ಮಂಗಳವಾರ, ನವೆಂಬರ್ 24, 2020
19 °C
ಆಟದ ಮನೆ

PV Web Exclusive | ಐಪಿಎಲ್‌ನ ಹೊಸ ಸ್ಪಿನ್‌ ‘ಗನ್‌’ಗಳು

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಸ್ಪಿನ್‌ ಬೌಲಿಂಗ್ ಅನ್ನು ಕಲೆಗಾರಿಕೆ ಎಂದೇ ಭಾವಿಸಿದವರ ಸಂಖ್ಯೆ ನಮ್ಮ ದೇಶದಲ್ಲಿ ದೊಡ್ಡದಿದೆ. ಆದಾಗ್ಯೂ ಕಳೆದ ಕೆಲವು ವರ್ಷಗಳಲ್ಲಿ ವಿಶ್ವಶ್ರೇಷ್ಠ ಸ್ಪಿನ್ನರ್‌ಗಳು ರೂಪುಗೊಳ್ಳುತ್ತಿಲ್ಲವೇಕೆ ಎಂಬ ಪ್ರಶ್ನೆ ಎದ್ದಿತ್ತು. ಬ್ಯಾಟ್ಸ್‌ಮನ್‌ಗಳ ಪ್ರಾಬಲ್ಯದಲ್ಲಿ ಸ್ಪಿನ್ನರ್‌ಗಳು ನಲುಗಿದ್ದರು. ಈ ಸಲ ಐಪಿಎಲ್‌ನಲ್ಲಿ ಸ್ಪಿನ್ನರ್‌ಗಳ ಹೊಳಪು ಕಾಣುತ್ತಿದೆ. ಹಳಹಳಿಕೆಯ ಕಾರ್ಮೋಡದಲ್ಲಿನ ಬೆಳ್ಳಿಮಿಂಚು ಇದು.

1958ರಲ್ಲಿ ರಣಜಿ ಕ್ರಿಕೆಟ್‌ಗೆ ಕಾಲಿಟ್ಟ ರಾಜೀಂದರ್ ಗೋಯೆಲ್ ಇಪ್ಪತ್ತೇಳು ವರ್ಷ ದೇಸಿ ಕ್ರಿಕೆಟ್ ಆಡಿದ್ದರು. 637 ರಣಜಿ ವಿಕೆಟ್‌ಗಳನ್ನೂ ಒಳಗೊಂಡಂತೆ 750 ವಿಕೆಟ್‌ಗಳನ್ನು ಅವರು ದೇಸಿ ಕ್ರಿಕೆಟ್‌ ಪಂದ್ಯಗಳಲ್ಲಿ ಪಡೆದವರು. 1973–74ರಲ್ಲಿ ರೈಲ್ವೇಸ್ ತಂಡದ ವಿರುದ್ಧ ರಣಜಿ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ 55 ರನ್‌ ನೀಡಿ 8 ವಿಕೆಟ್ ಕಿತ್ತಿದ್ದರು. ಇದು ರಣಜಿ ಕ್ರಿಕೆಟ್‌ನಲ್ಲಿ ಅವರು ಬರೆದಿದ್ದ ದಾಖಲೆ. ಪ್ರಸನ್ನ, ವೆಂಕಟರಾಘವನ್, ಬಿ.ಎಸ್. ಚಂದ್ರಶೇಖರ್ ಸ್ಪಿನ್ ತ್ರಯರನ್ನು ಹಲವು ವರ್ಷಗಳ ಕಾಲ ಭಾರತ ನೆಚ್ಚಿಕೊಂಡಿತ್ತು. ಹಾಗಾಗಿ ಹರಿಯಾಣದ ಎಡಗೈ ಸ್ಪಿನ್ನರ್ ಗೋಯೆಲ್‌ಗೆ ದೇಶದ ಪರವಾಗಿ ಆಡುವ ಅವಕಾಶ ಸಿಗಲಿಲ್ಲ.

ಒಂದೇ ಒಂದು ಸಲ ವೆಸ್ಟ್ಇಂಡೀಸ್‌ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಬಿಷನ್ ಸಿಂಗ್ ಬೇಡಿ ಗಾಯಗೊಂಡಿದ್ದಾಗ ತಂಡಕ್ಕೆ ಗೋಯೆಲ್ ಆಯ್ಕೆಯಾದರೂ ಆಡುವ ಹನ್ನೊಂದು ಜನರಲ್ಲಿ ಒಬ್ಬರಾಗಲಿಲ್ಲ. ಇಂತಹ ನತದೃಷ್ಟ ಸ್ಪಿನ್ ಬೌಲರ್ ರಣಜಿ ಕ್ರಿಕೆಟ್‌ನಲ್ಲಿ 600 ವಿಕೆಟ್‌ಗಳ ಗಡಿ ದಾಟಿದಾಗ ಗ್ವಾಲಿಯರ್ ಜೈಲಿನಲ್ಲಿದ್ದ ಭೂಕಾ ಸಿಂಗ್ ಎಂಬ ಡಕಾಯಿತ, ‘ನಿಮ್ಮ ಬೌಲಿಂಗ್‌ನ ಅಭಿಮಾನಿ ನಾನು. ರಣಜಿಯಲ್ಲಿ ಸಾಧನೆ ಮಾಡಿರುವುದಕ್ಕೆ ಅಭಿನಂದನೆ. ಇನ್ನಷ್ಟು ವಿಕೆಟ್‌ಗಳನ್ನು ನೀವು ಪಡೆಯಿರಿ’ ಎಂದು ಪತ್ರ ಬರೆದಿದ್ದ. ಅದಕ್ಕೇ ಗೋಯೆಲ್, ‘ಆಯ್ಕೆಗಾರರಿಗೆ ನಾನು ಇಷ್ಟವಾಗಲಿಲ್ಲ, ಡಕಾಯಿತನಿಗೆ ಇಷ್ಟವಾದೆ’ ಎಂದು ಬೇಸರ ಬೆರೆತ ವ್ಯಂಗ್ಯದ ಧಾಟಿಯಲ್ಲಿ ಹೇಳಿಕೊಳ್ಳುತ್ತಿದ್ದರು. ಇದೇ ವರ್ಷ ಜೂನ್‌ನಲ್ಲಿ ಅವರು ಕ್ರಿಕೆಟ್ ಅಭಿಮಾನಿಗಳನ್ನು ಅಗಲಿದರು.

ಕರ್ನಾಟಕದ ಪುತ್ತೂರಿನವರಾದ ರಘುರಾಮ್ ಭಟ್ 1979–80ರ ರಣಜಿ ಋತುವಿನಲ್ಲಿ ಮೊದಲು ಆಡಿದ್ದು. ದಾವಣಗೆರೆಯಲ್ಲಿ ಕೇರಳ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಒಂಬತ್ತು ವಿಕೆಟ್‌ ಪಡೆದು ಗಮನ ಸೆಳೆದಿದ್ದರು. ಆರನೇ ಪ್ರಥಮ ದರ್ಜೆ ಪಂದ್ಯದಲ್ಲಿಯೇ ಅಂತಹ ಸಾಧನೆ ಮಾಡಿದವರು ವಿರಳ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 374 ವಿಕೆಟ್‌ಗಳನ್ನು ಪಡೆದ ನಮ್ಮ ಹೆಮ್ಮೆಯ ಈ ಎಡಗೈ ಸ್ಪಿನ್ನರ್‌ಗೆ ದೇಶವನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ಎರಡೇ ಸಲ. ಆ ಮಟ್ಟಿಗೆ ಅವರೂ ನತದೃಷ್ಟರೇ.

ಈಗ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ, ಶಾರ್ಜಾದಲ್ಲಿ ಸ್ಪಿನ್‌ ಬೌಲರ್‌ಗಳು ಮೆರೆಯುತ್ತಿರುವಾಗ ಗೋಯೆಲ್, ರಘುರಾಮ್ ಭಟ್ ಸಹಜವಾಗಿಯೇ ನೆನಪಾದರು. ಬ್ಯಾಟ್ಸ್‌ಮನ್‌ಗಳ ಪಾಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ ಸ್ವರ್ಗ ಎಂದುಕೊಳ್ಳುತ್ತಿದ್ದೆವು. ಆದರೆ, ಈ ಐಪಿಎಲ್ ಋತುವಿನಲ್ಲಿ ಚೆಂಡನ್ನು ತಿರುಗಿಸುವ ರಿಸ್ಟ್ ಸ್ಪಿನ್ನರ್‌ಗಳ ಪ್ರದರ್ಶನ ಕೂಡ ಅಚ್ಚರಿ ಒಡ್ಡುತ್ತಿದೆ.

ಶಾರ್ಜಾ ಎಂದೊಡನೆ ನೆನಪಾಗುವುದು 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ 134 ಹಾಗೂ 143 ರನ್‌ ಗಳಿಸಿದ ಎರಡು ಆಟಗಳು. ಶೇನ್ ವಾರ್ನ್ ಹಾಕಿದ ಚೆಂಡು ಬೀಳುವ ಸ್ಥಳಕ್ಕೇ ನುಗ್ಗಿ (ಅದು ಲೆಗ್‌ಸ್ಟಂಪ್‌ನ ನೇರಕ್ಕೂ ಇರದೆ ಹೊರಗಿನ ಭಾಗ ಆಗಿರುತ್ತಿದ್ದುದೇ ಹೆಚ್ಚು) ಸಿಕ್ಸರ್ ಹೊಡೆದಿದ್ದರು. ಸಚಿನ್ ಫುಟ್‌ವರ್ಕ್ ವಾರ್ನ್ ನಿದ್ದೆಗೆಡುವಂತೆ ಮಾಡಿತ್ತು. ಈ ಬಾರಿ ಐಪಿಎಲ್‌ ನೋಡಿದರೆ, ಸಚಿನ್ ತರಹದ ಫುಟ್‌ವರ್ಕ್ ಇಲ್ಲದೆಯೇ ಸ್ಪಿನ್ನರ್‌ಗಳನ್ನು ಎದುರಿಸಬೇಕಾದ ಸ್ಥಿತ್ಯಂತರಕ್ಕೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಒಗ್ಗಿಕೊಂಡಿರುವುದು ಎದ್ದುಕಾಣುತ್ತದೆ.

2012ರ ಐಪಿಎಲ್ ಋತುವಿನಲ್ಲಿ ಕೋಲ್ಕತ್ತ ನೈಟ್ ರೈಟರ್ಸ್ ತಂಡ ಕಪ್ ಗೆದ್ದಿತು. ಆ ತಂಡದಲ್ಲಿದ್ದ ಸುನೀಲ್ ನರೇನ್ ಆಗ ಪ್ರಭಾವಿ ಸ್ಪಿನ್ನರ್. ‘ಸ್ಪಿನ್ ಮಾಯಾವಿ’ ಎಂದೇ ಅವರನ್ನು ಆಪ್ತರು ಕರೆಯುತ್ತಿದ್ದರು. ಆಗ ಅವರ ಎಸೆತಗಳನ್ನು ದೂರಕ್ಕೆ ಹೊಡೆಯಲು ಬ್ಯಾಟ್ಸ್‌ಮನ್‌ಗಳು ಹಿಂದೇಟು ಹಾಕುತ್ತಿದ್ದುದೇ ಹೆಚ್ಚು. ಮುಂದಡಿ ಇಟ್ಟು ಆಡುವ ಬ್ಯಾಟ್ಸ್‌ಮನ್‌ಗಳ ಚಾಳಿಯನ್ನು ನರೇನ್ ದೌರ್ಬಲ್ಯವನ್ನಾಗಿ ಪರಿವರ್ತಿಸಿ, ಎರಡೂ ದಿಕ್ಕಿಗೆ ಸ್ಪಿನ್‌ ಮಾಡುತ್ತಿದ್ದರು. ಕೆಲವೊಮ್ಮೆ ನೇರವಾಗಿ ಎಸೆತಗಳನ್ನು ಹಾಕುತ್ತಿದ್ದರು. ಚೆಂಡು ತಿರುಗುವ ದಿಕ್ಕು, ಅದರ ಗತಿಯ ಬದಲಾವಣೆ ಮುಂದಡಿ ಇಡುತ್ತಿದ್ದ ಬ್ಯಾಟ್ಸ್‌ಮನ್‌ಗಳನ್ನು ವಂಚಿಸುತ್ತಿತ್ತು.

ಕ್ರೀಸ್‌ನಲ್ಲೇ ನಿಂತು ಆಡಿದರೆ ನರೇನ್‌ಗೆ ರನ್‌ ಗಳಿಸುವ ದಾರಿ ತಂತಾನೇ ತೆರೆದುಕೊಳ್ಳುತ್ತದೆ ಎಂಬ ಪ್ರಾತ್ಯಕ್ಷಿಕೆಯನ್ನು 2014ರಲ್ಲಿ ನಡೆದ ಪಂದ್ಯವೊಂದರಲ್ಲಿ ವೃದ್ಧಿಮಾನ್ ಸಹಾ ನೀಡಿದರು. ಕಳೆದ ಐಪಿಎಲ್ ಋತುವಿನವರೆಗೆ ಪ್ರಭಾವಿ ಎನಿಸಿಕೊಂಡಿದ್ದ ನರೇನ್, ಈ ಸಲ 8.5ಕ್ಕೂ ಹೆಚ್ಚು ರನ್‌ಗಳನ್ನು ಪ್ರತಿ ಓವರ್‌ಗೆ ನೀಡುತ್ತಾ ಬಂದಿದ್ದಾರೆ. ವಿಕೆಟ್ ಗಳಿಕೆಯ ಪಟ್ಟಿಯಲ್ಲೂ ಅವರ ಹೆಸರು ಎಲ್ಲೋ ಕೆಳಗೆ ಇದೆ.

ಆಫ್ ಸ್ಪಿನ್ನರ್‌ಗಳಿಗೆ ಈಗ ಮೊದಲಿನಷ್ಟು ಪ್ರಯೋಗಕ್ಕೆ ಅವಕಾಶವಿಲ್ಲ. ನರೇನ್ ಬೌಲಿಂಗ್ ಶೈಲಿ ಈ ಬಾರಿಯೂ ವಿವಾದಕ್ಕೆ ಈಡಾಗಿದ್ದನ್ನು ನೋಡಿದ್ದೇವೆ. ಅದರಲ್ಲೂ ‘ದೂಸ್ರಾ’ ಪ್ರಯೋಗಿಸಲು ಮುಂದಾದರೆ, ಅಂಪೈರ್‌ಗಳ ಕಣ್ಣು ಸಹಜವಾಗಿಯೇ ಕೆಂಪಾಗುತ್ತದೆ. ‘ಕೈಯನ್ನು ಬೆಂಡ್ ಮಾಡದೆ ದೂಸ್ರಾ ಹಾಕಲು ಸಾಧ್ಯವೇ ಇಲ್ಲ’ ಎಂದು ರವಿಚಂದ್ರನ್ ಅಶ್ವಿನಿ ಕೂಡ ಈ ಹಿಂದೆ ಹೇಳಿದ್ದರು.

ಇಷ್ಟೆಲ್ಲ ಮಿತಿಗಳ ನಡುವೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಬೌಲಿಂಗ್ ಎಕಾನಮಿ ರೇಟ್ 5.72 ಇದೆ. ವಿಕೆಟ್‌ನತ್ತಲೇ ಗುರಿ ಮಾಡಿಕೊಂಡು ಗುಡ್‌ ಲೆಂಗ್ತ್‌ ಹಾಗೂ ಅದಕ್ಕೆ ಸ್ವಲ್ಪ ಹಿಂಬದಿಯ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡುವ ಅವರು, ಬ್ಯಾಟ್ಸ್‌ಮನ್‌ ಭುಜ ಅರಳಿಸಿ ಆಡಲು ಸುಲಭವಾಗಿ ಬಿಡುತ್ತಿಲ್ಲ.

ಮೊದಲ ಕೆಲವು ಪಂದ್ಯಗಳಾಗುವಷ್ಟರಲ್ಲೇ ಸ್ಪಿನ್ನರ್‌ಗಳಲ್ಲಿ ಈ ಸಲ ಅಚ್ಚರಿಯ ಪ್ರದರ್ಶನ ಹೊಮ್ಮಲಿದೆ ಎನ್ನುವ ಸತ್ಯ ಐಪಿಎಲ್ ಫ್ರಾಂಚೈಸಿಗಳಿಗೆ ಗೊತ್ತಾಯಿತೆನ್ನಿಸುತ್ತದೆ. ಕೋಲ್ಕತ್ತ ನೈಟ್ ರೈಡರ್ಸ್ ಅದಕ್ಕೇ ಚೈನಾಮನ್ ಸ್ಪೆಷಲಿಸ್ಟ್ ಕುಲದೀಪ್ ಯಾದವ್ ಅವರನ್ನು ಮೂರು ಪಂದ್ಯಗಳಾದ ಮೇಲೆ ಬೆಂಚ್ ಮೇಲೆ ಕೂರಿಸಿತು. ಹರಭಜನ್ ಸಿಂಗ್ ಹೊರತುಪಡಿಸಿದರೆ ಅತಿ ಹೆಚ್ಚು ಓವರ್‌ಗಳನ್ನು ಐಪಿಎಲ್‌ನಲ್ಲಿ ಇದುವರೆಗೆ ಬೌಲ್ ಮಾಡಿರುವವರು ಪಿಯೂಷ್ ಚಾವ್ಲಾ. ಅವರ ಸಾಂಪ್ರದಾಯಿಕ ಲೆಗ್‌ಸ್ಪಿನ್‌ಗೆ ಈ ಸಲದ ಟೂರ್ನಿ ಶುರುವಾಗುವವರೆಗೂ ಮಹತ್ವವಿತ್ತು. ಈ ಋತುವಿನಲ್ಲಿ ಆರು ವಿಕೆಟ್‌ಗಳನ್ನು ಅವರು ಪಡೆದರಾದರೂ ಪ್ರತಿ ಓವರ್‌ಗೆ 8.57ರ ಸರಾಸರಿಯಲ್ಲಿ ರನ್ ಕೊಟ್ಟಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್‌ ಆಗಿದ್ದ ಸ್ಪಿನ್ನರ್ ಚಾವ್ಲಾ ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಇನ್ನೊಬ್ಬ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಮೂರೇ ಪಂದ್ಯ ಆಡಿದ್ದು. ಬೌಲ್ ಮಾಡಿದ್ದು 10 ಓವರ್‌ಗಳನ್ನು.

ದೇಶದ ಪರವಾಗಿ ಆಡಲು ಮೊನ್ನೆಯಷ್ಟೇ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿಯ ಕಡೆ ಕೋಲ್ಕತ್ತ ನೈಟ್ ರೈಡರ್ಸ್‌ ಬೆರಗುಗಣ್ಣು ಬೀರುತ್ತಿದೆ. ಅಕ್ಷರ್ ಪಟೇಲ್ ಸಾಂಪ್ರದಾಯಿಕ ಎಡಗೈ ಬೌಲಿಂಗ್‌ಗೆ ಕುಲದೀಪ್ ಯಾದವ್ ಚೈನಾಮನ್‌ಗೆ ಇಲ್ಲದ ಕಿಮ್ಮತ್ತು ಸಿಕ್ಕಿದೆ. ರಾಹುಲ್ ಚಾಹರ್, ರವಿ ಬಿಷ್ಣೋಯ್, ರಾಹುಲ್ ತೇವಾಟಿಯಾ, ಮುರುಗನ್ ಅಶ್ವಿನ್, ಶ್ರೇಯಸ್ ಗೋಪಾಲ್ ಲೆಗ್‌ ಸ್ಪಿನ್ ಬೌಲಿಂಗ್‌ಗೆ ಸಲ್ಲುತ್ತಿರುವ ಫಲಗಳನ್ನು ನೋಡಿಕೊಂಡು ಪಳಗಿದ ಸ್ಪಿನ್ನರ್‌ಗಳು ಬೆಂಚು ಕಾಯದೇ ವಿಧಿಯಿಲ್ಲ. ಮಿಂಚುತ್ತಿರುವ ಹುಡುಗರ ಎಕಾನಮಿ ರೇಟ್ 7.20 ಮೀರಿಲ್ಲ ಎನ್ನುವುದಕ್ಕೆ ಅಡಿಗೆರೆ ಎಳೆಯಬೇಕು. ಇದರ ನಡುವೆಯೇ ರವೀಂದ್ರ ಜಡೇಜಾ ಎಡಗೈ ಸ್ಪಿನ್ ಬೌಲಿಂಗ್ ಹಿಂದಿನ ಮೊನಚನ್ನು ಕಳೆದುಕೊಂಡಂತೆ ಕಾಣುತ್ತಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಡಾಟ್‌ ಬಾಲ್‌ಗಳನ್ನು ಹಾಕಿರುವ ಸ್ಪಿನ್ನರ್ ರಶೀದ್ ಖಾನ್. 48 ಓವರ್‌ಗಳಲ್ಲಿ 135 ಡಾಟ್‌ ಬಾಲ್‌ಗಳನ್ನು ಅವರಿಗೆ ಬ್ಯಾಟ್ಸ್‌ಮನ್‌ಗಳು ಆಡಿದ್ದಾರೆ. ರವಿ ಬಿಷ್ಣೋಯ್ 43 ಓವರ್‌ಗಳಲ್ಲಿ 106 ಡಾಟ್‌ ಬಾಲ್ ಹಾಕಿದ್ದಾರೆ. ಯಜುವೇಂದ್ರ ಚಹಲ್ 91 ಡಾಟ್‌ಬಾಲ್‌ಗಳನ್ನು 42 ಓವರ್‌ಗಳಲ್ಲಿ ಹಾಕಿದರೆ, ವರುಣ್ 89 ಡಾಟ್‌ಬಾಲ್‌ಗಳನ್ನು ಆಡುವಂತೆ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದ್ದಾರೆ. ವಾಷಿಂಗ್ಟನ್ ಸುಂದರ್, ಶ್ರೇಯಸ್ ಗೋಪಾಲ್ ಕೂಡ ಕ್ರಮವಾಗಿ 86, 81 ಡಾಟ್‌ಬಾಲ್‌ಗಳನ್ನು ಹಾಕಿ ಗಮನ ಸೆಳೆದಿದ್ದಾರೆ.

ವಿಕೆಟ್ ಪಡೆದವರ ಪಟ್ಟಿಯಲ್ಲೂ ರಶೀದ್ ಖಾನ್ (17), ಚಹಲ್ (16), ರಾಹುಲ್ ಚಾಹರ್ (13), ಚಕ್ರವರ್ತಿ ವರುಣ್ (13), ರವಿ ಬಿಷ್ಣೋಯ್ (12), ಮುರುಗನ್ ಅಶ್ವಿನ್ (9), ಶ್ರೇಯಸ್ ಗೋಪಾಲ್ (9) ಕಣ್ಣು ಕೋರೈಸುತ್ತಿದ್ದಾರೆ. ರಶೀದ್ ಖಾನ್ ಎಕಾನಮಿ ರೇಟ್ 5 ಆಗಿದ್ದು, ಮಂಗಳವಾರ (ಅ.27) ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೂವರನ್ನು ಅವರು ಔಟ್‌ ಮಾಡಿದರು. ಆ ಪಂದ್ಯದಲ್ಲಿ 17 ಡಾಟ್‌ಬಾಲ್‌ಗಳನ್ನು ಅವರು ಮಾಡಿದ್ದು ಬ್ಯಾಟ್ಸ್‌ಮನ್‌ಗಳನ್ನು ಹೇಗೆ ಕಟ್ಟಿಹಾಕುತ್ತಾರೆ ಎನ್ನುವುದಕ್ಕೆ ಸಾಕ್ಷಿ.

ಸ್ಪಿನ್ನರ್‌ಗಳಿಗೆ ಇನ್ನು ಉಳಿಗಾಲವಿಲ್ಲ ಎಂದು ಕಳೆದ ವರ್ಷ ಮುರಳಿ ಕಾರ್ತಿಕ್ ಅಲವತ್ತುಕೊಂಡಿದ್ದರು. ಹೊಡಿ–ಬಡಿ ಎನ್ನುವಂಥ ಚುಟುಕು ಕ್ರಿಕೆಟ್‌ನಲ್ಲಿ ನಿಧಾನವಾಗಿ ಬೌಲ್ ಮಾಡಿದರೆ ಉಳಿಗಾಲ ಎಲ್ಲಿದೆ ಎಂದು ರಮೇಶ್ ಪೊವಾರ್ ಕೂಡ ಅಭಿಪ್ರಾಯಪಟ್ಟಿದ್ದರು. ವಿಡಿಯೊಗಳನ್ನು ವಿಶ್ಲೇಷಿಸಿ, ಬೌಲರ್‌ಗಳ ತಂತ್ರಕ್ಕೆ ಕೋಚ್‌ಗಳು ಲಗುಬಗೆಯಲ್ಲಿ ಪ್ರತಿತಂತ್ರ ರೂಪಿಸುವ ಕಾಲವಿದು. ಈ ಪ್ರಕ್ರಿಯೆಯನ್ನು ಖುದ್ದು ರಮೇಶ್ ಪೊವಾರ್ ಕಂಡವರು. ಆದರೆ, ಅಂಕಿಅಂಶಗಳು ಹೇಳುವುದೇ ಬೇರೆ. ಟೆಸ್ಟ್‌ ಕ್ರಿಕೆಟ್‌ನ ಶ್ರೇಷ್ಠ ಬೌಲರ್‌ಗಳಾದ ಶೇನ್ ವಾರ್ನ್, ಅನಿಲ್ ಕುಂಬ್ಳೆ, ಮುತ್ತಯ್ಯ ಮುರಳೀಧರನ್ ಮೂವರೂ ಐಪಿಎಲ್ ಚುಟುಕು ಕ್ರಿಕೆಟ್‌ನಲ್ಲೂ ದುಬಾರಿಯಾದವರಲ್ಲ. ವಾರ್ನ್ 55 ಪಂದ್ಯಗಳಲ್ಲಿ 57 ವಿಕೆಟ್‌ ಪಡೆದರು (ಎಕಾನಮಿ ರೇಟ್ 7.27). ಕುಂಬ್ಳೆ 42 ಪಂದ್ಯಗಳಲ್ಲಿ 45 ಹಾಗೂ ಮುರಳೀಧರನ್ 66 ಪಂದ್ಯಗಳಲ್ಲಿ 63 ವಿಕೆಟ್‌ಗಳನ್ನು ಕಿತ್ತಿದ್ದರು. ಇವರಿಬ್ಬರೂ ಪ್ರತಿ ಓವರ್‌ಗೆ ಆರೂವರೆಗಿಂತ ಹೆಚ್ಚು ರನ್‌ಗಳನ್ನು ನೀಡಿರಲಿಲ್ಲ.

ಕುಂಬ್ಳೆ, ಹರಭಜನ್ ನಂತರ ಭಾರತ ಕ್ರಿಕೆಟ್‌ನ ಸ್ಪಿನ್ ಬೌಲಿಂಗ್‌ಗೆ ಹೊಸ ಅರ್ಥ ದಕ್ಕಿಸಿಕೊಡುವಂತೆ ಬೌಲ್ ಮಾಡಿದ್ದ ರವಿಚಂದ್ರನ್ ಅಶ್ವಿನ್ ಈ ಸಲ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿದ್ದಾರೆ. 9 ವಿಕೆಟ್‌ಗಳನ್ನು ಅವರು ಪಡೆದಿದ್ದಾರಾದರೂ ಎಕಾನಮಿ ರೇಟ್ 8.28 ಇರುವುದು ತಲೆನೋವು. ಹೊಸ ಹುಡುಗರ ಅಚ್ಚರಿಯ ಪ್ರದರ್ಶನದ ನಡುವೆಯೇ ರಶೀದ್ ಖಾನ್, ಚಹಲ್ ತರಹದವರ ಗೂಗ್ಲಿಗಳು ಈ ಹೊತ್ತಿನಲ್ಲಿಯೂ ಕಾಡುತ್ತಿವೆ. ಸ್ಪಿನ್ ಬೌಲರ್‌ಗಳಿಗೆ ಉಳಿಗಾಲವಿಲ್ಲ ಎಂಬ ತಮ್ಮ ಅಭಿಪ್ರಾಯವನ್ನು ಬಹುಶಃ ಮುರಳಿ ಕಾರ್ತಿಕ್ ಬದಲಾಯಿಸಿಕೊಳ್ಳುವ ಸಂದರ್ಭ ಈಗ ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು