ಮಂಗಳವಾರ, ಅಕ್ಟೋಬರ್ 20, 2020
22 °C
ವಿಂಡೀಸ್ ವಿರುದ್ಧದ ಸರಣಿ

T20 Cricket | ಗಾಯಾಳು ಶಿಖರ್ ಧವನ್ ಬದಲು ಸಂಜು ಸ್ಯಾಮ್ಸನ್‌ಗೆ ಬುಲಾವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗಾಯಗೊಂಡಿರುವ ಶಿಖರ್ ಧವನ್ ಅವರ ಬದಲಿಗೆ ಕೇರಳದ ಸಂಜು ಸ್ಯಾಮ್ಸನ್ ಅವರಿಗೆ ಭಾರತ ಟ್ವೆಂಟಿ–20 ತಂಡದಲ್ಲಿ ಸ್ಥಾನ ನೀಡಲಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ಆಡಲಿರುವ ತಂಡವನ್ನು ಬುಧವಾರ ಎಂ.ಎಸ್.ಕೆ. ಪ್ರಸಾದ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ಪ್ರಕಟಿಸಿತು.  ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಅವರೂ ತಂಡದಲ್ಲಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯಲ್ಲಿ ಮಹಾರಾಷ್ಟ್ರ ಎದುರಿನ ಪಂದ್ಯದಲ್ಲಿ ಗಾಯಗೊಂಡಿದ್ದ ದೆಹಲಿಯ ಶಿಖರ್ ಧವನ್ ಚೇತರಿಸಿಕೊಂಡಿಲ್ಲ. ಅವರ ಎಡ ಮೊಣಕಾಲಿಗೆ ಪೆಟ್ಟು ಬಿದ್ದಿತ್ತು.  ಆದ್ದರಿಂದ ಅವರನ್ನು ಆಯ್ಕೆ ಪರಿಗಣಿಸಿಲ್ಲ.

‘ಬಿಸಿಸಿಐ ವೈದ್ಯಕೀಯ ತಂಡವು ಮಂಗಳವಾರ ಧವನ್ ಅವರ ತಪಾಸಣೆ ಮಾಡಿದೆ. ಚೇತರಿಸಿಕೊಳ್ಳಲು ಅವರಿಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಈಚೆಗೆ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗೆ  ಒಂದೂ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಸಿಕ್ಕಿರಲಿಲ್ಲ. 2015ರಲ್ಲಿ ಹರಾರೆಯಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಸಂಜು ಪದಾರ್ಪಣೆ ಮಾಡಿದ್ದರು. ಅದಾದ ನಂತರ ಮತ್ತೆ ಅವರು ಕಣಕ್ಕಿಳಿದಿಲ್ಲ.

ಡಿಸೆಂಬರ್ 6ರಿಂದ ನಡೆಯಲಿರುವ ಸರಣಿಯಲ್ಲಿ ಮೂರು ಟಿ20 ಪಂದ್ಯಗಳು ನಡೆಯಲಿವೆ. ಹೈದರಾಬಾದ್ (ಡಿ.6),  ತಿರುವನಂತಪುರ (ಡಿ.8) ಮತ್ತು ಮುಂಬೈ (ಡಿ. 11) ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ತಂಡ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಚಾಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಸಂಜು ಸ್ಯಾಮ್ಸನ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು