ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐತಿಹಾಸಿಕ ಟೆಸ್ಟ್ ಜಯದ ಬಳಿಕ ವಿಮಾನದಲ್ಲಿದ್ದವರೆಲ್ಲ ಎದ್ದುನಿಂತು ಗೌರವಿಸಿದ್ದರು’

Last Updated 22 ಜನವರಿ 2020, 17:41 IST
ಅಕ್ಷರ ಗಾತ್ರ

ನವದೆಹಲಿ: 2001ರಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ವಿಮಾನದಲ್ಲಿದ್ದ ಎಲ್ಲರೂ ಎದ್ದುನಿಂತು ಗೌರವ ನೀಡಿದ್ದರು ಎಂದು ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಹೇಳಿಕೊಂಡಿದ್ದಾರೆ.

ಟೆಸ್ಟ್‌ ಗೆಲುವಿನ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಲಕ್ಷ್ಮಣ್‌, ‘ಆ ಪಂದ್ಯ ನಡೆದ ಬಳಿಕದ ಒಂದು ಘಟನೆಯನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ನಮ್ಮ ತಂಡ ಏರ್ ಇಂಡಿಯಾ ವಿಮಾನದೊಳಗೆ ಪ್ರವೇಶಿಸುತ್ತಿದ್ದಂತೆ, ಒಳಗಿದ್ದ ಪ್ರಯಾಣಿಕರೆಲ್ಲರೂ ಎದ್ದು ನಿಂತು ನಮಗೆ ಗೌರವ ಸೂಚಿಸಿದ್ದರು. ನನಗೆ ಅದನ್ನು ನಂಬಲು ಸಾಧ್ಯವೇ ಆಗಿರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಲಕ್ಷ್ಮಣ್‌–ದ್ರಾವಿಡ್‌ ಸಾಹಸಮಯ ಬ್ಯಾಟಿಂಗ್‌
‌‌‌‌2001ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮೂರು ಪಂದ್ಯಗಳಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿ ಆಯೋಜನೆಯಾಗಿತ್ತು. ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಹತ್ತು ವಿಕೆಟ್‌ಗಳಿಂದ ಗೆದ್ದಿದ್ದ ಆಸಿಸ್‌, ಕೊಲ್ಕತ್ತದಲ್ಲಿ ನಡೆದ ಎರಡನೇ ಪಂದ್ಯವನ್ನೂ ಜಯಿಸಿ ಸರಣಿ ವಶಪಡಿಸಿಕೊಳ್ಳುವ ಉತ್ಸಾಹದಲ್ಲಿತ್ತು.

ಟಾಸ್‌ ಗೆದ್ದ ಪ್ರವಾಸಿ ಪಡೆ ಬ್ಯಾಟಿಂಗ್ ಆರಂಭಿಸಿ ಮೊದಲ ಇನಿಂಗ್ಸ್‌ನಲ್ಲಿ 445 ರನ್‌ ಕಲೆಹಾಕಿತ್ತು. ಈ ಮೊತ್ತದೆದುರು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಸೌರವ್‌ ಗಂಗೂಲಿ ಪಡೆ ಕೇವಲ 171 ರನ್‌ ಗಳಿಗೆ ಆಲೌಟ್‌ ಆಗಿತ್ತು. ಹೀಗಾಗಿ 274 ರನ್‌ ಮುನ್ನಡೆ ಸಾಧಿಸಿ ಸ್ಟೀವ್‌ ವಾ ಬಳಗ ಭಾರತಕ್ಕೆ ಫಾಲೋಅನ್‌ ಹೇರಿತ್ತು.

ವಿವಿಎಸ್‌ ಲಕ್ಷ್ಮಣ್‌ ಹಾಗೂರಾಹುಲ್‌ ದ್ರಾವಿಡ್‌: ಫೇಸ್‌ಬುಕ್‌ ಚಿತ್ರ

ಸೋಲಿನ ಭೀತಿಯಲ್ಲೇ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್‌ ಆಡಲಿಲ್ಲ. ಶಿವ ಸುಂದರ್‌ ದಾಸ್‌ (39) ಮತ್ತು ಎಸ್‌. ರಮೇಶ್‌(30) ಬೇಗನೆ ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ವಿವಿಎಸ್‌ ಲಕ್ಷ್ಮಣ್‌ಗೆ,ಸಚಿನ್‌ ತೆಂಡೂಲ್ಕರ್ (10) ಅವರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಬಳಿಕ ಬಂದ ಗಂಗೂಲಿ (49) ರನ್‌ ಗಳಿಸಿ ಔಟ್‌ ಆದರು.

231 ರನ್‌ ಆಗುವಷ್ಟರಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ್ದರು. ಆಸ್ಟ್ರೇಲಿಯಾ ಬಾಕಿ ಚುಕ್ತಾ ಮಾಡಲು ಭಾರತಕ್ಕೆ ಇನ್ನೂ 43 ರನ್ ಬೇಕಿದ್ದವು. ಹೀಗಾಗಿ ಗಂಗೂಲಿ ಬಳಗಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಎಣಿಸಲಾಗಿತ್ತು.

ಆದರೆ, ಈ ವೇಳೆ ಕ್ರೀಸ್‌ಗಿಳಿದ ಕನ್ನಡಿಗ ರಾಹುಲ್‌ ದ್ರಾವಿಡ್‌, ಲಕ್ಷ್ಮಣ್‌ ಜೊತೆ ಸೇರಿ ಪಂದ್ಯದ ಚಿತ್ರಣ ಬದಲಿಸುವಂತೆ ಆಡಿದರು. ಈ ಜೋಡಿ ಐದನೇ ವಿಕೆಟ್‌ಗೆ 376 ರನ್ ಕೂಡಿಸಿತು. ಇವರ ಬ್ಯಾಟಿಂಗ್ ಬಲದಿಂದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ ಕಳೆದುಕೊಂಡು 657 ರನ್ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

452 ಎಸೆತಗಳನ್ನು ಎದುರಿಸಿದ ಲಕ್ಷ್ಮಣ್‌, 44 ಬೌಂಡರಿ ಸಹಿತ 281 ರನ್‌ ಗಳಿಸಿದರೆ,353 ಎಸೆತಗಳನ್ನು ಆಡಿದ ದ್ರಾವಿಡ್‌ 180 ರನ್‌ ಕಲೆಹಾಕಿದರು.

ಒಟ್ಟಾರೆ 384 ರನ್‌ ಗುರಿಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದಆಸಿಸ್‌ ಪಡೆಯನ್ನು ಹರ್ಭಜನ್‌ ಸಿಂಗ್‌ ಕಾಡಿದರು. 73 ರನ್‌ ನೀಡಿ ಪ್ರಮುಖ ಆರು ವಿಕೆಟ್‌ ಕಬಳಿಸಿ ಮಿಂಚಿದರು. ಸಚಿನ್‌ ತೆಂಡೂಲ್ಕರ್‌ ಮೂರು ವಿಕೆಟ್ ಪಡೆದು ಹರ್ಭಜನ್‌ಗೆ ಉತ್ತಮ ಬೆಂಬಲ ನೀಡಿದ್ದರು. ಹೀಗಾಗಿ ಆಸಿಸ್‌ ಕೇವಲ212 ರನ್‌ ಗಳಿಗೆ ಆಲೌಟ್‌ ಆಗಿ,171 ರನ್‌ನಿಂದ ಸೋಲು ಕಂಡಿತ್ತು.

ವಿಶ್ವ ಚಾಂಪಿಯನ್ನರೆದುರು ಅಮೋಘ ಗೆಲುವು ಸಾಧಿಸಿದ ಭಾರತ ಮತ್ತು ಅಸಾಧಾರಣ ಪ್ರದರ್ಶನ ನೀಡಿದ ರಾಹುಲ್–ಲಕ್ಷ್ಮಣ್‌ ಜೋಡಿಕ್ರಿಕೆಟ್‌ ಲೋಕವನ್ನೇ ತನ್ನತ್ತ ಸೆಳೆದುಕೊಂಡಿತ್ತು.

ಇದೇ ಪಂದ್ಯದ ಕುರಿತು ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಆಗಿನ ನಾಯಕ ಮತ್ತು ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ, ‘ಇಡೀ ದಿನ (ವಿವಿಎಸ್‌ ಲಕ್ಷ್ಮಣ್‌–ರಾಹುಲ್‌ ದ್ರಾವಿಡ್‌ ಬ್ಯಾಟಿಂಗ್‌ ವೇಳೆ) ಒಂದೇ ಮೂಲೆಯಲ್ಲಿ ಕುಳಿತಿದ್ದೆ. ದ್ರಾವಿಡ್‌ ಮತ್ತು ಲಕ್ಷ್ಮಣ್‌ ಇಬ್ಬರೂಔಟಾಗಬಾರದು ಮತ್ತು ಬ್ಯಾಟಿಂಗ್‌ ಮುಂದುವರಿಸಲಿ ಎಂದು ಪ್ರಾರ್ಥಿಸುತ್ತಿದ್ದೆ. ನಂಬಲು ಸಾಧ್ಯವಾಗದಂತಹ ಪಂದ್ಯವದು. ಅದು ದೇವರು ಆಡಿದ ಟೆಸ್ಟ್‌ ಪಂದ್ಯ’ ಎಂದಿದ್ದರು.

ಪರೀಕ್ಷಾ ಪೇ ಚರ್ಚಾದಲ್ಲಿ ಮೋದಿ ನೆನಪಿಸಿದ್ದೂ ಇದೇ ಪಂದ್ಯವನ್ನು
10ನೇ ತರಗತಿ ಮತ್ತು ಪಿಯು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಡೆಸಿದಪರಿಕ್ಷಾ ಪೇ ಚರ್ಚಾ ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲು ಈ ಪಂದ್ಯವನ್ನು ನೆನಪಿಸಿಕೊಂಡಿದ್ದರು.

ರಾಜಸ್ಥಾನದ ವಿದ್ಯಾರ್ಥಿನಿ ಯಶಶ್ರೀ ಅವರು, ‘ಪರೀಕ್ಷೆಗಳು ನಮ್ಮನ್ನು ನಿರುತ್ಸಾಹಗೊಳಿಸುತ್ತವೆ. ಅದಕ್ಕೇನು ಮಾಡಬೇಕು’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ,‘2001ರಲ್ಲಿ ನಡೆದ ಭಾರತ–ಆಸ್ಟ್ರೇಲಿಯಾ ಪಂದ್ಯವನ್ನು ನೆನಪಿಸಿಕೊಳ್ಳಿ.ನಮ್ಮ ಕ್ರಿಕೆಟ್‌ ತಂಡವೂ ಹಿನ್ನಡೆ ಅನುಭವಿಸಿತ್ತು. ಆಗ ಪರಿಸ್ಥಿತಿಚೆನ್ನಾಗಿರಲಿಲ್ಲ. ಆದರೆ ಅಂತಹ ಸಂದರ್ಭದಲ್ಲೂ ದಿಟ್ಟ ಆಟವಾಡಿದ್ದ ರಾಹುಲ್‌ ಮತ್ತು ಲಕ್ಷ್ಮಣ್‌ ಅವರನ್ನು ಮರೆಯಲು ಸಾಧ್ಯವೇ? ಅವರು ಪಂದ್ಯದ ಚಿತ್ರಣ ಬದಲಿಸಿದ್ದರು. ಅದೇ ರೀತಿ ದವಡೆ ಮುರಿದ್ದಿರೂ ತಲೆಗೆ ಪಟ್ಟಿ (ಬ್ಯಾಂಡೇಜ್‌) ಕಟ್ಟಿಕೊಂಡು ಆಡಿದ್ದ ಅನಿಲ್‌ ಕುಂಬ್ಳೆಯರನ್ನು ಯಾರು ಮರೆಯುತ್ತಾರೆ? ಇದು ಉತ್ಸಾಹ ಮತ್ತು ಧನಾತ್ಮಕ ಚಿಂತನೆಯ ಶಕ್ತಿ’ ಎಂದು ಪ್ರೋತ್ಸಾಹಿಸಿದರು.

ಮುಂದುವರಿದು,‘ಹಿನ್ನಡೆಯಾದರೆ ಯಶಸ್ಸು ಸಿಗುವುದೇ ಇಲ್ಲ ಎಂದರ್ಥವಲ್ಲ. ಒಮ್ಮೆಯ ಹಿನ್ನಡೆಯು ಗೆಲ್ಲುವ ಪ್ರಯತ್ನ ಮುಂದುವರಿಸುವ ಪ್ರೇರಣೆ ನೀಡಬೇಕು. ಸೋಲಿನಿಂದ ಗೆಲುವಿನ ಪಾಠ ಕಲಿಯಬೇಕು’ ಎಂದು ಪ್ರೇರೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT