ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬಳಗಕ್ಕೇ ರಾಬಿನ್–ಪ್ರಸಿದ್ಧ ಚಾಲೆಂಜ್!

ಆ್ಯಂಡ್ರೆ ರಸೆಲ್ ಭಯದಲ್ಲಿ ಆರ್‌ಸಿಬಿ; ಚಾಹಲ್ ಮಿಂಚುವ ನಿರೀಕ್ಷೆ; ಈ ಪಂದ್ಯದಲ್ಲಾದರೂ ಸಿಕ್ಸರ್ ಹೊಡೆಯುವರೇ ಕೊಹ್ಲಿ?
Last Updated 4 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವದ ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಆದರೆ, ಇದುವರೆಗೂ ಒಂದೇ ಒಂದು ಸಿಕ್ಸರ್‌ ಕೂಡ ಸಿಡಿಸಿಲ್ಲ. ಅವರ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಒಂದು ಪಂದ್ಯವನ್ನೂ ಜಯಿಸಿಲ್ಲ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿಯು ಕೋಲ್ಕತ್ತ ನೈಟ್ ರೈಡರ್ಸ್‌ ಎದುರು ಆಡಲಿದೆ. ಟೂರ್ನಿಯ ಆರಂಭದಿಂದಲೇ ಸೋಲಿನ ಕಹಿ ಉಂಡಿರುವ ಯುಗಾದಿ ಹಬ್ಬಕ್ಕಾದರೂ ತನ್ನ ಅಭಿಮಾನಿಗಳಿಗೆ ಗೆಲುವಿನ ಸಿಹಿ ಬೆಲ್ಲ ನೀಡುವುದೇ?

ಆದರೆ ಜಯ ಸುಲಭವಲ್ಲ. ಮದಗಜದಂತೆ ಆರ್ಭಟಿಸುತ್ತಿರುವ ಆ್ಯಂಡ್ರೆ ರಸೆಲ್, ಬೆಂಗಳೂರಿನ ಅಂಗಳದಲ್ಲಿಯೇ ಬೆಳೆದ ರಾಬಿನ್ ಉತ್ತಪ್ಪ ಮತ್ತು ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಅವರ ಬಲ ಕೆಕೆಆರ್‌ಗೆ ಇದೆ. ತಂಡವು ಈಗಾಗಲೇ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ‘ಸೂಪರ್‌ ಓವರ್‌’ನಲ್ಲಿ ಸೋತಿತ್ತು. ಆ ಪಂದ್ಯದಲ್ಲಿಯೂ ರಸೆಲ್ ಮತ್ತು ರಾಬಿನ್ ರನ್‌ಗಳ ಹೊಳೆ ಹರಿಸಿದ್ದರು. ಸೂಪರ್ ಓವರ್‌ನಲ್ಲಿ ಪ್ರಸಿದ್ಧ ಕೃಷ್ಣ ಉತ್ತಮ ಬೌಲಿಂಗ್ ಮಾಡಿ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ತವರಿನ ಅಂಗಳದಲ್ಲಿಯೂ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ. ಆಲ್‌ರೌಂಡರ್ ಸುನಿಲ್ ನಾರಾಯಣ್ ಕೂಡ ಫಿಟ್ ಆಗಿರುವುದು ತಂಡದ ಬಲ ಹೆಚ್ಚಿಸಿದೆ.

ಆರ್‌ಸಿಬಿಯಲ್ಲಿ ಬದಲಾವಣೆ?: ಐಪಿಎಲ್‌ನಲ್ಲಿ 5026 ರನ್‌ ಗಳಿಸಿರುವ ವಿರಾಟ್ ಕೊಹ್ಲಿ ಈ ಬಾರಿ ಅಬ್ಬರಿಸುತ್ತಿಲ್ಲ. ನಾಲ್ಕು ಪಂದ್ಯಗಳಿಂದ ಅವರು ಗಳಿಸಿರುವುದು ಕೇವಲ 78 ರನ್‌ಗಳನ್ನು ಮಾತ್ರ. ಕಳೆದ ಹನ್ನೊಂದು ಆವೃತ್ತಿಗಳಲ್ಲಿ 178 ಸಿಕ್ಸರ್‌ಗಳನ್ನು ಬಾರಿಸಿರುವ ವಿರಾಟ್ ಈ ಬಾರಿ ಏಕೋ ಆತ್ಮವಿಶ್ವಾಸದಿಂದ ಆಡುತ್ತಿಲ್ಲ. ಮೊದಲ ಪಂದ್ಯದಲ್ಲಂತೂ ತಂಡವು 70 ರನ್‌ ಗಳಿಸಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್‌ ಅರ್ಧಶತಕ ಹೊಡೆದಿದ್ದರು. ಆದರೂ ತಂಡವು ಸೋತಿತ್ತು. ಆದರೆ ಆ ಪಂದ್ಯದ ಕೊನೆಯ ಎಸೆತದಲ್ಲಿ ನೋಬಾಲ್ ವಿವಾದ ಭುಗಿಲೆದ್ದಿತ್ತು.

ಹೈದರಾಬಾದ್‌ನಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್‌ನ ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ ಅವರ ಸ್ಫೋಟಕ ಬ್ಯಾಟಿಂಗ್ ಮುಂದೆ ತಂಡವು ಮಂಕಾಗಿತ್ತು. ರಾಜಸ್ಥಾನ್ ರಾಯಲ್ಸ್‌ ಎದುರು ಬೌಲರ್‌ಗಳು ಉತ್ತಮವಾಗಿ ಆಡಿದರು. ಆದರೆ ಪಾರ್ಥಿವ್ ಪಟೇಲ್ ಒಬ್ಬರನ್ನು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರು. ಆದರೆ ಆ ಪಂದ್ಯದಲ್ಲಿ ಸ್ಪಿನ್ನರ್‌ಗಳನ್ನು ತಡವಾಗಿ ಕಣಕ್ಕಿಳಿಸಿದ್ದು ಮತ್ತು ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಕೂಡ ಆರ್‌ಸಿಬಿಗೆ ತುಟ್ಟಿಯಾಗಿತ್ತು.

ಆರಂಭಿಕ ಬ್ಯಾಟಿಂಗ್ ಜೋಡಿಯ ಪ್ರಯೋಗಗಳು ಯಶಸ್ವಿಯಾಗುತ್ತಿಲ್ಲ. ಮೊದಲ ಮತ್ತು ನಾಲ್ಕನೇ ಪಂದ್ಯದಲ್ಲಿ ಪಾರ್ಥಿವ್ ಜೊತೆಗೆ ಕೊಹ್ಲಿ ಇನಿಂಗ್ಸ್‌ ಆರಂಭಿಸಿದ್ದರು. ಎರಡನೇ ಪಂದ್ಯದಲ್ಲಿ ಮೋಯಿನ್ ಅಲಿ ಮತ್ತು ಮೂರನೇಯದ್ದರಲ್ಲಿ ಶಿಮ್ರೊನ್ ಹೆಟ್ಮೆಯರ್ ಆಡಿದ್ದರು.

ಆದರೆ ಎಲ್ಲ ಪಂದ್ಯಗಳಲ್ಲಿಯೂ ಪಾರ್ಥಿವ್ ಒಬ್ಬರೇ ಸ್ಥಿರವಾಗಿ ಆಡುತ್ತಿದ್ದಾರೆ. ವಿರಾಟ್ ಮತ್ತು ಎಬಿಡಿ ವೈಫಲ್ಯ ಅನುಭವಿಸಿದಾಗ ಉಳಿದವರು ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಮುಂದಿನ ಪಂದ್ಯಗಳಲ್ಲಿಯೂ ಅವರಿಬ್ಬರ ಮೇಲೆಯೇ ಅವಲಂಬಿತವಾದರೆ ಗೆಲುವು ಕಷ್ಟವಾಗಬಹುದು.

ಉದ್ಯಾನನಗರಿಯ ಪಿಚ್‌ನಲ್ಲಿ ರನ್‌ಗಳು ಭರಪೂರ ಹರಿಯುವ ನಿರೀಕ್ಷೆ ಇದೆ. ಟಾಸ್ ಗೆಲ್ಲುವ ನಾಯಕ ತೆಗೆದುಕೊಳ್ಳುವ ನಿರ್ಧಾರವೂ ಮಹತ್ವದ್ದಾಗಲಿದೆ.

ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್‌ ಬೆಂಗಳೂರು:ವಿರಾಟ್ ಕೊಹ್ಲಿ (ನಾಯಕ), ಪಾರ್ಥಿವ್ ಪಟೇಲ್ (ವಿಕೆಟ್‌ಕೀಪರ್), ಎಬಿ ಡಿವಿಲಿಯರ್ಸ್, ಮೊಯಿನ್ ಅಲಿ, ಶಿಮ್ರೊನ್ ಹೆಟ್ಮೆಯರ್, ಶಿವಂ ದುಬೆ, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಪವನ್ ನೇಗಿ, ವಾಷಿಂಗ್ಟನ್ ಸುಂದರ್, ಟಿಮ್ ಸೌಥಿ, ಗುರುಕೀರತ್ ಸಿಂಗ್ ಮಾನ್, ಹೆನ್ರಿಚ್ ಕ್ಲಾಸನ್, ಅಕ್ಷದೀಪ್ ನಾಥ್, ಕುಲವಂತ ಖೆಜ್ರೋಲಿಯಾ.

ಕೋಲ್ಕತ್ತ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್ (ನಾಯಕ), ರಾಬಿನ್ ಉತ್ತಪ್ಪ, ಕ್ರಿಸ್ ಲಿನ್, ಶುಭಮನ್ ಗಿಲ್, ಆ್ಯಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್‌ವೈಟ್, ಸುನಿಲ್ ನಾರಾಯಣ್, ಪಿಯೂಷ್ ಚಾವ್ಲಾ, ಕುಲದೀಪ್ ಯಾದವ್, ನಿಖಿಲ್ ನಾಯಕ, ಜೋ ಡೆನ್ಲಿ, ಶ್ರೀಕಾಂತ್ ಮುಂಢೆ, ನಿತೀಶ್ ರಾಣಾ, ಸಂದೀಪ್ ವರಿಯರ್, ಪ್ರಸಿದ್ಧ ಕೃಷ್ಣ, ಲಾಕಿ ಫರ್ಗ್ಯುಸನ್, ಹ್ಯಾರಿ ಗರ್ನೀ, ಕೆ.ಸಿ. ಕಾರಿಯಪ್ಪ , ಯರ್ರಾ ಪೃಥ್ವಿರಾಜ್.

**

ಟೂರ್ನಿಯಲ್ಲಿ ಇನ್ನೂ ಸಾಗಬೇಕಾದ ಹಾದಿ ದೂರ ಇದೆ. ನಮ್ಮ ಆರಂಭ ಚೆನ್ನಾಗಿಲ್ಲ. ಆದರೆ ನಾವು ಎದೆಗುಂದಿಲ್ಲ. ಉತ್ತಮ ಮತ್ತು ಪ್ರತಿಭಾವಂತ ಆಟಗಾರರು ಇದ್ದಾರೆ. ಹೊಸಬರಿಗೆ ಅವಕಾಶ ನೀಡುವ ಕುರಿತು ತಂಡದ ಆಡಳಿತ ನಿರ್ಧರಿಸುವುದು.
–ಪಾರ್ಥಿವ್ ಪಟೇಲ್, ಆರ್‌ಸಿಬಿ ಆಟಗಾರ

**

ಕೊಹ್ಲಿ ಮತ್ತು ಎಬಿಡಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ಅವರು ವೈಫಲ್ಯ ಅನುಭವಿಸಿದ್ದಾರೆಂದ ಮಾತ್ರಕ್ಕೆ ಹಗುರವಾಗಿ ಪರಿಗಣಿಸುವಂತಿಲ್ಲ.
–ಪಿಯೂಷ್ ಚಾವ್ಲಾ, ಕೆಕೆಆರ್ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT