ಶನಿವಾರ, ಜೂನ್ 19, 2021
22 °C

ಕೊರೊನಾ ವಿರುದ್ಧ ಹೋರಾಡಲು ಇನ್ನೊಂದು ಜೊತೆಯಾಟಬೇಕು: ಪ್ರಧಾನಿಗೆ ಯುವಿ–ಕೈಫ್ ನೆನಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2002ರಲ್ಲಿ ನಡೆದ ನಾಟ್‌ವೆಸ್ಟ್‌ ಸರಣಿಯ ಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಡಲು ಛಲಬಿಡದೆ ಆಡಿದ್ದ ಯುವರಾಜ್ ಸಿಂಗ್‌ ಹಾಗೂ ಮೊಹಮದ್‌ ಕೈಫ್‌ ಅವರ ಆಟವನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅದೇ ರೀತಿಯಲ್ಲಿ ದೇಶದ ಪ್ರತಿಯೊಬ್ಬರೂ ಜನತಾ ಕರ್ಫ್ಯೂಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್‌–19 ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ತಿಳಿಸಿರುವ ಮಾಡಿರುವ ಮೋದಿ, ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ದೇಶದಲ್ಲಿ ಇದುವರೆಗೆ ಸುಮಾರು 270 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ.

ಜನತಾ ಕರ್ಫ್ಯೂ ಬಗ್ಗೆ ಟ್ವೀಟ್‌ ಮಾಡಿದ್ದ ಕೈಫ್‌, ‘ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಕರೆ ನೀಡಿದ್ದಾರೆ. ಮುಂಬರುವ ಸವಾಲುಗಳನ್ನು ಜನತಾ ಕರ್ಫ್ಯೂ ಮೂಲಕ ಎದುರಿಸಬೇಕು. ನಮ್ಮ ಪ್ರೀತಿಪಾತ್ರರು ಹಾಗೂ ದೇಶದ ಜನರಿಗಾಗಿ ಜವಾಬ್ದಾರಿ ತೆಗೆದುಕೊಳ್ಳಬೇಕಾದ ಸಮಯ ಇದಾಗಿದೆ’ ಎಂದು ಬರೆದುಕೊಂಡಿದ್ದರು.

ಈ ಟ್ವೀಟ್‌ ಅನ್ನು ಹಂಚಿಕೊಂಡಿರುವ ಮೋದಿ, ‘ನಾವು ಯಾವಾಗಲೂ ನೆನಪಿಟ್ಟುಕೊಳ್ಳುವಂತಹ ಜೊತೆಯಾಟವಾಡಿದ ಇಬ್ಬರು ಕ್ರಿಕೆಟಿಗರು ಇಲ್ಲಿದ್ದಾರೆ. ಈಗ ಅವರು ಹೇಳಿದಂತೆ, ಇದು ಇನ್ನೊಂದು ಜೊತೆಯಾಟವಾಡಬೇಕಾದ (ಒಂದಾಗಿ ಮುನ್ನಡೆಯಬೇಕಾದ) ಸಮಯವಾಗಿದೆ. ಈ ಬಾರಿ ಸಂಪೂರ್ಣ ಭಾರತ ಕೊರೊನಾ ವೈರಸ್‌ ವಿರುದ್ಧ ಒಂದಾಗಿ ನಿಲ್ಲಬೇಕಿದೆ’ ಎಂದು ಹೇಳಿದ್ದಾರೆ.

ಕೈಫ್‌–ಯುವಿ ಜೊತೆಯಾಟ
2002ರಲ್ಲಿ ಭಾರತ, ಇಂಗ್ಲೆಂಡ್‌ ಹಾಗೂ ಶ್ರೀಲಂಕಾ ತಂಡಗಳು ತ್ರಿಕೋನ ಏಕದಿನ (ನಾಟ್‌ವೆಸ್ಟ್‌) ಸರಣಿ ಆಡಿದ್ದವು. ಇಂಗ್ಲೆಂಡ್‌ನಲ್ಲಿ ನಡೆದ ಈ ಟೂರ್ನಿಯ ಫೈನಲ್‌ನಲ್ಲಿ ಆತಿಥೇಯ ಆಂಗ್ಲರು ಮತ್ತು ಭಾರತ ತಂಡಗಳು ಸೆಣಸಿದ್ದವು.

ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರು ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 325 ರನ್‌ ಗಳಿಸಿದ್ದರು. ಈ ಮೊತ್ತ ಬೆನ್ನತ್ತಿದ ಭಾರತ 146ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ ಕಳೆದುಕೊಂಡಿತ್ತು.

ಈ ವೇಳೆ ಆರನೇ ವಿಕೆಟ್‌ಗೆ ಜೊತೆಯಾದ ಯುವಿ ಮತ್ತು ಕೈಫ್‌ 121ರನ್ ಜೊತೆಯಾಟವಾಡಿದ್ದರು. 63 ಎಸೆತಗಳಲ್ಲಿ 69 ರನ್‌ ಗಳಿಸಿದ್ದ ಯುವಿ ಔಟಾದ ಬಳಿಕವೂ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೊಂದಿಗೆ ದಿಟ್ಟ ಆಟವಾಡಿದ ಕೈಫ್‌, ತಂಡವನ್ನು ಅಜೇಯವಾಗಿ ಗೆಲುವಿನ ದಡ ಸೇರಿಸಿದ್ದರು. ಭಾರತ 49.3 ಓವರ್‌ಗಳಲ್ಲಿ 8 ವಿಕೆಟ್‌ ಗಳೆದುಕೊಂಡು 326 ರನ್‌ ಗಳಿಸಿತ್ತು.

ಕೇವಲ 75 ಎಸೆತಗಳನ್ನು ಆಡಿದ ಕೈಫ್‌ 87 ರನ್‌ ಗಳಿಸಿದ್ದರು.

ಈ ಪಂದ್ಯದ ಬಳಿಕ ಭಾರತ ತಂಡದ ಆಗಿನ ನಾಯಕ ಮತ್ತು ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ಅಂಗಿ ಬಿಚ್ಚಿ ಸಂಭ್ರಮಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು