆಹಾಕಿತ್ತು.

82 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ವಿದರ್ಭ, ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು 343 ರನ್‌ ಗಳಿಸಿದೆ. ಮಧ್ಯಪ್ರದೇಶ ತಂಡದ ಬಾಕಿ ಚುಕ್ತಾ ಮಾಡಿ, 261 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

ಮಧ್ಯಮ ಕ್ರಮಾಂಕದ ಯಶ್‌ ರಾಥೋಡ್ (80) ಮತ್ತು ಆದಿತ್ಯ ಸರ್ವಾತೆ (14) ಕ್ರೀಸ್‌ನಲ್ಲಿದ್ದಾರೆ. ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಯಾರು ಗೆಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಪಂದ್ಯದಲ್ಲಿ ಗೆದ್ದವರು ಮಾರ್ಚ್‌ 10ರಂದು ಆರಂಭವಾಗುವ ಫೈನಲ್‌ ಪಂದ್ಯದಲ್ಲಿ ಮುಂಬೈಗೆ ಸವಾಲೊಡ್ಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT