ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 PBKS vs RR: ರಾಯಲ್ಸ್‌ಗೆ ಇಂದು ಪಂಜಾಬ್ ಕಿಂಗ್ಸ್‌ ಸವಾಲು

Published 12 ಏಪ್ರಿಲ್ 2024, 23:30 IST
Last Updated 12 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮುಲ್ಲನಪುರ: ಎರಡು ದಿನಗಳ ಹಿಂದೆ ಕೊನೆಯ ಎಸೆತದಲ್ಲಿ ಗುಜರಾತ್‌ ಟೈಟನ್ಸ್‌ ಎದುರು ಸೋಲನುಭವಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು ತನ್ನ ಕಾರ್ಯತಂತ್ರಗಳ ಜಾರಿಯಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಈ ತಂಡ, ಶನಿವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ, ಅಸ್ಥಿರ ಪ್ರದರ್ಶನ ನೀಡುತ್ತಿರುವ ಪಂಜಾಬ್ ಕಿಂಗ್ಸ್‌ ತಂಡವನ್ನು ಎದುರಿಸಲಿದೆ.

ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ಸ್ ತಂಡ ಸತತ ಐದನೇ ಪಂದ್ಯ ಗೆಲ್ಲುವ ಸುವರ್ಣಾವಕಾಶ ಹೊಂದಿತ್ತು. ಆದರೆ ಟೈಟನ್ಸ್‌ ತಂಡದ ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ ಜಯವನ್ನು ಕಸಿದುಕೊಂಡಿದ್ದರು.

ಆ ಪಂದ್ಯದಲ್ಲಿ ರಾಯಲ್ಸ್‌ ತನ್ನ ಕಾರ್ಯತಂತ್ರದಲ್ಲಿ ಎಡವಿತ್ತು. ನಿರ್ಣಾಯಕ ಸಂದರ್ಭದಲ್ಲಿ ಕುಲದೀಪ್ ಸೆನ್ (19ನೇ ಓವರ್‌) ಮತ್ತು ಆವೇಶ್‌ ಖಾನ್ (20ನೇ ಓವರ್) ಅವರು 35 ರನ್‌ ಕೊಟ್ಟಿದ್ದರು. ತಂಡದ ಪ್ರಮುಖ ಬೌಲರ್‌ ಟ್ರೆಂಟ್‌ ಬೌಲ್ಟ್‌ (2–0–8–0) ಅವರಿಗೆ ಎರಡು ಓವರ್‌ ಅವಕಾಶವಿದ್ದರೂ ಬೌಲಿಂಗ್‌ ನೀಡಿರಲಿಲ್ಲ.‌ ಅನುಭವಿ ಬೌಲ್ಟ್‌ ಇಂಥ ಸಂದರ್ಭದಲ್ಲಿ ಹೆಚ್ಚು ಪರಿಣಾಮಕಾರಿ ಆಗುತ್ತಿದ್ದರು. ರಾಯಲ್ಸ್ ಇಂಥ ವಿಷಯಗಳತ್ತ ಗಮನಹರಿಸಬೇಕಾಗಿದೆ.

ಶಿಖರ್‌ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಇದುವರೆಗೆ ಆಡಿದ ಐದು ಪಂದ್ಯಗಳಲ್ಲಿ ಎರಡು ಗೆದ್ದು, ಮೂರು ಸೋತಿದೆ. ಪ್ರಮುಖ ಬ್ಯಾಟರ್‌ಗಳು ಲಯಕಂಡುಕೊಳ್ಳದಿರುವುದು ಪ್ರಮುಖ ಸಮಸ್ಯೆ. ಮಧ್ಯಮ ಕ್ರಮಾಂಕದಲ್ಲಿ ಹೊಸಬರಾದ ಶಶಾಂಕ್‌ ಸಿಂಗ್ ಮತ್ತು ಅಶುತೋಷ್ ಎರಡು ಪಂದ್ಯಗಳಲ್ಲಿ ಬಿರುಸಿನ ಆಟವಾಡಿ ಬ್ಯಾಟಿಂಗ್‌ಗೆ ಬಲ ನೀಡಿರುವುದು ಸಕಾರಾತ್ಮಕ ಅಂಶ.

ಆರಂಭ ಆಟಗಾರ ಜಾನಿ ಬೇಸ್ಟೊ (5 ಪಂದ್ಯಗಳಿಂದ 81) ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ ಜಿತೇಶ್‌ ಶರ್ಮಾ (5 ಪಂದ್ಯಗಳಿಂದ 77) ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಇನಿಂಗ್ಸ್‌ಗೆ ಸ್ಥಿರತೆ ಸಿಗುತ್ತಿಲ್ಲ. ಸ್ಯಾಮ್‌ ಕರನ್ ಬೌಲಿಂಗ್‌ನಲ್ಲಿ ಪರವಾಗಿಲ್ಲ ಎನ್ನುವಂತೆ ಆರು ವಿಕೆಟ್‌ ಪಡೆದಿದ್ದರೂ, ಬ್ಯಾಟಿಂಗ್‌ನಲ್ಲಿ ಸಪ್ಪೆಯಾಗಿದ್ದಾರೆ. ಇಂಗ್ಲೆಂಡ್‌ನ ಲಿಯಾಮ್‌ ಲಿವಿಂಗ್‌ಸ್ಟೋನ್‌ ಗಾಯಾಳಾಗಿರುವುದು ಮಧ್ಯಮ ಕ್ರಮಾಂಕ ಸೊರಗುವಂತೆ ಮಾಡಿದೆ.

ಆದರೆ ಬೌಲಿಂಗ್‌ ವಿಭಾಗ, ಬ್ಯಾಟಿಂಗ್‌ಗಿಂತ ಸ್ವಲ್ಪ ಉತ್ತಮವಾಗಿದೆ. ಆದರೂ ಅರ್ಷದೀಪ್ ಮತ್ತು ಕಗಿಸೊ ರಬಾಡ ಅವರಿಂದ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ಇನ್ನೂ ಬಂದಿಲ್ಲ.

ರಾಜಸ್ಥಾನ ಬ್ಯಾಟಿಂಗ್ ಬಲವಾಗಿದೆ. ಮೊದಲು ಆಡಿದಾಗ ಅದು ದಾಖಲಿಸಿದ ಕಡಿಮೆ ಮೊತ್ತವೆಂದರೆ 185. ಸಂಜು ಸ್ಯಾಮ್ಸನ್‌, ರಿಯಾನ್ ಪರಾಗ್‌ ಒಳ್ಳೆಯ ಲಯದಲ್ಲಿದ್ದಾರೆ. ಆದರೆ ಅದರ ಚಿಂತೆಯೆಂದರೆ ಈ ಹಿಂದಿನ ಆವೃತ್ತಿಗಳಲ್ಲಿ ಆರಂಭದಲ್ಲಿ ನೀಡುತ್ತಿದ್ದ ಉತ್ತಮ ಪ್ರದರ್ಶನ ಮಟ್ಟವನ್ನು ನಂತರ ಕಾಪಾಡಿಕೊಳ್ಳದೇ ಹೋಗಿದ್ದು. ಲೀಗ್ ಮಧ್ಯಮ ಹಂತ ತಲುಪಿದ ನಂತರ ಪ್ರದರ್ಶನ ಮಟ್ಟ ಕುಸಿದುಹೋಗುತಿತ್ತು. ಇದರಿಂದಾಗಿ ಕಳೆದ ಆರು ಐಪಿಎಲ್‌ಗಳಲ್ಲಿ ಎರಡು ಬಾರಿ ಮಾತ್ರ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆದಿತ್ತು. ಜಿಟಿ ಎದುರಿನ ಸೋಲು ಮತ್ತಷ್ಟು ಹಿನ್ನಡೆಗೆ ದಾರಿ ಮಾಡಿಕೊಡದಂತೆ ರಾಯಲ್ಸ್‌ ಎಚ್ಚರ ವಹಿಸಬೇಕಾಗಿದೆ.

ಪಂದ್ಯ ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್‌ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT