ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | ಜಿಂಬಾಬ್ವೆ ಅಧ್ಯಕ್ಷರ 'ಮಿ. ಬೀನ್‌' ಹೇಳಿಕೆಗೆ ಪಾಕ್ ಪಿಎಂ ತಿರುಗೇಟು

Last Updated 28 ಅಕ್ಟೋಬರ್ 2022, 9:59 IST
ಅಕ್ಷರ ಗಾತ್ರ

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ 'ಸೂಪರ್‌ 12' ಹಂತದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನ ಎದುರು ಒಂದು ರನ್‌ ಅಂತರದ ರೋಚಕ ಜಯ ದಾಖಲಿಸಿತ್ತು. ಪಂದ್ಯ ಮುಗಿದ ಕೂಡಲೇ ಪಾಕಿಸ್ತಾನವನ್ನು ಮೂದಲಿಸಿ ಟ್ವೀಟ್ ಮಾಡಿದ್ದ ಜಿಂಬಾಬ್ವೆ ಅಧ್ಯಕ್ಷ ಎಮರ್ಸನ್ ದಂಬುಡ್ಜೊ ಮ್ನಂಗಾಗ್ವಾ ಅವರಿಗೆ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ ತಿರುಗೇಟು ನೀಡಿದ್ದಾರೆ.

ಉಭಯ ತಂಡಗಳ ನಡುವೆ ಗುರುವಾರ (ಅಕ್ಟೋಬರ್‌ 27) ಪಂದ್ಯ ಆರಂಭವಾಗುವುದಕ್ಕೂ ಮೊದಲೇ ಸಾಮಾಜಿಕ ಮಾಧ್ಯಮಗಳಲ್ಲಿ 'ಫ್ರಾಡ್ ಪಾಕ್ ಮಿಸ್ಟರ್ ಬೀನ್' ಎಂಬ ವಿಷಯ ಟ್ರೆಂಡ್ ಆಗಿತ್ತು.

ಈ ವಿಚಾರವು ಜಿಂಬಾಬ್ವೆಯಲ್ಲಿ 2016ರಲ್ಲಿ ನಡೆದಿದ್ದ ಘಟನೆಯೊಂದಕ್ಕೆ ಸಂಬಂಧಿಸಿದ್ದು. ಪಾಕಿಸ್ತಾನಿ ಹಾಸ್ಯನಟ ಆಸಿಫ್ ಮೊಹಮ್ಮದ್ ಎಂಬುವವರು ಹರಾರೆಯ 'ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್‌'ನಲ್ಲಿ ಮಿಸ್ಟರ್‌ ಬೀನ್‌ ಹೆಸರಲ್ಲಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಆದರೆ, ಕಾರ್ಯಕ್ರಮ ನೀರಸವಾಗಿ ಅಂತ್ಯಗೊಂಡಿತ್ತು. ನಮ್ಮ ಹಣ ವ್ಯರ್ಥವಾಗಿದೆ ಎಂದು ಆರೋಪಿಸಿದ್ದ ಜಿಂಬಾಬ್ವೆ ಜನ ಕಾರ್ಯಕ್ರಮವನ್ನು ವಂಚನೆ ಎಂದು ಕರೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದವು.

ಗುರುವಾರದ ಪಂದ್ಯದಲ್ಲಿ ತಮ್ಮ ತಂಡ ಪಾಕಿಸ್ತಾನಕ್ಕೆ ಸೋಲುಣಿಸಿದ ಬಳಿಕ ಜಿಂಬಾಬ್ವೆ ಕ್ರಿಕೆಟ್ ಅಭಿಮಾನಿಗಳು 'ಫ್ರಾಡ್ ಪಾಕ್ ಮಿಸ್ಟರ್ ಬೀನ್' ವಿಚಾರ ಪ್ರಸ್ತಾಪಿಸಿಟ್ವಿಟರ್‌ನಲ್ಲಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ತಮ್ಮ ತಂಡ ಪಾಕ್ ವಿರುದ್ಧ ಸೇಡು ತೀರಿಸಿಕೊಂಡಿದೆ ಎಂಬರ್ಥದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೆದನಿಗೂಡಿಸಿರುವ ಜಿಂಬಾಬ್ವೆ ಅಧ್ಯಕ್ಷಎಮರ್ಸನ್,'ಜಿಂಬಾಬ್ವೆಗೆ ಎಂಥಾ ಗೆಲುವು! ಆಟಗಾರರಿಗೆ ಅಭಿನಂದನೆಗಳು' ಎಂದು ಶುಭಕೋರಿದ್ದಾರೆ. ಹಾಗೆಯೇ, 'ಮುಂದಿನ ಬಾರಿ, ನಿಜವಾದ ಮಿಸ್ಟರ್ ಬೀನ್ ಅನ್ನು ಕಳುಹಿಸಿ' ಎಂದು ಪಾಕಿಸ್ತಾನದ ಕಾಲೆಳೆದಿದ್ದಾರೆ.

ಇದನ್ನು ಖಂಡಿಸಿ ಟ್ವಿಟರ್‌ನಲ್ಲೇ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, 'ನಮ್ಮಲ್ಲಿ ನಿಜವಾದ ಮಿಸ್ಟರ್‌ ಬೀನ್‌ ಇಲ್ಲದಿರಬಹುದು. ಆದರೆ, ನಿಜವಾದ ಕ್ರೀಡಾಸ್ಫೂರ್ತಿ ನಮ್ಮಲ್ಲಿದೆ. ನಾವು ಪಾಕಿಸ್ತಾನಿಯರು ಪುಟಿದೇಳುವ ಹವ್ಯಾಸವಿದೆ' ಎಂದು ತಿರುಗೇಟು ನೀಡಿದ್ದಾರೆ. ಹಾಗೆಯೇ, 'ಮಿಸ್ಟರ್‌ ಪ್ರೆಸಿಡೆಂಟ್, ಅಭಿನಂದನೆಗಳು. ನಿಮ್ಮ ತಂಡ ನಿಜವಾಗಿಯೂ ಇಂದು ಚೆನ್ನಾಗಿ ಆಡಿದೆ' ಎಂದೂ ಹೇಳಿದ್ದಾರೆ.

ಷರೀಫ್ ಪ್ರತಿಕ್ರಿಯೆಗೆ ಪಾಕಿಸ್ತಾನ ಕ್ರಿಕೆಟ್‌ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಮಿಸ್ಟರ್‌ ಬೀನ್‌ ವಿಚಾರ ಬಂದಿದ್ದು ಎಲ್ಲಿಂದ?
ನುಗು ಚಸುರು ಎಂಬ ಹೆಸರಿನ ಅಭಿಮಾನಿಯೊಬ್ಬರು ಪಾಕಿಸ್ತಾನ vsಜಿಂಬಾಬ್ವೆ ಪಂದ್ಯ ಆರಂಭಕ್ಕೆಎರಡು ದಿನ ಮೊದಲೇ 'ಮಿಸ್ಟರ್‌ ಬೀನ್‌' ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್‌ ಮಾಡಿದ್ದರು. ಆಟಗಾರರು ಅಭ್ಯಾಸ ನಡೆಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಟ್ವೀಟ್‌ಗೆ ಪ್ರತಿಕ್ರಿಯಿಸಿ, ಸೋಲಿನ ಎಚ್ಚರಿಕೆಯನ್ನೂ ನೀಡಿದ್ದರು.

'ಜಿಂಬಾಬ್ವೆಯವರಾದ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ... ನೀವು ಒಮ್ಮೆ ಮಿಸ್ಟರ್ ಬೀನ್ ರೋವನ್ ಬದಲಿಗೆ ಆ ಫ್ರಾಡ್ ಪಾಕ್ ಬೀನ್ ಅನ್ನು ನಮ್ಮ ದೇಶಕ್ಕೆ ಕಳುಹಿಸಿದ್ದಿರಿ. ಅವತ್ತಿನ ಲೆಕ್ಕವನ್ನು ನಾಳೆ ಚುಕ್ತಾ ಮಾಡುತ್ತೇವೆ. ಮಳೆ ನಿಮ್ಮನ್ನು (ಸೋಲಿನಿಂದ) ಪಾರುಮಾಡಲಿ ಎಂದು ಪ್ರಾರ್ಥಿಸಿ' ಎಂದು ಬರೆದುಕೊಂಡಿದ್ದರು.

ಪಂದ್ಯದ ಫಲಿತಾಂಶದ ಬಳಿಕ ಈ ಟ್ವೀಟ್‌ ಅನ್ನು ಹಲವರು ಶೇರ್ ಮಾಡಿಕೊಂಡಿದ್ದಾರೆ. 'ಫ್ರಾಡ್‌ ಪಾಕ್‌ ಮಿಸ್ಟರ್‌ ಬೀನ್‌' ಎಂಬುದೂ ಟ್ರೆಂಡ್‌ ಆಗಿದೆ.

ವಿಚಿತ್ರವೆಂದರೆಚಸುರು ಅವರ ಪ್ರತಿಕ್ರಿಯೆ ಟ್ವೀಟ್‌ ಅನ್ನು ಪಿಸಿಬಿ ಮಾಡಿರುವ ಟ್ವೀಟ್‌ಗಿಂತಲೂ ಹೆಚ್ಚು ಮಂದಿ ರೀಶೇರ್‌ ಮತ್ತು ಲೈಕ್‌ ಮಾಡಿದ್ದಾರೆ.ಚಸುರು ಟ್ವೀಟ್‌ ಅನ್ನು ಈವರೆಗೆ 9 ಸಾವಿರಕ್ಕೂ ಹೆಚ್ಚು ಮಂದಿ ರೀಶೇರ್‌ ಮಾಡಿದ್ದು, 38 ಸಾವಿರ ಜನರು ಮೆಚ್ಚಿಕೊಂಡಿದ್ದಾರೆ. ಪಿಸಿಬಿ ಟ್ವೀಟ್‌ ಅನ್ನು 13 ಸಾವಿರ ಮಂದಿ ಲೈಕ್‌ ಮಾಡಿದ್ದು, 600 ಜನರು ರೀಶೇರ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT