ಶನಿವಾರ, ಮೇ 15, 2021
25 °C

PV Web Exclusive | ಧೋನಿ ನೆರಳಲ್ಲಿ ಅರಳಿದ ದೀಪಕ್ ಚಾಹರ್

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಆಟದ ಮನೆ

***

ಮಹೇಂದ್ರ ಸಿಂಗ್ ಧೋನಿ ಆಟಕ್ಕೆ ಹಳೆಯ ಲಯವಿಲ್ಲ, ನಿಜ. ಅವರು ನೀರು–ಗೊಬ್ಬರ ಹಾಕಿ ಬೆಳೆಸುತ್ತಿರುವ ಪ್ರತಿಭೆಗಳು ಆಗೀಗ ಫಲ ಕೊಟ್ಟಾಗ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ದೀಪಕ್ ಚಾಹರ್ ಹೊಸ ಚೆಂಡಿನ ಕರಾಮತ್ತು ಮೊನ್ನೆ ಕಾಣಿಸಿದ್ದೂ ಅದನ್ನೇ.

***

ಕೆಲವು ಸಂಗತಿಗಳು ಕ್ರಿಕೆಟ್‌ನಲ್ಲಿ ಒಳಗಣ್ಣಿಗಷ್ಟೇ ಕಾಣುತ್ತವೆ. ‘ಮಹೇಂದ್ರ ಸಿಂಗ್ ಧೋನಿ ಮೊದಲಿನಷ್ಟು ಲೀಲಾಜಾಲವಾಗಿ ಆಡಲು ವಯಸ್ಸು ಅನುವುಗೊಡುತ್ತಿಲ್ಲ. ಮರ್ಯಾದೆಯಾಗಿ ಅವರು ನಿವೃತ್ತರಾಗಲಿ’ ಎಂದು ಅಪ್ಪಣೆ ಕೊಡಿಸುವಂತೆ ಮಾತನಾಡುವವರ ಶಬ್ದಗಳು ಅವರ ಕಿವಿಗೂ ತಲುಪದೇ ಇರಲಾರವು. ಆದರೆ, ನಾಯಕರಾಗಿ ಧೋನಿ ಅವರ ಕೆಲವು ನಡೆಗಳು ಕುತೂಹಲಕಾರಿ. ಅವುಗಳಲ್ಲಿ ಇತ್ತೀಚೆಗೆ ಎದ್ದುಕಂಡದ್ದು ದೀಪಕ್ ಚಾಹರ್ ಎಂಬ ಪ್ರತಿಭಾವಂತ ಯುವಕನ ಮೇಲೆ ಅವರಿಟ್ಟ ನಂಬುಗೆ.
ಪಂಜಾಬ್ ಕಿಂಗ್ಸ್ ತಂಡದ ಎದುರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್‌ 16ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಚಾಹರ್ 13 ರನ್‌ ಮಾತ್ರ ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ನಾಲ್ಕು ಓವರ್‌ಗಳಲ್ಲಿ 18 ‘ಡಾಟ್‌ ಬಾಲ್‌’ಗಳು ಬಂದದ್ದು ವಿಶೇಷ. ಚುಟುಕು ಕ್ರಿಕೆಟ್‌ನಲ್ಲಿ ಅಷ್ಟೊಂದು ಎಸೆತಗಳಲ್ಲಿ ಒಂದೂ ರನ್ ಕೊಡದೆ ಬ್ಯಾಟ್ಸ್‌ಮನ್‌ನನ್ನು ನಿಯಂತ್ರಿಸುವುದು ಈ ಕಾಲಘಟ್ಟದಲ್ಲಿ ಅತ್ಯಪರೂಪ.

ಇನಿಂಗ್ಸ್‌ನ ತಮ್ಮ ಮೊದಲ ಓವರ್‌ನಲ್ಲೇ ಮಯಾಂಕ್ ಅಗರ್‌ವಾಲ್ ಅವರನ್ನು ಬೌಲ್ಡ್‌ ಮಾಡಿದ್ದು ಮನಮೋಹಕ. ಗುಡ್‌ ಲೆಂಗ್ತ್‌ಗಿಂತ ಒಂದು ಸ್ವಲ್ಪ ಹೆಚ್ಚು, ಓವರ್‌ ಪಿಚ್‌ಗಿಂತ ತುಸು ಕಡಿಮೆ ಎನ್ನಬಹುದಾದ ಲೆಂಗ್ತ್‌ನ ಎಸೆತವದು. ಪುಟಿದ ಮೇಲೆ ತುಸುವೇ ಔಟ್‌ ಸ್ವಿಂಗ್‌ ಆಗಿ, ವಿಕೆಟ್‌ನ ಮೇಲ್ಭಾಗಕ್ಕೆ ಬಡಿಯಿತು.
ಆಮೇಲೆ ಕ್ರಿಸ್‌ ಗೇಲ್, ನಿಕೊಲಸ್ ಪೂರನ್, ದೀಪಕ್ ಹೂಡಾ ಅವರನ್ನೂ ದೀಪಕ್ ಚಾಹರ್ ತಮ್ಮ ಸ್ವಿಂಗ್‌ ಹಾಗೂ ವೇಗ ಬದಲಾವಣೆಯ ಕರಾಮತ್ತಿನ ಮೂಲಕವೇ ಪೆವಿಲಿಯನ್‌ಗೆ ಕಳುಹಿಸಿದರು.

ಇವರ ಮೇಲೆ ಧೋನಿ ಕೆಲವು ಋತುಗಳಿಂದ ನಂಬಿಕೆ ಇಡುತ್ತಲೇ ಬಂದಿದ್ದಾರೆ. 2019ರಲ್ಲಿ ಇದೇ ಪಂಜಾಬ್ ತಂಡದ ವಿರುದ್ಧ ಒಂದು ಪಂದ್ಯದಲ್ಲಿ ದೀಪಕ್‌ಗೆ ಧೋನಿ 19ನೇ ಓವರ್‌ ಬೌಲ್ ಮಾಡಲು ಕೊಟ್ಟಿದ್ದರು. 36 ರನ್‌ಗಳು ಗೆಲ್ಲಲು ಬೇಕಿದ್ದವು. ಆಗ ಸತತವಾಗಿ ಎರಡು ನೋಬಾಲ್‌ಗಳನ್ನು ದೀಪಕ್ ಹಾಕಿದರು. ಧೋನಿ ಸಿಟ್ಟಿಗೆದ್ದರು. ಅವರ ಬಳಿಗೆ ಹೋಗಿ ಬೈಯಲಾರಂಭಿಸಿದರು. ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿನಿಂತ ಹುಡುಗ, ನಾಯಕನ ಮಾತನ್ನು ಶ್ರದ್ಧೆಯಿಂದ ಕೇಳಿದ್ದಲ್ಲದೆ ಕಣ್ಣಲ್ಲೇ ತಪ್ಪಿತಸ್ಥ ಭಾವವನ್ನು ತುಳುಕಿಸಿದರು. ಆಮೇಲೆ ಆ ತಪ್ಪನ್ನು ಸರಿಪಡಿಸಿಕೊಂಡರೆನ್ನುವುದು ಆಟದಿಂದಲೇ ಸ್ಪಷ್ಟವಾಯಿತು. ಈಗ ಧೋನಿ ಕೊನೆಯ ಓವರ್‌ಗಳವರೆಗೆ ಅವರನ್ನು ಉಳಿಸಿಕೊಳ್ಳುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಮೊದಲ ಸ್ಪೆಲ್‌ನಲ್ಲೇ ಬಹುತೇಕ ಸಂದರ್ಭಗಳಲ್ಲಿ ಅವರಿಂದ ಮೂರು ಓವರ್‌ ಬೌಲ್ ಮಾಡಿಸುತ್ತಿದ್ದಾರೆ.

2010–11ರಲ್ಲಿ ಈ ದೀಪಕ್ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದಾಗ ಸಂಚಲನ ಮೂಡಿಸಿದ್ದರು. ಜೈಪುರದಲ್ಲಿ ಹೈದರಾಬಾದ್ ವಿರುದ್ಧ ನಡೆದಿದ್ದ ಪಂದ್ಯದ ಇನಿಂಗ್ಸ್‌ ಒಂದರಲ್ಲಿ ಬರೀ 10 ರನ್‌ ನೀಡಿ 8 ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿದ್ದರು. ರಣಜಿ ಇತಿಹಾಸದಲ್ಲೇ ಹೈದರಾಬಾದ್ 21 ರನ್‌ಗಳ ಅತಿ ಕಡಿಮೆ ಮೊತ್ತಕ್ಕೆ ಕುಸಿಯಲು ಕಾರಣವಾಗಿದ್ದ ಬೌಲಿಂಗ್ ಅದು. ಆ ಋತುವಿನಲ್ಲಿ ದೀಪಕ್ ಪ್ರತಿನಿಧಿಸಿದ್ದ ರಾಜಸ್ಥಾನ ತಂಡ ರಣಜಿ ಚಾಂಪಿಯನ್ ಕೂಡ ಆಗಿತ್ತು.

2019ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಕೊನೆಯ ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಾಗಲೂ ಅವರು ಬರೀ 4 ರನ್‌ ನೀಡಿ 3 ವಿಕೆಟ್ ಪಡೆದು, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದನ್ನು ಧೋನಿ ಮರೆತಿರಲಾರರು. ಅದಾದ ಮೇಲೆ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್ ಸೇರಿದಂತೆ ಬರೀ 7 ರನ್‌ ನೀಡಿ (3.2 ಓವರ್‌ಗಳಲ್ಲಿ) 6 ವಿಕೆಟ್‌ಗಳನ್ನು ಅವರು ಕಿತ್ತಿದ್ದು ಚುಟುಕು ಕ್ರಿಕೆಟ್‌ನಲ್ಲಿ ದಾಖಲೆಯಾಗಿಯೇ ಉಳಿದಿದೆ.

ದೀಪಕ್ ಅವರ ಅಪ್ಪ ಲೋಕೇಂದ್ರ ಉತ್ತರಪ್ರದೇಶದ ಆಗ್ರಾದಲ್ಲಿ ಮಗನ ವೃತ್ತಿಬದುಕನ್ನು ಬಾಲ್ಯದಿಂದಲೇ ರೂಪಿಸುತ್ತಾ ಬಂದರು. ಆರಂಭಿಕ ಬೌಲರ್‌ ಆಗಿಯೇ ಮಗ ಛಾಪು ಮೂಡಿಸಬೇಕು ಎನ್ನುವುದು ಅವರ ಬಯಕೆಯಾಗಿತ್ತು. ಅಭ್ಯಾಸ ಮಾಡಲು ಹೆಚ್ಚು ಹೊಸ ಚೆಂಡುಗಳ ಅಗತ್ಯ ಇತ್ತೆನ್ನುವುದು ಗೊತ್ತಿದ್ದೂ ಅವರು ಮಗನಿಗೆ ಚೆಂಡುಗಳನ್ನು ಕೊಡಿಸಲು ಹಿಂದೇಟು ಹಾಕಲಿಲ್ಲ. ವಾಯುಪಡೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಅಪ್ಪಂದಿರಿಗೆ ಮಕ್ಕಳನ್ನು ಹೀಗೆ ಕ್ರಿಕೆಟಿಗರನ್ನಾಗಿಸುವ ಸಂಕಲ್ಪ ಹೆಚ್ಚಾಗಿರುತ್ತದೆ ಎಂದು ಹಿಂದೊಮ್ಮೆ ಧೋನಿ ಇವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಹೇಳಿದ್ದರು. ದೀಪಕ್ ಸಹೋದರ (ಕಸಿನ್) ರಾಹುಲ್ ಚಾಹರ್ ಮುಂಬೈ ಇಂಡಿಯನ್ಸ್‌ ತಂಡದ ಪ್ರಭಾವಿ ಸ್ಪಿನ್ ಬೌಲರ್ ಆಗಿ ಗಮನ ಸೆಳೆಯುತ್ತಿದ್ದಾರೆ. ಅವರು ಹಾಗೂ ದೀಪಕ್ ಒಟ್ಟಾಗಿ ತಂತಮ್ಮ ಸಾಮರ್ಥ್ಯವನ್ನು ನಿಕಷಕ್ಕೆ ಒಡ್ಡಿಕೊಳ್ಳುತ್ತಾ ಬಂದವರು. ಆದರೆ, ದೀಪಕ್‌ಗೆ ಈಗಾಗಲೇ ವಯಸ್ಸು 28 ದಾಟಿದೆ. ರಾಹುಲ್ ಇನ್ನೂ ಆರು ವರ್ಷ ಚಿಕ್ಕವರು.

ಚುಟುಕು ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರಿಂದ ಹಿಡಿದು ಕಗಿಸೊ ರಬಾಡಾವರೆಗೆ ಅನೇಕ ವೇಗಿಗಳು ಪ್ರತಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲ್ ಮಾಡಬಲ್ಲರು. ಇದು ಸಹಜವಾಗಿಯೇ ಫಲ ಕೊಡುವ ಕೌಶಲ. ದೀಪಕ್ ಹಾಗೂ ಭುವನೇಶ್ವರ್ ಕುಮಾರ್ ತರಹದವರು ಸ್ವಿಂಗ್ ವೈವಿಧ್ಯ ನೆಚ್ಚಿಕೊಂಡೇ ಬೌಲ್ ಮಾಡಬೇಕು. ಇಂತಹ ವೈವಿಧ್ಯದ ವಿಷಯದಲ್ಲೂ ಭುವನೇಶ್ವರ್ ಕುಮಾರ್‌ ಅವರಿಗಿಂತ ದೀಪಕ್ ಸಾಕಷ್ಟು ಹಿಂದೆ ಇದ್ದಾರೆ. ಹೊಳೆಯುವ ಹೊಸ ಚೆಂಡಿನಲ್ಲಿ ಬ್ಯಾಟ್ಸ್‌ಮನ್‌ಗಳ ಮನಸ್ಸನ್ನು ಕೆಣಕುವ ನಿಧಾನಗತಿಯ ಸ್ವಿಂಗ್ ಅವರ ಸಾಮರ್ಥ್ಯ. ಅದನ್ನು ಮಹೇಂದ್ರ ಸಿಂಗ್‌ ಧೋನಿ ಸೂಕ್ಷ್ಮವಾಗಿ ಗಮನಿಸಿ, ನೀರೆರೆದಿದ್ದಾರೆ.

ದೀಪಕ್ ನಾಲ್ಕು ವಿಕೆಟ್ ಪಡೆದ ಪಂದ್ಯ ಪ್ರಾರಂಭವಾಗುವ ಮೊದಲು ಶಮಿ ಅವರ ಪಾದಕ್ಕೆ ಎರಗಿ, ಆಶೀರ್ವಾದ ಪಡೆದುಕೊಂಡಂಥ ವಿಡಿಯೊ ಹರಿದಾಡಿತ್ತು. ‘ಶಮಿಯೇ ಎದುರಾಳಿಗೆ ಆಶೀರ್ವದಿಸಿ ಅವರ ತಂಡವನ್ನು ಸೋಲಿಸಿಬಿಟ್ಟರು’ ಎಂಬ ಧಾಟಿಯಲ್ಲಿ ಕೆಲವರು ಆಗ ವರದಿಗಳನ್ನು ಬರೆದದ್ದು ಇನ್ನೊಂದು ತಮಾಷೆ.

2016ರ ಅಕ್ಟೋಬರ್‌ನಲ್ಲಿ ರಾಜಸ್ಥಾನದ ಕ್ರಿಕೆಟರ್ಸ್‌ ಡೆವಲಪ್‌ಮೆಂಟ್‌ ಕ್ಯಾಂಪ್‌ನಲ್ಲಿ ಇಂಗ್ಲೆಂಡ್‌ನ ಇಯಾನ್ ಪಾಂಟ್ ಹಾಗೂ ಕ್ಯಾಥರಿನ್ ಡಾಲ್ಟನ್‌ ಅವರಿಂದ ಬೌಲಿಂಗ್‌ನ ಮಹತ್ವದ ಪಾಠಗಳನ್ನು ಕಲಿತ ಮೇಲೆ ಈ ಪ್ರತಿಭಾವಂತನ ಕ್ರಿಕೆಟ್‌ಗೆ ಜೀವಕಳೆ ಮರಳಿತು. ವೇಗದ ಬೌಲರ್‌ ಪದೇ ಪದೇ ಗಾಯಾಳುವಾದರೆ ವೃತ್ತಿಬದುಕಿನಲ್ಲಿ ಎಷ್ಟರಮಟ್ಟಿಗೆ ಹಿನ್ನಡೆಯಾಗಬಹುದು ಎನ್ನುವುದಕ್ಕೂ ಅವರ ನೋವಿನ ಕಥೆಗಳು ಕನ್ನಡಿ ಹಿಡಿಯುತ್ತವೆ.

45 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳಲ್ಲಿ 126 ವಿಕೆಟ್‌ಗಳನ್ನು ಪಡೆದಿರುವ ದೀಪಕ್, 13 ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನಷ್ಟೇ ಕಿತ್ತಿರುವುದು. ಮೂರೇ ಏಕದಿನ ಅಂತರರಾಷ್ಟ್ರೀಯ ಪಂದ್ಯ ಆಡಿ 2 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂತಹ ಜನಪ್ರಿಯವಲ್ಲದ ಬೌಲರ್‌ಗಳನ್ನು ವರ್ಷಗಟ್ಟಲೆ ತಿದ್ದುತ್ತಾ, ಅವಕಾಶವನ್ನು ಪದೇ ಪದೇ ಕೊಡುವ ಧೋನಿಯ ಗುಣವನ್ನು ಕೂಡ ಮೆಚ್ಚಿಕೊಳ್ಳಬೇಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು