ಬುಧವಾರ, ಡಿಸೆಂಬರ್ 2, 2020
23 °C

PV Web Exclusive: ಐಪಿಎಲ್ ಚಿಮ್ಮುಹಲಗೆಯಿಂದ ಜಿಗಿದವರು...

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಆಟದ ಮನೆ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ಟನ್ನು ಯಃಕಶ್ಚಿತ್ ಮನರಂಜನೆ ಎಂದುಕೊಂಡವರ ಅಭಿಪ್ರಾಯ ಕಾಲಕ್ರಮೇಣ ಬದಲಾಯಿತು. ಹೊಸ ಕೌಶಲಗಳನ್ನು ಲಾಗ್‌ಆನ್ ಮಾಡಿಕೊಳ್ಳುತ್ತಾ ಇರುವ ಯುವಪ್ರತಿಭೆಗಳನ್ನು ಹೆಕ್ಕಿ, ರಾಷ್ಟ್ರೀಯ ತಂಡದಲ್ಲೂ ಬೆಳೆಯುವ ಅವಕಾಶ ಕಲ್ಪಿಸಿಕೊಳ್ಳುತ್ತಿರುವುದು ಗಮನಾರ್ಹ. ಐಪಿಎಲ್‌ ಯಶಸ್ಸಿನಿಂದಾಗಿಯೇ ದೇಶಕ್ಕಾಗಿ ಆಡಿದ ಪ್ರತಿಭಾವಂತರ ನೆನಕೆ ಇದು...

ತಂಗರಸು ನಟರಾಜನ್ ಗಡ್ಡ ಬಿಟ್ಟಿದ್ದು ತಮ್ಮ ಹೆಂಡತಿಗೆ ಸಲೀಸಾಗಿ ಹೆರಿಗೆ ಆಗಲಿ ಎಂದು ಮನಸ್ಸಿನಲ್ಲೇ ಅಂದುಕೊಂಡು. ಅದನ್ನು ಆಮೇಲೆ ಅವರು ಆಪ್ತೇಷ್ಟರಲ್ಲಿ ಹೇಳಿಕೊಂಡರು. ಕೆಲವೇ ದಿನಗಳ ಹಿಂದೆ ಅವರು ಹೆಣ್ಣುಮಗುವಿನ ತಂದೆಯಾದರು. ವಿಡಿಯೊ ಕಾಲ್‌ನಲ್ಲಿ ಮಗಳನ್ನು ಕಣ್ತುಂಬಿಕೊಂಡರು. ಒಂದು ಕಡೆ ಕೌಟುಂಬಿಕ ಸುಖ. ಇನ್ನೊಂದು ಕಡೆ ಕ್ರಿಕೆಟ್‌ ಅವಕಾಶದ ಪುಳಕ. ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿರುವ ಭಾರತ ಹಿರಿಯರ ತಂಡದ ಹೆಚ್ಚುವರಿ ನಾಲ್ವರು ಆಟಗಾರರಲ್ಲಿ ಅವರೂ ಒಬ್ಬರು. ಸ್ಪಿನ್ನರ್ ವರುಣ್ ಚಕ್ರವರ್ತಿ ಭುಜದಲ್ಲಿ ನೋವು ಕಾಣಿಸಿಕೊಂಡಿರುವುದರಿಂದ ಅವರು ತಂಡದಲ್ಲಿ ಉಳಿಯಲು ಆಗಿಲ್ಲ. ಹೀಗಾಗಿ ನಟರಾಜನ್  ಆಸ್ಟ್ರೇಲಿಯಾದಿಂದ ಮರಳುವುದು ಜನವರಿ ನಡುಘಟ್ಟದಲ್ಲೇ ಏನೋ. ಅಲ್ಲಿಯವರೆಗೆ ಅದೃಷ್ಟಲಕ್ಷ್ಮಿ ಮಗಳನ್ನು ಅವರಿಗೆ ನೋಡಲಾಗದು.

ಯಾವ ಮಗುವಿನ ಕನವರಿಕೆಯಲ್ಲಿ ಅವರು ಗಡ್ಡ ಬಿಟ್ಟರೋ, ಅದು ಮಗು ಹುಟ್ಟುವ ಹೊತ್ತಿಗೆ ಟ್ವೆಂಟಿ20 ಅಂತರರಾಷ್ಟ್ರಿಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ಅವರದ್ದಾಗಿರುವುದು ರೋಚಕ ಕಥನ. ನಟರಾಜನ್‌ಗೆ ಕ್ರಿಕೆಟ್‌ ಸ್ಪೈಕ್‌ಗಳನ್ನು ಕೊಳ್ಳುವಷ್ಟು ಹಣ ಇರಲಿಲ್ಲ ಎನ್ನುವ ಸಂಗತಿಯ ಕುರಿತು ಹಲವು ವಿಡಿಯೊಗಳು ಹರಿದಾಡಿವೆ. ನೆಟ್ಸ್‌ ಅಭ್ಯಾಸಕ್ಕೆ ಎಂದು ಆಹ್ವಾನ ಪಡೆದ ಬೌಲರ್ ಒಬ್ಬರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಮೂಲಕ ಭಾರತದ ಆಟಗಾರನಾಗಿ ಆಯ್ಕೆಯಾಗಿರುವುದು ಸಿನಿಮೀಯ ಎನಿಸಿದರೂ ಸತ್ಯ. ಈ ಸಲ ಯುಎಇಯಲ್ಲಿ ನಡೆದ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರವಾಗಿ ಆಡಿದ ನಟರಾಜನ್ ತಮ್ಮ ಯಾರ್ಕರ್‌ಗಳಿಂದ ಗಮನ ಸೆಳೆದಿದ್ದರು. ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ, ಆಮೇಲೆ ದೇಶವನ್ನು ಪ್ರತಿನಿಧಿಸಿದವರಲ್ಲಿ ಜಸ್‌ಪ್ರೀತ್ ಬೂಮ್ರಾ ಕೂಡ ಒಬ್ಬರು. ವಯಸ್ಸಿನಲ್ಲಿ ಬೂಮ್ರಾ ಅವರಿಗಿಂತ ನಟರಾಜನ್ ಎರಡು ವರ್ಷ ದೊಡ್ಡವರು. ಆದರೆ, ಅವಕಾಶದ ಬಾಗಿಲು ತೆರೆದದ್ದು ಈಗ.


ಯಜುವೇಂದ್ರ ಚಹಲ್

ನಟರಾಜನ್ ತಮಿಳುನಾಡು ತಂಡದ ಪರವಾಗಿ ದೇಸಿ ಕ್ರಿಕೆಟ್ ಆಡುವುದು. ಇದುವರೆಗೆ ಬರೀ 20 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 64 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆ ನೋಡಿದರೆ, ಇಷ್ಟು ಕಡಿಮೆ ದೇಸಿ ಪಂದ್ಯಗಳನ್ನು ಆಡಿಯೂ ದೇಶಕ್ಕಾಗಿ ಆಡುವ ಅವಕಾಶ ಪಡೆಯುವವರು ವಿರಳ. ಇದು ಐಪಿಎಲ್ ಮಹಿಮೆ.

ರವಿಚಂದ್ರನ್ ಅಶ್ವಿನ್ ಕೂಡ ತಮಿಳುನಾಡಿನವರೇ. 2006–07ರ ಋತುವಿನಲ್ಲಿ ದೇಸಿ ಕ್ರಿಕೆಟ್ ಆಡಿದವರು. 17 ವರ್ಷದೊಳಗಿನವರ ತಂಡವನ್ನು ಅವರು ಪ್ರತಿನಿಧಿಸಿದಾಗ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದರು. ಫಾರ್ಮ್ ಕಂಡುಕೊಳ್ಳಲು ಅವರು ಪರದಾಡಿದ ಮೇಲೆ ರೋಹಿತ್ ಶರ್ಮ ಆ ಜಾಗಕ್ಕೆ ಬಂದರು. ಬ್ಯಾಟ್ಸ್‌ಮನ್ ಆಲ್‌ರೌಂಡರ್ ಆಗುವುದಕ್ಕಿಂತ ಬೌಲರ್ ಆಲ್‌ರೌಂಡರ್ ಆಗುವುದೇ ವಾಸಿ ಎಂದು ಬೇಗ ಅಶ್ವಿನ್ ದಿಕ್ಕು ಬದಲಿಸಿದರು. ಆಫ್‌ ಸ್ಪಿನ್ನರ್ ಅಶ್ವಿನ್ ಹಾಗೂ ಅವರ ಸಮಕಾಲೀನರೇ ಆದ ಅಜಂತಾ ಮೆಂಡಿಸ್ ‘ಕೇರಂ ಬಾಲ್’ ಹಾಕುವುದರಲ್ಲಿ ಪಳಗಿದರು. ಆಫ್‌ ಸ್ಪಿನ್ನರ್‌ ಆದರೂ ಆಗೀಗ ಲೆಗ್ ಸ್ಪಿನ್ ಕೂಡ ಮಾಡಬಲ್ಲ ಅಶ್ವಿನ್ ಬೌಲಿಂಗ್‌ ಬತ್ತಳಿಕೆಗೆ ಅಚ್ಚರಿಯ ಅಸ್ತ್ರಗಳನ್ನು ಸೇರಿಸತೊಡಗಿದರು. ಐಪಿಎಲ್ ಶುರುವಾದ ಮರುವರ್ಷವೇ ಅವರಿಗೆ ಆಡುವ ಅವಕಾಶ ಸಿಕ್ಕಿತು. ಆಮೇಲೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ. 2010ರಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಕಪ್ ಎತ್ತಿಹಿಡಿಯುವಲ್ಲಿ ದೊಡ್ಡ ಕಾಣ್ಕೆಯನ್ನು ನೀಡಿದರು. ಅಲ್ಲಿಂದಾಚೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹರಭಜನ್ ಸಿಂಗ್ ಕೊರತೆಯನ್ನು ಅಚ್ಚುಕಟ್ಟಾಗಿ ತಮಿಳುನಾಡಿನ ಈ ಬೌಲರ್ ತುಂಬಿದ್ದನ್ನು ನೋಡಿದ್ದೇವೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 50ರಿಂದ 350 ವಿಕೆಟ್‌ವರೆಗೆ ಪಡೆಯುತ್ತಾ ಮೈಲಿಗಲ್ಲುಗಳನ್ನು ನೆಡುತ್ತಾ ಬಂದ ಅಶ್ವಿನ್, 2016ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾದವರು. ಮೂರು ಶತಕಗಳನ್ನೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು ಗಳಿಸಿರುವುದು ಬೋನಸ್ಸು. ಬ್ಯಾಟ್ಸ್‌ಮನ್ ಆಗಲು ಹೊರಟು ಬೌಲರ್ ಆಗಿ, ಏಕದಿನ ಪಂದ್ಯಗಳಿಗೆ ಅಷ್ಟಾಗಿ ಒಗ್ಗಿಕೊಳ್ಳಲು ಆಗದೆ ಚುಟುಕು ಕ್ರಿಕೆಟ್‌ಗೆ ಈಗಲೂ ಒಪ್ಪುವಂಥ ಬೌಲಿಂಗ್ ಮಾಡುವ ಅಶ್ವಿನ್ ವೃತ್ತಿಬದುಕು ಆಸಕ್ತಿಕರ. ಒಂದು ವೇಳೆ ಐಪಿಎಲ್ ಇರದೇಹೋಗಿದ್ದರೆ ಅವರು ಈ ಮಟ್ಟಕ್ಕೆ ಏರುತ್ತಿದ್ದರೋ ಇಲ್ಲವೋ ಹೇಳಲಾಗದು.


ಆರ್. ಅಶ್ವಿನ್

ಐಪಿಎಲ್ ಶುರುವಾದಾಗ ಅನೇಕರಿಗೆ ಅದರ ಕುರಿತು ಗುಮಾನಿ ಇತ್ತು. ದೇಶದ ತಂಡಕ್ಕೆ ಆಯ್ಕೆ ಮಾಡುವಾಗ ಅಲ್ಲಿನ ಆಟಕ್ಕೆ ಅಷ್ಟು ಒತ್ತು ನೀಡಲಾಗದು ಎಂಬ ವಾತಾವರಣವೂ ಇತ್ತು. ಆದರೀಗ ಕಾಲ ಬದಲಾಗಿದೆ. ಕ್ರಿಕೆಟ್ ಆಯಕಟ್ಟಿನ ಹುದ್ದೆಯಲ್ಲಿರುವ ಸೌರವ್ ಗಂಗೂಲಿಯೇ ಶಾರ್ಜಾ, ದುಬೈನಲ್ಲಿ ಕಣ್ಣುಕೀಲಿಸಿ ಆಟ ನೋಡುತ್ತಿದ್ದರು. ದೇಸಿ ಕ್ರಿಕೆಟ್‌ನಲ್ಲಿ ತುರುಸು ಸ್ಪರ್ಧೆ ಎದುರಿಸಿದ ಕರ್ನಾಟಕ ತಂಡದ ಹುಡುಗ ದೇವದತ್ತ ಪಡಿಕ್ಕಲ್ ಈಗ ಕಣ್ಮಣಿ. ಜಾರ್ಖಂಡ್‌ನ ಇಶಾನ್ ಕಿಶನ್ ಅಲ್ಪಾವಧಿಯಲ್ಲಿ ಬ್ಯಾಟಿಂಗ್ ಕಲೆಗಾರಿಕೆ ಕಲಿತು ಮೂಡಿಸಿರುವ ಬೆರಗು ಕಡಿಮೆಯೇನಲ್ಲ. ಏದುಸಿರು ಬಿಡುತ್ತಿದ್ದ ಚೆನ್ನೈ ತಂಡದಲ್ಲಿ ಜೀವಾನಿಲದಂತೆ ಕಂಡ ಹುಡುಗ ಋತುರಾಜ್ ಗಾಯಕ್ವಾಡ್ ‘ನನಗೂ ಸಿಕ್ಸ್‌ಪ್ಯಾಕ್ ಇದೆ’ ಎಂದು ಹುಸಿ ನಾಚಿಕೆಯಿಂದ ಹೇಳಿದ್ದು ಇದೇ ಐಪಿಎಲ್ ವೇದಿಕೆಯಲ್ಲಿ. ಬ್ಯಾಟಿಂಗ್‌ನಲ್ಲಿ ನಾಜೂಕುತನ ಎಷ್ಟು ಮುಖ್ಯ ಎಂದು ಹೇಳಿಕೊಡುವಂತೆ ಆಡುವ ಶುಭಮನ್ ಗಿಲ್, ಮುಂಬೈ ಜಂಘಾಬಲ ಹೆಚ್ಚಿಸಿದ ಸೂರ್ಯಕುಮಾರ್ ಯಾದವ್, ಪಂದ್ಯ ಗೆಲ್ಲಿಸಬಲ್ಲ ಉತ್ಕಟತೆ ತಮಗಿದೆ ಎನ್ನುವುದನ್ನು ತೋರಿಸಿಕೊಟ್ಟ ಆಲ್‌ರೌಂಡರ್ ರಾಹುಲ್ ತೇವಾಟಿಯಾ ಇವರೆಲ್ಲ ಈಗ ಅವಕಾಶದ ಬಾಗಿಲಿನ ಎದುರಿಗೆ ಇರುವ ಮುಂದಿನ ಸಾಲಿನ ಹುಡುಗರು.

2008ರಲ್ಲಿ ವಿಶ್ವಕಪ್ ಗೆದ್ದ ಭಾರತದ 19 ವರ್ಷದೊಳಗಿನವರ ತಂಡದಲ್ಲಿ ಆಡಿದ ಅನುಭವವಿದ್ದ ರವೀಂದ್ರ ಜಡೇಜಾ ಕೂಡ ಐಪಿಎಲ್‌ನಲ್ಲಿ ಸಾಣೆಗೊಡ್ಡಿಕೊಂಡೇ ಪ್ರಬಲ ಆಲ್‌ರೌಂಡರ್ ಆಗಿ ಬೆಳೆದದ್ದು. ಅವರು ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಆಡಿದ್ದಾಗ, ಶೇನ್ ವಾರ್ನ್ ಅವರಿಗೆ ‘ರಾಕ್‌ಸ್ಟಾರ್’ ಎಂದು ಬಿರುದು ನೀಡಿದ್ದನ್ನು ಮರೆಯಲಾಗದು. ಒಂದು ಕಡೆ ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ಪ್ರಭಾವಿ ಆಟಗಾರನಾದ ಅವರು, ಸೌರಾಷ್ಟ್ರದ ಪರವಾಗಿ ದೇಸಿ ಕ್ರಿಕೆಟ್‌ನಲ್ಲೂ ಚೆನ್ನಾಗಿ ಆಡಿದ್ದು 2011ರ ನಂತರ. ಯೂಸುಫ್ ಪಠಾಣ್ 37 ಎಸೆತಗಳಲ್ಲಿ ಐಪಿಎಲ್‌ನ ಶತಕ ಗಳಿಸಿದಾಗ ರಾಜಸ್ಥಾನ್ ರಾಯಲ್ಸ್ ಎಷ್ಟು ಪ್ರಬಲ ಎನಿಸಿತ್ತು. ಆಮೇಲೆ ಯೂಸುಫ್ ದೇಶ ಪ್ರತಿನಿಧಿಸಿ ಏರಿಳಿತದ ಗ್ರಾಫ್ ಬರೆದು ಹೋದರು. ಐದುನೂರು ರೂಪಾಯಿ ಆಸೆಗೆ ಟೆನಿಸ್‌ ಬಾಲ್ ಕ್ರಿಕೆಟ್ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ ಅವರೂ ಐಪಿಎಲ್ ಚಿಮ್ಮುಹಲಗೆಯಿಂದ ಹೊಮ್ಮಿದ ಪ್ರತಿಭೆ.

12, 23, 21, 14, 12, 18, 21... ಇವು 2014ರಿಂದ 2020ರ ವರೆಗೆ ಯಜುವೇಂದ್ರ ಚಹಲ್ ಪಡೆದ ಐಪಿಎಲ್ ವಿಕೆಟ್‌ಗಳು. ಹರಿಯಾಣದ ಈ ಲೆಗ್‌ ಸ್ಪಿನ್ ಪ್ರತಿಭೆಯ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕಣ್ಣುಬಿದ್ದದ್ದೇ ಅದೃಷ್ಟ ಖುಲಾಯಿಸಿತು. ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ತಂಡಕ್ಕೂ ಅವರ ಪ್ರವೇಶವಾಯಿತು.


ರವೀಂದ್ರ ಜಡೇಜ

ಐಪಿಎಲ್ ವೇದಿಕೆ ಈಗ ಬರೀ ಮನರಂಜನೆಗೆ ಸೀಮಿತವಲ್ಲ. ಅಲ್ಲಿ ಹೊಳೆಯುವ ಪ್ರತಿಭೆಗಳ ಕಡೆಗೆ ರಾಷ್ಟ್ರೀಯ ಆಯ್ಕೆಗಾರರ ಕಣ್ಣು ಹೊರಳುತ್ತಿದೆ. ವರುಣ್ ಚಕ್ರವರ್ತಿ, ನಟರಾಜನ್ ತರಹದ ಹುಡುಗರ ಪಾಲಿಗೆ ಅದು ವರದಾನವಾಗಿದೆ. ಹೊಸ ಕೌಶಲಗಳನ್ನು ಲಾಗ್‌ಆನ್ ಮಾಡಿಕೊಳ್ಳುತ್ತಾ, ಆಟಕ್ಕೆ ಬೇರೆಯದೇ ಭಾಷ್ಯ ಬರೆಯುತ್ತಿರುವ ಯುವಪ್ರತಿಭೆಗಳು ಮುಂದಿನ ದಿನಗಳಲ್ಲಿ ಕ್ರಿಕೆಟ್‌ ಅನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯುವ ಸಾಧ್ಯತೆಯೂ ಇದೆ. ಹೀಗಾಗಿ ಐಪಿಎಲ್ ಅನ್ನು ರಾಷ್ಟ್ರೀಯ ಆಯ್ಕೆ ಅಂಗಳಕ್ಕೆ ತಲುಪಿಸುವ ಚಿಮ್ಮುಹಲಗೆ ಎನ್ನಲು ಅಡ್ಡಿಯಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು