ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಆಯೋಜನೆಗೆ ಯುಎಇ ಪ್ರಶಸ್ತ ತಾಣ: ಬಿಸಿಸಿಐ ಸಭೆಯಲ್ಲಿ ಚರ್ಚೆ

ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌‌ ಸಭೆಯಲ್ಲಿ ಚರ್ಚೆ
Last Updated 18 ಜುಲೈ 2020, 6:43 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೊರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಹೀಗಾಗಿ ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯನ್ನು ಯುನೈಟೆಡ್‌ ಅರಬ್‌‌ ಎಮಿರೇಟ್ಸ್‌ನಲ್ಲಿ (ಯುಎಇ) ಆಯೋಜಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶುಕ್ರವಾರ ಆನ್‌ಲೈನ್‌ ಮೂಲಕ ನಡೆದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.

ಈ ವರ್ಷದ ಅಕ್ಟೋಬರ್‌ 18 ರಿಂದ ನವೆಂಬರ್‌ 15ರವರೆಗೆ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯನ್ನು ಮುಂದೂಡುವ ಸಾಧ್ಯತೆ ಇದೆ. ಹೀಗಾಗಿ ಈ ಅವಧಿಯಲ್ಲೇ 13ನೇ ಆವೃತ್ತಿಯ ಐಪಿಎಲ್‌ ಆಯೋಜಿಸಲು ಬಿಸಿಸಿಐ ಉತ್ಸುಕವಾಗಿದೆ.

ಸೀನಿಯರ್‌ ಕ್ರಿಕೆಟ್‌ ತಂಡದ ತರಬೇತಿ ಶಿಬಿರವನ್ನೂ ಯುಎಇಯಲ್ಲಿ‌ ನಡೆಸಲು ಬಿಸಿಸಿಐ ಚಿಂತಿಸಿದೆ. ಅಹಮದಾಬಾದ್‌ ಹಾಗೂ ಧರ್ಮಶಾಲಾವು ಮಂಡಳಿಯ ಎದುರಿರುವ ಇತರ ಆಯ್ಕೆಗಳಾಗಿವೆ.

ಕೋವಿಡ್‌ ಬಿಕ್ಕಟ್ಟಿನಿಂದಾಗಿ ಭಾರತದ ಕ್ರಿಕೆಟಿಗರು ಮೈದಾನಗಳಿಂದ ದೂರವೇ ಉಳಿದಿದ್ದಾರೆ. ಯುಎಇಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇವೆ. ಹೀಗಾಗಿ ಐಪಿಎಲ್‌ ಹಾಗೂ ಕ್ರಿಕೆಟಿಗರ ತರಬೇತಿ ಶಿಬಿರಗಳನ್ನು ಅಲ್ಲಿಯೇ ಆಯೋಜಿಸುವುದು ಸೂಕ್ತ ಎಂದು ಹಲವರು ಹೇಳಿದ್ದಾರೆ. ಈ ಸಂಬಂಧ ಐಪಿಎಲ್‌ ಆಡಳಿತ ಮಂಡಳಿಯು ಅಂತಿಮ ತೀರ್ಮಾನ ಕೈಗೊಳ್ಳಲಿದೆ.

‘ಒಂದು ವೇಳೆ ಯುಎಇನಲ್ಲಿ ಐಪಿಎಲ್‌ ನಡೆಯುವುದು ಖಚಿತವಾದರೆ, ಟೂರ್ನಿಗಿಂತ ಮೊದಲು ಭಾರತದ ಕ್ರಿಕೆಟಿಗರು ಅಲ್ಲಿ ತರಬೇತಿ ಪಡೆಯಬಹುದು. ದುಬೈನಲ್ಲಿ ಉತ್ತಮ ಮೂಲಸೌಕರ್ಯಗಳಿವೆ. ಕೋವಿಡ್‌ ಹಿನ್ನೆಲೆಯಲ್ಲಿ ಭಾರತದಲ್ಲಿ ಟೂರ್ನಿ ನಡೆಸುವುದು ಸುರಕ್ಷಿತವಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಧರ್ಮಶಾಲಾ ಹಾಗೂ ಅಹಮದಾಬಾದ್‌ನಲ್ಲಿ‌ (ನವೀಕೃತ ಮೊಟೆರಾ ಕ್ರೀಡಾಂಗಣದಲ್ಲಿ)ಜೀವ ಸುರಕ್ಷಾ (ಬಯೊ ಸೆಕ್ಯುರ್‌) ವಾತಾವರಣದಲ್ಲಿ ತರಬೇತಿ ಶಿಬಿರ ಆಯೋಜಿಸುವ ಬಗ್ಗೆಯೂ ಬಿಸಿಸಿಐ ಚಿಂತಿಸಿದೆ. ಆದರೆ ಅದು ಅಷ್ಟು ಸುರಕ್ಷಿತವಲ್ಲ ಎಂಬುದೂ ಮಂಡಳಿಗೆ ಗೊತ್ತಿದೆ’ ಎಂದು ಅವರು ನುಡಿದಿದ್ದಾರೆ.‌

ಶ್ರೀಲಂಕಾ ಕೂಡ ಐಪಿಎಲ್‌ ಆಯೋಜಿಸಲು ಆಸಕ್ತಿ ತೋರಿತ್ತು. 2014ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಸಂದರ್ಭದಲ್ಲಿ ಯುಎಇನಲ್ಲಿ ಐಪಿಎಲ್‌ನ ಕೆಲವು ಪಂದ್ಯಗಳು ಆಯೋಜನೆಗೊಂಡಿದ್ದವು.

ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರ ಅಧಿಕಾರಾವಧಿ ಕೊನೆಗೊಂಡಿದೆ ಎಂದು ಹೇಳಲಾಗಿತ್ತು. ಆದರೆ ಶುಕ್ರವಾರದ ಸಭೆಯಲ್ಲಿ ಅವರೂ ಪಾಲ್ಗೊಂಡಿದ್ದರು.

‘ಬಿಸಿಸಿಐನ ಕಾನೂನು ತಂಡವು ಅವರ ಉಪಸ್ಥಿತಿಯನ್ನು ಒಪ್ಪಿಕೊಂಡ ಕಾರಣ ಜಯ್‌ ಶಾ ಸಭೆಯಲ್ಲಿ ಭಾಗವಹಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಅಧಿಕಾರಾವಧಿಯು ಇದೇ 27ಕ್ಕೆ ಕೊನೆಗೊಳ್ಳಲಿದೆ. ಗಂಗೂಲಿ,ಕಾರ್ಯದರ್ಶಿ ಜಯ್‌ ಶಾ ಹಾಗೂ ಜಂಟಿ ಕಾರ್ಯದರ್ಶಿ ಜಯೇಶ್‌ ಜಾರ್ಜ್‌ ಅವರನ್ನು ಈ ಹುದ್ದೆಗಳಲ್ಲಿ ಮುಂದುವರಿಸುವಂತೆ ಬಿಸಿಸಿಐ, ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT